ಮಂಗಳಮುಖಿಯರ ಸಂಗದಲ್ಲಿ…

ಮಂಗಳಮುಖಿಯರ ಸಂಗದಲ್ಲಿ…

ಪುಸ್ತಕದ ಲೇಖಕ/ಕವಿಯ ಹೆಸರು
ಸಂತೋಷಕುಮಾರ ಮೆಹೆಂದಳೆ
ಪ್ರಕಾಶಕರು
ಸ್ನೇಹ ಬುಕ್ ಹೌಸ್, ಶ್ರೀನಗರ, ಬೆಂಗಳೂರು-೫೬೦೦೫೦
ಪುಸ್ತಕದ ಬೆಲೆ
ರೂ. ೨೩೦.೦೦, ಮುದ್ರಣ: ೨೦೨೨

ಸಂತೋಷಕುಮಾರ ಮೆಹೆಂದಳೆ ಅವರು ಈ ಬಾರಿ ವಿಭಿನ್ನ ಕಥಾ ವಸ್ತುವಿನ ಜೊತೆಗೆ ಹಾಜರಾಗಿದ್ದಾರೆ. ಎಲ್ಲರೂ ಪ್ರತೀ ದಿನ ಗಮನಿಸಿ ಮುಖ ತಿರುಗಿಸಿಕೊಳ್ಳುವ ಮಂಗಳಮುಖಿಯರ ಒಳ ಜಗತ್ತಿನ ಅನಾವರಣ ಮಾಡಿದ್ದಾರೆ. ಪುಸ್ತಕದ ಮುಖ ಪುಟದಲ್ಲೇ ‘ಹಿಜಡಾ ಜಗತ್ತಿನ ಅನುಭವ ಕಥನ...' ಎಂದು ಇದನ್ನು ಕರೆಯಿಸಿಕೊಂಡಿದ್ದಾರೆ. 

ಪುಸ್ತಕದ ಬೆನ್ನುಡಿಯಲ್ಲಿ “ನೀವು ಗಂಡು ಅಥವಾ ಹೆಣ್ಣಾಗಿ ಹುಟ್ಟಿದ್ದರೆ, ನಿಖರ ದೇಹ ಹಾಗೂ ಮನಸ್ಥಿತಿ ಕೊಟ್ಟಿದ್ದರೆ ಈ ಜೀವನ ಪೂರ್ತಿ ನೀವು ದೇವರಿಗೆ ಕೃತಜ್ಞರಾಗಿರಲೇ ಬೇಕು. ಇದು ದೇವರು ಕೊಟ್ಟ ಅತಿ ದೊಡ್ಡ ಕೊಡುಗೆ.

ಮಂಗಳಮುಖಿಯರ ಬದುಕು ಎಷ್ಟು ತಲ್ಲಣ, ಅಸಹನೀಯವೋ ಅದಕ್ಕಿಂತ ಭೀಕರ ದೇಹದ ಕಂಪನ ತಣಿಯದ ಭಾವ ಮತ್ತು ಮನಸ್ಸಿಗೆ ಇಲ್ಲದ ಅನುಭೂತಿ. ನೀರು ಕುಡಿದ ಮೇಲೆ ಆಯಾಸ ಪರಿಹಾರ ಎನ್ನಬಹುದೇ ಹೊರತಾಗಿ ವಿವರಿಸಬಲ್ಲ ಭಾಷೆ ನಮ್ಮಲ್ಲಿಲ್ಲ. ಅದೊಂದು ಅನುಭವ.

ಹಾಗೆಯೇ ಕಾಮದ ಅನುಭವಕ್ಕೆ ಪಕ್ಕಾದರೆ ಅದ್ಭುತ ಅನುಭವ ಎನ್ನಬಹುದೇ ವಿನಃ ಇದ್ದಮಿತ್ಥಂ ಎಂದು ವರ್ಣಿಸಲಾರ. ಇವೆರಡಕ್ಕೂ ವಂಚಿತನಾಗಿ ಬದುಕು ಭರಿಸಬೇಕಾದ ಪರಿಸ್ಥಿತಿ. ಈ ತ್ರಿಶಂಕು ಸ್ಥಿತಿ ಯಾರಿಗೂ ಬೇಡ. ಮನಸ್ಸಿಗೆ ಹೆಣ್ಣಿನ ಹಂಬಲ. ದೇಹ ಮಾತ್ರ ಗಂಡಸಿನ ಬಿರುಸು. ಭಾವಗಳಂತೂ ಅಲ್ಲೋಲ ಕಲ್ಲೋಲ. ಇತ್ಲಾಗೆ ಇದೂ ಇಲ್ಲ. ಅತ್ಲಾಗೆ ಅದೂ ದಕ್ಕುತ್ತಿಲ್ಲ. ಸಮಾಜ ಎಲ್ಲಕ್ಕಿಂತ ಮೊದಲೇ ಅವರನ್ನು ರಸ್ತೆಗೆ ಇಳಿಸಿರುತ್ತದೆ. ಇದು ಹಿಜಡಾಗಳ ಜಗತ್ತು" ಎಂದಿದ್ದಾರೆ.

ಮಂಗಳಮುಖಿಯರೆಂದರೆ ಅಸಹ್ಯ ಪಟ್ಟುಕೊಳ್ಳುವವರೇ ಹೆಚ್ಚಿರುವವರ ಮಧ್ಯೆ ಅವರುಗಳ ವಿಶ್ವಾಸ ಗಳಿಸಿ, ಅವರ ಕಷ್ಟ-ಸುಖಗಳಿಗೆ ಕಿವಿಯಾಗುವುದಷ್ಟೆ ಅಲ್ಲ, ಅವರ ಭಾವನೆಗಳಿಗೆ, ಕಷ್ಟಕಾರ್ಪಣ್ಯಗಳಿಗೆ ಲೇಖಕರು ಲೇಖನಿಯಾಗಿ ದುಡಿದಿದ್ದಾರೆ. ಪುಸ್ತಕವನ್ನು ಓದುತ್ತಾ ಓದುತ್ತಾ ಮಾತನಾಡಲೇ ಮುಜುಗರ ಪಟ್ಟುಕೊಳ್ಳುವಂತಹ ವಿಷಯಗಳನ್ನು, ಅದೆಷ್ಟು ನಾಜೂಕಾಗಿ ಅಕ್ಷರ ರೂಪಕ್ಕೆ ಇಳಿಸಿದ್ದಾರೆಂದು ಅನ್ನಿಸತೊಡಗುತ್ತದೆ. ಹಾಗೆಂದು ಇವರು ಭಾವನೆಗಳಿಲ್ಲದ ನಿರ್ಭಾವುಕ ಲೇಖಕರು ಎಂದು ಭಾವಿಸಬೇಡಿ. ಅಲ್ಲಲ್ಲಿ ಅವರ ಭಾವನೆಗಳು ಕಟ್ಟೆಯೊಡೆದು ತೃತೀಯ ಲಿಂಗಿಗಳನ್ನು ಅವಹೇಳನ ಮಾಡುವವರನ್ನು, ಅವರ ಜೊತೆ ಕೆಟ್ಟದಾಗಿ ನಡೆದುಕೊಳ್ಳುವವರನ್ನು ತಮ್ಮ ಬರಹದಲ್ಲಿ ಚೆನ್ನಾಗಿ ಚಾಟಿ ಬೀಸಿದ್ದಾರೆ ಸಂತೋಷಕುಮಾರ ಇವರು.