ಭ್ರಷ್ಟಾಚಾರ…!

ಭ್ರಷ್ಟಾಚಾರ…!

ಈ ವಾರದ ನಾಲ್ಕು ಸುದ್ದಿ, ಸಮ್ಮೇಳನ, ಸಮಾವೇಶ ಮತ್ತು ಚುನಾವಣೆಯನ್ನು ಒಂದಕ್ಕೊಂದು ಪೂರಕವಾಗಿ ಬೆಸೆದಾಗ ಸೃಷ್ಟಿಯಾದ ವಿಷಯವೇ ಭ್ರಷ್ಟಾಚಾರ. ಮೊದಲನೆಯದಾಗಿ, ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ, ಎರಡನೆಯದು, ಉದ್ಯೋಗ ಮೇಳ, ಮೂರನೆಯದು, ಸರ್ಕಾರಿ ನೌಕರರ ಸಮ್ಮೇಳನ, ನಾಲ್ಕನೆಯದು, ರಾಜ್ಯಸಭಾ ಚುನಾವಣೆ.

ಮೊದಲನೆಯ ಸುದ್ದಿ, ಸಂವಿಧಾನ ಮತ್ತು ಸಂವಿಧಾನದ ಆಶಯಗಳ ಬಗ್ಗೆ ಇಡೀ ಸರ್ಕಾರ ಮತ್ತು ಅಲ್ಲಿ ನೆರದಿದ್ದ ಜನ ತೋರಿದ ಅಭಿಮಾನ ಮತ್ತು ಅದಕ್ಕೆ ಎಷ್ಟು ನಿಷ್ಠರಾಗಿದ್ದಾರೆ ಎಂಬುದು ಒಂದು ವಿಷಯ. ಎರಡನೆಯದು, ಆ ಆಶಯದಂತೆ ಬದುಕುತ್ತಿರುವಾಗಲು ಸಾವಿರಾರು ಜನ ಕೆಲಸದ ಹುಡುಕಾಟಕ್ಕಾಗಿ ನಿರುದ್ಯೋಗಿಗಳು ಜಾತಕ ಪಕ್ಷಿಯಂತೆ ಕಾಯುತ್ತಾ, ನಿರೀಕ್ಷಿಸುತ್ತಾ, ಬೆಂಗಳೂರಿಗೆ ಬಂದಿದ್ದು,  ಮೂರನೆಯದು, ಈ ಆಶಯವನ್ನು ಜಾರಿಗೆ ತರಬೇಕಾದ ಸರ್ಕಾರಿ ಅಧಿಕಾರಿಗಳು ಒಂದು ಬೃಹತ್ ಸಮಾವೇಶವನ್ನು ಅಲ್ಲಿಯೇ ಆಯೋಜಿಸಿದ್ದು, ಇದರ ನಡುವೆ ರಾಜ್ಯಸಭಾ ಚುನಾವಣೆಗಾಗಿ ಪಕ್ಷಗಳಲ್ಲಿ ನಡೆದ ವಿವಿಧ ತಂತ್ರ ಕುತಂತ್ರಗಾರಿಕೆಗಳು.

ಈ ಎಲ್ಲದರ ಮೂಲವನ್ನು ಹುಡುಕುತ್ತಾ ಹೋದಾಗ ಕಾಣುವುದು ಭ್ರಷ್ಟಾಚಾರ ಎಂಬ ಪೆಡಂಭೂತ. ಮೂಲಭೂತವಾಗಿ ಮನುಷ್ಯರ ಮನಸ್ಸುಗಳೇ ಭ್ರಷ್ಟ ಗೊಂಡಿವೆ. ಅದರ ಪರಿಣಾಮ ದೇಹವು ಭ್ರಷ್ಟವಾಗಿದೆ. ಇದರ ಫಲಿತಾಂಶ ವ್ಯವಸ್ಥೆಯೂ ಭ್ರಷ್ಟವಾಗಿದೆ. ಇದರ ಆದಿ ಅಂತ್ಯಗಳೇ ಅರಿವಾಗುತ್ತಿಲ್ಲ. ಸಂವಿಧಾನದ ಅಡಿಯಲ್ಲಿಯೇ ಪ್ರತಿಜ್ಞಾವಿಧಿ ಸ್ವೀಕರಿಸಿ ಆಡಳಿತ ಹಿಡಿಯುವ ರಾಜಕಾರಣಿಗಳು ಭ್ರಷ್ಟಾಚಾರದ ಮೂಲಬೇರುಗಳು, ಅದಕ್ಕೆ ಪೂರಕವಾಗಿ ಅಧಿಕಾರಕ್ಕೆ ನೇಮಕವಾಗುವ ಸರ್ಕಾರಿ ಅಧಿಕಾರಿಗಳು, ಇದರ ನೆರಳಿನಲ್ಲಿಯೇ ಮತ್ತೆ ಉಳಿದ ಎಲ್ಲಾ ವರ್ಗಗಳು ಸಹ ಕೆಟ್ಟ ಹಣದ ಪ್ರಭಾವಕ್ಕೆ ಒಳಗಾಗಿ ಭ್ರಷ್ಟವಾಗುತ್ತಲೇ ಸಾಗುತ್ತಿದೆ. ಅದು ತಲುಪಿರುವ ಹಂತ ಒಳ್ಳೆಯ ಮನಸ್ಸುಗಳಿಗೆ ಊಹಿಸಲು ಸಾಧ್ಯವಿಲ್ಲ.

