ಮಂಕುತಿಮ್ಮನ ಕಗ್ಗದಲ್ಲಿ ದೇವರ ಪರಿಕಲ್ಪನೆ (ಭಾಗ 2)

ಮಂಕುತಿಮ್ಮನ ಕಗ್ಗದಲ್ಲಿ ದೇವರ ಪರಿಕಲ್ಪನೆ (ಭಾಗ 2)

("ದೇವರು" ಎಂಬ ಪರಿಕಲ್ಪನೆಯ ಬಗ್ಗೆ ಮಾನ್ಯ ಡಿ.ವಿ. ಗುಂಡಪ್ಪನವರು “ಮಂಕುತಿಮ್ಮನ ಕಗ್ಗ”ದ ಆರಂಭದ ಐದು ಮುಕ್ತಕಗಳಲ್ಲಿ ಪ್ರಸ್ತುತ ಪಡಿಸಿದ ಚಿಂತನೆಗಳನ್ನು 26-03-2024ರಂದು ಸಂಪದದಲ್ಲಿ ಪ್ರಕಟಿಸಿದ ಲೇಖನದಲ್ಲಿ ಗಮನಿಸಿದ್ದೇವೆ.)

ಇನ್ನೂ ಕೆಲವು ಮುಕ್ತಕಗಳಲ್ಲಿ "ದೇವರು" ಎಂಬ ಪರಿಕಲ್ಪನೆಯ ಇನ್ನಷ್ಟು ಆಯಾಮಗಳನ್ನು ನಮ್ಮ ಮುಂದಿಡುತ್ತಾರೆ ಡಿ.ವಿ.ಜಿ.:

ಬಾನಾಚೆಯಿಂ ವಿಶ್ವಸತ್ತ್ವ ತಾನಿಳಿದಿಳೆಗೆ
ನಾನೆನುವ ಚೇತನದಿ ರೂಪುಗೊಂಡಿಹುದೋ?
ನಾನೆನುವ ಕೇಂದ್ರದಿನೆ ಹೊರಟ ಸತ್ತ್ವದ ಪರಿಧಿ
ಬಾನಾಚೆ ಹಬ್ಬಿಹುದೊ? - ಮಂಕುತಿಮ್ಮ

ಈ ಮುಕ್ತಕದಲ್ಲಿ (138) ಡಿ.ವಿ.ಜಿ.ಯವರು ಎತ್ತಿರುವ ಮೂಲಭೂತ ಪ್ರಶ್ನೆ: ಆಕಾಶದಿಂದ ಆಚೆಗೆ ಇರುವ ವಿರಾಟ್ ಶಕ್ತಿ (ವಿಶ್ವಸತ್ತ್ವ) ತಾನು ಈ ಪ್ರಪಂಚಕ್ಕೆ (ಇಳೆಗೆ) ಇಳಿದು, ನಾನು ಎನ್ನುವ ಚೇತನವಾಗಿ ರೂಪುಗೊಂಡಿದೆಯೋ ಅಥವಾ "ನಾನು" ಎನ್ನುವ ಕೇಂದ್ರದಿಂದ ಹೊರಟ ಸತ್ತ್ವದ ಪರಿಧಿಯು ಆಕಾಶದಾಚೆಗೆ ಹಬ್ಬಿದೆಯೋ? ಮತ್ತೊಂದು ಮುಕ್ತಕದಲ್ಲಿ (251) ಹೀಗೆಂದಿದ್ದಾರೆ:

ತಲೆಯ ಮೇಗಡೆ ಬೇರು, ಕೆಳಗೆ ಕೊಂಬೆಲೆ ಚಿಗುರು
ಬಿಳಲೂರೆಗಳ ಲೆಕ್ಕಕ್ಕಿಲ್ಲ ಕೊನೆ ಮೊದಲು
ಬೆಳೆವುದೀ ಪರಿಯರಳಿಮರದಂತೆ ನರ ಕೋಟಿ
ನಲಿವನದರಲಿ ಬೊಮ್ಮ - ಮಂಕುತಿಮ್ಮ

