ಭೇಷ್ ಸರ್ಕಾರಗಳೇ ಭೇಷ್... ಎಷ್ಟೊಂದು ಸುಂದರ ಕಲ್ಪನೆ !

ಭೇಷ್ ಸರ್ಕಾರಗಳೇ ಭೇಷ್... ಎಷ್ಟೊಂದು ಸುಂದರ ಕಲ್ಪನೆ !

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎಂಬ ಸರ್ಕಾರಿ ಸಂಸ್ಥೆಯ ಒಂದೆರಡು ವರ್ಷಗಳ ಹಿಂದಿನ ಅಧೀಕೃತ ವಿಶ್ಲೇಷಣೆ ಪ್ರಕಾರ… ಸಂಚಾರಿ ದಟ್ಟಣೆಯಿಂದ ವರ್ಷಕ್ಕೆ 3700 ಕೋಟಿ ನಷ್ಟ, ಒಟ್ಟು 60 ಕೋಟಿ ಗಂಟೆಗಳ ಮಾನವ ಶ್ರಮ ವ್ಯರ್ಥ, ಇದಕ್ಕೆ ಅವರು ನಿಗದಿಪಡಿಸಿರುವ ಬೆಲೆ 2350 ಕೋಟಿ, ಪೆಟ್ರೋಲ್ ಡೀಸಲ್ ಮುಂತಾದ ಇಂಧನದ ನಷ್ಟ 50 ಕೋಟಿ ಲೀಟರ್, ಇದರ ಒಟ್ಟು ಬೆಲೆ ಸುಮಾರು 1350 ಕೋಟಿ. ರಾಜ್ಯದ - ದೇಶದ ಬಹುತೇಕ ಎಲ್ಲಾ ಬೃಹತ್ ನಗರಗಳ ಸ್ಥಿತಿ ಸರಿಸುಮಾರು  ಇದೇ ಆಗಿರುತ್ತದೆ. ನನಗಂತೂ ತುಂಬಾ ಸಂತೋಷವಾಯಿತು. ನಮ್ಮನ್ನಾಳುವ ಸರ್ಕಾರಗಳಿಗೆ ಸಾರ್ವಜನಿಕರ ಬಗ್ಗೆ ಎಷ್ಟೊಂದು ಕಾಳಜಿ ಇದೆಯೆಂದು.!

ಈ ರೀತಿ ಒಂದು ವರದಿ ಸಿದ್ಧಮಾಡವುದು. ಇದರ ಪರಿಹಾರಕ್ಕಾಗಿ ಪ್ಲೈಓವರ್ ಗಳು, ಸ್ಟೀಲ್ ಬ್ರಿಡ್ಜ್ ಗಳು, ಅಂಡರ್ ಪಾಸ್ ಗಳು, ರಸ್ತೆ ಅಗಲೀಕರಣ ಇತ್ಯಾದಿ ಯೋಜನೆ ರೂಪಿಸಿ ಲಕ್ಷಾಂತರ ಕೋಟಿ ಇದರಲ್ಲಿ ಹಣ ತೊಡಗಿಸುವುದು. ನಗರಗಳು ಮಹಾನ್ ಅಭಿವೃದ್ಧಿ ಹೊಂದಿವೆ ಎಂದು ಜಗತ್ತಿಗೆ ತೋರಿಸುವುದು. ಭೇಷ್ ಸರ್ಕಾರಗಳೇ ಭೇಷ್...... ಎಷ್ಟೊಂದು ಸುಂದರ ಕಲ್ಪನೆ. ನಿರ್ಜೀವ ವಾಹನಗಳಿಗೆ ಸಂಭ್ರಮವೋ ಸಂಭ್ರಮ. ರಸ್ತೆಗಳಲ್ಲಿ ಝ್ಯಂ ಝ್ಯಂ ಎಂದು ನಲಿದಾಡುತ್ತಾ ಸಾಗುತ್ತವೆ. 