ಶಾಸಕರೆಂಬ ಮನುಷ್ಯರು ಕೂಡ ಖರೀದಿಯ ವಸ್ತುವಾಗುವಂತಹ ಪರಿಸ್ಥಿತಿ ತಲುಪಿದೆ. ಅದು ನಿಧಾನವಾಗಿ ನಂಜಿನಂತೆ ಇಡೀ ದೇಹವನ್ನು ಆಕ್ರಮಿಸುತ್ತಿರುವ ತಿರುವು  ತೆಗೆದುಕೊಳ್ಳುತ್ತಿದೆ. ಇದರ ಬಗ್ಗೆ ಚರ್ಚಿಸಿದಾಗ ಕೆಲವು ಮಿತ್ರರು ಹೇಳಿದ್ದು ಭ್ರಷ್ಟಾಚಾರದ ಒಂದು ಬೃಹತ್ ಸಮಾವೇಶವನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮಾಡಬೇಕಿದೆ. ಯಾವ ಯಾವ ಕೆಲಸಕ್ಕೆ ಎಷ್ಟು ಎಷ್ಟು ಹಣ ನೀಡಬೇಕು, ಯಾರಿಗೆ ನೀಡಬೇಕು, ಯಾವ ರೂಪದಲ್ಲಿ ನೀಡಬೇಕು ಎನ್ನುವುದನ್ನು ಪಾರದರ್ಶಕಗೊಳಿಸಿದರೆ ಕನಿಷ್ಠ ನಮ್ಮ ಗೊಂದಲಗಳಾದರು ನಿವಾರಣೆಯಾಗಿ ಒಂದು ಸ್ಪಷ್ಟ ಚಿತ್ರಣ ಸಿಗುತ್ತದೆ. ಭ್ರಷ್ಟಾಚಾರದಲ್ಲೂ ವಂಚನೆ ಯಾಗುವ ಅಥವಾ ಶೋಷಿಸಲ್ಪಡುವ ಪರಿಸ್ಥಿತಿ ಬರುವುದಿಲ್ಲ.

ಇದು ವ್ಯಂಗ್ಯವೆನಿಸಿದರು ವಾಸ್ತವದಲ್ಲಿ ಸರಿ ಇರಬಹುದೇನೋ ಅನಿಸುತ್ತದೆ. ಹೇಗಿದ್ದರು ಬಹುತೇಕ ಎಲ್ಲ ಸರ್ಕಾರಿ ಕೆಲಸಗಳಿಗೆ ಜೊತೆಗೆ ಅನೇಕ ಕಡೆ ಖಾಸಗಿಯಾಗಿಯೂ ಸಹ ಭ್ರಷ್ಟ ಹಣ ಓಡಾಡುವುದರಿಂದ ಅದೇನು ಮುಚ್ಚು ಮರೆಯ ವಿಷಯವೇ ಅಲ್ಲ. ಅದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿರುವುದರಿಂದ ಅದರಲ್ಲಿಯೂ ಬಹಳ ಜನ ಮೋಸ ಹೋಗುತ್ತಾರೆ. ಈ ಕಪಟ ನಾಟಕ ಬೇಕೆ, ಈ ಮುಖವಾಡ ಬೇಕೆ. ಲಂಚವನ್ನು  ಸಹ ಅಧಿಕೃತವಾಗಿ ಘೋಷಿಸಬಾರದೆೇಕೆ. ಕೆಟ್ಟ ರಕ್ತ ದೇಹದಲ್ಲಿ ಹರಿಯುತ್ತಾ ಸಾಕಷ್ಟು ರೋಗರುಜಿನಗಳಿಗೆ ಕಾರಣವಾಗುವಂತೆ ಕೆಟ್ಟ ಹಣ ಸಮಾಜವನ್ನ ಅತ್ಯಂತ ರೋಗಗ್ರಸ್ತಗೊಳಿಸಿದೆ.

