ಭ್ರಷ್ಟಾಚಾರ ಭೂತ:ತಡೆಯುವುದೇ ಪರಿಹಾರ

ಭ್ರಷ್ಟಾಚಾರ ಭೂತ:ತಡೆಯುವುದೇ ಪರಿಹಾರ

ಭ್ರಷ್ಟಾಚಾರ ಭೂತ:ತಡೆಯುವುದೇ ಪರಿಹಾರ
ಭ್ರಷ್ಟಾಚಾರ ದೇಶದ ಮಹಾಸಮಸ್ಯೆಯೆನ್ನುವುದರಲ್ಲಿ ಎರಡು ಮಾತಿಲ್ಲ.ಅಣ್ಣಾ ಹಜಾರೆಯಂತವರು ತಮ್ಮ ಇಳಿವಯಸ್ಸಿನಲ್ಲಿ ಇದರ ವಿರುದ್ಧ ಸಾರಿರುವ ಯುದ್ಧಕ್ಕೆ ಎಲ್ಲೆಡೆ ಜನಬೆಂಬಲ ದೊರಕಿರುವುದು ಸಂತಸದ ವಿಷಯ.ಜನಲೋಕಪಾಲ ಅಥವಾ ಸರಕಾರದ ಲೋಕಪಾಲ ಮಸೂದೆಗಳ ಜತೆಗೆ ಇತರ ಸಲಹೆಗಳನ್ನೂ ಗಮನದಲ್ಲಿರಿಸಿ,ಶಕ್ತಿಶಾಲಿ ಶಾಸನವನ್ನು ರೂಪಿಸುವ ಸಮಯ ಬಂದಿದೆ.ಆದರೆ ಇಂತಹ ಶಾಸನಗಳು ಭ್ರಷ್ಟಾಚಾರ ನಡೆದ ಬಳಿಕ ತಪ್ಪಿತಸ್ಥರ ದಂಡನೆಯತ್ತಲೇ ಹೆಚ್ಚು ಗಮನವೀಯುತ್ತವೆ.ನಿಜವಾಗಿಯೂ ಬೇಕಾಗಿರುವುದು ಪಾರದರ್ಶಕ ವ್ಯವಸ್ಥೆಯ ಅನುಷ್ಠಾನ.ಆ ಮೂಲಕ ಭ್ರಷ್ಟಾಚಾರ ಎಸಗುವುದನ್ನೇ ನಿಲ್ಲಿಸುವುದು,ಹೆಚ್ಚು ಪರಿಣಾಮಕಾರಿಯೆನಿಸುವುದಿಲ್ಲವೇ?ರೋಗ ಬಂದ ಮೇಲೆ ಪರಿಹಾರಕ್ಕಿಂತ,ಬರದಂತೆ ತಡೆಯುವುದೊಳಿತು ಎನ್ನುವುದನ್ನು ಭ್ರಷ್ಟಾಚಾರದ ಬಗ್ಗೆಯೂ ಹೇಳಬಹುದು.ಹೀಗೆ ಮಾಡಲು ತಂತ್ರಜ್ಞಾನದ ನೆರವು ಅಗತ್ಯವಾಗಿದೆ.ಜನರು ಆನ್‌ಲೈನ್ ಮೂಲಕ ಸರಕಾರಿ ಕಚೇರಿಗಳ ಜತೆ ವ್ಯವಹರಿಸುವಂತಾದರೆ ಅವರನ್ನು ಸತಾಯಿಸುವ ಅಧಿಕಾರಿಗಳ ಪ್ರವೃತ್ತಿಗೆ ಹಿನ್ನಡೆಯಾಗದಿರದು.ಅರ್ಜಿ ಸಲ್ಲಿಸಿ,ಜತೆಗೆ ಸಲ್ಲಿಸಬೇಕಾದ ದಾಖಲೆಗಳ ವಿವರಗಳು ಅಂತರ್ಜಾಲದಲ್ಲಿ ಲಭ್ಯವಾದರೆ,ಆಗ ಜನರು ಮಧ್ಯವರ್ತಿಗಳ ಶರಣು ಹೋಗಬೇಕಿಲ್ಲ.