ಆದರೆ… ಗಿಡ ಮರಗಳಿಗೆ ಅದರಲ್ಲಿ ವಾಸಿಸುವ ಜೀವಸಂಕುಲಕ್ಕೆ ಮತ್ತು ನಮ್ಮ ನಿಮ್ಮೆಲ್ಲರಿಗೆ ಇದರ ಕೊಡುಗೆ ಬಲ್ಲಿರೇನು. ಮೊದಲೇ ರಾಸಾಯನಿಕಯುಕ್ತ ಕಲಬೆರಕೆ ಆಹಾರ ತಿಂದು ರೋಗನಿರೋಧಕ ಶಕ್ತಿ ಕಳೆದುಕೊಂಡಿರುವ ನಮಗೆ ಆಸ್ತಮಾ, ಹೃದ್ರೋಗ, ಶ್ವಾಸಕೋಶ ತೊಂದರೆಯಿಂದ ಅನುಭವಿಸುತ್ತಿರುವ ನರಕಯಾತನೆಗೆ ಎಷ್ಟು ಬೆಲೆ ಎಂದು ಆ ವರದಿಯಲ್ಲಿ ತಿಳಿಸಿಲ್ಲ. ಅಂದಾಜು ಇದಕ್ಕೆ ಬಲಿಯಾಗುವ ಜನ ಪಶು ಪಕ್ಷಿ ಪ್ರಾಣಿಗಳು, ಗಿಡಮರಗಳು, ವಾಯುಮಾಲಿನ್ಯಗಳಿಗೆ  ಅವರು ಕಟ್ಟುವುದು  ಎಷ್ಟು ಬೆಲೆ ಎಂಬುದನ್ನೂ ವರದಿಯಲ್ಲಿ ಹೇಳಿಲ್ಲ.

ಆದ್ದರಿಂದಲೇ ಬೆಂಗಳೂರಿನ ಮಲ್ಲೇಶ್ವರಂ ಬಳಿಯ ಸ್ಯಾಂಕಿ ರಸ್ತೆಯ ವಿಸ್ತರಣೆಗಾಗಿ ಅನೇಕ ಪುರಾತನ ಮರಗಳನ್ನು ಕೊಲ್ಲುತ್ತಿದ್ದಾರೆ. ಬಹುಶಃ ನನ್ನ ಅನಿಸಿಕೆ ಪ್ರಕಾರ ಅವರಿಗೆ ತುಂಬಾ ಚೆನ್ನಾಗಿ ಗೊತ್ತಿರಬೇಕು, ಸಾಮಾನ್ಯ ಮನುಷ್ಯರಿಗೆ, ಜೀವ ಸಂಕುಲಕ್ಕೆ, ಗಿಡಮರಗಳಿಗೆ ಯಾವ ಬೆಲೆಯೂ ಇಲ್ಲ. ಉಚಿತವಾಗಿ ಕೊಟ್ಟರೂ ತೆಗೆದುಕೊಳ್ಳುವವರಿಲ್ಲ. ಅಲ್ಲಿ ನೋಡಿ ಒಬ್ಬ ಅಧಿಕಾರಿ ಅರಚುತ್ತಿದ್ದಾನೆ. ಪರಿಸರ ಮಾಲಿನ್ಯದಿಂದ ಆಗುವ ಅನಾಹುತಗಳಿಗೆ ನಾವು ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ಕಟ್ಟಿಸುತ್ತೇವೆ , ಒಳ್ಳೆಯ ಔಷಧಿ ಕಂಡುಹಿಡಿಯುತ್ತೇವೆ. ಆಂಬ್ಯುಲೆನ್ಸ್ ಒದಗಿಸುತ್ತೇವೆ.

ನೋಡಿದಿರಾ ಸರ್ಕಾರಿ ಅಧಿಕಾರಿಗಳ ಹೊಸ ಹೊಸ ಐಡಿಯಾಗಳು. ಅವರ ದೃಷ್ಟಿಯಲ್ಲಿ ಅಭಿವೃದ್ಧಿ ಎಂದರೆ ರಸ್ತೆಗಳು - ಕಟ್ಟಡಗಳು - ವಾಹನಗಳು - ಮಾಲ್ ಗಳು ..ಸಾಮಾನ್ಯ ಜನರು ಕುರಿಗಳು ಅಷ್ಟೆ. ಒಬ್ಬ ಆರೋಗ್ಯವಂತ ವ್ಯಕ್ತಿ ಉಸಿರಾಡಲು ಬೇಕಾದ ಆರೋಗ್ಯಕರ ಆಮ್ಲಜನಕ ( Oxygen ) ಸಿಗಲು ಸುಮಾರು 7 ಮರಗಳ ( Trees ) ಅವಶ್ಯಕತೆ ಇದೆ. ಈಗಿನ ಬೆಂಗಳೂರಿನ ಜನಸಂಖ್ಯೆ ಸುಮಾರು 1 ಕೋಟಿ 35 ಲಕ್ಷ ಇದೆ. ಅದರ ಪ್ರಕಾರ ಇಲ್ಲಿ ಇರಬೇಕಾದ ವೃಕ್ಷಗಳ ಸಂಖ್ಯೆ ಸುಮಾರು 8 ಕೋಟಿ. ಆದರೆ ವಾಸ್ತವದಲ್ಲಿ ಇರುವುದು ಕೇವಲ 14.5 ಲಕ್ಷ  ಮರಗಳು ಮಾತ್ರ. ಇದು ಇತ್ತೀಚೆಗೆ ಒಬ್ಬ ಪರಿಸರ ತಜ್ಞರ ಅಭಿಪ್ರಾಯ ಪತ್ರಿಕೆಯಲ್ಲಿ ಓದಿದ್ದು. ಅಬ್ಬಾ,...!