ಒಂದು ಹಂತಕ್ಕೆ ಸ್ವಲ್ಪ ನಿಶ್ಚಿತ ಆದಾಯವನ್ನು ಹೊಂದಿ ತಮ್ಮ ಪಾಡಿಗೆ ತಾವು ಬದುಕುತ್ತಿರುವ, ಸಮಾಜದ ಆಗುಹೋಗುಗಳಿಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದ, ತಮ್ಮ ಯೋಗ ಕ್ಷೇಮವನ್ನೇ ಮಾತ್ರ ನೋಡಿಕೊಳ್ಳುವ ಜನರಿಗೆ ಈ ಭ್ರಷ್ಟಾಚಾರ ಹೆಚ್ಚಾಗಿ ಕಾಡುವುದಿಲ್ಲ. ಆದರೆ ಹೊರಗೆ ವ್ಯಾಹಾರಿಕ ಜಗತ್ತಿಗೆ, ಬದುಕಿಗೆ, ಸಾಧನೆಗೆ, ಸಾಮಾಜಿಕ ಹೋರಾಟಕ್ಕೆ, ಮೌಲ್ಯಗಳ ಪುನರುತ್ಥಾನಕ್ಕೆ, ಬದಲಾವಣೆಗಾಗಿ ನೀವು  ಸಾಮಾಜಿಕ  ಜೀವನಕ್ಕೆ ಪ್ರವೇಶಿಸಿದರೆ ಈ ಭ್ರಷ್ಟಾಚಾರದ ಬೃಹತ್ ಮುಖವಾಡಗಳು ಬಯಲಾಗುತ್ತಾ ಸಾಗುತ್ತದೆ. ಹೆಜ್ಜೆ ಹೆಜ್ಜೆಗೂ ಕೆಟ್ಟ ಹಣದ ಪ್ರಭಾವವನ್ನು ಕಾಣಬಹುದಾಗಿದೆ.

ಮೊದಲಿಗೆ ಸಾಮಾನ್ಯವಾಗಿ ಭ್ರಷ್ಟಾಚಾರವೆಂದರೆ ಸರ್ಕಾರಿ ಕಚೇರಿಗಳ ಕೆಟ್ಟ ಹಣದ ಚಲಾವಣೆ ಮಾತ್ರವಾಗಿತ್ತು. ಈಗ ಬಹುತೇಕ ಭ್ರಷ್ಟಾಚಾರ ಎಲ್ಲ ಕ್ಷೇತ್ರಗಳನ್ನು ಅದರಲ್ಲು ಖಾಸಗಿ ಕ್ಷೇತ್ರಗಳನ್ನೂ ಪ್ರವೇಶಿಸಿಯಾಗಿದೆ. ಸೇವಾ ಮನೋಭಾವದ ಕ್ಷೇತ್ರಗಳನ್ನು ಮಲಿನ ಮಾಡಿ ಆಗಿದೆ. ಅದರ ರೂಪಗಳೇ ನಿಯಂತ್ರಣಕ್ಕೆ ಸಿಗದಷ್ಟು ವೇಗವಾಗಿ ಬೆಳೆಯುತ್ತಿದೆ. ಅದರ ವೇಗ ಎಷ್ಟಿದೆ ಎಂದರೆ ಯಾವುದು ಭ್ರಷ್ಟಾಚಾರ, ಯಾರು ಭ್ರಷ್ಟರು, ಯಾವ ರೀತಿಯ ಭ್ರಷ್ಟರು ಎನ್ನುವುದು ಕೂಡ ಅರ್ಥವೇ ಆಗುತ್ತಿಲ್ಲ. ಇಡೀ ವ್ಯವಸ್ಥೆ, ಇಡೀ ಜನ ತಮ್ಮ ಸ್ವಾರ್ಥ, ತಮ್ಮ ಲಾಭಕ್ಕಾಗಿ ಜಾತಿ, ಸ್ವಜನ ಪಕ್ಷಪಾತ, ಪ್ರಭಾವ ಎಲ್ಲವನ್ನು ಬಳಸಿ ಮಾಡುತ್ತಿರುವ ಭ್ರಷ್ಟಾಚಾರ ಒಂದು ಹಿಡಿತಕ್ಕೆ ಸಿಗುತ್ತಲೇ ಇಲ್ಲ‌.

