ಮಂಗಳೂರಿಗರ ಒಟ್ರಾಸಿ..!
ಇದೊಂದು ಲಘುಬರಹ. ಒಮ್ಮೆ ಓದಿ ನಕ್ಕು ಮರೆತು ಬಿಡುವ 'ಒಟ್ರಾಸಿ' ಬರಹವೆಂದರೂ ಸರಿಯೇ...
ಈ ಒಟ್ರಾಸಿ ಎಂಬ ಪದ ಯಾವ ಭಾಷೆಯದ್ದೆಂದು ನಿಖರವಾಗಿ ಹೇಳಲಾಗದು. ಆದರೆ ಒಂದಂತೂ ಪಕ್ಕಾ, ಇದು ಮಂಗಳೂರಿಗರ ಬಾಯಲ್ಲಿ ಆಗಾಗ ನಲಿದಾಡುತ್ತಿರುವ ಒಂದು ಕಾಮನ್ ಪದ. ಒಟ್ರಾಸಿಯೆನ್ನುವುದು ಮಂಗಳೂರಿಗರದ್ದೇ ಯೂನಿಕ್ ಪದವೂ ಹೌದು.ಇದನ್ನು ಮಂಗಳೂರಿಗರ ಹೊರತಾಗಿ ಬೇರೆ ಯಾರೂ ಬಳಸುವುದನ್ನು ನಾನಂತೂ ನೋಡಿಲ್ಲ.ಇದೊಂದು ಅತ್ಯಂತ ಸೆಕ್ಯುಲರ್ ಪದ ಕೂಡಾ. ಮಂಗಳೂರಿನ ಬ್ಯಾರಿ, ತುಳು, ಕೊಂಕಣಿ, ಹವ್ಯಕ, ಮಂಗಳೂರು ಕನ್ನಡ, ಅರೆಬಾಸೆ ಹೀಗೆ ಎಲ್ಲಾ ಭಾಷೆಯಲ್ಲೂ ಬಳಕೆಯಲ್ಲಿದೆ. ಈ ಪದದ ಮೂಲ ಯಾವುದು, ಇದರ ಜನಕ ಯಾರು ಎಂಬುವುದು ಯಾರಿಗೂ ಗೊತ್ತಿಲ್ಲ. ಇದಕ್ಕೊಂದು ನಿರ್ದಿಷ್ಟ ಅರ್ಥವನ್ನೂ ಕೊಡಲಾಗದು. ಇದನ್ನು ವಿವಿಧ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಸಿಟ್ಟಿನಲ್ಲಿ, ತಮಾಷೆಯಲ್ಲಿ, ದುಃಖದಲ್ಲಿ ಹೀಗೆ ಇನ್ನೂ ಬೇರೆ ಬೇರೆ ಸಂದರ್ಭಗಳಲ್ಲಿ ಇದು ಬಳಕೆಯಾಗುತ್ತದೆ.
ಇದು ವಿವಿಧ ಸಂದರ್ಭಗಳಲ್ಲಿ ಧ್ವನಿಸುವ ಅರ್ಥವನ್ನು ನೋಡಿ.
ಉದಾ : ತುಳು- ಈ ಒಟ್ರಾಸಿ ಪಾತೆರೊಡ್ಚಿ ( ನೀನು ಏನೆಲ್ಲಾ ಮಾತನಾಡಬೇಡ)
ಕೊಂಕಣಿ- ತೂ ಕಾಲೆರೆ ಒಟ್ರಾಸಿ ಉಲೈತ (ನೀನೆಂತದ ಬಾಯಿಗೆ ಬಂದಂತೆ ಮಾತನಾಡುವುದು)
ಬ್ಯಾರಿ- ಒಟ್ರಾಸಿ ನಂಡೆ ನಸೀಬು (ಒಟ್ಟಿನಲ್ಲಿ ನನ್ನ ನಸೀಬು)
ಮಂಗಳೂರು ಕನ್ನಡ - ಎಲ್ಲಾ ಒಟ್ರಾಸಿಯಾಗಿಬಿಟ್ಟಿದೆ ಮಾರ್ರೆ (ಎಲ್ಲಾ ಅಸ್ತವ್ಯಸ್ತವಾಗಿ ಬಿಟ್ಟಿದೆ)
ಇವೆಲ್ಲಾ ಸ್ಥಳೀಯ ಭಾಷೆಗಳ ಉದಾಹರಣೆಗಳು. ಇಂದು ನಾನು ನಮ್ಮೂರಿನ ಆಟೋ ರಿಕ್ಷಾ ಒಂದರ ಹಿಂಬದಿಯಲ್ಲಿ ಇಂಗ್ಲಿಷ್ನಲ್ಲೂ ಈ ಶಬ್ದದ ಬಳಕೆ ನೋಡಿದೆ. ಅದು ಹೀಗಿತ್ತು " Be happy, life is Otrasi". ಇಲ್ಲಿ ಏನರ್ಥ ಕೊಡಬಹುದಪ್ಪಾ ಎಂದು ತಲೆಕೆಡಿಸಿಕೊಂಡೆ. ಇಲ್ಲಿ ನನಗೆ ಹೊಳೆದ ಅರ್ಥ " ಜೀವನ ಅನಿಶ್ಚಿತ, ಖುಷಿಯಾಗಿರಿ"
ಹೀಗೆ ವಿವಿಧ ಸಂದರ್ಭಗಳಲ್ಲಿ ಬಳಸಬಹುದಾದ ಈ ಒಟ್ರಾಸಿಗೆ ನಿರ್ದಿಷ್ಟ ಅರ್ಥವನ್ನೂ ಕೊಡಲಾಗದು. ನಮ್ಮ ಮಂಗಳೂರಿನ ಅತ್ಯಂತ ಸೆಕ್ಯುಲರ್ ಮನುಷ್ಯನೂ ಈ ಒಟ್ರಾಸಿಯನ್ನು ಬಳಸುತ್ತಾನೆ. ಪರಮ ಕೋಮುವಾದಿಯ ಮಾತಲ್ಲೂ ಈ ಪದ ಬಳಕೆಯಾಗುತ್ತದೆ.