ಅನಿಲ ಸಂಪರ್ಕ ಸಕ್ರಮಗೊಳಿಸಲು ದಾಖಲೆಗಳನ್ನು ಸ್ಕ್ಯಾನ್ ಮಾಡಿ,ಅಪ್ಲೋಡ್ ಮಾಡಿದಂತೆ ಇತರ ವ್ಯವಹಾರಗಳಲ್ಲಿಯೂ ಆನ್‌ಲೈನ್ ಅರ್ಜಿ ಸಲ್ಲಿಕೆ ಜಾರಿಗೆ ಬರಬೇಕು.ಅರ್ಜಿಗಳ ವಿಲೇವಾರಿಯನ್ನು ಅಧಿಕಾರಿಗಳು ಮಾಡಿ,ಕ್ರಮ ತೆಗೆದುಕೊಳ್ಳಲು ಸಮಯದ ಮಿತಿ ಹಾಕುವುದು ಮಾಡಿದರೆ,ಆಗ ಭ್ರಷ್ಟಾಚಾರ ಒಂದು ಮಿತಿಯಲ್ಲಿರುವಂತೆ ಮಾಡುವುದು ಸಾಧ್ಯ.ಹಾಗೆಯೇ ಗಣಿ,ಪರವಾನಗಿ,ವಿವಿಧ ಯೋಜನೆಗಳ ಜಾರಿಗೆ ಟೆಂಡರು ಪ್ರಕ್ರಿಯೆಗಳನ್ನು ಆನ್‌ಲೈನ್ ಮೂಲಕವೇ ನಡೆಸಿ,ವ್ಯವಸ್ಥೆಯನ್ನು ಪಾರದರ್ಶಕವಾಗಿಸಬಹುದು.ಸರಕಾರಿ ಕಚೇರಿಗಳಿಗೆ ಜನರು ಹೋಗದೇ ಕೆಲಸ ಮಾಡಿಸಿಕೊಳ್ಳುವಂತಾಗುವುದು,ಭ್ರಷ್ಟಾಚಾರ ತಡೆಗೆ ಅಗತ್ಯವೆನಿಸುತ್ತದೆ.
ಆಸ್ತಿ ನೋಂದಾವಣೆಯಂತಹ ಕಪ್ಪುಹಣ ಚಲಾವಣೆಗೆ ಕಾರಣವಾಗುವ ವ್ಯವಹಾರಗಳಲ್ಲಿ ಅಕ್ರಮ,ಭ್ರಷ್ಟಾಚಾರ ತಡೆಗೆ ಆಧಾರ್ ಗುರುತು ಪತ್ರದಂತಹ ಯೋಜನೆ ಬಹಳಷ್ಟು ಸಹಕಾರಿಯಾಗುವುದರಲ್ಲಿ ಅನುಮಾನವಿಲ್ಲ.ಜನರ ಬ್ಯಾಂಕ್ ಖಾತೆಗಳು,ದೊಡ್ಡ ಮೊತ್ತದ ಹಣಕಾಸು ವ್ಯವಹಾರಗಳು ಆಧಾರ್ ಮೂಲಕ,ಕಣ್ಣಿಡಲು ಸಾಧ್ಯವಾದರೆ,ತೆರಿಗೆ ತಪ್ಪಿಸುವುದು,ತಪ್ಪು ಮಾಹಿತಿ ನೀಡುವುದು ಮತ್ತು ಬೇನಾಮಿ ವ್ಯವಹಾರಗಳನ್ನು ತಡೆಯುವಂತಾದರೆ,ಭ್ರಷ್ಟತೆ ಕಡಿಮೆಯಾಗದೆ ಇರುತ್ತದೆಯೇ?ಮಾಹಿತಿ ಹಕ್ಕು,ಆಧಾರ್ ಗುರುತಿನ ಚೀಟಿ ನೀಡಿಕೆಯಂತಹ ಯೋಜನೆಗಳ ಜಾರಿಯನ್ನು ಇದೀಗಲೇ ಮಾಡಿರುವ ಸರಕಾರದ ಕ್ರಮಗಳನ್ನು ಜನರು ಬೆಂಬಲಿಸಬೇಕು.ಶಾಸನಗಳು ಲಂಚಾವತಾರದ ತಡೆಗೆ ಸಫಲವಾಗಬಹುದು ಎನ್ನುವಂತಹ ಯೋಚನೆ ಅವಾಸ್ತವ.
