ಮಂಗಳನ ಅಂಗಳಕೆ... (ಭಾಗ 1)

ಮಂಗಳನ ಅಂಗಳಕೆ... (ಭಾಗ 1)

ಮಂಗಳ ಗ್ರಹವೆಂದರೆ ನಮ್ಮ ವಿಜ್ಞಾನಿಗಳಿಗೆ ತುಸು ಹೆಚ್ಚು ಪ್ರೀತಿ. ಇದು ಭೂಮಿಗೆ ಸಮೀಪದ ಗ್ರಹ ಅನ್ನೋದು ಒಂದಾದರೆ ಇನ್ನೊಂದು ಇದರ ವಾತಾವರಣದ ಉಷ್ಣತೆ ಭೂಮಿಯ ವಾತಾವರಣದ ಉಷ್ಣತೆಯ ಆಸುಪಾಸಿನಲ್ಲಿರುವುದು ಮಂಗಳನ ಮೇಲೆ ಏನಾದರೂ ಸಿಕ್ಕಬಹುದೇನೋ ಎಂಬ ಕುತೂಹಲ ವಿಜ್ಞಾನಿಗಳದು! ಅದಕ್ಕಾಗಿ ಮಂಗಳನ ಮೇಲೆ ಸತತ ದಾಳಿ, ಅಂದರೆ ಅನ್ವೇಷಣೆಯ ದಾಳಿ!

ಮಂಗಳನ ಮೇಲೆ ಸಂಶೋಧನೆ ನಡೆಸಲು ವಿಜ್ಞಾನಿಗಳಿಂದ ಇದುವರೆಗೆ 26 ಬಾರಿ ಹಾರಾಟದ ಪ್ರಯತ್ನಗಳು ನಡೆದಿವೆ. ಅದರಲ್ಲಿ ಕೇವಲ ಹತ್ತು ಬಾರಿ ಮಾತ್ರ ಮಂಗಳದ ಮೇಲೆ ರೋಬೋಟ್ ಗಳನ್ನು ಕಳಿಸಿ ಸಂಶೋಧನೆಗಳು ನಡೆಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. 10 ಬಾರಿ ಮಂಗಳನೆಡೆಗೆ ತೆರಳಲು ಸಂಪೂರ್ಣ ವಿಫಲಗೊಂಡಿದ್ದರೆ, ಆರು ಬಾರಿ ಭಾಗಶಃ ಯಶಸ್ಸನ್ನು ಗಳಿಸಿದ್ದರು.

ಈಗ 10 ಬಾರಿ ಯಶಸ್ವಿಯಾದ ವಿಜ್ಞಾನಿಗಳು ಸಾಧನೆಗಳನ್ನು ಒಮ್ಮೆ ಅವಲೋಕಿಸೋಣ.

1.  ಮಾರಿನರ್ (Mariner) 6 ಮತ್ತು 7:  ಒಂದೇ ರೀತಿಯಾದ ಈ ಎರಡು (ಮಾರಿನರ್ 6 ಮತ್ತು 7) ಆಕಾಶನೌಕೆಗಳನ್ನು 1969ರ ಫೆಬ್ರುವರಿ ಮತ್ತು ಮಾರ್ಚ್ ನಲ್ಲಿ ಮಂಗಳ ಗ್ರಹದ ಕಕ್ಷೆಗೆ ಹಾರಿ ಬಿಡಲಾಯಿತು. ಮಾರಿನರ್ 6 ಜುಲೈ 1969 ರಲ್ಲಿ ಹಾಗೂ ಮಾರಿನಾರ್ 7 ಆಗಸ್ಟ್ 1969ರಲ್ಲಿ ಮಂಗಳ ಗ್ರಹದ ಕಕ್ಷೆಗಳನ್ನು ತಲುಪಿ ಪರಿಭ್ರಮಿಸಲಾರಂಭಿಸಿದವು. ಅಮೆರಿಕದ ನಾಸಾ ಇದರ ರೂವಾರಿ. (ಚಿತ್ರ 1)

ಈ ನೌಕೆಗಳಲ್ಲಿ ಅತ್ಯಾಧುನಿಕ ಸ್ಪೆಕ್ಟ್ರೋ ಮೀಟರ್, ರೇಡಿಯೋ ಮೀಟರ್, ಕೆಮರಾ ಮುಂತಾದವುಗಳನ್ನು ಅಳವಡಿಸಲಾಗಿತ್ತು. ಇವು ಮೊದಲ ಬಾರಿಗೆ ಮಂಗಳ ಗ್ರಹದ ಮೇಲ್ಮೈನ ಚಿತ್ರಗಳನ್ನು ಭೂಮಿಗೆ ರವಾನಿಸಿದವು. ಈ ಎರಡೂ ನೌಕೆಗಳು ಮಂಗಳ ಗ್ರಹದ ನೆಲದಲ್ಲಿ ಅನೇಕ  ಕುಳಿ (Craters) ಗಳನ್ನು ಗುರುತಿಸಿದವು. ಮಂಗಳ ಗ್ರಹದ ಶೇಕಡ 20 ಭೂಭಾಗವನ್ನು ಸರ್ವೇಕ್ಷಣೆ ನಡೆಸಿ, ಭೂಮಿಗೆ ಮಾಹಿತಿಯನ್ನು ರವಾನಿಸಿದವು.

