ಭ್ರಷ್ಟ ಆಸ್ಪತ್ರೆಗಳ ಸರ್ಜರಿ ಎಂದು?

ಸರ್ಕಾರಿ ಆಸ್ಪತ್ರೆಗಳೆಂದರೆ ಗ್ರಾಮೀಣ ಬಡಜನತೆ ಭಯಭೀತಗೊಳ್ಳುವಂತಾಗಿದೆ. ರೋಗ ರುಜಿನದಿಂದ ನರಳಾಡಿದ ಬಡಪಾಯಿ, ಸರ್ಕಾರಿ ಆಸ್ಪತ್ರೆಗೇನಾದರೂ ಚಿಕಿತ್ಸೆಗೆಂದು ಅಲ್ಲಿಗೆ ಹೋದರೆ ಅವನು ಬದುಕಿ ವಾಪಾಸ್ ಬರುವನೆಂಬ ಖಾತರಿಯೇನೂ ಇಲ್ಲ. ನಾಡಿನ ಬಹುತೇಕ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳ ದಾರುಣ ಚಿತ್ರಣವಿದು !
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆಂದು ಬರುವ ಸಾರ್ವಜನಿಕರಿಗೆ ಎಲ್ಲಾ ರೀತಿಯ ಉಚಿತ ಚಿಕಿತ್ಸೆ ನೀಡಬೇಕೆಂದು ಅಧಿಕಾರವರ್ಗಕ್ಕೆ ತಾಕೀತು ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ನಾಡಿನ ಕೋಟ್ಯಂತರ ಮಂದಿ ಬಡಬಗ್ಗರಿಗಾಗಿಯೇ ಉಚಿತ ವೈದ್ಯಕೀಯ ಸೌಲಭ್ಯ ಹಾಗೂ ಸವಲತ್ತುಗಳನ್ನು ಜಾರಿಗೆ ತಂದಿರುವುದು ಸರಿಯಷ್ಟೇ. ಆದರೆ ಈ ಯೋಜನೆಗಳು ಎಷ್ಟರ ಮಟ್ಟಿಗೆ ಜನರಿಗೆ ಸಮರ್ಪಕವಾಗಿ ತಲುಪುತ್ತಿದೆ ಎಂಬುದು ಗಂಭೀರ ಪ್ರಶ್ನೆ.
ಸರ್ಕಾರದ ಕೆಲಸ ಎಂದರೆ ಅದು ದೇವರ ಕೆಲಸ ಎಂಬುದು ಪ್ರಚಲಿತ ನುಡಿ. ಸರ್ಕಾರಿ ಆಸ್ಪತ್ರೆಗಳ ಅವಲಂಬಿತರಾಗಿರುವ ಸಾಮಾಜಿಕ ವರ್ಗ ಅಥವಾ ಜನಸಮುದಾಯಗಳ ಬಗ್ಗೆ ಸರ್ಕಾರಗಳಿಗೆ ನಿಗಾ ಮತ್ತು ಕಾಳಜಿ ಅಗತ್ಯ. ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಹೆಸರಿಗಷ್ಟೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗಳಿವೆ. ಆದರೆ ಅಲ್ಲಿ ರೋಗಿಗಳಿಗೆ ಸರಿಯಾದ ರೀತಿಯಲ್ಲಿ ಉಚಿತವಾಗಿ ಚಿಕಿತ್ಸೆ ದೊರೆಯುವ ಭರವಸೆ ಇಲ್ಲ. ಅಲ್ಲಿ ಕೆಲಸ ಮಾಡುವ ವೈದ್ಯರು ಪರಿಣಿತರು ಮತ್ತು ಇಂತಹ ಆಸ್ಪತ್ರೆಗಳಿಗೆ ಸರ್ಕಾರದಿಂದ ಪೂರೈಕೆಯಾಗುವ ವೈದ್ಯಕೀಯ ಸಲಕರಣೆ ಮತ್ತು ಔಷಧಗಳ ಗುಣಮಟ್ಟವೂ ಉತ್ಕೃಷ್ಟ. ಆದರೆ ಇಲ್ಲಿ ಕಾರ್ಯ ನಿರ್ವಹಿಸುವ ವೈದ್ಯ ಮತ್ತು ನರ್ಸಿಂಗ್ ಸಿಬ್ಬಂದಿ ಲಂಚಗುಳಿತನ ಮತ್ತು ಅನೈತಿಕ ಮಾರ್ಗಗಳಿಗೆ ದಾಸಾನುದಾಸರಾಗಿರುವುದರಿಂದ ಸಾರ್ವಜನಿಕರಿಗೆ ಗುಣಮಟ್ಟದ ವೈದ್ಯ ಚಿಕಿತ್ಸೆ ದೊರೆಯುವುದಿಲ್ಲ. ಸಾಮಾನ್ಯರ ಪಾಲಿಗೆ ಇದೊಂದು ಮರೀಚಿಕೆಯಷ್ಟೆ. ಸರ್ಕಾರಿ ಆಸ್ಪತ್ರೆ ಎಂದರೆ ಅದು ಯಮಲೋಕ ಎಂಬ ಆತಂಕದ ಭಾವನೆ ಸಾಮಾನ್ಯ ಜನತೆಯ ಮನದಲ್ಲಿ ಮಡುಗಟ್ಟಿದ್ದು ಇದನ್ನು ಅಳಿಸಿಹಾಕುವ ಪ್ರಯತ್ನವನ್ನು ಯಾವ ಸರ್ಕಾರವೂ ಇದುವರೆಗೆ ಮಾಡಿಲ್ಲ.
ಗ್ರಾಮೀಣ ಮತ್ತು ತಾಲೂಕು ಕೇಂದ್ರಗಳಲ್ಲಿ ಡ್ಯೂಟಿ ಮೇಲೆ ನಿಯೋಜಿತರಾದ ಸರ್ಜನ್ ಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ನಿಯಮಿತ ಸಮಯದಲ್ಲಿ ಕೆಲಸ ಮಾಡುವುದೇ ಅಪರೂಪ. ಇತ್ತ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಕ್ಷಣವೂ ಅರಾಜಕತೆ, ಅನೈರ್ಮಲ್ಯ ಮತ್ತು ಅಕ್ರಮಗಳು ತಾಂಡವವಾಡುತ್ತಿದ್ದರೂ ಆರೋಗ್ಯ ಇಲಾಖೆಯಾಗಲೀ, ಸಂಬಂಧಪಟ್ಟ ಅಧಿಕಾರಿಗಳಾಗಲೀ ಇದರ ಕನಿಷ್ಟ ಕಾಳಜಿ ವಹಿಸದೆ ಇರುವುದೇ ಇಲ್ಲ. ರಾಜ್ಯ ಸರ್ಕಾರವೀಗ ಇಂತಹ ರೋಗಗ್ರಸ್ಥ ಆಸ್ಪತ್ರೆಗಳಿಗೆ ಮೇಜರ್ ಸರ್ಜರಿ ಮಾಡಬೇಕಿದೆ. ಕರ್ತವ್ಯ ಭ್ರಷ್ಟ ಸಿಬ್ಬಂದಿಯನ್ನು ದಂಡಿಸಲು ಸರ್ಕಾರ ಯಾರಿಗೂ ಯಾವ ಮುಲಾಜು ತೋರುವ ಅವಶ್ಯಕತೆಯೂ ಇಲ್ಲ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೪-೦೬-೨೦೨೩