ಭೃಂಗದ ಬೆನ್ನೇರಿ ಬಂತು

ಭೃಂಗದ ಬೆನ್ನೇರಿ ಬಂತು

ಬರಹ

ರಚನೆ: ದ. ರಾ. ಬೇಂದ್ರೆ

ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ
ಮಸೆದ ಗಾಳಿ ಪಕ್ಕ ಪಡೆಯುತ್ತಿತ್ತು ಸಹಜ ಪ್ರಾಸ
ಮಿಂಚಿ ಮಾಯವಾಗುತ್ತಿತ್ತು ಒಂದು ಮಂದಹಾಸ
ಭೃಂಗದ ಬೆನ್ನೇರಿ ...

ಏನು ಏನು? ಜೇನು ಜೇನು? ಎನೆ ಗುನ್‍ಗುನ್ ಗಾನಾ
ಓಂಕಾರದ ಶಂಖನಾದಕಿಂತ ಕಿಂಚಿದೂನಾ
ಕವಿಯ ಏಕತಾನ ಕವನದಂತೆ ನಾದಲೀನಾ
ಭೃಂಗದ ಬೆನ್ನೇರಿ ...

ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ
ತನ್ನ ದೈವರೇಶೆ ಬರೆಯುವಂತೆ ತಾಲಾ ಭಾಲಾ
ಉಸಿರಿನಿಂದೆ ಹುಡುಕುವಂತೆ ತನ್ನ ಬಾಳ ಮೇಲಾ
ಭೃಂಗದ ಬೆನ್ನೇರಿ ...

ತಿರುಗುತ್ತಿತ್ತು ತನ್ನ ಸುಟ್ಟು ಮೂಕಭಾವ ಯಂತ್ರಾ
ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ
ಮೂಡಿ ಮೂಡಿ ಮುಳುಗಿ ಮುಳುಗಿ ಮುಳುಗುವೊಲು ಸ್ವತಂತ್ರಾ
ಭೃಂಗದ ಬೆನ್ನೇರಿ ...

ಎಲ್ಲೆಲ್ಲೂ ಸೃಷ್ಟಿದೇವಿಗಿತ್ತ ಧೂಪ ಧೂಮಾ
ಲಹರಿ ಲಹರಿ ಕಂಪಬಳ್ಳಿ; ಚಿತ್ತರಂಗ ಭೂಮಾ
ದಾನ್ಗುಡಿಗಳ ಬಿಡುತಲಿತ್ತು ಅರಳುತ್ತಿತ್ತು ಪ್ರೇಮಾ
ಭೃಂಗದ ಬೆನ್ನೇರಿ ...

ವಜ್ರಮುಖವ ಚಾಚಿ ಮುತ್ತುತ್ತಿತ್ತು ಹೂವ ಹೂವಾ
ನೀರ ಹೀರಿ ಹಾರುತ್ತಿತ್ತು ನೀರಸವಾ ಜಾವಾ
ಅಯ್ಯೋ ನೋವೆ! ಅಹಾ ಸಾವೆ! ವಿಫಲ ಸಫಲ ಜೀವಾ
ಭೃಂಗದ ಬೆನ್ನೇರಿ ...

ಗಾಳಿಯೊಡನೆ ತಿಳಿಯಾಡುತಾಡುತದರ ಓಟಾ
ದಿಕ್ತಟಿಗಳ ಹಾಯುತಿತ್ತು; ಅದರ ಬಿದಿಗೆ ನೋಟಾ
ನಕ್ಕ ನಗುವ ಚಿಕ್ಕಿಯೊಡನೆ ಬೆಳೆಸುತಿತ್ತು ಕೂಟಾ
ಭೃಂಗದ ಬೆನ್ನೇರಿ ...

ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ
ಅಲ್ಲು ಇಲ್ಲು ಚೆಲುವು ನಿಂತು ಹಾಕುತಿತ್ತು ತಾಳಾ
'ಬಂತೆಲ್ಲಿಗೆ?' ಕೇಳುತಿದ್ದನೀಯನಂತ ಕಾಲಾ
ಭೃಂಗದ ಬೆನ್ನೇರಿ ...

ಮಾತು ಮಾತು ಮಥಿಸಿ ಬಂದ ನಾದದ ನವನೀತಾ
ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ
ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತ
ಭೃಂಗದ ಬೆನ್ನೇರಿ ...

ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸ
ಭೃಂಗದ ಬೆನ್ನೇರಿ ...