ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜು: ೧೫೨ನೇ ವರುಷದ ಸಂಭ್ರಮ
ಮಂಗಳೂರಿನ ಪ್ರಸಿದ್ಧ ಕಾಲೇಜುಗಳು ಎಂದಾಗ ನೆನಪಿಗೆ ಬರುವ ಹೆಸರುಗಳಲ್ಲಿ ಮುಖ್ಯವಾದದ್ದು, ಇಲ್ಲಿನ ಕೇಂದ್ರಭಾಗವಾದ ಹಂಪನಕಟ್ಟೆಯಲ್ಲಿರುವ "ಗವರ್ನಮೆಂಟ್ ಕಾಲೇಜು". ಇದು ೧೯೯೩ರಲ್ಲಿ “ಯುನಿವರ್ಸಿಟಿ ಕಾಲೇಜ್” ಆಗಿ ಪರಿವರ್ತನೆಗೊಂಡಿದ್ದರೂ, ನನ್ನಂತಹ ಹಳೆಯ ತಲೆಮಾರಿನವರಿಗೆ ಆ ಕಾಲೇಜಿನ ಪ್ರಸ್ತಾಪ ಮಾಡುವಾಗಲೆಲ್ಲ ಬಾಯಿಗೆ ಬರುವ ಹೆಸರು ಗವರ್ನಮೆಂಟ್ ಕಾಲೇಜ್.
ಈ ಕಾಲೇಜಿಗೆ ಇದೀಗ ೧೫೦ ಸಾರ್ಥಕ ವರುಷಗಳ ಸಂಭ್ರಮ. ೬ ಫೆಬ್ರವರಿ ೨೦೨೦ರಂದು ಕಾಲೇಜಿಗೆ ೧೫೦ ವರುಷ ತುಂಬಿದ್ದನ್ನು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು. ಆ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ವಸ್ತುಪ್ರದರ್ಶನವಂತೂ ಜನಮನ ಗೆದ್ದಿತು. ಸಂದರ್ಶಕರ ದಟ್ಟಣೆಯಿಂದಾಗಿ ಅದನ್ನು ಕೆಲವು ದಿನ ವಿಸ್ತರಿಸಬೇಕಾಯಿತು.
ನೂರೈವತ್ತು ವರುಷಗಳ ಮುಂಚೆ, ೧೮೬೦ರ ಆಸುಪಾಸಿನಲ್ಲಿ, ದಕ್ಷಿಣಕನ್ನಡದ ವಿದ್ಯಾಕಾಂಕ್ಷಿಗಳು ಪದವಿ ಶಿಕ್ಷಣಕ್ಕಾಗಿ ಪೂರ್ವ ಕರಾವಳಿಯ ಚೆನ್ನೈಗೆ (ಆಗಿನ ಮದರಾಸಿಗೆ) ಹೋಗಬೇಕಾಗಿತ್ತು. ಹಾಗಾಗಿ ಜನಸಾಮಾನ್ಯರಿಗೆ ಪದವಿ ಶಿಕ್ಷಣ ಕೈಗೆಟುಕದಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಇಲ್ಲಿನ ಜನಪರ ಚಿಂತನೆಯ ಹಲವರು ಒಗ್ಗೂಡಿ ಸಾರ್ವಜನಿಕರಿಂದ ರೂ.೬೫,೦೦೦ ದೇಣಿಗೆ ಸಂಗ್ರಹಿಸಿದರು. ಆ ನಿಧಿಯನ್ನು ಅಂದಿನ ಮದರಾಸು ಸರಕಾರಕ್ಕೆ ನೀಡಿ, ಪಶ್ಚಿಮ ಕರಾವಳಿಯ ಪ್ರಮುಖ ನಗರವಾದ ಮಂಗಳೂರಿಗೆ ಕಾಲೇಜೊಂದನ್ನು ಮಂಜೂರು ಮಾಡಬೇಕೆಂದು ಆಗ್ರಹಿಸಿದರು. ಅವರ ಪ್ರಯತ್ನದ ಫಲವಾಗಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಖ್ಯಸ್ಥರಾಗಿದ್ದ ಪಾವೆಲ್ ಅವರು ಕಾಲೇಜನ್ನು ಮಂಜೂರು ಮಾಡಿದರು.