ಎಷ್ಟೊಂದು ಶುಧ್ಧ ಗಾಳಿಯ ಕೊರತೆ ಎದುರಿಸುತ್ತಿದ್ದೇವೆ ನಾವು‌. ಆರೋಗ್ಯದ ಅತ್ಯವಶ್ಯಕ ಆಮ್ಲಜನಕ ಸರಿಯಾಗಿ ಸಿಗುತ್ತಿಲ್ಲ. ಉಸಿರಾಡುತ್ತಿರುವುದು ಧೂಳಿನಿಂದ ಕೂಡಿದ ವಿಷಯುಕ್ತ ಗಾಳಿ. ಬಹುಶಃ ಕರ್ನಾಟಕ ರಾಜ್ಯದಲ್ಲಿ ಕೇವಲ ಕೊಡಗು ಚಿಕ್ಕಮಗಳೂರು ಶಿವಮೊಗ್ಗ ದಕ್ಷಿಣ ಕನ್ನಡ ಉತ್ತರ ಕನ್ನಡ ಮತ್ತು ಹಾಸನದ ಕೆಲವು ಭಾಗಗಳನ್ನು ಹೊರತುಪಡಿಸಿದರೆ ಇತರೆ ಎಲ್ಲಾ ಜಿಲ್ಲೆಗಳಲ್ಲೂ ಮರಗಳ ಕೊರತೆ ಕಾಡುತ್ತಿರಬಹುದು. ಅದರಲ್ಲೂ ಕೋಲಾರ, ಬೀದರ್, ಮಂಡ್ಯ, ಗುಲ್ಬರ್ಗಾ, ರಾಯಚೂರು, ತುಮಕೂರು, ಬಳ್ಳಾರಿ, ಯಾದಗಿರಿ ಮುಂತಾದ ಜಿಲ್ಲೆಗಳ ಪರಿಸ್ಥಿತಿ ಅತ್ಯಂತ ಶೋಚನೀಯ.

ಇನ್ನು ಶುಧ್ಧ ನೀರಿನ ಕೊರತೆ ಇಡೀ ದೇಶವನ್ನೇ ಕಾಡುತ್ತಿದೆ. ನೀರಿನಿಂದ ಬರಬಹುದಾದ ಖಾಯಿಲೆಯಿಂದ ನರಳುತ್ತಿರುವ ಮತ್ತು ಸಾಯುತ್ತಿರುವ ಜನಸಂಖ್ಯೆ ಒಂದು ಮಹಾಯುದ್ಧದ ಸಾವು ನೋವಿನ ಸಂಖ್ಯೆಗೆ ಹತ್ತಿರವಿರಬಹುದು. ಮತ್ತೆ.... ಆಹಾರದ ವಿಷಯ ಹೇಳುವುದೇ ಬೇಡ. ಕನಿಷ್ಠ ಪೌಷ್ಟಿಕಾಂಶವಿರಲಿ ಶ್ರೀಮಂತರು ಮತ್ತು ಸಾಮಾನ್ಯ ಜನರೂ ಕೂಡ ಸೇವಿಸುತ್ತಿರುವುದು ನಿಧಾನವಾಗಿ ಕೊಲ್ಲುವ ವಿಷಯುಕ್ತ ಆಹಾರವನ್ನೇ. ದೇಶದ ಬಹುತೇಕ ಚಿಲ್ಲರೆ ಅಂಗಡಿಗಳಲ್ಲಿ ದೊರಕುವುದು ಕಲಬೆರಕೆ ಮತ್ತು ಕಾಲಾವಧಿ ಮುಗಿದು ಉಪಯೋಗಿಸಲು ಬಾರದ ಆಹಾರ ಪದಾರ್ಥಗಳೇ. ಎತ್ತ ಸಾಗುತ್ತಿದ್ದೇವೆ ನಾವು ?

