ಭ್ರಷ್ಟಾಚಾರ ನಿಯಂತ್ರಣದಲ್ಲಿ ವಿಫಲ

ಭ್ರಷ್ಟಾಚಾರ ನಿಯಂತ್ರಣದಲ್ಲಿ ವಿಫಲ

ಹಿಂದಿನ ಬಿಜೆಪಿ ಸರಕಾರದ ವಿರುದ್ಧ ಭ್ರಷ್ಟಾಚಾರದ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದ ಕಾಂಗ್ರೆಸ್ ಸರಕಾರ ಈಗ ತಾನೇ ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿರುವುದು ಅಣಕವೇ ಸರಿ. ದಿನಕ್ಕೊಂದರಂತೆ ಹೊಸ ಹೊಸ ಹಗರಣಗಳು ಸರಕಾರವನ್ನು ಸುತ್ತುವರಿಯುತ್ತಿವೆ. ಅದರ ಜತೆಗೇ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನಡುವಿನ ಮುಸುಕಿನ ಗುದ್ದಾಟವೂ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಇರುವ ವಾಲ್ಮೀಕಿ ನಿಗಮದಲ್ಲಿ ೯೪ ಕೋಟಿ ರೂ.ಗಳಷ್ಟು ಹಣವನ್ನು ವೈಯಕ್ತಿಕ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡ ಪ್ರಕರಣವು ಈಗ ವಿಧಾನಮಂಡಲದ ಅಧಿವೇಶನದಲ್ಲೂ ಸದ್ದು ಮಾಡುತ್ತಿದೆ. ನಿಗಮದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಸೇರಿಕೊಂಡು ನಿಗಮದ ಹಣವನ್ನು ತಮ್ಮ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಿಕೊಂಡುದು ಬಹಿರಂಗವಾಗಿದೆ ಹಾಗೂ ಈ ಸಂಬಂಧ ಕಲ್ಯಾಣ ಸಚಿವ ನಾಗೇಂದ್ರ ಅವರು ಸಚಿವ ಸ್ಥಾನವನ್ನು ಕಳಕೊಂಡು ಬಂಧನಕ್ಕೂ ಒಳಗಾಗಿದ್ದಾರೆ. ಇದೇ ವೇಳೆ ವಕ್ಫ್ ಮಂಡಳಿ ಮತ್ತು ಪ್ರವಾಸೋದ್ಯಮ ಇಲಾಖೆಯಲ್ಲೂ ಇದೇ ಬಗೆಯ ಹಗರಣಗಳು ನಡೆದಿರುವ ಕುರಿತು ವರದಿಯಾಗಿದೆ. ಅಲ್ಲಿಯೂ ಸರಕಾರದ ಹಣವನ್ನು ಅಧಿಕಾರಿಗಳು ತಮ್ಮ ವೈಯಕ್ತಿಕ ಖಾತೆಗೆ ವರ್ಗಾಯಿಸಿರುವ ಪ್ರಕರಣ ನಡೆದಿದೆ. ಇದು ಕೂಡಾ ಸಂಬಂಧಿಸಿದ ಸಚಿವರ ಸಮ್ಮತಿಯಿಂದಲೇ ನಡೆದಿದೆಯೇ ಅಥವಾ ಅವರ ಗಮನಕ್ಕೆ ಬಾರದಂತೆ ನಡೆದಿದೆಯೇ ಎಂಬುದರ ಕುರಿತಂತೆ ಸೂಕ್ತ ತನಿಖೆ ಆಗಬೇಕಿದೆ. ಅಲ್ಲಿಯೂ ಸಚಿವರ ಹಾಗೂ ರಾಜಕಾರಣಿಗಳ ಕೈವಾಡವಿದ್ದರೆ ಅವರ ತಲೆದಂಡವೂ ಅಗತ್ಯವಾಗಿದೆ. ಇದು ಬೆಳಕಿಗೆ ಬಂದಿರುವ ಹಗರಣಗಳಷ್ಟೇ. 

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹಣ ಹೊಂದಿಸಲು ಪ್ರಸಕ್ತ ಸರಕಾರದಿಂದ ಅದಿನ್ನೆಷ್ಟು ಇಂತಹ ಹಗರಣಗಳು ತೆರೆಮರೆಯಲ್ಲಿ ನಡೆದಿದೆಯೋ ಬಲ್ಲವರಾರು? ಇನ್ನೆಷ್ಟು ನಿಗಮಗಳು ಮತ್ತು ಮಂಡಳಿಗಳಲ್ಲಿ ಇರುವ ಹಣವೂ ವರ್ಗಾಯಿಸಲ್ಪಟ್ಟಿದೆಯೋ ತಿಳಿದವರಾರು? ನಿಗಮ, ಮಂಡಳಿಗಳ ಹಣ ವರ್ಗಾವಣೆಯನ್ನು ತಡೆಯಲು ಕಠಿಣ ನಿಯಮಗಳನ್ನು ಜಾರಿಗೆ ತರುವ ಅಗತ್ಯವಿರುವುದನ್ನಂತೂ ಇದು ತೋರಿಸಿಕೊಡುತ್ತದೆ.

ತನ್ಮಧ್ಯೆ ಮೂಡಾ ಹಗರಣ ಕೂಡಾ ರಾಜ್ಯ ಸರಕಾರದ ದಕ್ಷತೆಗೆ ಮಸಿ ಬಳಿದಿದೆ. ಮುಖ್ಯಮಂತ್ರಿಯವರ ಹೆಸರೇ ಈ ಹಗರಣದಲ್ಲಿ ಸಿಲುಕಿಕೊಂಡಿದೆ. ಮುಖ್ಯಮಂತ್ರಿಯವರ ಪತ್ನಿಗೆ ಮೂಡಾ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳಿಗೆ ಸಮಜಾಯಿಸಿ ನೀಡಲು ಆಗದಂತಹ ಸ್ಥಿತಿಯಲ್ಲಿದೆ ಸರಕಾರ. ತನ್ನನ್ನು ಸಮರ್ಥಿಸಿಕೊಳ್ಳಲಾಗದ ಸರಕಾರವು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಕಾರಣಕ್ಕಾಗಿ ಇನ್ನಿತರ ವಿವಾದಗಳನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ. ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಒದಗಿಸುವ ಪ್ರಯತ್ನವೂ ಇಂತಹ ಯೋಜನೆಯ ಒಂದಂಗವಾಗಿ ಕಾಣುತ್ತದೆಯೇ ಹೊರತು ಕನ್ನಡಿಗರ ಮೇಲಿನ ನೈಜ ಕಾಳಜಿಯಾಗಿ ಕಂಡುಬರುವುದಿಲ್ಲ. 

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೮-೦೭-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