ಇನ್ನು ನಮ್ಮ ಬ್ಯಾರಿ ಮಹಿಳೆಯರು ಅಡುಗೆ ಮನೆಯಲ್ಲೂ ಒಟ್ರಾಸಿಯನ್ನು ಬಳಸ್ತಾರೆ. ಉದಾ : ಪತ್ತಿರ್ ಎನ್ನುವುದು ಬ್ಯಾರಿಗಳದ್ದೇ ಯೂನಿಕ್ ತಿಂಡಿ. ಅದು ಚಪ್ಪಟೆಯಾಗಿ, ತೆಳುವಾಗಿ ವೃತ್ತಾಕಾರದಲ್ಲಿರುತ್ತದೆ. ಅದನ್ನು ತಯಾರಿಸುವಾಗ ಶೇಪ್ ಬರದಿದ್ದರೆ "ಚೆ.. ಪತ್ತ್ರ್ ಒಟ್ರಾಸಿ ಅಯ್ತ್".
ಇನ್ನು ನಮ್ಮ ಮಂಗಳೂರಿನ ಮೀನು ಮಾರುವ ಮೊಗವೀರ ಮಹಿಳೆಯರಲ್ಲಿ ಕ್ರಯಕ್ಕೆ ಚೌಕಾಶಿ ಮಾಡಿದ್ರೆ "ಈರ್ ಒಟ್ರಾಸಿ ಚರ್ಚೆ ಮನ್ಪೆರೆ ಬಲ್ಲಿ ಮಾರ್ರೆ" (ನೀವು ಒಟ್ರಾಸಿ ಚರ್ಚೆ ಮಾಡಬಾರದು). ಇತ್ತೀಚಿಗೆ ನಾನು ಸಾಮಾಜಿಕ ಜಾಲತಾಣದಲ್ಲಿ 'ಚಿಕನ್ ಒಟ್ರಾಸಿ' ಎಂಬ ಹೊಸ ರುಚಿಯನ್ನೂ ನೋಡಿದೆ. ಬಹುಷಃ ಏನೋ ಕೋಳಿ ಐಟಮ್ ಮಾಡಲು ಹೋಗಿ ಅದು ಸರಿಯಾಗದ ಕಾರಣ ಅದಕ್ಕೆ ಒಟ್ರಾಸಿ ಎಂಬ ಹೆಸರು ಇರಿಸಿರಬೇಕು ಎನ್ನುವುದು ನನ್ನ ಅನಿಸಿಕೆ.
ಕ್ರಿಕೆಟ್ ಮೈದಾನದಲ್ಲೂ ಈ ಒಟ್ರಾಸಿ ಬಳಕೆಯಾಗುತ್ತದೆ. ಅವ ಎಂತ ಬೌಲಿಂಗ್ ಮಾಡಿದ್ದಾ. ಒಟ್ರಾಸಿ ಮೈದಾನದಲ್ಲಿ ವಾಹನದಲ್ಲೂ ಈ ಒಟ್ರಾಸಿ ಬರುತ್ತದೆ. ಅವ ಎಂತ ಮಾರ್ರೆ ಒಟ್ರಾಸಿ ಡ್ರೈವಿಂಗ್ ಮಾಡುವುದು. ಇಲ್ಲಿ ಅಡ್ಡಾ ದಿಡ್ಡಿಗೆ ಸಂವಾದಿಯಾಗಿ ಒಟ್ರಾಸಿ ಬಳಕೆಯಾಗಿದೆ.