ಅಣ್ಣಾ ಹಜಾರೆಯವರ ಬೆಂಬಲಕ್ಕೆ ದೇಶದ ಜನರು ನಿಂತಿರುವಾಗ,ನಮ್ಮ ಶಾಸಕರು ಮತ್ತು ಸಂಸದರು ಭ್ರಷ್ಟರನ್ನು ಬೆಂಬಲಿರಿಸುವ ಪ್ರವೃತ್ತಿಯನ್ನು ಗಮನಿಸಿದಿರಾ?ಆಂಧ್ರದ ಜಗನ್‌ಮೋಹನ್ ರೆಡ್ಡಿ ಅವರ ಆಸ್ತಿ ಅಕ್ರಮವೇ ಎಂಬ ತನಿಖೆಯನ್ನು ವಿರೋಧಿಸಿ,ಆಂಧ್ರದಲ್ಲಿ ಶಾಸಕರುಗಳು ಆಳುವ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಾರೆ.ಆಂಧ್ರದ ಮತದಾರರುಗಳೂ ರೆಡ್ಡಿಯ ಬೆಂಬಲಕ್ಕೆ ನಿಂತಿರುವುದು ಉಪಚುನಾವಣೆಗಳ ಫಲಿತಾಂಶದಿಂದ ವೇದ್ಯ.ಕರ್ನಾಟಕದಲ್ಲೂಇದೇ ಸನ್ನಿವೇಶ ಇದುವರೆಗೂ ಇತ್ತು.
-------------------------------------------
ಭಾರತೀಯರಿಗೆ ಎಮೈಟಿ ಗೌರವ
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಾವೀನ್ಯವುಳ್ಳ ಸಂಶೋಧನೆಗಾಗಿ ನಾಲ್ವರು ಭಾರತೀಯರಿಗೆ ಅಮೆರಿಕಾದ ಮೆಸಾಚುಸೆಟ್ಸ್ ತಾಂತ್ರಿಕ ಸಂಸ್ಥೆ ಗೌರವಿಸಿದೆ.ಚೆನ್ನೈನ ಅದಿತಿ ನಾರಾಯಣ್ ಅವರಿಗೆ ಧ್ವನಿಸಂಯೋಜನೆಗೆ ಸಂಬಂಧಿಸಿದ ಸಂಶೋಧನೆಗೆ ಪ್ರಶಸ್ತಿ ನೀಡಿದೆ.ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇವರು ಸಂಶೋಧನೆ ಕೈಗೊಂಡಿದ್ದಾರೆ.ಸದ್ಯ ಯಾಲೆ ವಿಶ್ವವಿದ್ಯಾಲಯದಲ್ಲಿರುವ ಐಶ್ವರ್ಯ ರತನ್ ಅವರಿಗೆ ಕಾಗದದ ದಾಖಲೆಗಳನ್ನು ಡಿಜಿಟಲ್ ಮಾಧ್ಯಮಕ್ಕೆ ಬದಲಿಸುವ ತಂತ್ರಜ್ಞಾನಕ್ಕಾಗಿ ಪ್ರಶಸ್ತಿ ಬಂದಿದೆ.ಭಾರತೀಯ ಮೂಲದ,ಭಾಸ್ಕರ್ ಕೃಷ್ಣಮಾಚಾರಿ ಮತ್ತು ಪ್ರಿಯಾ ಸರ್ಕಾರ್ ಪ್ರಶಸ್ತಿ ಪಡೆದ ಇನ್ನೀರ್ವರು.
