ಭ್ರಷ್ಟಾಚಾರ ನಿಗ್ರಹದತ್ತ ಸುಪ್ರೀಂ ಸ್ವಾಗತಾರ್ಹ ತೀರ್ಪು

ಸರಕಾರಿ ನೌಕರರು ಭ್ರಷ್ಟಾಚಾರ ಎಸಗಿದ ಎಲ್ಲ ಪ್ರಸಂಗಗಳಲ್ಲಿಯೂ ಕ್ರಿಮಿನಲ್ ಪ್ರಕರಣ ದಾಖಲಿಸಲು ಪ್ರಾಥಮಿಕ ತನಿಖೆ ಕಡ್ಡಾಯವಲ್ಲ, ಸರಕಾರಿ ಉದ್ಯೋಗಿ ಭ್ರಷ್ಟಾಚಾರ ನಡೆಸಿರುವುದಕ್ಕೆ ಬಲವಾದ ಸಾಕ್ಷ್ಯಗಳಿದ್ದರೆ, ಆತ ಎಸಗಿರುವ ಅಪರಾಧದ ಕುರಿತು ಮೇಲಧಿಕಾರಿಗೆ ವಿವರ, ಸ್ಪಷ್ಟ ಮಾಹಿತಿ ಲಭ್ಯವಿದ್ದು, ಭ್ರಷ್ಟಾಚಾರ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದರೆ ಪ್ರಾಥಮಿಕ ತನಿಖೆಯ ಅಗತ್ಯವಿಲ್ಲದೆ ಕ್ರಿಮಿನಲ್ ಪ್ರಕರಣ ದಾಖಲಿಸಬಹುದು ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದೊಂದು ಸ್ವಾಗತಾರ್ಹ ಮತ್ತು ಉಲ್ಲೇಖಾರ್ಹ ತೀರ್ಪು. ಸಾರ್ವಜನಿಕ ಸೇವೆಯಲ್ಲಿ ಭ್ರಷ್ಟಾಚಾರವನ್ನು ತಡೆಯಲು ಈ ತೀರ್ಪು ನಿರ್ಣಾಯಕ ಎಂದೆನಿಸಲಿದೆ.
ಕರ್ನಾಟಕ ಲೋಕಾಯುಕ್ತವು ಸರಕಾರಿ ಉದ್ಯೋಗಿಯೊಬ್ಬರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಿಸಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದು ಮಾಡಿತ್ತು. ಆ ಆದೇಶವನ್ನು ಕರ್ನಾಟಕ ಸರಕಾರ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದು, ಈ ಸಂಬಂಧ ಫೆ. ೧೭ರಂದು ನ್ಯಾ । ದೀಪಂಕರ್ ದತ್ತಾ ಮತ್ತು ನ್ಯಾ। ಸಂದೀಪ್ ಮೆಹ್ತಾ ಅವರಿದ್ದ ನ್ಯಾಯಪೀಠವು ಈ ಸ್ವಾಗತಾರ್ಹ ತೀರ್ಪು ನೀಡಿದೆ.
ಪ್ರಸ್ತುತ ಸರಕಾರಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಕಾಯ್ದೆಯಡಿ ಪ್ರಕರಣ ದಾಖಲಾಗಬೇಕಾದರೆ ಅದಕ್ಕೆ ಮುನ್ನ ಪ್ರಾಥಮಿಕವಾಗಿ ಇಲಾಖಾ ತನಿಖೆ ನಡೆದು ಅಲ್ಲಿ ಅದು ಸಾಬೀತಾಗಬೇಕು. ಅದು ಕ್ರಿಮಿನಲ್ ಸ್ವರೂಪದ್ದೋ, ಸಿವಿಲ್ ಪ್ರಕರಣವೋ ಎಂಬಿತ್ಯಾದಿ ಇಲಾಖಾ ತನಿಖೆಯಡಿ ಶ್ರುತ ಪಟ್ಟ ಬಳಿಕ ಮುಂದಿನ ಕ್ರಮವಾಗುತ್ತದೆ. ಅದು ಕ್ರಿಮಿನಲ್ ಪ್ರಕರಣವಾಗಿದ್ದರೂ ಇದು ನಡೆಯಲೇ ಬೇಕಾದ ರಿವಾಜು. ಇದರಿಂದ ಅನಗತ್ಯ ಕಾಲಹರಣವಾಗುತ್ತದೆ. ಅಪರಾಧಿ ಸರಕಾರಿ ಉದ್ಯೋಗಿಗೆ ಶಿಕ್ಷೆಯಾಗುವುದು ವಿಳಂಬವಾಗಬಹುದು. ಏನು ಮಾಡಿದರೂ ನಡೆಯುತ್ತದೆ ಎಂಬ ಭ್ರಮೆ ಸರಕಾರಿ ನೌಕರರಿಗೆ ಮೂಡುವುದು ಕೂಡ ಸಾಧ್ಯ.
