ಮಂಗಲಸೂತ್ರ

ಮಂಗಲಸೂತ್ರ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಶರಶ್ಚಂದ್ರ ಕನ್ನಡಕ್ಕೆ: ಗುರುನಾಥ ಜೋಶಿ
ಪ್ರಕಾಶಕರು
ಸಮಾಜ ಪುಸ್ತಕಾಲಯ, ಶಿವಾಜಿಬೀದಿ, ಧಾರವಾಡ
ಪುಸ್ತಕದ ಬೆಲೆ
ರೂ.೧.೦೦, ಮುದ್ರಣ: ೧೯೭೦

ಐವತ್ತು ವರ್ಷಗಳ ಹಿಂದೆ ಪ್ರಕಟವಾದ ಖ್ಯಾತ ಕಾದಂಬರಿಕಾರ ಶರಶ್ಚಂದ್ರ ಚಟರ್ಜಿಯವರ ನೀಳ್ಗತೆಯೇ ಮಂಗಲಸೂತ್ರ. ಈ ಕತೆಯನ್ನು ಗುರುನಾಥ ಜೋಶಿಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬಹಳ ಸರಳವಾದ ಕಥೆಯಾದರೂ ಮಹತ್ವದ ಅರ್ಥವನ್ನು ಹೊಂದಿದೆ. ಐದು ದಶಕಗಳ ಹಿಂದಿನ ಕತೆಯಾದುದರಿಂದ ಆ ಸಮಯದ ಕೆಲವೊಂದು ಸಾಮಾಜಿಕ ಕಟ್ಟುಪಾಡುಗಳು, ಕೆಲವು ಭಾಷಾ ಪದಗಳ ಬಳಕೆ, ಬಾಲ್ಯ ವಿವಾಹದ ಸಂಸ್ಕೃತಿ ಎಲ್ಲವೂ ವಿಭಿನ್ನವೆಂದು ತೋರುತ್ತದೆ.

ಈ ಕಥೆ ಸತ್ಯೇಂದ್ರ ಚೌಧರಿ ಎಂಬ ಒಬ್ಬ ಯುವಕನದ್ದು. ಕಲ್ಕತ್ತಾದಲ್ಲಿ ಕಲಿಯುತ್ತಿದ್ದ ಈತ ಊರಿಗೆ ಬಂದಾಗ ಅವನ ತಾಯಿ ಮದುವೆಯ ಪ್ರಸ್ತಾಪ ಮಾಡುತ್ತಾಳೆ. ಈ ಯುವಕನದ್ದು ಜಮೀನುದಾರರ ವಂಶವಾದರೂ ಆತನಿಗೆ ಊರಿನಲ್ಲೇ ಇದ್ದು ಜಮೀನುದಾರಿಕೆ ಮಾಡುವ ಯಾವುದೇ ಆಸೆಯಿರುವುದಿಲ್ಲ. ಅವನು ಆಗ ತಾನೇ ಬಿ ಎ ಮುಗಿಸಿದ್ದು ಎಂ ಎ ಕಲಿಯಲು ಮರಳಿ ಕಲ್ಕತ್ತಾಗೆ ಹೋಗ ಬಯಸುತ್ತಾನೆ. ಅವನ ಅಮ್ಮನ ಆಸೆಯನ್ನು ತಿಳಿದು ಅವನಿಗೆ ಆಶ್ಚರ್ಯವಾಗುತ್ತದೆ. ಅವನು ಈಗಲೇ ಮದುವೆಯಾಗುವುದಿಲ್ಲ. ಕಲಿಯಲು ತುಂಬಾ ಬಾಕಿ ಇದೆ ಎನ್ನುತ್ತಾನೆ.

ಅವನ ತಾಯಿ ಮದುವೆಯಾಗಿ ಹೆಂಡತಿಯನ್ನು ಇಲ್ಲಿಯೇ ಬಿಟ್ಟು ಹೋಗಿ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಿ ಮರಳಿ ಬಾ ಎನ್ನುತ್ತಾಳೆ. ಒಂದು ದಿನ ಹುಡುಗಿಯನ್ನು ಮನೆಗೆ ಕರೆಯಿಸಿ ಸತ್ಯೇಂದ್ರನಿಗೆ ತೋರಿಸುತ್ತಾಳೆ. ಹನ್ನೊಂದು ವರ್ಷದ ಹುಡುಗಿಯನ್ನು ನೋಡಿ ದಂಗಾದ ಸತ್ಯೇಂದ್ರನಿಗೆ ಮಾತುಗಳೇ ಹೊರಡುವುದಿಲ್ಲ. ವಿವಾಹದ ಬಗ್ಗೆ ಅಮ್ಮ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವೆನ್ನುವ ಸತ್ಯೇಂದ್ರ ಪೂರ್ವ ನಿರ್ಧಾರವಾದಂತೆ ಓದಲು ಕಲ್ಕತ್ತಾಗೆ ಮರಳಿ ಹೋಗುತ್ತಾನೆ. 