----------------------------------------------
ನೋಕಿಯಾ:ಸಿಂಬಿಯನ್ ಅಣ್ಣಾ
ನೋಕಿಯಾ ಕಂಪೆನಿಯು ತನ್ನ ಹ್ಯಾಂಡ್‌ಸೆಟ್‌ನ ಆಪರೇಟಿಂಗ್ ವ್ಯವಸ್ಥೆಯನ್ನು ಸಿಂಬಿಯನ್ ಅಣ್ಣಾ ಎಂದು ಕರೆದಿದೆ.ಇದು ಅಣ್ಣಾ ಹಜಾರೆಯವರ ಹೆಸರನ್ನು ಸ್ಮಾರ್ಟ್‌ಪೋನ್ ಮಾರಾಟ ಹೆಚ್ಚಿಸಲು ನೋಕಿಯಾ ಇಟ್ಟಿರುವ ಹೆಜ್ಜೆ ಎಂದು ಮಾಧ್ಯಮಗಳ ಟೀಕೆಯನ್ನು ನೋಕಿಯಾ ಒಪ್ಪಿಲ್ಲವೆನ್ನಿ.ಅಣ್ಣಾ ಹಜಾರೆಯವರ ಚಳುವಳಿಯನ್ನು ಸಾಧನಗಳ ಜಾಹೀರಾತಿನಲ್ಲಿ ಬಳಸುವ ಪ್ರಕ್ರಿಯೆ ಆನ್‌ಲೈನ್ ಆಟದ ಜಾಹೀರಾತಿನಲ್ಲಿಯೂ ಬಳಕೆಯಾಗಿದೆ.
ಅಂದ ಹಾಗೆ ಮೊಬೈಲ್ ಫೋನು ಸಂಪರ್ಕಗಳ ಸಂಖ್ಯೆಯಲ್ಲಿ ಏರುಗತಿ ಮಂದವಾಗಿದೆ.ಜುಲೈ ತಿಂಗಳಲ್ಲಿ ಏಳೂವರೆ ದಶಲಕ್ಷ ಗ್ರಾಹಕರಷ್ಟೇ ಜಿ ಎಸ್ ಎಂ ಸೇವೆಗಳಿಗೆ ಸೇರ್ಪಡೆಯಾಗಿದ್ದಾರೆ.2007ರ ನಂತರ ಮೊದಲ ಬಾರಿಗೆ ಈ ಸಂಖ್ಯೆ ಇಷ್ಟು ಕಡಿಮೆಯಾಗಿದೆ.ಕರೆಗಳ ದರದಲ್ಲಿ ವೃದ್ಧಿ ಮತ್ತು ಕಂಪೆನಿಗಳು ಆಕರ್ಷಕ ಯೋಜನೆಗಳನ್ನು ಪ್ರಕಟಿಸದೇ ಇರುವುದು,ಇದಕ್ಕೆ ಮುಖ್ಯ ಕಾರಣವೆನ್ನುವುದು ವಿಶ್ಲೇಷಕರ ಅನಿಸಿಕೆ.ಹೆಚ್ಚು ಚಂದಾದಾರರನ್ನು ಹೊಂದುವುದಕ್ಕಿಂತ,ಇದ್ದವರಿಂದ ಹೆಚ್ಚು ಅದಾಯ ಪಡೆಯುವ ನಿಟ್ಟಿನಲ್ಲಿ ಕಂಪೆನಿಗಳು ಯೋಚಿಸತೊಡಗಿವೆ.