ಆದರೆ ಈಗ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಈ ಸಂಬಂಧ ಸ್ಪಷ್ಟ ನಿರ್ದೇಶನ ನೀಡಿದಂತಿದೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗೆ ವಿವರ, ಸ್ಪಷ್ಟ ಮತ್ತು ಅಪರಾಧ ನಡೆದಿದೆ ಎಂದು ಮೇಲ್ನೋಟಕ್ಕೆ ತಿಳಿಯಬಹುದಾದ ರೀತಿಯಲ್ಲಿ ಮಾಹಿತಿ ದೊರೆತಿದ್ದರೆ ಪ್ರಕರಣದ ಪ್ರಾಥಮಿಕ ತನಿಕ್ಗೆ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಆದಾಯಕ್ಕಿಂತ ಮೀರಿ ಹೆಚ್ಚು ಆಸ್ತಿ ಸಂಪಾದಿಸಿರುವ ವಿಷಯವಾಗಿ ಸರಕಾರಿ ಉದ್ಯೋಗಿಯೊಬ್ಬರ ವಿರುದ್ಧ ಕರ್ನಾಟಕ ಲೋಕಾಯುಕ್ತ ದಾಖಲಿಸಿದ ಪ್ರಕರಣವನ್ನು ರದ್ದು ಪಡಿಸಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ್ದು ಅದನ್ನು ತಳ್ಳಿ ಹಾಕಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಲೋಕಾಯುಕ್ತ ದಾಖಲಿಸಿದ್ದ ಪ್ರಕರಣವನ್ನು ರದ್ದು ಪಡಿಸಬೇಕೆಂದು ಕೋರಿಕೊಂಡು ಆ ಉದ್ಯೋಗಿ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದಲ್ಲಿ ಪ್ರಾಥಮಿಕ ತನಿಖೆ ನಡೆಸಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಕರ್ನಾಟಕ ಸರಕಾರ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿತ್ತು.
ಭ್ರಷ್ಟಾಚಾರವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಸ್ವಾಗತಾರ್ಹ ತೀರ್ಪು ಇದು ಎಂಬುದು ಒಂದು ಅಂಶವಾಗಿದ್ದರೆ, ಎಲ್ಲ ಪ್ರಕರಣಗಳನ್ನು ಕೂಡ ನೀತಿ ನಿಯಮಗಳ ವ್ಯಾಪ್ತಿಯಲ್ಲಷ್ಟೇ ನೋಡಬಾರದು ಎಂಬುದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಅಡಕವಾಗಿದೆ ಎಂಬ ಇನ್ನೊಂದು ಅಂಶವನ್ನು ಇಲ್ಲಿ ಗಮನಿಸಬೇಕಾಗಿದೆ. ಸರಕಾರಿ ಉದ್ಯೋಗಿಗಳು ಗಂಭೀರ ಸ್ವರೂಪದ ಭ್ರಷ್ಟಾಚಾರ ಎಸಗಿರುವುದು ಸ್ಪಷ್ಟವಾಗಿದ್ದರೆ ಚಾಲ್ತಿಯಲ್ಲಿರುವ ನೀತಿ ನಿಯಮಗಳ ಮಿತಿಯನ್ನು ಮೀರಿ ಪ್ರಕರಣ ದಾಖಲಿಸಿ ದಂಡನೆಯತ್ತ ಮುಂದುವರಿಯಬೇಕು ಎಂಬ ಸುಪ್ರೀಂ ಕೋರ್ಟ್ ನ ಇಂಗಿತವೂ ಇಲ್ಲಿ ಸ್ಪಷ್ಟವಾಗುತ್ತದೆ. ಒಟ್ಟಿನಲ್ಲಿ ಭ್ರಷ್ಟಾಚಾರ, ಲಂಚಗುಳಿತನ ಮಟ್ಟ ಹಾಕುವ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ ಎಂಬುದರಲ್ಲಿ ಸಂಶಯವಿಲ್ಲ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೫-೦೨-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