ಮಂಗಳೂರಿನ ಮಣ್ಣಗುಡ್ಡೆ ಗುರ್ಜಿ – ೧೫೦ನೇ ವರುಷದ ಸಂಭ್ರಮ

ಮಂಗಳೂರಿನ ಮಣ್ಣಗುಡ್ಡೆ ಗುರ್ಜಿ – ೧೫೦ನೇ ವರುಷದ ಸಂಭ್ರಮ

ಮಂಗಳೂರಿನ ಜನಪ್ರಿಯ ಉತ್ಸವ “ಮಣ್ಣಗುಡ್ಡೆ ಗುರ್ಜಿ”. ಇದರ ೧೫೦ನೇ ವರುಷದ ಕಾರ್ಯಕ್ರಮಗಳು ಅದ್ದೂರಿಯಾಗಿ ಮುಕ್ತಾಯವಾದದ್ದು ೨೪ ನವಂಬರ್ ೨೦೧೯ರ ಭಾನುವಾರದಂದು. ಆ ದಿನ ಸಂಜೆಯಿಂದ ಮಣ್ಣಗುಡ್ಡೆ ಪರಿಸರದಲ್ಲಿ ಜನಸಾಗರ.
ಗುರ್ಜಿಯ ೧೫೦ನೇ ವರ್ಷಾಚರಣೆ ಅಂಗವಾಗಿ, ಯಕ್ಷಗಾನ, ತಾಳಮದ್ದಲೆ, ಹರಿಕಥೆ, ಸಂಗೀತ ಕಚೇರಿ, ಉಚಿತ ಆರೊಗ್ಯ ಶಿಬಿರ, ಆಯುರ್ವೇದ ಮತ್ತು ಮಳೆನೀರು ಕೊಯ್ಲು ಬಗ್ಗೆ ಉಪನ್ಯಾಸಗಳು, ಕ್ರಿಕೆಟ್ ಪಂದ್ಯಾಟ , ಕ್ರೀಡೋತ್ಸವ ಇತ್ಯಾದಿ ಜನೋಪಯೋಗಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನವರಿ ೨೦೧೯ರಿಂದ ತಿಂಗಳಿಗೊಂದರಂತೆ ಸಂಭ್ರಮದಿಂದ ಜರಗಿಸಲಾಯಿತು.
ಮಣ್ಣಗುಡ್ಡೆ ಮತ್ತು ಬಲ್ಲಾಳಬಾಗ್ ಎಂಬ ಎರಡು ಸ್ಥಳಗಳಲ್ಲಿ, ಮೂರು ರಸ್ತೆಗಳು ಕೂಡುವಲ್ಲಿ ಚಕ್ರವಿಲ್ಲದ ರಥಗಳನ್ನು ನಿರ್ಮಿಸುವುದು ಗುರ್ಜಿಯ ವಿಶೇಷ. ಈ ರಥಗಳಿಗೆ ಹೂಹಣ್ಣುತರಕಾರಿಗಳಿಂದ ಭರ್ಜರಿ ಅಲಂಕಾರ.  (ಗುರ್ಜಿಯ ಮನಮೋಹಕ ಅಲಂಕಾರದ ಫೋಟೋಗಳನ್ನು ಗಮನಿಸಿ.)
ಗುರ್ಜಿ ಎಂಬುದು ಮಂಗಳೂರಿನ ಹೃದಯಭಾಗವಾದ ಹಂಪನಕಟ್ಟೆಯ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ದೇವರ ದೀಪೋತ್ಸವದ ಜನಜನಿತ ಹೆಸರು. ಆ ದಿನ ಮುಸ್ಸಂಜೆ ಶರವು ದೇವಸ್ಥಾನದಿಂದ ಶ್ರೀ ಮಹಾಗಣಪತಿ ದೇವರ ಪುಟ್ಟಮೂರ್ತಿಯ ಮೆರವಣಿಗೆ ಸಣ್ಣರಥದಲ್ಲಿ ರಾತ್ರಿ ೭.೩೦ರ ಹೊತ್ತಿಗೆ ಹೊರಡುತ್ತದೆ. ನವಭಾರತ ವೃತ್ತ, ಡೊಂಗರಕೇರಿ, ರಥಬೀದಿ ಹಾದಿಯಲ್ಲಿ ಸಾಗಿ (ಮರುದಿನ) ಮುಂಜಾನೆ ೨ ಗಂಟೆಗೆ ಮಣ್ಣಗುಡ್ಡೆ ಗುರ್ಜಿ ತಲಪುತ್ತದೆ.
ಈ ಹಾದಿಯುದ್ದಕ್ಕೂ ದೇವರ ಮೂರ್ತಿಗೆ ಅಲ್ಲಲ್ಲಿ ಭಕ್ತಜನರಿಂದ ಪೂಜೆ. ಮಣ್ಣಗುಡ್ದೆಯಲ್ಲಿ ಗುರ್ಜಿಯಲ್ಲಿ ಶ್ರೀ ಮಹಾ ಗಣಪತಿ ದೇವರ ಮೂರ್ತಿಯನ್ನು ಕುಳ್ಳಿರಿಸಿ, ಪೂಜೆ ಸಲ್ಲಿಸಿದ ನಂತರ ಮಣ್ಣಗುಡ್ಡೆ ಪ್ರದೇಶದ ಮನೆಮನೆಯವರಿಂದ ಆರತಿ. ಬಳಿಕ, ದೇವರ ಮೆರವಣಿಗೆ ಅಲ್ಲಿಂದ ಹೊರಟು ಬಲ್ಲಾಳಬಾಗಿನ ಗುರ್ಜಿಗೆ ಪಯಣ. ಅಲ್ಲಿ ಮತ್ತೆ ದೇವರ ಮೂರ್ತಿಗೆ ಪೂಜೆ. ಅನಂತರ ದೇವರ ಮೆರವಣಿಗೆ ಶರವು ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಹಿಂತಿರುಗುತ್ತದೆ.
