ಮಂಗಳನ ಅಂಗಳಕೆ… (ಭಾಗ 2)

ಮಂಗಳನ ಅಂಗಳಕೆ… (ಭಾಗ 2)

5. ಮಾರ್ಸ್ ಒಡಿಸ್ಸಿ (Mars Odyssey): ಮಾರ್ಸ್ ಒಡಿಸ್ಸಿ ನೌಕೆಯನ್ನು ಎಪ್ರಿಲ್ 2001ರಂದು ಹಾರಿ ಬಿಡಲಾಯ್ತು. ಇದು ಇಂದಿಗೂ ಮಂಗಳ ಗ್ರಹದಲ್ಲಿ ಪ್ರರಿಭ್ರಮಿಸುತ್ತಿದ್ದು, ಮಂಗಳ ಗ್ರಹದ ಆಕಾಶ ನೌಕೆಗಳಲ್ಲೇ ಅತೀ ಹೆಚ್ಚು ಕಾಲ ಬಾಳಿದ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಮಂಗಳ ಗ್ರಹ ಹೊರಹೊಮ್ಮಿಸುವ ಶಾಖದ ಪ್ರಮಾಣವನ್ನು ಅಳೆಯುವ (Thermal Emission Imaging System) ಸಾಧನವನ್ನು ಹೊಂದಿದೆ. ಇದರ ಜತೆಗೆ ಗಾಮಾ ರೇ ಸ್ಪೆಕ್ಟ್ರೋಮೀಟರ್ (Gamma Ray Spectrometer) ವಿಶೇಷ ಸಾಧನವನ್ನು ಇಡಲಾಗಿದೆ. ಈ ಸಾಧನಗಳು ಮಂಗಳ ಗ್ರಹದ ನೆಲದ ಅಡಿಯಲ್ಲಿ ಇರಬಹುದಾದ ಖನಿಜಗಳ ಸರ್ವೇಕ್ಷಣೆಯನ್ನು ನಡೆಸಿದ್ದವು. ಈ ಆಕಾಶನೌಕೆ ಮಂಗಳಗ್ರಹದ ಧ್ರುವ ಪ್ರದೇಶಗಳಲ್ಲಿ ನೀರಿನ ಇರುವಿಕೆಯನ್ನು ಪತ್ತೆ ಹಚ್ಚಿದೆ. (ಚಿತ್ರ 2)

೬. ಮಾರ್ಸ್ ಎಕ್ಸ್ ಪ್ಲೋರೇಷನ್ ರೋವರ್ಸ್ (Mars Exploration Rovers): ‘ಸ್ಪಿರಿಟ್' (Spirit) ಮತ್ತು 'ಅಪಾರ್ಚುನಿಟಿ' (Opportunity) ಎಂಬ ಎರಡು ಆಕಾಶ ನೌಕೆಗಳು ಜನವರಿ 2004ರಂದು ಮಂಗಳ ಗ್ರಹದ ಮೇಲೆ ಇಳಿದವು. ಇವು ಮಂಗಳನ ಮಣ್ಣಿನ ಬಗ್ಗೆ ಆಳವಾದ ಸಂಶೋಧನೆ ನಡೆಸಿದವು. ಇವುಗಳಲ್ಲಿ 'ಅಪಾರ್ಚುನಿಟಿ' ಈಗಲೂ ಕಾರ್ಯ ನಿರ್ವಹಿಸುತ್ತಿದೆ. ‘ಸ್ಪಿರಿಟ್' 2010ರಲ್ಲಿ ತನ್ನ ಕಾರ್ಯವನ್ನು ಸ್ಥಬ್ಧಗೊಳಿಸಿತು. ಅತ್ಯಂತ ಹೆಚ್ಚು ಶ್ರಮ ತೆಗೆದುಕೊಂಡು ಕಾರ್ಯ ನಿರ್ವಹಿಸಿದ 'ಅಪಾರ್ಚುನಿಟಿ' 2011ರಲ್ಲಿ ‘ಎಂಡೇವರ್' ಎಂಬ ಬೃಹತ್ ಕುಳಿ (crater) ಯನ್ನು ಪತ್ತೆ ಹಚ್ಚಿತು. ಇದು 22 ಕಿ.ಮೀ. ಅಗಲವಾಗಿದ್ದು, ಅತ್ಯಂತ ಆಳವಾಗಿದೆ. ಆ ಆಕಾಶ ನೌಕೆ ಮಂಗಳನ ಮಣ್ಣಿನಲ್ಲಿ ಇರಬಹುದಾದ ಜಲೀಯ ಖನಿಜಗಳನ್ನು (Hydrated minerals) ಮತ್ತೆ ಹಚ್ಚಿ ಮಂಗಳ ಗ್ರಹದಲ್ಲಿ ಇರಬಹುದಾದ ನೀರಿನ ಇರುವಿಕೆಗೆ ಪುಷ್ಟಿ ನೀಡಿತು. (ಚಿತ್ರ 3)