ಪ್ರತೀ ದಿನ ಗಂಗಾ ನದಿಯಲ್ಲಿ ಸ್ನಾನ ಮಾಡುವ ಅಭ್ಯಾಸವಿದ್ದ ಸತ್ಯೇಂದ್ರನು ಒಮ್ಮೆ ಸುಂದರವಾದ ಯುವತಿಯನ್ನು ಸಂಧಿಸುತ್ತಾನೆ. ಅವಳ ಸೌಂದರ್ಯಕ್ಕೆ ಮಂತ್ರಮುಗ್ಧನಾಗಿ ಬಿಡುತ್ತಾನೆ. ಅವಳೂ ಪ್ರತೀ ದಿನ ಗಂಗೆಯಲ್ಲಿ ಸ್ನಾನ ಮಾಡಲು ಬರುತ್ತಾಳೆ ಎಂಬುವುದನ್ನು ತಿಳಿದುಕೊಳ್ಳುವ ಸತ್ಯೇಂದ್ರ ಅವಳನ್ನು ನೋಡಲು ಅದೇ ಸಮಯಕ್ಕೆ ಸ್ನಾನ ಮಾಡಲು ಬರ ತೊಡಗುತ್ತಾನೆ. ಒಮ್ಮೆ ಅವಳೇ ಮಾತನಾಡುತ್ತಾಳೆ. ತನ್ನನ್ನು ಸ್ವಲ್ಪ ದೂರದವರೆಗೆ ಬಿಡಬಹುದೇ? ತನ್ನ ದಾಸಿ ಇವತ್ತು ಬಂದಿಲ್ಲ ಎನ್ನುತ್ತಾಳೆ. ಅದರಂತೆ ಸತ್ಯೇಂದ್ರ ಅವಳನ್ನು ಬಿಟ್ಟು ಬರುತ್ತಾನೆ. ಇದು ಹಲವಾರು ದಿನಗಳವರೆಗೆ ನಡೆಯುತ್ತದೆ. ಒಂದು ದಿನ ಮನೆಗೆ ಬಾ ಎಂದು ಆಹ್ವಾನ ನೀಡಿದರೂ ಸತ್ಯೇಂದ್ರ ಗಾಬರಿಯಿಂದ ಹೋಗದೇ ಮರಳಿ ಬರುತ್ತಾನೆ. ಆ ಘಟನೆಯ ನಂತರ ಆ ತರುಣಿ ಸ್ನಾನ ಮಾಡಲು ಬರುವುದಿಲ್ಲ. ನಿರಂತರ ನಾಲ್ಕಾರು ದಿನವೂ ಅವಳು ಬಾರದೇ ಇದ್ದುದರಿಂದ ಸತ್ಯೇಂದ್ರ ಬಹಳ ವ್ಯಾಕುಲನಾಗುತ್ತಾನೆ. ಅವಳನ್ನು ಎಲ್ಲಿ ಹುಡುಕಾಡುವುದೆಂಬ ಚಿಂತೆಯಲ್ಲಿರುವಾಗ ಅವಳ ದಾಸಿ ಸಂದೇಶವನ್ನು ತೆಗೆದುಕೊಂಡು ಬರುತ್ತಾಳೆ. ದಾಸಿಯ ಜೊತೆ ಅವಳ ಮನೆಗೆ ಹೋಗುತ್ತಾನೆ. ಅದು ನೃತ್ಯಗಾತಿಯರಿರುವ ಮನೆ. ಇವನು ಮೆಚ್ಚಿದ ಹುಡುಗಿ ಚಂಚಲಾ ಓರ್ವ ನ್ಯತ್ಯಗಾತಿ. ಅವಳ ನೃತ್ಯ ನೋಡಲು ಬಹಳಷ್ಟು ಪುರುಷರು ಬಂದಿರುತ್ತಾರೆ. 

