ಮಂಗಳೂರಿನಲ್ಲಿ ಮಾವು, ಹಲಸು ಮಾರಾಟ ಮೇಳ
ರಾಶಿರಾಶಿ ಸಿಹಿಸಿಹಿ ಮಾವು. ತಳಿಯ ಹೆಸರಿನಿಂದಲೇ ಬಾಯಿಯಲ್ಲಿ ನೀರೂರಿಸಬಲ್ಲ ರಸಭರಿತ ಮಾವಿನ ಹಣ್ಣುಗಳು. ಮಲ್ಲಿಕಾ, ಮಲ್ಗೋವಾ, ರಸಪುರಿ, ಬಾದಾಮಿ, ತೋತಾಪುರಿ, ದಶಹರಿ, ಕೇಸರ್, ದಿಲ್ ಪಸಂದ್, ಹಿಮಾಯತ್, ಅಲ್ಫೋನ್ಸಾ ತಳಿಗಳು. ಹಾಗೆಯೇ ಘಮಘಮ ಹಲಸಿನ ಹಣ್ಣು: ರುದ್ರಾಕ್ಷಿ, ಚಂದ್ರ ಹಾಗೂ ಸ್ಥಳೀಯ ತಳಿಗಳ ದೊಡ್ಡದೊಡ್ಡ ರಾಶಿಗಳು. ಇವನ್ನೆಲ್ಲ ಖರೀದಿಸಲು ಮುಗಿಬಿದ್ದ ಗ್ರಾಹಕರು.
ಇದು ಮಂಗಳೂರಿನ ಕದ್ರಿಪಾರ್ಕಿನಲ್ಲಿ ಮೇ ೧೯ರಿಂದ ಮೇ ೨೫, ೨೦೧೭ರ ವರೆಗೆ ಏಳು ದಿನಗಳಲ್ಲಿ ಸಂಜೆ ಕಂಡು ಬಂದ ನೋಟ: ಮಾವು ಮತ್ತು ಹಲಸು ಮಾರಾಟ ಮೇಳದಲ್ಲಿ. ಇದನ್ನು ಜಂಟಿಯಾಗಿ ಆಯೋಜಿಸಿದವರು: ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ಕೃಷಿ ವಿಜ್ನಾನ ಕೇಂದ್ರ, ಮಂಗಳೂರು.
ಕಳೆದ ವರುಷ ಮಂಗಳೂರು ನಗರದಿಂದ ೧೨ ಕಿಮೀ ದೂರದ ಪಿಲಿಕುಳ ನಿಸರ್ಗಧಾಮದಲ್ಲಿ ಈ ಮೇಳವನ್ನು ಸಂಘಟಿಸಲಾಗಿತ್ತು. ಜನರ ಅನುಕೂಲಕ್ಕಾಗಿ ಈ ವರುಷ ನಗರದ ಕದ್ರಿಪಾರ್ಕಿನಲ್ಲಿ ಜರಗಿಸಲಾಯಿತು.
ರೈತರಿಂದ ಗ್ರಾಹಕರಿಗೆ ನೇರ ಮಾರಾಟ ಈ ಮೇಳದ ವಿಶೇಷ. ದಕ್ಷಿಣ ಕನ್ನಡ ಜಿಲ್ಲೆಯ ಮತ್ತು ಹೊರಜಿಲ್ಲೆಗಳ ಬೆಳೆಗಾರರು ಇಲ್ಲಿ ಮಾರಾಟ ಮಳಿಗೆಗಳನ್ನು ತೆರೆದಿದ್ದಾರೆ. ದೂರದ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರು ಮಾರಾಟಕ್ಕೆ ತಂದಿರುವ ಮಾವು ಮತ್ತು ಹಲಸು ಈ ಮೇಳದ ಆಕರ್ಷಣೆ. ಈ ಜಿಲ್ಲೆಗಳ ರೈತರ ಸಾಗಾಟ ವೆಚ್ಚವನ್ನು ನಿಗಮ ಭರಿಸಿದೆ; ಅವರಿಗೆ ಉಚಿತ ಮಳಿಗೆ ಒದಗಿಸಿದೆ.
ಮಂಗಳೂರಿನ ನಾಗರಿಕರಿಗೆ ಮಾವು ಮತ್ತು ಹಲಸಿನ ವಿವಿಧ ತಳಿಗಳನ್ನು ಪರಿಚಯಿಸುವುದು ಮೇಳದ ಪ್ರಧಾನ ಉದ್ದೇಶ. ಜೊತೆಗೆ ಮಾವು, ಹಲಸು ಬೆಳೆಗಾರರು ತಮ್ಮ ಫಸಲನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ವೇದಿಕೆ ಒದಗಿಸುವುದು, ರಾಸಾಯನಿಕ ಬಳಸದೆ ಹಣ್ಣು ಮಾಡಿ ಗ್ರಾಹಕರಿಗೆ ಒದಗಿಸುವುದೂ ಮೇಳದ ಉದ್ದೇಶ ಎಂದು ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಎಲ್. ಗೋಪಾಲಕೃಷ್ಣ ಮಾಹಿತಿ ನೀಡಿದರು.
ದೊಡ್ಡಬಳ್ಳಾಪುರ ಜಿಲ್ಲೆಯ ತೋಟಗೆರೆ ಹಲಸು ಬೆಳೆಗಾರರ ಸಂಘದವರ ಹಲಸಿನ ಹಣ್ಣುಗಳು ಮತ್ತು ಕೋಲಾರದ ಶ್ರೀನಿವಾಸಪುರದ ಹೆಸರುವಾಸಿ ಮಾವಿನ ಹಣ್ಣುಗಳಿಗೆ ಮೇಳದಲ್ಲಿ ಭಾರಿ ಬೇಡಿಕೆ. ಅತ್ಯಂತ ಸಿಹಿಯಾದ ಹಿಮಾಯತ್ ಮಾವು, ಮಾವಿನ ವಿಧವಿಧದ ಜ್ಯೂಸ್, ಉಪ್ಪಿನಕಾಯಿ ಮತ್ತು ಮಾಂಬಳ, ಹಲಸಿನ ಹಪ್ಪಳ ಹಾಗೂ ಮಾಂಬಳ - ಇವೂ ಕೆಲವು ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಿದ್ದವು. ಶನಿವಾರ ಮತ್ತು ಭಾನುವಾರ ಮಾರಾಟ ಮೇಳಕ್ಕೆ ಬಂದವರು ಸಾವಿರಾರು ಜನರು. ಬಹುಪಾಲು ಮಳಿಗೆಗಳಲ್ಲಿ ಬಿರುಸಿನ ಮಾರಾಟ. ಅಂತೂ ಮಾವು ಮತ್ತು ಹಲಸಿನ ಮಾರಾಟ ಮೇಳದಿಂದಾಗಿ ಗ್ರಾಹಕರಿಗೆ ಸಿಹಿ, ಬೆಳೆಗಾರರಿಗೆ ಖುಷಿ.