ತಲೆಯ ಮೇಲೆ ಬೇರು, ಕೆಳಗಡೆ ಕೊಂಬೆ, ಎಲೆ ಮತ್ತು ಚಿಗುರು. ಬಿಳಲು ಮತ್ತು ಊರೆಗಳಂತೂ ಲೆಕ್ಕವಿಲ್ಲದಷ್ಟು. ಇವುಗಳಿಗೆ ಕೊನೆಯೂ ಇಲ್ಲ,  ಮೊದಲೂ ಇಲ್ಲ. ಹೀಗೆ ಅರಳಿ ಮರ ಬೆಳೆದಂತೆ, ನರಕೋಟಿಯೂ ಬೆಳೆಯುತ್ತಲೇ ಇರುತ್ತದೆ. ಪರಬ್ರಹ್ಮನು ಇದರಲ್ಲಿ ನಲಿಯುತ್ತಾನೆ. ಈ ಮುಕ್ತಕದ ಅರ್ಥಕ್ಕೆ ಪೂರಕವಾದ ಭಾವ ಮುಂಚಿನ (“ಬಾನಾಚೆಯಿಂ ….) ಮುಕ್ತಕದಲ್ಲಿದೆ. ಮರಕ್ಕೆ ಬೇರು ಸತ್ವವನ್ನು ತುಂಬುತ್ತದೆ; ಹಾಗೆಯೇ ಬ್ರಹ್ಮಾಂಡಕ್ಕೆ ಸತ್ವವನ್ನು ತುಂಬುವ ಅವ್ಯಕ್ತ ಶಕ್ತಿ ಬಾನಾಚೆಯಲ್ಲಿದೆ. ಅದು ತನ್ನ ಲೀಲೆಗಾಗಿ ಸೃಷ್ಟಿಸಿರುವ ಬ್ರಹ್ಮಾಂಡದ ಒಂದು ತುಣುಕು ಈ ಭೂಮಿ. ಇದರಲ್ಲಿರುವ ಜೀವಿಗಳು, ಜೀವಜಾಲಗಳು ಅಸಂಖ್ಯ. ಈ ಲೀಲೆಯೊಳಗೆ ಆ ಅವ್ಯಕ್ತ ಶಕ್ತಿ ಲೀನವಾಗಿದ್ದು, ಕ್ಷಣಕ್ಷಣವೂ ನಲಿಯುತ್ತಿದೆ. ಮಗದೊಂದು ಮುಕ್ತಕದಲ್ಲಿ (75) ಸೃಷ್ಟಿಯ ರಹಸ್ಯ ವಿವರಿಸಲು ಬೀಜ-ಮರ ಮತ್ತು ಹಾಲು-ನೊರೆಯ ಉದಾಹರಣೆ ನೀಡಿದ್ದಾರೆ:

ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ ವಿ-
ಸ್ತರಿಸುವಂದದಿ, ಸೃಷ್ಟಿ ತನ್ನ ಮೂಲವನು
ಮರೆಮಾಚಿ ತಾನೆ ಮೆರೆಯುತ್ತಿಹುದು ಕಣ್ಗಳಿಗೆ
ನೊರೆ ಸೃಷ್ಟಿ ಪಾಲ್ ಬ್ರಹ್ಮ - ಮಂಕುತಿಮ್ಮ  

ಬೀಜದಿಂದ ಮರ ಬೆಳೆಯುತ್ತದೆ; ಮರವನ್ನು ಹೆತ್ತ ಬೀಜ ಇಲ್ಲವಾಗಿ, ಮರ ವಿಸ್ತರಿಸುತ್ತದೆ. ಹಾಗೆಯೇ, ಸೃಷ್ಟಿ ತನ್ನ ಮೂಲವಾದ ಅವ್ಯಕ್ತ ಶಕ್ತಿಯನ್ನು ಮರೆಮಾಚಿ ಮೆರೆಯುತ್ತಿದೆ - ಒಂದು ಪಾತ್ರೆಯಿಂದ ಇನ್ನೊಂದಕ್ಕೆ ಹಾಲನ್ನು ಸುರಿದಾಗ, ನೊರೆ ಉಕ್ಕಿ ಬಂದು  ಹಾಲು ಮರೆಯಾಗುವಂತೆ.

