ಭೌಗೋಳಿಕ ಸೂಚಕದ ಕಸರತ್ತು
ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯ ಮಲ್ಲಿಗೆ ಹೆಸರುವಾಸಿ. ತಾಲೂಕು ಕೇಂದ್ರವಾದ ಆ ಊರಿನಲ್ಲಿ ಹತ್ತು ವರುಷಗಳ ಮುಂಚೆ (ಜನವರಿ 2013ರಲ್ಲಿ) ಎಲ್ಲರಿಗೂ ಸಂಭ್ರಮ. ಯಾಕೆಂದರೆ ಅವರ ಊರಿನ ಹೂ "ಭೌಗೋಳಿದ ಸೂಚಕ" (ಜಿಐ ಟ್ಯಾಗ್ - ಜಿಯೋಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್) ಗಳಿಸಿತು.
"ಉಡುಪಿ ಮಲ್ಲಿಗೆ"ಯ ಹಾಗೂ "ಮೈಸೂರು ಮಲ್ಲಿಗೆ"ಯ ಬೆಳೆಗಾರರೂ ಅಲ್ಲಿನ ಹೂವಿಗೆ ಭೌಗೋಳಿಕ ಸೂಚಕ ಸಿಕ್ಕಿದಾಗ ಹಾಗೆಯೇ ಸಂಭ್ರಮ ಪಟ್ಟಿದ್ದರು. ಪರಿಮಳ ತುಂಬಿದ ಈ ಅಚ್ಚ ಬಿಳಿಯ ಹೂಗಳು ಮಹಿಳೆಯರ ಮುಡಿಗೇರಿ ಅಥವಾ ದೇವರಮೂರ್ತಿ ಅಲಂಕರಿಸಿ, ಸಂಜೆಯ ಹೊತ್ತಿಗೆ ಬಾಡಿಹೋಗುತ್ತವೆ. ಬೇರೆಬೇರೆ ಸ್ಥಳಗಳಲ್ಲಿ ಬೇರೆಬೇರೆ ತಳಿಯ ಕೃಷಿ. ಆಯಾ ಸ್ಥಳದ ತಳಿಯ ವಿಶೇಷ ಗುಣದ (ಪರಿಮಳ, ಅಕಾರ ಇತ್ಯಾದಿ) ಅಧಾರದಿಂದ ಅದಕ್ಕೆ ಭೌಗೋಳಿಕ ಸೂಚಕ ನೀಡಲಾಗುತ್ತದೆ. ಭಾರತದಲ್ಲಿ ಹಲವು ಸ್ಥಳಗಳಲ್ಲಿ ಮಲ್ಲಿಗೆ ಹೂವನ್ನು ಬೆಳೆಯುತ್ತಾರೆ. ಆದರೆ, ಈ ಮೂರು ಊರುಗಳ ಸಮುದಾಯಗಳು ಮಾತ್ರ ಭೌಗೋಳಿಕ ಸೂಚಕ ಪಡೆದುಕೊಂಡಿವೆ. 2004ರಿಂದೀಚೆಗೆ ಭೌಗೋಳಿಕ ಸೂಚಕವನ್ನು ಅಧಿಕಾರಿಗಳು ಪ್ರಚಾರ ಮಾಡುತ್ತಿದ್ದು, ವಿವಿಧ ತಳಿ ಹಾಗೂ ವಸ್ತುಗಳಿಗೆ ಅದನ್ನು ಪಡೆಯುವ ಪ್ರಯತ್ನ ಹೆಚ್ಚುತ್ತಿದೆ.