ಇತ್ತೀಚಿನ ಪ್ರವಾಸದಲ್ಲಿ ನಾನು ಗಮನಿಸಿದ್ದು ಬಹುತೇಕ ಪಟ್ಟಣ ಪ್ರದೇಶದಲ್ಲಿ ಅತಿಹೆಚ್ಚು ಕಾಣುವುದು ಮೆಡಿಕಲ್ ಲ್ಯಾಬೋರೇಟರಿ, ಆಸ್ಪತ್ರೆ ಮತ್ತು ಮೆಡಿಕಲ್ ಸ್ಟೋರ್ ಗಳು. ಅವುಗಳ ಮುಂದೆ ಒಂದಷ್ಟು ಜನಸಂಧಣಿ. ಬಾರ್ ಹೋಟೆಲ್ ಮತ್ತು ಬ್ಯೂಟಿ ಪಾರ್ಲರ್ ಗಳು ಕೂಡ ಹೆಚ್ಚು ಹೆಚ್ಚು ಕಾಣಿಸುತ್ತಿವೆ. ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ದೆಹಲಿಯ ಏಮ್ಸ್  ( All India institute of medical sciences ) ಮುಂತಾದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯರಿಗೆ ಚಿಕಿತ್ಸೆ ದೊರೆಯಲು 2/3 ತಿಂಗಳು  ಕಾಯಬೇಕಾಗಿದೆಯಂತೆ.

Sound mind in Sound body. ಆರೋಗ್ಯವೇ ಭಾಗ್ಯ ಅನಾರೋಗ್ಯವೇ ನರಕ. ಅಧಿಕಾರಕ್ಕೇರಲು ತಂತ್ರ ಕುತಂತ್ರ ನಡೆಸುತ್ತಾ ಸಮಾವೇಶಗಳಿಗಾಗಿ ಅಪಾರ ಹಣ ಶ್ರಮ ವ್ಯಯಿಸುತ್ತಾ, ನಮ್ಮನ್ನೆಲ್ಲಾ ಆಕ್ರಮಿಸಿರುವ ಮಾಧ್ಯಮಗಳಲ್ಲಿ ಇದೇ ನಮ್ಮ ಅತ್ಯವಶ್ಯಕ ಆದ್ಯತೆ ಎಂಬ ಭ್ರಮೆ ಸೃಷ್ಟಿ ಮಾಡಿ ಅನಾರೋಗ್ಯದ ರಾಜ್ಯ - ದೇಶದತ್ತ ಸಾಗುತ್ತಿರುವ ರಾಜಕಾರಣಿಗಳನ್ನು ಆಡಳಿತಗಾರರನ್ನು ಶಪಿಸುತ್ತಾ...

ಕೃಷಿ ನೀರಾವರಿ ಅರಣ್ಯ ಆಹಾರ ಇಲಾಖೆಗಳ ಜವಾಬ್ದಾರಿ ನೆನಪಿಸುತ್ತಾ.. ಆದಷ್ಟು ಶೀಘ್ರ ನಮ್ಮ ವ್ಯವಸ್ಥೆಯ ಆದ್ಯತೆ ಬದಲಾಗಲಿ ಎಂಬ ಆಶಯದೊಂದಿಗೆ.. ಧರ್ಮೋ ರಕ್ಷತಿ ರಕ್ಷಿತ: ಬದಲಾಗಿ, ವೃಕ್ಷೋ ರಕ್ಷತಿ ರಕ್ಷಿತ: ಎಂಬುದು ನಮ್ಮ ಮೊದಲ ಆದ್ಯತೆಯಾಗಲಿ. ಆರೋಗ್ಯವಂತ ಬಲಿಷ್ಠ ಸಮಾಜ ನಮ್ಮದಾಗಲಿ.

ಕೊನೆಯದಾಗಿ ಸರ್ಕಾರಿ ಅಧಿಕಾರಿಗಳಿಗೆ ನನ್ನದೊಂದು ಉಚಿತ ಸಲಹೆಯಿದೆ. ರಸ್ತೆಗಳಿಗೆ ಅಡ್ಡಬರುವ ಮರಗಳನ್ನು ಕಡಿಯುವಂತೆ ಅದೇ ರಸ್ತೆಗಳಲ್ಲಿ ನಿರ್ದಿಷ್ಟ ಸಂಖ್ಯೆ ಮೀರಿದ ನಂತರ ಪ್ರವೇಶಿಸುವ ಜನರ ತಲೆಗಳನ್ನು ಕತ್ತರಿಸಬೇಕು. ಆಗ ಕನಿಷ್ಠ ಸಾಯುವವರು ಒಳ್ಳೆಯ ಸಾವನ್ನೂ ಬದುಕಿರುವವರು ಒಳ್ಳೆಯ ಬದುಕನ್ನೂ ಅನುಭವಿಸುವಂತಾಗಲಿ. ಈಗಲೂ ಸರ್ಕಾರಗಳು ಪರೋಕ್ಷವಾಗಿ ಮಾಡುತ್ತಿರುವುದು ಇದನ್ನೇ.. ಇದೊಂದು ಹುಚ್ಚರ ಸಂತೆ.....ಛೆ.....ಛೆ....

-ವಿವೇಕಾನಂದ ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