ಕೇವಲ ಚುನಾವಣೆ ಅಥವಾ ಮನೆ ಖರೀದಿ ಅಥವಾ ಉದ್ಯೋಗ ಈ ಕ್ಷೇತ್ರಗಳಲ್ಲಿ ಮಾತ್ರ ಭ್ರಷ್ಟಾಚಾರ ಎಂಬ ಕಲ್ಪನೆ ಈಗ ಉಳಿದೇ ಇಲ್ಲ. ಹೆಜ್ಜೆ ಹೆಜ್ಜೆಗೂ ಒಂದಲ್ಲ ಒಂದು ರೂಪದ ಭ್ರಷ್ಟಗೊಂಡ ಮನಸ್ಸಿನ ವರ್ತನೆಗಳು ನಮಗೆ ಕಾಡುತ್ತಲೇ ಇವೆ. ಬಹಳಷ್ಟು ಅನಾಗರಿಕ ವರ್ತನೆ ಕಾಣುತ್ತಿರುವುದೇ ಈ ಭ್ರಷ್ಟಾಚಾರದಿಂದಾಗಿ.  ಇದರಿಂದಾಗಿಯೇ ಸರ್ಕಾರಗಳೇ ಉರುಳುತ್ತವೆ, ಸಂಬಂಧಗಳೇ ನಾಶವಾಗುತ್ತದೆ, ಕೊಲೆಗಳು - ವಂಚನೆಗಳು ನಿರಂತರವಾಗಿ ನಡೆಯುತ್ತವೆ. ಸಮಸ್ಯೆಗಳೇನು ಇವೆ ಮತ್ತು ಬಹುತೇಕರಿಗೆ ಈ ಸಮಸ್ಯೆಗಳ ಅರಿವಿದೆ. ಆದರೆ ಪರಿಹಾರ? 

ಹೌದು, ಪರಿಹಾರಗಳು ಇವೆ. ಪರಿಹಾರಕ್ಕಾಗಿ ಸಿದ್ಧ ಸೂತ್ರಗಳು ಇವೆ. ಆದರೆ ಅದನ್ನು ಅನುಷ್ಠಾನ ಮಾಡುವವರು ಯಾರು, ಅನುಷ್ಠಾನ ಮಾಡುವ ಮನಸ್ಸುಗಳೇ ಭ್ರಷ್ಟಗೊಂಡಿರುವಾಗ ಮತ್ತು ಭ್ರಷ್ಟಾಚಾರದಿಂದ ಅವರ ಬದುಕು ಸುಖಮಯವಾಗಿರುವಾಗ ಅದನ್ನು ಬದಲಾಯಿಸಲು ಪ್ರಯತ್ನಿಸುವವರು ಯಾರು. ಇದು ಬಗೆಹರಿಯದ ಸಮಸ್ಯೆಯಾಗಿದೆ. ಯಾವುದೇ ಕಾನೂನು ಅಥವಾ ಮೇಲ್ವಿಚಾರಣೆ ಅಥವಾ ಅದರ ಮೇಲೆ ಇನ್ನೊಂದು ಹೊಸ ಕಠಿಣ ಶಿಕ್ಷೆ ಇವೆಲ್ಲವೂ ಈಗಾಗಲೇ ಇದೆ. ಆದರೆ ಇದೆಲ್ಲವನ್ನು ಜಾರಿಗೊಳಿಸುವುದೇ ವ್ಯಕ್ತಿಗಳಾಗಿರುವಾಗ ಇದರಿಂದ ಅಂತಹ ದೊಡ್ಡ ಪರಿಹಾರ ಸಾಧ್ಯವಿಲ್ಲ.‌ ಒಬ್ಬ ಸಾಮಾನ್ಯ ವ್ಯಕ್ತಿಗಳಾಗಿ ನಾವು ಮಾಡಬಹುದಾದದ್ದು ಏನು ಎಂದು ಯೋಚಿಸಿದಾಗ, ಕೆಲವು ಸರಳ ವಿಷಯಗಳು ಹೊಳೆಯುತ್ತವೆ.

ಒಂದು, ನೈತಿಕ ಮೌಲ್ಯಗಳನ್ನು, ಮಾನವೀಯ ಮೌಲ್ಯಗಳನ್ನು ನಮ್ಮೊಳಗೆ ಉಳಿಸಿಕೊಳ್ಳುವುದು ಮತ್ತು ಬೆಳೆಸುವುದು.