ಗುರ್ಜಿಯ ದಿನ ಮುಸ್ಸಂಜೆಯಿಂದಲೇ ಗುರ್ಜಿಯ ಎದುರು ಭಕ್ತರಿಂದ ಭಜನೆ ಶುರು. ಆರಂಭದಲ್ಲಿ ದೀಪಕ್ಕೆ ಸುತ್ತು ಬರುತ್ತ ಭಜನೆ ಮಾಡುವ ಭಕ್ತರು ಅನಂತರ ಕುಳಿತುಕೊಂಡು ಭಜನೆ ಮುಂದುವರಿಸುತ್ತಾರೆ. ಅಲ್ಲಿಗೆ ದೇವರ ಮೆರವಣಿಗೆ ಬರುವ ತನಕ ಚಂಡೆವಾದನ ಮತ್ತು ಸಂಗೀತ ಕಚೇರಿ ಜರಗುತ್ತವೆ.
ಅಂದು ಶ್ರೀ ಮಹಾಗಣಪತಿ ದೇವರ ಮೆರವಣಿಗೆ ಬರುವ ಹಾದಿಯುದ್ದಕ್ಕೂ ಅಂಗಡಿಸಾಲುಗಳು. ಅಲ್ಲೆಲ್ಲ ನಿತ್ಯೋಪಯೋಗಿ ವಸ್ತುಗಳು, ಮಕ್ಕಳ ಆಟಿಕೆಗಳು, ತಿಂಡಿತಿನಿಸುಗಳ ಬಿಡುವಿಲ್ಲದ ಮಾರಾಟ. ಅವುಗಳ ಖರೀದಿಗೆ ಮುಗಿಬೀಳುವ ಜನರು. ಜೊತೆಗೆ, ಆ ಹಾದಿಯುದ್ದಕ್ಕೂ ಅಲ್ಲಲ್ಲಿ ವೇದಿಕೆಗಳು. ಅವುಗಳಲ್ಲಿ ಮುಸ್ಸಂಜೆಯಿಂದ ಮರುದಿನ ಮುಂಜಾನೆ ವರೆಗೆ ಸಂಗೀತ, ನೃತ್ಯ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು. ಮಂಗಳೂರಿನವರಿಗೆ ಗುರ್ಜಿ ಎಂಬುದೊಂದು ಸಂಭ್ರಮದ ಉತ್ಸವ.
ದಿ. ವಾದಿರಾಜರಿಂದ ೧೮೭೦ನೇ ಇಸವಿ ಕಾರ್ತಿಕ ಮಾಸದ ಕೃಷ್ಣ ಪಕ್ಷದ ದ್ವಾದಶಿಯಂದು ಆರಂಭವಾದ ಈ   ವಿಶಿಷ್ಠ ಉತ್ಸವಕ್ಕೆ ೧೫೦ ವರುಷಗಳ ಇತಿಹಾಸ. “ದಿಂಡು” ಎಂದೂ ಕರೆಯಲಾಗುವ ಇದನ್ನು ಮಣ್ಣಗುಡ್ಡೆ ಮತ್ತು ಬಲ್ಲಾಳಬಾಗಿನ ಗುರ್ಜಿ ಸೇವಾ ಸಮಿತಿಗಳು ಸಂಘಟಿಸುತ್ತಿವೆ. ಗುರ್ಜಿಯ ಮರುದಿನ ಅದರ ಅಲಂಕಾರಕ್ಕೆ ಬಳಸಿದ ಹಣ್ಣುತರಕಾರಿಗಳ ಏಲಂ. ಮಾವು, ಹಲಸು, ಅನಾನಸ್, ಪಪ್ಪಾಯಿ, ಬಾಳೆ, ಸೇಬು, ಅಡಿಕೆ, ತೆಂಗು ಇತ್ಯಾದಿ ಭೂಮಿತಾಯಿಯ ಕೊಡುಗೆಗಳು ಅಪರೂಪದ್ದಾಗಿದ್ದರೆ ಏಲಂನಲ್ಲಿ ಅತ್ಯಧಿಕ ಬೆಲೆಗೆ ಅವುಗಳ ಮಾರಾಟ.
ಗುರ್ಜಿಯ ಹೂಹಣ್ಣುತರಕಾರಿಯ ಅಲಂಕಾರ ನೋಡಿದರೆ ಏನನಿಸುತ್ತದೆ? ಇದು ಪ್ರಕೃತಿ ನಮಗೆ ಕರುಣಿಸಿದ ಹೂಹಣ್ಣು ತರಕಾರಿಗಳ ಮೊದಲ ಕೊಯ್ಲಿನ ಭಾಗವನ್ನು ದೇವರಿಗೆ ಅರ್ಪಿಸುವ ಆಚರಣೆ ಎಂದು. ಭೂಮಿತಾಯಿಯ ಅಪಾರ  ಕರುಣೆಗೆ ಮನುಷ್ಯ ಸದಾ ಶರಣಾಗಬೇಕು ಎಂಬ ದೊಡ್ಡ ಪಾಠ ಈ ಆಚರಣೆಯಲ್ಲಿದೆ.