ಭಾರತದಲ್ಲಿ ಅತ್ಯಧಿಕ ಸಂಖ್ಯೆಯ ಭೌಗೋಳಿಕ ಸೂಚಕ ಗಳಿಸಿರುವುದು ಕರ್ನಾಟಕದ ಹೆಗ್ಗಳಿಕೆ. ಮೈಸೂರು ಜಿಲ್ಲೆಯಲ್ಲಿ ಇವು ಭೌಗೋಳಿಕ ಸೂಚಕ ಗಳಿಸಿವೆ: ಮೈಸೂರು ಮಲ್ಲಿಗೆ, ಮೈಸೂರು ರೇಷ್ಮೆ, ಮೈಸೂರು ವೀಳ್ಯದೆಲೆ, ನಂಜನಗೂಡು ರಸಬಾಳೆ, ಮೈಸೂರು ಅಗರಬತ್ತಿ, ಮೈಸೂರು ಗಂಧದೆಣ್ಣೆ, ಮೈಸೂರು ಸ್ಯಾಂಡಲ್ ಸಾಬೂನು, ಇನ್ಲೆ ಕಲೆ, ಗಂಜೀಫಾ ಕಲೆ, ಮೈಸೂರು ಚಿತ್ರಕಲೆ. ಇವಲ್ಲದೆ, ಇತರ ಜಿಲ್ಲೆಗಳ ತಳಿಗಳೂ, ಉತ್ಪನ್ನಗಳೂ ಕಲೆಗಳೂ ಭೌಗೋಳಿಕ ಸೂಚಕ ಹೊಂದಿವೆ: ಬೆಂಗಳೂರು ನೀಲಿ ದ್ರಾಕ್ಷಿ; ಬೆಂಗಳೂರು ಕೆಂಪು ಉಳ್ಳಾಗಡ್ಡಿ; ರಾಮನಗರ ಚೆನ್ನಪಟ್ಟಣದ ಬೊಂಬೆಗಳು; ದೇವನಹಳ್ಳಿಯ ಚಕ್ಕೋತ; ಕೊಡಗಿನ ಹಸುರು ಏಲಕ್ಕಿ; ಕೊಡಗಿನ ಕಿತ್ತಳೆ; ಕಮಲಾಪುರದ ಕೆಂಪು ಬಾಳೆಹಣ್ಣು; ಸಂಡೂರಿನ ಬಂಜಾರ ಕಸೂತಿ; ಬಾಗಲಕೋಟೆಯ ಇಳಕಲ್ ಸೀರೆ; ಧಾರವಾಡ ಪೇಡ; ಬ್ಯಾಡಗಿ ಮೆಣಸಿನಕಾಯಿ; ಕಿನ್ನಾಳದ ಆಟಿಕೆಗಳು; ಶಿವಮೊಗ್ಗದ ಅಪ್ಪೆಮಿಡಿ; ಉಡುಪಿ ಮಲ್ಲಿಗೆ; ಉಡುಪಿಯ ಮಟ್ಟುಗುಳ್ಳ ಬದನೆಕಾಯಿ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ಕೂಡ ಹಲವಾರು ಉತ್ಪನ್ನ ಹಾಗೂ ಕಲೆಗಳಿಗೆ ಭೌಗೋಳಿಕ ಸೂಚಕ ಗಳಿಸಿವೆ.
ಭೌಗೋಳಿಕ ಸೂಚಕವು ಒಂದು ಬೌದ್ಧಿಕ ಸೊತ್ತು. ಒಂದು ವಸ್ತುವಿನ ಭೌಗೋಳಿಕ ವಿಶೇಷತೆಯೇ ಅದಕ್ಕೆ ಆಧಾರ. ಉದಾಹರಣೆಗೆ ನಮ್ಮ ದೇಶದಲ್ಲಿ ಮೊದಲ ಭೌಗೋಳಿಕ ಸೂಚಕ ಗಳಿಸಿದ ಡಾರ್ಜಿಲಿಂಗ್ ಚಹಾ; ಚೆನ್ನಪಟ್ಟಣದ ಮರದ ಗೊಂಬೆಗಳು. ಇದರ ಉದ್ದೇಶ ಆ ವಸ್ತುಗಳ ಬೇಡಿಕೆ ಹಾಗೂ ಮಾರುಕಟ್ಟೆಯನ್ನು ರಕ್ಷಿಸುವುದು ಮತ್ತು ವಿಸ್ತರಿಸುವುದು. ಇದು ಒಂದು ಸಮುದಾಯಕ್ಕೆ ಸಿಗುವ ಸವಲತ್ತು ವಿನಃ ವ್ಯಕ್ತಿಗಳಿಗೆ ಅಥವಾ ವ್ಯಾಪಾರಿ ಘಟಕಗಳಿಗೆ ಸಿಗುವುದಿಲ್ಲ. ಇಂತಹ ಉತ್ಪನ್ನಗಳು, ಅವು ರೂಪಿತವಾದ ಭೌಗೋಳಿಕ ಸ್ಥಳದ ಹೆಸರನ್ನು ಹೊಂದಿರುತ್ತವೆ.