7. ಮಾರ್ಸ್ ರೆಕಾನಾಯ್ ಸ್ಸೆನ್ಸ್ ಆರ್ಬಿಟರ್ (Mars Reconnaissance Orbiter): 12 ಆಗಸ್ಟ್ 2005ರಲ್ಲಿ ಉಡಾಯಿಸಲಾದ ಈ ನೌಕೆ 10 ಮಾರ್ಚ್ 2006ರಲ್ಲಿ ಮಂಗಳ ಗ್ರಹದ ಕಕ್ಷೆಯಲ್ಲಿ ಪರಿಭ್ರಮಿಸತೊಡಗಿತು. ಇದರಲ್ಲಿ ಅತ್ಯಾಧುನಿಕ ವೈಜ್ಞಾನಿಕ ಉಪಕರಣಗಳನ್ನು ಅಳವಡಿಸಲಾಗಿತ್ತು. ಅತ್ಯಂತ ದೊಡ್ದ ಟೆಲಿಸ್ಕೋಪ್ ಮತ್ತು ರಾಡಾರ್ ಗಳನ್ನು ಇಡಲಾಗಿತ್ತು. ಈ ಸಾಧನಗಳು ಮಂಗಳ ಗ್ರಹದ ಮೇಲೆ ದೊಡ್ದ ಗಾತ್ರದ ಮಂಜುಗಡ್ದೆಗಳನ್ನು ಪತ್ತೆ ಹಚ್ಚಿವೆ. ಈ ಆಕಾಶನೌಕೆ ಮಂಗಳ ಗ್ರಹದ ಮೇಲೆ ಕಂಡು ಬಂದ ಆಯಾ ಋತುಮಾನದ ಕೆಲವು ಪಟ್ಟಿಗಳ ಪ್ರತಿಬಿಂಬಗಳನ್ನು ಭೂಮಿಗೆ ರವಾನಿಸಿದೆ. ಇದಲ್ಲದೆ ಅನೇಕ ಪ್ರಪಾತಗಳನ್ನು ಗುರುತಿಸಿ ಅವುಗಳಲ್ಲಿ ನೀರಿನ ಸೆಲೆಯನ್ನು ಪತ್ತೆ ಹಚ್ಚಿವೆ. (ಚಿತ್ರ 4)

8. ಫೀನಿಕ್ಸ್ ಮಾರ್ಸ್ ಲ್ಯಾಂಡರ್ (Phoenix Mars Lander): 2007ರ ಆಗಸ್ಟ್ ನಲ್ಲಿ ಹಾರಿ ಬಿಡಲಾದ ಈ ಆಕಾಶ ನೌಕೆ 2008 ರ ಮೇ ತಿಂಗಳಲ್ಲಿ ಮಂಗಳ ಗ್ರಹವನ್ನು ತಲುಪಿತು. ಇದು ಅಲ್ಲಿ ಒಂದು ಪುಟ್ಟ ‘ಹವಾಮಾನ ವೀಕ್ಷಣಾಲಯ'ದಂತೆ ಕೆಲಸ ನಿರ್ವಹಿಸಿತು. ಮಂಗಳ ಗ್ರಹದ ಮೋಡಗಳು ಹಿಮವನ್ನು ಸುರಿಸುವ ಅಪರೂಪದ ಚಿತ್ರಗಳನ್ನು ಇದು ಭೂಮಿಗೆ ರವಾನಿಸುವ ಮೂಲಕ ಅಲ್ಲಿ ನೀರಿನ ಅಸ್ತಿತ್ವವನ್ನು ಖಚಿತಗೊಳಿಸಿದೆ. ಈ ಫೀನಿಕ್ಸ್ ಮಂಗಳನ ನೆಲದಲ್ಲಿ ಅನೇಕ ಸಣ್ಣ ಕಾಲುವೆಗಳನ್ನು ತೋಡಿ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿದೆ. ಈ ಫೀನಿಕ್ಸ್ ಜೀವನ ಯಾತ್ರೆ ನವೆಂಬರ್ 2008ರಲ್ಲಿ ಕೊನೆಗೊಂಡಿತು. (ಚಿತ್ರ 5)