ಅವಳ ಆರೋಗ್ಯ ಸರಿ ಇಲ್ಲ ಎಂದು ತಿಳಿದುಕೊಂಡು ಬಂದಿದ್ದ ಸತ್ಯೇಂದ್ರನಿಗೆ ಇದರಿಂದ ಭ್ರಮನಿರಸನವಾಗುತ್ತದೆ. ಆರೋಗ್ಯವಾಗಿಯೇ ಇರುವ ಚಂಚಲಾ ತನ್ನನ್ನು ಮೋಸದ ಜಾಲದಲ್ಲಿ ಸಿಲುಕಿಸಲು ಹೀಗೆ ಮಾಡಿರುವಳೆಂದು ತಿಳಿಯುತ್ತಾನೆ. ತಾನೆಂದೂ ಅವಳನ್ನು ಇನ್ನು ಭೇಟಿಯಾಗುವುದಿಲ್ಲ ಎಂದು ತಿಳಿಸಿ ಅಲ್ಲಿಂದ ಹೊರಡುತ್ತಾನೆ. ಅವನ ಹಿಂದೆ ಬಂದ ಚಂಚಲಾಳನ್ನು ಅವನು ಧೃಢ ಮನಸ್ಸಿನಿಂದ ತಿರಸ್ಕರಿಸುತ್ತಾನೆ. ಕೊನೆಗೆ ಅವಳು ಒಂದು ಮಾತು ಅವನಲ್ಲಿ ಕೇಳುತ್ತಾಳೆ “ನನ್ನ ಒಂದು ಮಾತನ್ನು ನಂಬುವಿರಾ?’ ಎಂದು ಯಾವ ಮಾತು ಎನ್ನುತ್ತಾನೆ ಸತ್ಯೇಂದ್ರ. ಆ ಸಮಯದ ಚಂಚಲಾಳ ಮನಸ್ಥಿತಿಯನ್ನು ಕಥೆಗಾರರ ಮಾತಿನಲ್ಲೇ ಓದಿ…

“ ಚಂಚಲೆಯ ತುಟಿಗಳು ಅಲುಗಾಡಿದವು, ಆದರೆ ದನಿಯು ಹೊರ ಬರಲಿಲ್ಲ. ಕಂಬನಿದುಂಬಿದ ಕಣ್ಣುಗಳ ರೆಪ್ಪೆಯನ್ನು ಮೇಲ್ಮಾಡಿ ಒಂದು ಸಲ ಅವನನ್ನು ನೋಡಿ, ನೋಟವನ್ನು ಕೆಳಗೆ ಬಾಗಿಸಿದಳು. ಸತ್ಯೇಂದ್ರ ಕಣ್ಣೀರು ಕಂಡ ನಿಜ, ಆದರೆ ಈ ಕಣ್ಣೀರೂ ಮಾಟದವು ಆಗಲಾರದೇ? ಸತ್ಯೇಂದ್ರ ಕೇಳಲು ಆತುರನಾಗಿದ್ದಾನೆಂದು ಅವಳು ತಿಳಿದುಕೊಂಡಳು. ಆದರೆ ಹೃದಯದಿಂದ ಹೊರಬೀಳಬೇಕೆನ್ನುವ ಮಾತೂ ಹೊರಬೀಳುತ್ತಿರಲಿಲ್ಲ. ಆಕೆಯ ಹೃದಯ ಮಾತ್ರ ಜರ್ಜರಿತ ಮಾಡುತ್ತಿತ್ತು. 

ಆಕೆಯು ಅವನನ್ನು ಪ್ರೀತಿಸತೊಡಗಿದ್ದಳು. ಆ ಪ್ರೀತಿಯು ಸಾರ್ಥಕವಾಗುವ ಹಾಗಿದ್ದಲ್ಲಿ ಅವಳು ತನ್ನ ಸಮಸ್ತ ರೂಪ-ಶರೀರ ಒಂದು ಹಳೆಯ ವಸ್ತ್ರದಂತೆ ತ್ಯಜಿಸಿ ಬಿಡಲು ಸಿದ್ಧಳಿದ್ದಳು. ಇಂತಹ ಪ್ರೀತಿಯಿದ್ದಿತು ಸತ್ಯೇಂದ್ರನಲ್ಲಿ. ಆದರೆ ಇದನ್ನು ನಂಬುವವರಾರು? ಅವಳು ಗಾಯಾಳುವಾಗಿದ್ದಳು. ಆಕೆಯ ಶರೀರದಲ್ಲಿ ಅಪರಾಧದ ನೂರಾರು ಚಿನ್ಹೆಗಳಾಗಿದ್ದವು. ಈ ರೀತಿ ಅಪರಾಧ ಮಾಡುವುದು ಅವಳ ಉದ್ಯೋಗವಾಗಿದ್ದರೂ ಈ ಸಲ ತಾನು ನಿರ್ದೋಷಿಯೆಂದು ಯಾವ ಬಾಯಿಯಲ್ಲಿ ಹೇಳಬಲ್ಲಳು? ಆಕೆಯು ಅಪರಾಧಿಯಂತೆ ನ್ಯಾಯಾಧೀಶನ (ಸತ್ಯೇಂದ್ರ) ಎದುರು ನಿಂತಿದ್ದಳು.”