ಭೌಗೋಳಿಕ ಸೂಚಕ ಎಂಬುದು ಅಂತರಾಷ್ಟ್ರೀಯ ವಾಣಿಜ್ಯ ವ್ಯವಹಾರದಲ್ಲಿ ಬಳಕೆಯಾಗುವ ಪ್ರಧಾನ ವಿಷಯ. ಹಾಗಿರುವಾಗ, ಹೂಬೆಳೆಗಾರರ ಸಣ್ಣ ತಂಡಕ್ಕೆ ಈ ಹಣೆಪಟ್ಟಿ ಯಾತಕ್ಕೆ? ಹೂವಿನ ಹಡಗಲಿಯ ಮಲ್ಲಿಗೆ ಬೆಳೆಗಾರರಿಗೆ, ತಮ್ಮ ಭೌದ್ಧಿಕ ಸೊತ್ತಿನ ಹಕ್ಕನ್ನು ಬೇರೆ ಯಾವುದೋ ದೇಶದ ಪ್ರಜೆಗಳು ಕದಿಯುತ್ತಾರೆ ಎಂಬ ಭಯವಿದೆಯೇ? ಅಥವಾ ಸ್ಥಳೀಯವಾಗಿ ಯಾರಾದರೂ ಕದಿಯುತ್ತಾರೆ ಎಂಬ ಆತಂಕವೇ? ಅಥವಾ, ಕರ್ನಾಟಕದ ಇತರ ಪ್ರದೇಶಗಳಲ್ಲಿ ಬೆಳೆದ ಕಡಿಮೆ ಗುಣಮಟ್ಟದ ಮಲ್ಲಿಗೆಯನ್ನು ಹೂವಿನ ಹಡಗಲಿಯ ಮಲ್ಲಿಗೆ ಎಂದು ಮಾರುತ್ತಾರೆಂಬ ಚಿಂತೆಯೇ?
ಚೆನ್ನೈಯಲ್ಲಿರುವ ಭೌಗೋಳಿಕ ಸೂಚಕ ರಿಜಿಸ್ಟ್ರಿ (ಕಚೇರಿ)ಯು, ಎಪ್ರಿಲ್ 2004ರಿಂದೀಚೆಗೆ 400ಕ್ಕಿಂತ ಅಧಿಕ ಭೌಗೋಳಿಕ ಸೂಚಕಗಳನ್ನು ನೀಡಿದೆ. ಇದನ್ನು ನೀಡುವ ತರ್ಕ ಹಾಗೂ ವಿಧಾನಗಳು ವಿವಾದಗಳನ್ನು ಹುಟ್ಟು ಹಾಕಿವೆ. ಕೆಲವು ವಿವಾದಗಳು ಕೋರ್ಟಿನ ಮೆಟ್ಟಲೇರಿವೆ.