9. ಫೋಬೋಸ್ ಗ್ರುಂಟ್/ ಯಿಂಗ್ ಹ್ಯೂ (Phobos Grunt / Yinghuo): ಇದು ನವೆಂಬರ್ 2011ರಲ್ಲಿ ಮಂಗಳನೆಡೆಗೆ ರಷ್ಯಾ ಹಾರಿಬಿಟ್ಟ ಪ್ರಥಮ ಆಕಾಶ ನೌಕೆ. ಇದರ ಜತೆಗೆ ಚೈನಾ ನಿರ್ಮಿಸಿದ ‘ಯಿಂಗ್ ಹ್ಯೂ’ ಆಕಾಶ ನೌಕೆಯನ್ನೂ ಕಳುಹಿಸಲಾಗಿತ್ತು. ಇದು ಚೈನಾದ ಪ್ರಥಮ ಅಂತರ್ ಗ್ರಹ ಯಾತ್ರೆಗೆ ನಾಂದಿ ಹಾಡಿತು. ಈ ನೌಕೆಗಳು ಮಂಗಳ ಗ್ರಹದ ಉಪಗ್ರಹವಾದ ‘ಪೋಬೋಸ್' ನ ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ಭೂಮಿಗೆ ರವಾನಿಸಿದೆ. ಅಲ್ಲದೆ ಇವು ತಮ್ಮ ಯಾತ್ರೆಯಲ್ಲಿ ಭೂಮಿಯಿಂದ ಅನೇಕ ಸೂಕ್ಷ್ಮಾಣು (Micro- organisms) ಜೀವಿಗಳನ್ನು ಒಯ್ದು ಮಂಗಳನ ನೆಲದಲ್ಲಿ ಸ್ಥಾಪಿಸಿದವು. ಇವು ಆ ಗ್ರಹದಲ್ಲಿ ಬದುಕುಳಿಯುವ ಸಾಮರ್ಥ್ಯವನ್ನು ಈ ಎರಡೂ ನೌಕೆಗಳು ಪರೀಕ್ಷಿಸಿದ್ದವು.(ಚಿತ್ರ 6)

10. ಮಾರ್ಸ್ ಸೈನ್ಸ್ ಲ್ಯಾಬೊರೇಟರಿ (Mars Science Laboratory): ಇದನ್ನು 2011ರ ನವೆಂಬರ್ 24ರಂದು ಹಾರಿಬಿಡಲಾಗಿದೆ. ಇದು ಮಂಗಳನ ಮೇಲೆ ಆಗಸ್ಟ್ 2012ರಲ್ಲಿ ಪಾದಾರ್ಪಣೆ ಮಾಡಿತು. ಇದು ಒಂದು ಕಾರಿನ ಗಾತ್ರದಲ್ಲಿದ್ದು, ಮಂಗಳನ ಮೇಲೆ ಅತ್ಯಂತ ಕುತೂಹಲ ಹಾಗೂ ರೋಚಕ ಯಾತ್ರೆಯನ್ನು ನಡೆಸಿದೆ. ಈ ರೋವರ್ ರೋಬೋದಲ್ಲಿ ಒಂದು ಪ್ಯಾರಾಚೂಟ್ ಅನ್ನು ಅಳವಡಿಸಲಾಗಿದ್ದು, ‘ರಾಕೆಟ್ ಉಡ್ಡಯನ ವ್ಯವಸ್ಥೆ' ಹಾಗೂ ಒಂದು ಅಂತರಿಕ್ಷ ಕ್ರೇನ್ ಅನ್ನು ಜೋಡಿಸಲಾಗಿದೆ. ಈ ರೋವರ್ ನಲ್ಲಿ ಅತ್ಯಾಧುನಿಕ ಕ್ಯಾಮರಾ ಮತ್ತು ವೈಜ್ಞಾನಿಕ ಉಪಕರಣಗಳನ್ನು ಅಳವಡಿಸಲಾಗಿತ್ತು. ಇದರ ಉಡ್ಡಯನದ ಮುಖ್ಯ ಉದ್ದೇಶ ‘ಮಂಗಳ ಗ್ರಹ ಎಂದಾದರೂ ತನ್ನ ನೆಲೆಯಲ್ಲಿ ಸೂಕ್ಷ್ಮಾಣು ಜೀವಿಗಳಿಗೆ ಅವಕಾಶ ನೀಡಿದೆಯಾ?’ ಎಂಬುದನ್ನು ಪರೀಕ್ಷಿಸುವುದು. ಈ ರೋವರ್ 2.1 ಮೀಟರ್ ಉದ್ದವಿದ್ದು, 900 ಕಿ.ಗ್ರಾಂ. ಭಾರವಿತ್ತು. (ಚಿತ್ರ 1)

-ಕೆ. ನಟರಾಜ್, ಬೆಂಗಳೂರು 

 ಚಿತ್ರ ಕೃಪೆ: ಇಂಟರ್ನೆಟ್ ತಾಣ