ನಾನು ಹೊರಡುತ್ತೇನೆ ಎಂದು ಸತ್ಯೇಂದ್ರ ಹೊರಟ. ಚಂಚಲೆ ನಿಜಕ್ಕೂ ಅವನನ್ನು ಪ್ರೀತಿಸುತ್ತಿದ್ದಳು. ಆದರೆ ಅವನ ಹೃದಯದಲ್ಲಿ ಮಾತ್ರ ಸ್ಥಾನ ಸಂಪಾದಿಸಲು ವಿಫಲಳಾಗಿದ್ದಳು. ಆದರೆ ಅಂದಿನಿಂದ ಅವಳು ಗೆಜ್ಜೆ ಕಟ್ಟಿಕೊಳ್ಳಲಿಲ್ಲ. 

ಊರಿಗೆ ಹೋದ ಸತ್ಯೇಂದ್ರ ತನ್ನ ಅಮ್ಮ ನೋಡಿದ ಹುಡುಗಿ ರಾಧಾರಾಣಿಯನ್ನು ಮದುವೆಯಾದ. ನಾಲ್ಕು ವರ್ಷಗಳು ಕಳೆದವು. ಅವನೀಗ ಕಲ್ಕತ್ತಾದಲ್ಲಿ ದೊಡ್ದ ಜಮೀನುದಾರ. ಅವನ ಮಗನ ಅನ್ನಪ್ರಾಶನ ಕಾರ್ಯಕ್ರಮಕ್ಕೆ ನರ್ತಕಿಯರು ಬಂದಿದ್ದರು. ಅದರಲ್ಲಿ ಒಬ್ಬಳು ಚಂಚಲಾ. ಬದುಕಿನ ಸುಳಿಗೆ ಸಿಕ್ಕ ಚಂಚಲಾ ಮತ್ತೆ ಗೆಜ್ಜೆ ಕಟ್ಟಲು ತಯಾರಾಗಿದ್ದಳು. ತನ್ನ ಗಂಡನಿಂದ ಚಂಚಲೆಯ ಬಗ್ಗೆ ತಿಳಿದುಕೊಂಡ ರಾಧಾರಾಣಿ ಅವಳನ್ನು ಕರೆದು ಮಾತನಾಡಿಸುತ್ತಾಳೆ. 

ತನ್ನ ಸೌಂದರ್ಯದಿಂದ ಸತ್ಯೇಂದ್ರನನ್ನು ಕಟ್ಟಿ ಹಾಕಬಹುದು ಎಂದುಕೊಂಡಿದ್ದ ತನಗೆ ಹೇಗೆ ನಿರಾಸೆಯಾಯಿತು ಎನ್ನುವ ಸಂಗತಿ ರಾಧಾರಾಣಿ ಬಳಿ ಹೇಳುತ್ತಾಳೆ ಚಂಚಲಾ. ಕೊನೆಯಲ್ಲಿ ರಾಧಾರಾಣಿಗೆ ಮನಃಪೂರ್ವಕವಾಗಿ ಶುಭ ಹಾರೈಸಿ ಅಲ್ಲಿಂದ ತೆರಳುತ್ತಾಳೆ ಚಂಚಲಾ.

ಇದು ಕಥೆಯ ಸಾರ ಮಾತ್ರ. ಆ ಸಮಯದ ಕೆಲವು ಪದ ಬಳಕೆ, ರೀತಿ, ರಿವಾಜುಗಳು ಈ ಪುಸ್ತಕ ಓದುವಾಗ ಅರಿವಿಗೆ ಬರುತ್ತದೆ. ೩೨ ಪುಟಗಳ ಈ ನೀಳ್ಗತೆಯನ್ನು ಒಂದೇ ಉಸಿರಲ್ಲಿ ಓದಿ ಮುಗಿಸಬಹುದು. ಈ ಪುಸ್ತಕದ ಪ್ರತಿಗಳು ಈಗ ದೊರೆಯುವುದು ಬಹುಮಟ್ಟಿಗೆ ಅಸಾಧ್ಯವಾದರೂ, ಹಳೆಯ ಗ್ರಂಥಾಲಯಗಳಲ್ಲಿ, ಸಂಗ್ರಹಕಾರರಲ್ಲಿ ಪ್ರತಿಗಳು ಓದಲು ಸಿಕ್ಕಾವು. ಸಿಕ್ಕರೆ ಖಂಡಿತಾ ಓದಿ. ಸತ್ಯೇಂದ್ರನ ತಿರಸ್ಕಾರ, ಚಂಚಲೆಯ ಮನಃ ಪರಿವರ್ತನೆ ಹಾಗೂ ರಾಧಾಮಣಿಯ ಮನುಷ್ಯತ್ವ ನಿಮ್ಮನ್ನು ಬಹುಸಮಯದ ತನಕ ಕಾಡುತ್ತಲೇ ಇರುವುದು ಖಂಡಿತ.