---------------------------------------
ಲೀನಕ್ಸ್:ಇಪ್ಪತ್ತು ತುಂಬಿತು
ಲೀನಸ್ ತೋವ್ರಾಲ್ಡ್ ಅವರ ಮುಂದಾಳತ್ವದಲ್ಲಿ ಲೀನಕ್ಸ್ ಆಪರೇಟಿಂಗ್ ವ್ಯವಸ್ಥೆಯು ಅಭಿವೃದ್ಧಿಯಾಗಿ ಈಗ ಎರಡು ದಶಕಗಳೇ ಉರುಳಿವೆ.ಮೊದಲ ದಿನಗಳಲ್ಲಿ ಇದನ್ನು ಕಂಪ್ಯೂಟರ್ ಪರಿಣತರ ಆಪರೇಟಿಂಗ್ ವ್ಯವಸ್ಥೆ ಎಂದೇ ಬ್ರಾಂಡ್ ಆಗಿಬಿಟ್ಟು,ಜನಸಾಮಾನ್ಯರ ಕಂಪ್ಯೂಟರಿನಲ್ಲಿ ಬಳಕೆಯಾಗದೇ ಉಳಿಯಿತು.ಈಗ ಲೀನಕ್ಸ್ ವಿಂಡೋಸ್ ವ್ಯವಸ್ಥೆಯಷ್ಟೇ ಬಳಕೆದಾರಸ್ನೇಹಿಯಾಗಿ ಹೊರಹೊಮ್ಮಿದರೂ,ಅದಕ್ಕಂಟಿದ ಅಪವಾದ ಇನ್ನೂ ದೂರವಾಗಿಲ್ಲ.ಆದರೆ ಸ್ಮಾರ್ಟ್‌ಫೋನುಗಳಲ್ಲಿ ಅರೆವಾಸಿ ಸಾಧನಗಳಲ್ಲಿ ಬಳಕೆಯಾಗುವ ಆಂಡ್ರಾಯಿಡ್ ವ್ಯವಸ್ಥೆಯು ಲೀನಕ್ಸ್ ಮೂಲದ್ದೇ ಆಗಿದೆ.ಹಾಗೆಯೇ ಟ್ಯಾಬ್ಲೆಟ್ ಸಾಧನಗಳಲ್ಲೂ,ಆಪಲ್ ಕಂಪೆನಿಯ ಐಓಎಸ್ ನಂತರ ಲೀನಕ್ಸ್ ಮೂಲದ ಆಂಡ್ರಾಯಿಡ್‌ನದ್ದೇ ಬಳಕೆಯಾಗುತ್ತಿದೆ.ಶೇಕಡಾ ಮೂವತ್ತು ಭಾಗ ಟ್ಯಾಬ್ಲೆಟ್ ಸಾಧನಗಳಲ್ಲಿ ಬಳಕೆಯಾಗುತ್ತಿದೆ.ಸರ್ವರ್‌ಗಳಲ್ಲಿ,ಸೂಪರ್‌ಕಂಪ್ಯೂಟರುಗಳಲ್ಲಿ,ಏಟಿಎಂ‌ಗಳಲ್ಲಿ,ಮನೆಯ ಹಲವು ಸಾಧಗಳಲ್ಲಿ ಲೀನಕ್ಸ್ ಬಳಕೆಯಾಗುವ ಕಾರಣ ಇದು ಸಾರ್ವತ್ರಿಕ ಬಳಕೆಯಾಗುತ್ತಿದ್ದರೂ,ಯಾರ ಗಮನಕ್ಕೂ ಬರದೆ ಸದ್ದಿಲ್ಲದೆ ಕಾರ್ಯಾಚರಿಸುತ್ತಿವೆ.ಲೀನಕ್ಸ್‌ನ ಹಲವು ವಿತರಣೆಗಳು ಲಭ್ಯವಿವೆ.ಉಬುಂಟು ಇವುಗಳಲ್ಲಿ ಪೈಕಿ ಬಹು ಜನಪ್ರಿಯವಾಗಿದೆ.ಫೆಡೋರಾ,ಸುಸೆ,ಮ್ಯಾಂಡ್ರಿವಾ,ಡೆಬಿಯನ್ ಮುಂತಾದ ಇತರ ಹಲವು ವಿತರಣೆಗಳು ಲಭ್ಯವಿವೆ.ಮುಕ್ತ ತಂತ್ರಾಂಶ ಮತ್ತು ಉಚಿತ ತಂತ್ರಾಂಶಗಳ ಅಲೆಯನ್ನು,ಹುಟ್ಟುಹಾಕಿದ ಲೀನಕ್ಸ್ ಚಿರಕಾಲ ಬಾಳಲಿ.