ಈಗ, ಕಾಲೇಜಿಗೆ ೧೫೦ ವರುಷ ತುಂಬಿದ ಹೊತ್ತಿನಲ್ಲಿ ನಾವು ನೆನೆಯಬೇಕಾದ ಆ ಹಿರಿಯರು: ಶ್ರೀನಿವಾಸ ರಾವ್, ಎಂ. ರಾಮಪ್ಪ. ಎನ್. ಗುಂಡೂ ರಾವ್, ರಾಮಚಂದ್ರಯ್ಯ, ಎನ್. ತಿಮ್ಮಪ್ಪಯ್ಯ, ಸಾದಾತ್ ಖಾನ್, ಸಿ. ರಂಗಪ್ಪ, ನಾರಾಯಣ ಪೈ, ಮುತ್ತುಸ್ವಾಮಿ ಅಯ್ಯರ್. ಅನಂತರದ ಒಂದೂವರೆ ಶತಮಾನದ ಅವಧಿಯಲ್ಲಿ ಸಾವಿರಾರು ವಿದ್ಯಾಕಾಂಕ್ಷಿಗಳ ಪದವಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣದ ಕನಸು ನನಸಾಗಲು ಈ ಹಿರಿಯರ ಮುಂದಾಲೋಚನೆ ಹಾಗೂ ಮುತುವರ್ಜಿಯೇ ಕಾರಣ ಎಂಬುದನ್ನು ನೆನಪಿಟ್ಟುಕೊಳ್ಳೋಣ.
೧೮೬೮ರಲ್ಲಿ ಹೊಸ ಕಾಲೇಜು ಶುರುವಾದಾಗ ಇಲ್ಲಿದ್ದ ವಿದ್ಯಾರ್ಥಿಗಳ ಸಂಖೆ ೩೧೫. ಅನಂತರ ಕಾಲೇಜು ಜನಪ್ರಿಯವಾದಂತೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿತು. ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಾಣವಾದದ್ದು ೧೮೭೦ರಲ್ಲಿ. ಬಳಿಕ ೧೮೭೯ರಲ್ಲಿ ಇದನ್ನು ಸರಕಾರಿ ಕಾಲೇಜು - ಮಂಗಳೂರು ಎಂದು ಹೆಸರಿಸಲಾಯಿತು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ, ೧೯೪೮ರಲ್ಲಿ ಈ ಕಾಲೇಜು ಪ್ರಥಮ ದರ್ಜೆಗೇರಿತು. ತದನಂತರ, ೧೯೯೩ರಲ್ಲಿ ಇದರ ಆಡಳಿತವನ್ನು ಮಂಗಳೂರು ವಿಶ್ವವಿದ್ಯಾಲಯ ವಹಿಸಿಕೊಂಡಾಗಿನಿಂದ ಇದಕ್ಕೆ ವಿಶ್ವವಿದ್ಯಾಲಯ ಕಾಲೇಜು ಎಂದು ಪುನರ್ ನಾಮಕರಣ.
ಈ ಕಾಲೇಜಿನ ಪ್ರಗತಿಗೆ ವಿಶೇಷ ಕೊಡುಗೆ ನೀಡಿದವರು ೧೯೨೦ರಲ್ಲಿ ಪ್ರಿನ್ಸಿಪಾಲರಾಗಿ ನೇಮಕವಾದ ಗೋವಿಂದ ಕೃಷ್ಣ ಚೆಟ್ಟೂರ್. ಅವರಲ್ಲದೆ, ಅನೇಕ ಪ್ರಾಂಶುಪಾಲರು ಈ ಕಾಲೇಜು ಪ್ರಗತಿ ಹೊಂದಲು ಶ್ರದ್ದೆಯಿಂದ ದುಡಿದಿದ್ದಾರೆ.
ಈಗ ವಿಶ್ವವಿದ್ಯಾಲಯ ಕಾಲೇಜಿನ ೪ ಸ್ನಾತಕ ಮತ್ತು ೫ ಸ್ನಾತಕೋತ್ತರ ವಿಭಾಗಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ೧,೮೦೦. ಇನ್ನಷ್ಟು ವಿದ್ಯಾಕಾಂಕ್ಷಿಗಳಿಗೆ ಅಧ್ಯಯನದ ಅವಕಾಶ ಒದಗಿಸಲಿಕ್ಕಾಗಿ ೨೦೧೬ರಲ್ಲಿ ಸಂಧ್ಯಾ ಕಾಲೇಜನ್ನು ಆರಂಭಿಸಲಾಯಿತು. ಇಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಬೇರೆಬೇರೆ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಅನೇಕರು ಉನ್ನತ ಹುದ್ದೆಗಳಿಗೇರಿದ್ದಾರೆ.