ಒಂದು ವಿಷಯವಂತೂ ಸ್ಪಷ್ಟ: ಕಷ್ಟದಾಯಕವಾದ ಎಲ್ಲಾ ವಿಧಿವಿಧಾನ ಅನುಸರಿಸಿ, ಭೌಗೋಳಿಕ ಸೂಚಕ ಪಡೆಯುತ್ತಿರುವ ಸಮುದಾಯಗಳ ತಪ್ಪು ನಂಬಿಕೆ ಏನೆಂದರೆ, ಒಮ್ಮೆ ಅದನ್ನು ಪಡೆದುಕೊಂಡರೆ, ಅದು ತಾನಾಗಿಯೇ ತಮ್ಮ ಉತ್ಪನ್ನದ ಮಾರುಕಟ್ಟೆ ಮತ್ತು ವ್ಯವಹಾರ ರಕ್ಷಿಸುತ್ತದೆ. ಈಗ ಮಲ್ಲಿಗೆ ಹೂವಿನ ಉದಾಹರಣೆಯನ್ನೇ ಪರೀಕ್ಷಿಸೋಣ. ಹೂವಿನ ಹಡಗಲಿ , ಮೈಸೂರು ಅಥವಾ ಉಡುಪಿಯ ಮಲ್ಲಿಗೆ ಬೆಳೆಗಾರರು ತಮ್ಮ ಉತ್ಪನ್ನವನ್ನು ಬ್ರಾಂಡೆಡ್ ಉತ್ಪನ್ನವಾಗಿ ಮಾರುತ್ತಿದ್ದಾರೆಯೇ? ಮಹಾನಗರವೊಂದರ ರಸ್ತೆಬದಿಗಳಲ್ಲಿ ಮಲ್ಲಿಗೆ ಮಾರುವ ಮಕ್ಕಳು ಯಾವುದೋ ಊರಿನ ಹೆಸರು ಹೇಳುತ್ತಾ ಮಾರಿದರೆ, ಯಾರಿಗಾದರೂ ನಷ್ಟವಿದೆಯೇ? ಅಂದರೆ, ವಿದೇಶಗಳಲ್ಲಿ ಒಂದು ಉತ್ಪನ್ನಕ್ಕೆ ಭಾರೀ ಬೇಡಿಕೆ ಇದ್ದಾಗ ಭೌಗೋಳಿಕ ಸೂಚಕದಿಂದ ಪ್ರಯೋಜನವಾದೀತು; ಇಲ್ಲವಾದರೆ ಅದೆಲ್ಲ ಶ್ರಮ ವ್ಯರ್ಥವಾದೀತು.
ಚೆನ್ನೈ ರಿಜಿಸ್ಟ್ರಿಯೂ ಭೌಗೋಳಿಕ ಸೂಚಕ ವಿಷಯದಲ್ಲಿ ಗೊಂದಲದಲ್ಲಿದೆ ಎಂಬುದಕ್ಕೆ ಒಂದು ಉದಾಹರಣೆ: "ಪಯ್ಯನೂರಿನ ಪವಿತ್ರ ಉಂಗುರ"ಕ್ಕೆ ನೀಡಲಾದ ಭೌಗೋಳಿಕ ಸೂಚಕ. ಇದನ್ನು ನವಂಬರ್ 2012ರಲ್ಲಿ "ಬೌದ್ಧಿಕ ಸೊತ್ತಿನ ಮೇಲ್ಮನವಿ ಮಂಡಳಿ" ರದ್ದು ಮಾಡಿತು. ಆ ಉಂಗುರವು, ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನೂರಿನಲ್ಲಿ ತಯಾರಿಸಲಾಗುವ ಉಂಗುರ. ಚಿನ್ನಬೆಳ್ಳಿಯ ವಿಶೇಷ ವಿನ್ಯಾಸದ ಆ ಉಂಗುರವನ್ನು ಅಲ್ಲಿನ ದೇವಸ್ಥಾನದ ಅರ್ಚಕರು ಪೂಜೆ ಮಾಡುವಾಗ ಧರಿಸುತ್ತಿದ್ದರಂತೆ.