ನಾನು ಇದರ ಮೂಲ ಮತ್ತು ಅರ್ಥ ಹುಡುಕ ಹೊರಟು ಒಟ್ರಾಸಿಯನ್ನು ಬಿಡಿಸಿದಾಗ ಒಟ್ಟು + ರಾಶಿ ಎಂದು ನನಗೆ ನಾನೇ ಖಚಿತಪಡಿಸಿಕೊಂಡಿದ್ದೆ. ಹೇಗೂ ಮೂಲ ಹುಡುಕಿದೆನಲ್ಲಾ ಎಂಬ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಕಪಾಟಿನಲ್ಲಿ ನನ್ನದೊಂದು ಕುರ್ತಾ ಹುಡುಕಿ ಹುಡುಕಿ ಸಿಗದೇ ಇದ್ದಾಗ ನನ್ನ ಪತ್ನಿಯನ್ನು ಕರೆದು ಕೇಳಿದೆ ' ನನ್ನ ನೀಲಿ ಕುರ್ತಾ ಎಲ್ಲಿದೆ..?' ಅವಳು ಬಂದು ಕಪಾಟು ನೋಡಿದ ಕೂಡಲೇ "ಇದೆಂತ ನೀವು ಒಟ್ರಾಸಿ ರಾಶಿ ಹಾಕಿದ್ದು" ಎಂದು ದಬಾಯಿಸಿದಳು. ಅವಳು ಬೈದದ್ದಕ್ಕೆ ಬೇಜಾರಾಗಲಿಲ್ಲ. ಅದು ಯಾವಾಗಲೂ ಇದ್ದದ್ದೇ ಅಲ್ವಾ...ಛೇ.. ನಾನು ಹುಡುಕಿದ ಒಟ್ರಾಸಿಯ ಮೂಲ ಮತ್ತು ಅರ್ಥ ಎರಡನ್ನೂ "ಒಟ್ರಾಸಿ ರಾಶಿ ಹಾಕಿದ್ದು" ಎನ್ನುವ ಮೂಲಕ ಅವಳು ಲಗಾಡಿ ತೆಗೆದದ್ದು ಮಾತ್ರ ಬೇಜಾರಾಯಿತು.
ಹೀಗೆ ಮಂಗಳೂರಿಗರ ಮನೆಯಲ್ಲಿ ಮಾರುಕಟ್ಟೆಯಲ್ಲಿ, ಅಂಗಡಿಯಲ್ಲಿ, ಪೇಟೆಯಲ್ಲಿ, ಶಾಲಾ- ಕಾಲೇಜುಗಳಲ್ಲಿ, ವಾಹನದಲ್ಲಿ, ಆಟದ ಮೈದಾನದಲ್ಲಿ, ರೌಡಿಗಳ ಜಗಳದಲ್ಲಿ ಎಲ್ಲೆಂದರಲ್ಲಿ ಒಟ್ರಾಸಿ ಇದ್ದೇ ಇದೆ. ಒಟ್ರಾಸಿ ಮಂಗಳೂರಿನ ಎಲ್ಲಾ ಜಾತಿ ಧರ್ಮ ಭಾಷೆ ಪಕ್ಷ ಪಂಗಡ ಎಲ್ಲರ ಬಾಯಲ್ಲಿಯೂ ಒಟ್ರಾಸಿ ನಲಿದಾಡುತ್ತಿರುತ್ತದೆ. ಅದಕ್ಕೆ ಸಮಯ ಸಂದರ್ಭ ಮತ್ತು ಸನ್ನಿವೇಶದ ಅಗತ್ಯವೇನೂ ಇಲ್ಲ.
(ಸೂಚನೆ: ನನಗೆ ವಾಟ್ಸಾಪಿನಲ್ಲಿ ಹಂಚಿಕೊಂಡು ಬಂದ ಬರಹ ಇದು. ಯಾರೋ ಮೂಲ ಲೇಖಕರ ಹೆಸರನ್ನು ಕತ್ತರಿಸಿ ಇದನ್ನು ಹಂಚಿದ್ದಾರೆ. ಮೂಲ ಲೇಖಕರ ಕ್ಷಮೆ ಕೋರಿ ನಾನು ಅದನ್ನು ಅಲ್ಪ ಸ್ವಲ್ಪ ಬದಲಾಯಿಸಿ (ಅಕ್ಷರ ತಪ್ಪುಗಳು ಹಾಗೂ ಕೆಲವೆಡೆ ವಾಕ್ಯ ರಚನೆಗಳು) ಪ್ರಕಟಿಸಿದ್ದೇನೆ. ಮೂಲ ಲೇಖಕರ ಹಾಸ್ಯ ಪ್ರಜ್ಞೆಗೆ ವಂದಿಸುತ್ತಾ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ)
ಅನಾಮಿಕ ಮೂಲದ ಬರಹ ಹಂಚಿದ್ದು : ಸಂತೋಷ್ ಕುಮಾರ್ ಎಸ್, ಸುರತ್ಕಲ್
ಚಿತ್ರ ಕೃಪೆ; 'ಶೇರ್ ಚಾಟ್' ಸಾಮಾಜಿಕ ಜಾಲ ತಾಣ