ವಿಶ್ವವಿದ್ಯಾಲಯ ಕಾಲೇಜಿನ ಹಳೆಯ ವಿನ್ಯಾಸದ ಕೆಂಪು ಬಣ್ಣದ ಕಟ್ಟಡದ ನೆನಪು ಇಲ್ಲಿನ ವಿದ್ಯಾರ್ಥಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಸಪ್ಟಂಬರ್ ೨೦೧೫ರಲ್ಲಿ ಈ ಪುರಾತನ ಕಟ್ಟಡವನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಪಾರಂಪರಿಕ ಕಟ್ಟಡವೆಂದು ಘೋಷಿಸಿ, ಅದರ ಪುನರುಜ್ಜೀವನಕ್ಕಾಗಿ ರೂ.೧.೮೩ ಕೋಟಿ ವಿಶೇಷ ಅನುದಾನ ನೀಡಿತು. ಈ ಕಾಲೇಜಿಗೆ ವಿಶ್ವಕವಿ ರಬೀಂದ್ರನಾಥ ಟಾಗೋರ್ ೧೯೨೨ರಲ್ಲಿ ಭೇಟಿ ನೀಡಿದ್ದರು. ಅದರ ನೆನಪಿಗಾಗಿ ನಿರ್ಮಿಸಲಾದ ಭವನ "ಅಕಾಡೆಮಿ ಹಾಲ್”. ಇದಕ್ಕೆ ೧೯೯೬ರಲ್ಲಿ "ರವೀಂದ್ರ ಕಲಾಭವನ” ಎಂದು ಪುನರ್ ನಾಮಕರಣ.
೧೫೦ ವರುಷಗಳ ಇತಿಹಾಸ ಹೊಂದಿದ ಈ ವಿದ್ಯಾಸಂಸ್ಥೆ ಹಲವಾರು ವ್ಯಕ್ತಿಗಳ ಬದುಕು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿತು. ಇಲ್ಲಿ ಪಡೆದ ಶಿಕ್ಷಣದಿಂದಾಗಿ ಬದುಕು ಕಟ್ಟಿಕೊಂಡವರು ಲಕ್ಷಾಂತರ ಜನರು. ಹಾಗೆಯೇ, ಇಲ್ಲಿ ಲಭಿಸಿದ ಗುಣಮಟ್ಟದ ಶಿಕ್ಷಣದ ಬಲದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಉತ್ತುಂಗಕ್ಕೆ ಏರಿದವರೂ ಹಲವರು. ಡಾ. ಶಿವರಾಮ ಕಾರಂತ, ಮಂಜೇಶ್ವರ ಗೋವಿಂದ ಪೈ, ಪಂಜೆ ಮಂಗೇಶ ರಾವ್, ವೈಕುಂಠ ಬಾಳಿಗ, ಎ.ಬಿ.ಶೆಟ್ಟಿ, ಯು.ಪಿ.ಮಲ್ಯ, ಕಮಲಾದೇವಿ ಚಟ್ಟೋಪಾಧ್ಯಾಯ, ಪಿ.ಎಂ. ಸಯೀದ್, ಡಾ.ಎಂ.ವಿ.ಕಾಮತ್, ಸಂತೋಷ್ ಕುಮಾರ್ ಗುಲ್ವಾಡಿ, ಡಾ.ಮನಮೋಹನ ಅತ್ತಾವರ, ಎಂ.ಎಸ್. ಕೃಷ್ಣ ಭಟ್, ಡಾ.ದಯಾನಂದ ಪೈ ಅಂತಹ ಸಾಧಕರಲ್ಲಿ ಕೆಲವರು.
ವಿಶ್ವವಿದ್ಯಾಲಯ ಕಾಲೇಜಿನ ಪ್ರಗತಿಗೆ ಇಲ್ಲಿನ ಹಳೆ ವಿದ್ಯಾರ್ಥಿಗಳ ಸಂಘ ಕೊಡುಗೆ ಸಲ್ಲಿಸುತ್ತಿದೆ. ೧೫೦ನೇ ವರುಷದ ಸಂಭ್ರಮಾಚರಣೆಯಂದು ದೂರದೂರದೂರುಗಳಿಂದ ಬಂದ ಸಾವಿರಾರು ಹಳೆ ವಿದ್ಯಾರ್ಥಿಗಳು, ಹಲವಾರು ದಶಕಗಳ ನಂತರ ತಮ್ಮ ಹಳೆಯ ಸಹಪಾಠಿಗಳನ್ನೂ, ಪ್ರಾಧ್ಯಾಪಕರನ್ನೂ ಮತ್ತೆ ಭೇಟಿಯಾಗಿ, ಕಣ್ಮನ ತುಂಬಿಕೊಂಡರು.