ಎರಡು, ನಮ್ಮ ಕೈಲಾದಷ್ಟು ಒಳ್ಳೆಯತನವನ್ನು ಇತರರಲ್ಲಿ ಪ್ರಸರಿಸಲು ನಿರಂತರ ಪ್ರಯತ್ನ ಮಾಡುತ್ತಲೇ ಇರುವುದು.... 

ಮೂರು, ಕೆಟ್ಟ ಹಣದ ಸಂಪಾದನೆಯನ್ನು ಕಡಿಮೆ ಮಾಡಿಕೊಂಡು ಶ್ರಮದ ಹಣದಲ್ಲಿ ಮಾತ್ರ ಬದುಕುವ ಜೀವನ ವಿಧಾನವನ್ನು ರೂಪಿಸಿಕೊಳ್ಳಬೇಕು.

ನಾಲ್ಕು, ಒಳ್ಳೆಯವರನ್ನು ಪ್ರೋತ್ಸಾಹಿಸುತ್ತಾ, ಕೆಟ್ಟವರನ್ನು ನಿರ್ಲಕ್ಷಿಸುತ್ತಾ, ಸಾಧ್ಯವಾದರೆ ವಿರೋಧಿಸುತ್ತಾ ಜೀವನ ಸಾಗಿಸಬೇಕು.

ಐದು, ಚುನಾವಣಾ ಸಂದರ್ಭದಲ್ಲಿ ನಮ್ಮ ಒಂದು ವೋಟು ವ್ಯರ್ಥವಾದರೂ ಚಿಂತೆ ಇಲ್ಲ ಗೆಲ್ಲುವ ಅಭ್ಯರ್ಥಿ ಎಂದು ನೋಡದೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಉತ್ತಮ ಅಭ್ಯರ್ಥಿಗೆ ಮತ ಹಾಕಬೇಕು.

ಆರು, ಜಾತಿ ಸಂಘಟನೆ ಅಥವಾ ಸಮಾವೇಶಗಳಿಂದ ಸಾಧ್ಯವಾದಷ್ಟು ದೂರವಿರಬೇಕು. ಸರ್ಕಾರಿ ಅಥವಾ ಖಾಸಗಿ ಉದ್ಯೋಗಿಗಳಾಗಿದ್ದರೆ ಸಂಬಳದ ನಂತರ ಬರುವ ಯಾವುದೇ ಲಂಚರೂಪದ ಹಣವನ್ನು ಸ್ವೀಕರಿಸದೆ ಇರುವ ಮನಸ್ಥಿತಿ ಬೆಳೆಸಿಕೊಳ್ಳಬೇಕು.

ಏಳು, ಇತರರು ಭ್ರಷ್ಟರಾಗಿ ವಸ್ತು ರೂಪದಲ್ಲಿ ಶ್ರೀಮಂತರಾದರೆಂದು ನಾವು ಅದನ್ನು ಅನುಕರಣೆ ಮಾಡದೇ ಆತ್ಮ ಸಾಕ್ಷಿಯಂತೆ ಸಾಧ್ಯವಾದಷ್ಟು ಒಳ್ಳೆಯವರಾಗಿ ಬದುಕಲು ಪ್ರಯತ್ನಿಸಬೇಕು.

ಎಂಟು, ನಮ್ಮ ಸ್ವಂತ ತಂದೆ ತಾಯಿ ಮಕ್ಕಳು ಅಕ್ಕ ತಂಗಿ ಅಣ್ಣ ತಮ್ಮ ಅಥವಾ ಯಾವುದೇ ಸಂಬಂಧವಾಗಿರಲಿ ಅವರು ಸಹ ಭ್ರಷ್ಟರಾಗಿದ್ದರೆ ವಿನಯ ಮತ್ತು ಪ್ರೀತಿ ಪೂರ್ವಕವಾಗಿ ಅವರನ್ನು ಸಹ ತಿದ್ದುವ, ಪ್ರತಿಭಟಿಸುವ, ತಿರಸ್ಕರಿಸುವ ಧೈರ್ಯವನ್ನು ತೋರಿಸಬೇಕು.