ಈ ಹಿನ್ನೆಲೆಯಲ್ಲಿ, ಜ್ನಾನದ ಸಾಗರಗಳಾದ ಉಪನಿಷತ್ತುಗಳು ಯಾವ ತತ್ವಜ್ನಾನವನ್ನು ಪ್ರತಿಪಾದಿಸುತ್ತವೆ? ಎಂಬುದನ್ನು ಗಮನಿಸುವುದು ಅವಶ್ಯ. ಅವುಗಳಲ್ಲಿ ವ್ಯಕ್ತವಾಗಿರುವುದು ಆಸ್ತಿಕತೆಯೇ ಅಥವಾ ನಾಸ್ತಿಕತೆಯೇ ಎಂದು ನಿರ್ಣಯಿಸುವುದು ಸುಲಭವಲ್ಲ. ಅವುಗಳ ನೆಲೆ ಆಸ್ತಿಕವಲ್ಲ ಯಾಕೆಂದರೆ ಅವು ಯಾವ ದೇವರನ್ನೂ ಆರಾಧಿಸುವುದಿಲ್ಲ. ಅವುಗಳ ನೆಲೆ ನಾಸ್ತಿಕವೂ ಅಲ್ಲ ಯಾಕೆಂದರೆ ಅವುಗಳಲ್ಲಿ ಬ್ರಹ್ಮದ ಪ್ರಸ್ತಾಪವಿದೆ. ಆದರೆ ಬ್ರಹ್ಮನನ್ನು ದೇವರು ಎನ್ನುವಂತಿಲ್ಲ ( ಬ್ರಹ್ಮನ ದೇವಸ್ಥಾನ ವಿರಳಾತಿ ವಿರಳ.)

ಹೀಗೆ ಹಲವು ಉದಾಹರಣೆಗಳ ಮೂಲಕ ದೇವರ ಬಗ್ಗೆ ತಮ್ಮ ಚಿಂತನೆಯನ್ನು ಮಂಡಿಸುವ ಡಿ.ವಿ. ಗುಂಡಪ್ಪನವರು, ಈ ಕೆಳಗಿನ ಮುಕ್ತಕದಲ್ಲಿ ನಮ್ಮ ಪಾಡನ್ನು ವಿವರಿಸಿದ್ದಾರೆ:

ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳಸುವೀ
ಸೃಷ್ಟಿಯಲಿ ತತ್ತ್ವವೆಲ್ಲಿಯೊ ಬೆದಕೆ ನರನು
ಕಷ್ಟಪಡುತಿರಲೆನುವುದೇ ಬ್ರಹ್ಮವಿಧಿಯೇನೊ
ಅಷ್ಟೆ ನಮ್ಮಯ ಪಾಡು? - ಮಂಕುತಿಮ್ಮ