----------------------------------------
ಸ್ಟೀವ್ ಜಾಬ್:ನಿವೃತ್ತಿ


ಆಪಲ್ ಕಂಪೆನಿಯ ಮುಖ್ಯಸ್ಥ ಸ್ಟೀವ್ ಜಾಬ್ಸ್ ನಿವೃತ್ತಿಯಾಗಿದ್ದು ವಾರದ ಸುದ್ದಿಯಾಯಿತು.ಬಳಕೆದಾರ ಸ್ನೇಹಿ ಮ್ಯಾಕ್ ಕಂಪ್ಯೂಟರ್,ಐಪೋಡ್,ಐಫೋನ್,ಐಟ್ಯಾಬ್ ಹೀಗೆ ಸಾಲು ಸಾಲು ಜನ ಮೆಚ್ಚುಗೆ ಗಳಿಸಿದ ಸಾಧನಗಳ ವಿನ್ಯಾಸದಲ್ಲಿ ಆಪಲ್ ಕಂಪೆನಿಯ ಇಂಜಿನಿಯರುಗಳಿಗೆ ಮಾರ್ಗದರ್ಶನ ನೀಡಿದ ಈತ,ಕಲಿಕೆಯ ಮಟ್ಟಿಗೆ ಕಾಲೇಜು ವಿದ್ಯಾಭ್ಯಾಸವನ್ನೂ ಮುಗಿಸಲಿಲ್ಲ.ಮೊದಲ ಕೆಲಸವನ್ನೂ ಸ್ವಲ್ಪವೇ ಸಮಯದಲ್ಲಿ ಬಿಟ್ಟು,ಭಾರತದಲ್ಲಿ ಹಿಪ್ಪಿಗಳಂತೆ ತಿರುಗಿದ ಹಿನ್ನೆಲೆಯವರು.ಸುಂದರವಾಗಿ ಬರವಣಿಗೆ ಹೊಂದಿದ್ದ ಇವರು, ತಮ್ಮ ಮೊದಲ ಕಂಪ್ಯೂಟರಿನಲ್ಲಿ ಕಲಾಗಾರಿಕೆಯನ್ನು ತೋರಲು ಕಾರಣರಾದರು.ತಾವೇ ಸ್ಥಾಪಿಸಿದ ಕಂಪೆನಿಯನ್ನು ಬಿಟ್ಟು ಇನ್ನೊಂದು ಕಂಪೆನಿ ಸ್ಥಾಪಿಸಿ,ಅದನ್ನು ಆಪಲ್ ಕಂಪೆನಿಯು ಖರೀದಿಸಿದಾಗ ಮತ್ತೆ ತವರಿಗೆ ಬಂದ ಜಾಬ್ಸ್ ಈಗಿನ ಯುವಕರ ರೋಲ್ ಮಾಡೆಲ್ ಆಗಿ ಹೊರಹೊಮ್ಮಿದ್ದರೆ.ಕ್ಯಾನ್ಸರ್ ಕಾರಣ,ಅವರು ಹಿನ್ನೆಲೆಗೆ  ಸರಿಯುವುದು ಮೊದಲೇ ಗೊತ್ತಿದ್ದ ಸಂಗತಿಯಾದರೂ,ಕೊನೆಗೂ ನಿವೃತ್ತಿ ಪ್ರಕಟಿಸಿದಾಗ ಸುದ್ದಿಯಾದರು.
-------------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ಲೀನಕ್ಸ್ ಬಗ್ಗೆ ಇರುವ ಕನ್ನಡ ತಾಣವನ್ನು ಹೆಸರಿಸಿ.
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS45 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಗ್ಲಾಸ್‌ಡೋರ್ ತಾಣ ಕೊಡುವ ಸೇವೆಯೆಂದರೆ ಉದ್ಯೋಗದಾತರ ಬಗೆಗಿನ ವಿವರ.ಕಂಪೆನಿಗಳಲ್ಲಿ ಕೆಲಸ ಮಾಡಿದವರು ಒದಗಿಸಿದ ವಿವರಗಳನ್ನು ಇತರರೂ ಪಡೆಯಲು ಇಲ್ಲಿ ಅವಕಾಶ ಸಿಗುತ್ತದೆ.ಬಹುಮಾನ ಗೆದ್ದವರು ರಾಜೇಂದ್ರಕೃಷ್ಣ,ಬೆಳ್ತಂಗಡಿ.ಅಭಿನಂದನೆಗಳು.
Udayavani
*ಅಶೋಕ್‌ಕುಮಾರ್ ಎ