ಭ್ರಮರಬಂಧು
ಕವನ
ಭ್ರಮರಬಂಧು
ಕೇಳಿರಿಲ್ಲಿ ಮುಗ್ಧ ಭ್ರಮರಬಂಧುಗಳಿರಾ
ಕಟ್ಟದಿರಿ ನಿಮ್ಮ ಕನಸ ಗೂಡನು
ಮುಖ್ಯರಸ್ತೆಯ ಮರದ ಕೊಂಬೆಯಲ್ಲಿ.
ನಿಭಿಡಾರಣ್ಯದ ತೊರೆಯ ಬದಿಯಲ್ಲವೀ ತಲವು.
ವಾಹನಾರಣ್ಯದ ಹೊರೆಯ ಹೊತ್ತ ಕಿರುದಾರಿಯು.
ರಸ್ತೆಯಗಲೀಕರಣವೆಂಬ ಪೆಡಂಭೂತ ಕೆಡುವುದು
ನಿಮ್ಮ ಗೂಡ ಹೊತ್ತ ಮರವನು.
ಶ್ರಮಿತ ದೇಹಕೆ ಆಸರೆಯು ನಿಮ್ಮೀ ಗೇಹವ,
ಹಾಳ್ಗೆಡುವುದು ಮುಂದೆ ಅಗಲ ರಸ್ತೆಯ ಮೋಹ.
ದೂರದಿಂದ ತುಂಬಿನಿಂದ ಕುಸುಮದಿಂದ
ಮಧುವನೀರಿ ತಂದಿರಿ.
ಹೊಣೆಯನೊತ್ತು ಮಧುವ ಸೇರಿಸಿ
ಬರುವ ಕಾಲವ ಕಾಯ್ದಿರಿ.
ಆದರೆ ನಿಮ್ಮ ಶ್ರಮಕೆ ಭವಿಷ್ಯವಿಲ್ಲ.
ಈ ಮಹಾನಗರದೊಳಗೆ ಗೂಡಿಗುಳಿಗಾಲವಿಲ್ಲ.
ನಿಮ್ಮ ಮಕ್ಕಳು ಮರಿಮಕ್ಕಳು ಬಾಳಿ ನಲಿಯಲೆಂದು
ಬೆಳೆದು ನಿಂತಿಲ್ಲವೀ ಮರ.
ನೆರಳಿಗಾಗಿ ತನ್ನ ಉಸಿರಿಗಾಗಿ ನಗರವಾಸಿಯು
ಬೆಳೆಸಿದ ಮರ.
ಇದರ ತಂಪು ನೆರಳಲಿ ಕಾಣುವುದು ಅವನ
ಸ್ವಾರ್ಥ ವ್ಯಾಪಾರ.
ಅವನ ಸ್ವಾರ್ಥಕೆ ನೀವು ಕುರುಡರು,
ನಿಮ್ಮ ಜೀವಕೆ ಅವನು.
ಅವನ ಉಸಿರನು ಲೆಕ್ಕಿಸದೆ ಕಡಿಯುತಿಹನು
ಮರದ ಮೇಲೆ ಮರವನು.
ಅವನ ಉಸಿರಿಗೆ ಬೆಲೆಯಿಲ್ಲದಿರುವಾಗ,
ನಿಮ್ಮ ಜೀವಕೆ ಬೆಲೆಯೆ?
ಹಾರುವ ರೆಕ್ಕೆ ನಿಮಗಿರುವಾಗ
ಈ ಮೃತ್ಯುಕೂಪವು ನೆಲೆಯೆ?
ಮರವ ಬಿಟ್ಟು, ಊರ ಬಿಟ್ಟು
ದೂರ ಹಾರಿ ವನವ ಸೇರಿ ಬದುಕಿರಿ.
ವನದ ಮಿಗ ಖಗಗಳಿಗಿಂತ ಕ್ರೂರವು
ಮನುಜನೆದೆಯು ತಿಳಿಯಿರಿ.
ದೂರದೊಳುಳಿದ ವನದಿ ಬಾಳಿ
ಮಧುವ ಹೀರಿ ತಣಿಸಿರಿ.
- ಚಂದ್ರಹಾಸ