ಬ್ರಹ್ಮಾಂಡ, ಭೂಮಿ, ಪ್ರಪಂಚ ಇವೆಲ್ಲದರ ಸೃಷ್ಟಿಯ ಮತ್ತು ಸೃಷ್ಟಿಕರ್ತನ ನಿಗೂಢತೆಯ ಬಗ್ಗೆ ನಾವೆಷ್ಟು ಚಿಂತನೆ ಮಾಡಿದರೂ ಅದರಿಂದ ಬೆಳೆಯೋದು ಇನ್ನಷ್ಟು ಶಂಕೆ. ಇದರಲ್ಲೇನಾದರೂ ತತ್ತ್ವವಿದೆಯೇ ಎಂದು ಬೆದಕಿದರೆ, ಈ ಮುಗಿಯದ ಶೋಧದಲ್ಲಿ ಮುಳುಗಿ ನಾವು ಸತತವಾಗಿ ಕಷ್ಟ ಪಡುತ್ತಿರಬೇಕು ಎಂಬುದು ಬ್ರಹ್ಮವಿಧಿಯೇನೋ? ಅನಿಸುತ್ತದೆ. ಅಷ್ಟೇ ನಮ್ಮಯ ಪಾಡು ಎಂಬುದು ಡಿ.ವಿ.ಜಿ.ಯವರ ಅಭಿಮತ.

"ದೇವರು" ಎಂಬ ಪರಿಕಲ್ಪನೆಯ ಬಗ್ಗೆ ಡಿ.ವಿ.ಜಿ.ಯವರ ಶೋಧ ಹಾಗೂ ಚಿಂತನೆ ನಿರಂತರ. ಅವರು 945 ಮುಕ್ತಕಗಳಿರುವ “ಮಂಕುತಿಮ್ಮನ ಕಗ್ಗ"ವನ್ನು ಪ್ರಕಟಿಸಿದ್ದು 1943ರಲ್ಲಿ. ಅನಂತರ ತಮ್ಮ ಜೀವಿತಾವಧಿಯಲ್ಲಿ (01-03-1887ರಿಂದ 07-10-1975) “ಮರುಳ ಮುನಿಯನ ಕಗ್ಗ" ಮತ್ತು ಇತರ ಹಲವು ಪುಸ್ತಕಗಳಲ್ಲಿ ತಮ್ಮ ಜಿಜ್ನಾಸೆಯನ್ನು ಮುಂದುವರಿಸಿದರು (ಇದು “ಮಂಕುತಿಮ್ಮನ ಕಗ್ಗ”ದ ಮುಂದುವರಿದ ಭಾಗದಂತಿದೆ; ಅವರ ನಿಧನದ ನಂತರ 1984ರಲ್ಲಿ ಪ್ರಕಟವಾಯಿತು. ಇದರಲ್ಲಿರುವ ಮುಕ್ತಕಗಳ ಸಂಖ್ಯೆ 824)

ತಮ್ಮ ಕೊನೆಯ ದಿನಗಳಲ್ಲಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೂ ಡಿ. ವಿ. ಗುಂಡಪ್ಪನವರು “ದೇವರ" ಬಗ್ಗೆ ತಮ್ಮ ಹಲವು ದಶಕಗಳ ಚಿಂತನ-ಮಂಥನವನ್ನು "ದೇವರು: ಒಂದು ವಿಚಾರ ಲಹರಿ” ಎಂಬ ಪುಟ್ಟ ಪುಸ್ತಕವಾಗಿ ತಮ್ಮ ಆಪ್ತರಿಂದ ಬರೆಯಿಸಿದರು. ದೇವರ ಬಗೆಗಿನ ತಮ್ಮ ಅಗಾಧ ಅಧ್ಯಯನದಿಂದ ದಕ್ಕಿದ ಒಳನೋಟಗಳನ್ನು ಆ ಪುಟ್ಟ ಪುಸ್ತಕದಲ್ಲಿ ಭಟ್ಟಿಯಿಳಿಸಿದ್ದಾರೆ ಡಿ.ವಿ.ಜಿ.ಯವರು. ದೇವರು ಮತ್ತು ಬದುಕಿನ ಬಗ್ಗೆ ಜನಸಾಮಾನ್ಯರ ಪ್ರಶ್ನೆಗಳಿಗೆ ಸರಳವಾದ ಉತ್ತರ ನೀಡಬೇಕೆಂಬ ಮಾನ್ಯ ಡಿ.ವಿ. ಗುಂಡಪ್ಪನವರ ಕಾಳಜಿಗೆ ನಮೋ.