2. ವೈಕಿಂಗ್ (Viking) 1 ಮತ್ತು 2:  ಇದೇ ನಾಸಾ ಸಂಸ್ಥೆಯ ವತಿಯಿಂದ 1975ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ವೈಕಿಂಗ್ 1 ಮತ್ತು 2 ಎಂಬ ಆಕಾಶ ನೌಕೆಗಳನ್ನು ಬಳಗ್ರಹಕ್ಕೆ ಹಾರಿ ಬಿಡಲಾಯಿತು. ವೈಕಿಂಗ್ 1 ಮಂಗಳ ಗ್ರಹದ ಕಕ್ಷೆಯನ್ನು ಸೇರಿ ಮಾಹಿತಿಯನ್ನು ರವಾನಿಸಿದರೆ ವೈಕಿಂಗ್ 2 ನೇರವಾಗಿ ಮಂಗಳ ಗ್ರಹದ ಮೇಲೆ ಇಳಿದು ಮಾಹಿತಿಯನ್ನು ರವಾನಿಸುತ್ತಿತ್ತು ಇವು ಮಂಗಳ ಗ್ರಹದ ಮೇಲಿನ “ಜೈವಿಕ” ಕುರುಹುಗಳಿಗಾಗಿ ಅನೇಕ ಸಂಶೋಧನೆಗಳು ನಡೆಸಿದವು. 1982 ರವರೆಗೆ ಕಾರ್ಯನಿರ್ವಹಿಸಿ ಅನೇಕ ಮಹತ್ವದ ಮಾಹಿತಿಗಳನ್ನು ಭೂಮಿಗೆ ರವಾನಿಸಿದವು. (ಚಿತ್ರ-2)

3. ಮಾರ್ಸ್ ಗ್ಲೋಬಲ್ ಸರ್ವೇಯರ್ (M.G.S.): ಇದನ್ನು ನವೆಂಬರ್ 1996ರಲ್ಲಿ ಹಾರಿ ಬಿಡಲಾಯಿತು. ಇದು ಮಂಗಳನ ಮೇಲಿನ ಭೌಗೋಳಿಕ ಹಾಗೂ ವಾತಾವರಣಗಳ ಮೇಲಿನ ಸಂಶೋಧನೆಗಳನ್ನು ಕೈಗೊಂಡಿತ್ತು. ಇದರಲ್ಲಿ ಅತ್ಯಂತ ಸಮರ್ಥ ಕ್ಯಾಮರಾ ಮತ್ತು ಅಲ್ಟೀಮೀಟರ್ (Altimeter) ಗಳನ್ನು ಅಳವಡಿಸಲಾಗಿತ್ತು. ಇದು ಮಂಗಳ ಗ್ರಹದ ಸಂಪೂರ್ಣ ಚಿತ್ರಗಳನ್ನು ಭೂಮಿಗೆ ರವಾನಿಸಿತ್ತು. ಈ ಮಾರ್ಸ್ ಗ್ಲೋಬಲ್ ಸರ್ವೇಯರ್ 2006ರಲ್ಲಿ ಭೂಮಿಯಿಂದ ತನ್ನ ನಿಯಂತ್ರಣವನ್ನು ಕಳೆದುಕೊಂಡಿತು.

4. ಮಾರ್ಸ್ ಪಾಥ್ ಫೈಂಡರ್ (Mars Pathfinder): ಇದನ್ನು 1996ರಲ್ಲಿ ಹಾರಿಬಿಡಲಾಯಿತು. ಇದು ಮಂಗಳ ಗ್ರಹವನ್ನು ಜುಲೈ 1997ರಲ್ಲಿ ತಲುಪಿತು. ಇದು ಮಂಗಳ ಗ್ರಹದ ಮೇಲೆ ನಡೆದಾಡಿದ ಮೊದಲ ಆಕಾಶ ನೌಕೆ. ಮಂಗಳ ಗ್ರಹದ ಮೇಲಿನ ಧೂಳು ಮತ್ತು ವಾತಾವರಣದ ಅಧ್ಯಯನ ಇದರ ಗುರಿ. ಜತೆಗೆ ಇದು ಮಂಗಳ ಗ್ರಹದ ಮೇಲಿನ ಬಂಡೆಗಳು ಹಾಗೂ ಮಣ್ಣಿನ ರಾಸಾಯನಿಕ ಸಂಯೋಜನೆಯನ್ನು ಕೂಡ ಅಧ್ಯಯನ ನಡೆಸಿತು. ಕೇವಲ 65 ಸೆಂಟಿಮೀಟರ್ ನ ಈ ಪುಟ್ಟ ವೈಜ್ಞಾನಿಕ ಸಾಧನ ಮಂಗಳನ ನೆಲದ ಮೇಲೆ ಓಡಾಡಿ ಬಂಡೆಗಳ ಬಗ್ಗೆ ಅಧ್ಯಯನ ನಡೆಸಿತು. ಇದರಲ್ಲಿ ಅತ್ಯಾಧುನಿಕ ಆಲ್ಫಾ ಪ್ರೋಟಾನ್ ಎಕ್ಸ್ ರೇ ಸ್ಪೆಕ್ಟ್ರೋಮೀಟರ್ (Alfa proton X-ray spectrometer) ಅನ್ನು ಅಳವಡಿಸಲಾಗಿತ್ತು, ಇದು ಕೇವಲ 3 ತಿಂಗಳುಗಳ ಕಾರ್ಯನಿರ್ವಹಿಸಿ ಸೆಪ್ಟೆಂಬರ್ 27, 1997ರಂದು ಭೂಮಿಯೊಂದಿಗೆ ಸಂಪರ್ಕ ಕಳೆದುಕೊಂಡಿತು. (ಚಿತ್ರ -3)

(ಮುಂದುವರಿಯುತ್ತದೆ)

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