ಒಂಬತ್ತು, ಕೊಳ್ಳುಬಾಕ ಸಂಸ್ಕೃತಿಗೆ ಗುಲಾಮರಾಗದೆ, ದಾಸರಾಗದೆ ಬದುಕಿನ ಮೌಲ್ಯಗಳನ್ನು ಸಂತೋಷ ಮತ್ತು ನೆಮ್ಮದಿಯ ಆಧಾರದ ಮೇಲೆ ಅಳೆಯಬೇಕು ಹಾಗೂ ನಮ್ಮ ನೆಮ್ಮದಿಯ ಗುಣಮಟ್ಟ ಹೆಚ್ಚಾಗುವುದು ಹಣದಿಂದಲ್ಲ ನಮ್ಮೊಳಗಿನ ಆಂತರಿಕ ಮೌಲ್ಯಯುತ ಶಕ್ತಿಯಿಂದ ಎಂಬುದನ್ನು ಅರಿಯಬೇಕು.

ಹತ್ತು, ಭ್ರಷ್ಟಾಚಾರ ಈ ವ್ಯವಸ್ಥೆಯಲ್ಲಿ ಸಾಮಾನ್ಯ, ಅದು ಅಂತಹ ದೊಡ್ಡ ತಪ್ಪೇನಲ್ಲ, ಎಲ್ಲರೂ ಮಾಡುತ್ತಾರೆ ಎನ್ನುವ ರೋಗಗ್ರಸ್ತ ಮನಸ್ಥಿತಿಯನ್ನು ಮೊದಲು ಬಿಡಬೇಕು. ನಮ್ಮದಲ್ಲದ ಇತರರ ಹಣಕ್ಕೆ ದುರಾಸೆ ಪಡುವುದು ಖಂಡಿತವಾಗಿಯೂ ಅತ್ಯಂತ ಕೆಟ್ಟ ಮನೋಭಾವ. ಅದು ನಮ್ಮ ಬದುಕನ್ನು ನಿಧಾನವಾಗಿ ವಿಷಮಯಗೊಳಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು ಸಾಧ್ಯವಾದಷ್ಟು ಕೆಟ್ಟ ಹಣದಿಂದ ದೂರವಿರುತ್ತಾ, ಅದಕ್ಕೆ ಆಕರ್ಷಿತರಾಗದೆ ನಮ್ಮ ದುಡಿಮೆಯ ಹಣದಲ್ಲೇ ಬದುಕುವ ಮನಸ್ಸು  ಬೆಳೆಸಿಕೊಳ್ಳಬೇಕು.

ಹೀಗೆ ಇನ್ನು ಹಲವಾರು ಕ್ರಮಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮತ್ತು ಅದನ್ನು ಇತರರಿಗೂ ಕೂಡ ಮನವರಿಕೆ ಮಾಡಿ ಕೊಡುವ ಮೂಲಕ ಕನಿಷ್ಠ ಮಟ್ಟದಲ್ಲಿ ಭ್ರಷ್ಟಾಚಾರವನ್ನು ಸಾಮಾನ್ಯ ಜನರು ನಿಯಂತ್ರಿಸಬಹುದು. ಇನ್ನು ರಾಜಕಾರಣಿಗಳು, ಅಧಿಕಾರಿಗಳು, ಇತರ ವೃತ್ತಿಪರರು, ಉದ್ಯಮಿಗಳು ಭ್ರಷ್ಟಾಚಾರವನ್ನು ನೇರವಾಗಿ ಮಾಡುತ್ತಾ ಸಮಾಜ ಕಂಟಕರಾಗುತ್ತಿದ್ದಾರೆ. ಅವರ ವಿರುದ್ಧ ನಮ್ಮ ಕೈಲಾದ ಮಟ್ಟಿಗೆ ಧ್ವನಿ ಎತ್ತುವ ಮೂಲಕ ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿರಬೇಕು.

ನೋಡೋಣ, ಮುಂದಿನ ಕೆಲವು ವರ್ಷಗಳಲ್ಲಾದರು ಇದು ನಿಯಂತ್ರಣವಾಗಬೇಕು. ಇಲ್ಲದಿದ್ದರೆ ನಮ್ಮ ಮುಂದಿನ ಮಕ್ಕಳ ಭವಿಷ್ಯ ಮತ್ತಷ್ಟು ಭ್ರಷ್ಟಗೊಂಡು ಅವರಲ್ಲಿ ಜೀವನೋತ್ಸಾಹವೇ ಇಲ್ಲವಾಗಬಹುದು, ಅಸಹಾಯಕತೆ ಮತ್ತು ನಿರಾಸೆ ಕಾಡಬಹುದು. ಅದಕ್ಕೆ ಮೊದಲೇ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಧನ್ಯವಾದಗಳು.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