ಕ್ರಮೇಣ, ಆ ಉಂಗುರ ಧರಿಸಿದರೆ ಅಧ್ಯಾತ್ಮಿಕ ಶಕ್ತಿ ಮತ್ತು ಸಂಪತ್ತು ಒದಗುತ್ತದೆ ಎಂದು ಪ್ರಚಾರ ಮಾಡಲಾಯಿತು. ಇದರಿಂದಾಗಿ, ಆ ಉಂಗುರದ ಭಾರೀ ವ್ಯಾಪಾರೀಕರಣ ಆಯಿತು. ಹಲವು ಆಭರಣ ತಯಾರಕರು ತಮ್ಮದು "ಅಸಲಿ ಉಂಗುರ" ಎಂದು ಮಾರುತ್ತಿದ್ದಾರೆ. ಅವರಲ್ಲೊಬ್ಬರು, ಮದ್ರಾಸ್ ಹೈಕೋರ್ಟಿನಲ್ಲಿ ಭೌಗೋಳಿಕ ಸೂಚಕ ವಿರುದ್ಧ ದಾವೆ ಹೂಡಿದರು; ಬೌದ್ಧಿಕ ಸೊತ್ತಿನ ಮೇಲ್ಮನವಿ ಮಂಡಳಿಯಲ್ಲಿಯೂ ಇದನ್ನು ಪ್ರಶ್ನಿಸಿದರು. ಅಂತಿಮವಾಗಿ, 2009ರಲ್ಲಿ ನೀಡಲಾದ ಭೌಗೋಳಿಕ ಸೂಚಕವು ರದ್ದಾಯಿತು. ಯಾಕೆಂದರೆ, ಭೌಗೋಳಿಕ ಸೂಚಕಕ್ಕಾಗಿ ಅರ್ಜಿ ಸಲ್ಲಿಸಿದ್ದ ಸೊಸೈಟಿಯು ಈ ಉಂಗುರಗಳನ್ನು ತಯಾರಿಸುತ್ತಿದ್ದ ಕುಶಲ ಕೆಲಸಗಾರರ ಪರವಾಗಿ ಆ ಅರ್ಜಿ ಸಲ್ಲಿಸಿರಲಿಲ್ಲ.
ಹಲವಾರು ಕೃಷಿ ಉತ್ಪನ್ನಗಳಿಗೆ ಭೌಗೋಳಿಕ ಸೂಚಕ ಪಡೆಯಲಿಕ್ಕಾಗಿ ಅರ್ಜಿ ಸಲ್ಲಿಸಲು ಸಾಧ್ಯವಿದೆ. ಯಾಕೆಂದರೆ, ಸ್ಥಳೀಯ ಮಣ್ಣು ಮತ್ತು ಹವಾಮಾನದಿಂದಾಗಿ ಕೃಷಿ ಉತ್ಪನ್ನಗಳು ವಿಶೇಷ ಗುಣ ಪಡೆದುಕೊಳ್ಳುತ್ತವೆ. ಆದರೆ, ಭೌಗೋಳಿಕ ಸೂಚಕಕ್ಕಾಗಿ ಅರ್ಜಿ ಸಲ್ಲಿಸುವ ಮುನ್ನ ಅದರ ಅನುಕೂಲ - ಅನಾನುಕೂಲಗಳ ಬಗ್ಗೆ ಅಧ್ಯಯನ ಅಗತ್ಯ.
2023-24ನೇ ಸಾಲಿನ ಕೇಂದ್ರ ಬಜೆಟಿನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಡಿದ ಒಂದು ಘೋಷಣೆ: ಭೌಗೋಳಿಕ ಸೂಚಕ ತಳಿಗಳು, ಉತ್ಪನ್ನಗಳು, ಕಲೆಗಳ ಮತ್ತು “ಒಂದು ಜಿಲ್ಲೆ ಒಂದು ಉತ್ಪನ್ನ” ವಸ್ತುಗಳ ಪ್ರಚಾರ ಮತ್ತು ಮಾರಾಟಕ್ಕೆ ಯೂನಿಟಿ ಮಾಲ್ ಸ್ಥಾಪಿಸಲು ರಾಜ್ಯ ಸರಕಾರಗಳಿಗೆ ಉತ್ತೇಜನ ನೀಡಲಾಗುವುದು ಎಂಬುದು. ಇವು ಸ್ಥಾಪನೆಗೊಂಡರೆ, ಮಾರುಕಟ್ಟೆ ಸಮಸ್ಯೆ ಎದುರಿಸುತ್ತಿರುವ ಭೌಗೋಳಿಕ ಸೂಚಕ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗುವ ಸಾಧ್ಯತೆಯಿದೆ.
ಫೋಟೋ 1: ಉಡುಪಿಯ ಮಟ್ಟು ಗುಳ್ಳ
ಫೋಟೋ 2 ಮತ್ತು 3: ಚನ್ನಪಟ್ಟಣದ ಗೊಂಬೆಗಳು