ಮಂಗಳೂರಿನ ಹಂಚಿನ ಕಾರ್ಖಾನೆಗಳು - ಗತಕಾಲದ ಪಳೆಯುಳಿಕೆಗಳು
ಬಾಲ್ಯದಲ್ಲಿ ಮಂಗಳೂರಿನ ಬೋಳೂರಿನಲ್ಲಿ ಬೆಳೆದವನು ನಾನು. ಮನೆಯಿಂದ ಬೊಕ್ಕಪಟ್ಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಸ್ತೆ ಪಕ್ಕದಲ್ಲಿ ನಡೆದು ಹೋಗುತ್ತಿದ್ದಾಗ ನೇತ್ರಾವತಿ ನದಿ ದಡದ ಉದ್ದಕ್ಕೂ ಹಲವು ಹಂಚಿನ ಕಾರ್ಖಾನೆಗಳು.
ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರವಾಗಿದ್ದ ಮಂಗಳೂರನ್ನು ಹಂಚಿನ ಕಾರ್ಖಾನೆಗಳಿಲ್ಲದೆ ಕಲ್ಪಿಸುವುದೇ ಅಸಾಧ್ಯವಾಗಿತ್ತು. ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದ್ದ ಹಂಚಿನ ಕಾರ್ಖಾನೆಗಳು, ಜಿಲ್ಲೆಯ ಆರ್ಥಿಕತೆಗೂ ಊರುಗೋಲಾಗಿದ್ದವು.
ಪ್ರತಿಯೊಂದು ಹಂಚಿನ ಕಾರ್ಖಾನೆಯಲ್ಲಿಯೂ ಇಟ್ಟಿಗೆಯಿಂದ ಕಟ್ಟಲಾದ ಸುಮಾರು 100 ಅಡಿ ಎತ್ತರದ ಒಂದು “ಚಿಮಿಣಿ” ಇರುತ್ತಿತ್ತು. ಹಸಿ ಆವೆ ಮಣ್ಣಿನಿಂದ ಮಾಡಿದ ಹಂಚು, ಇಟ್ಟಿಗೆ ಇತ್ಯಾದಿಗಳನ್ನು ಕಟ್ಟಿಗೆಯಿಂದ ಸುಡುವಾಗ, ಆ ಚಿಮಿಣಿಯ ಮೂಲಕ ಹೊಗೆ ಆಕಾಶಕ್ಕೆ ಏರಿ ಹೋಗುತ್ತಿತ್ತು.
ಈಗ ಉತ್ತರದ ಬೈಂದೂರಿನಿಂದ ದಕ್ಷಿಣದ ಮಲಬಾರಿನ ವರೆಗೆ ದಿಗಂತವನ್ನು ಗಮನಿಸುತ್ತಾ ರಸ್ತೆಯಲ್ಲಿ ಸಾಗಿದರೆ ಕೆಲವೇ ಕೆಲವು ಚಿಮಿಣಿಗಳು ಕಾಣಿಸುತ್ತವೆ. ಉಳಿದ ಚಿಮಿಣಿಗಳು ಏನಾದವು? ಕೆಲವು ಕುಸಿಯುತ್ತಿವೆ, ಇನ್ನು ಕೆಲವು ಕುಸಿದು ಮಣ್ಣಾಗಿ ಹೋಗಿವೆ.
ಈ ಚಿಮಿಣಿಗಳ, ಅವುಗಳ ಹಂಚಿನ ಕಾರ್ಖಾನೆಗಳ ಚರಿತ್ರೆಯನ್ನು ಬೆಂಬತ್ತಿದರೆ ರೋಚಕ ಕತೆಗಳು ಸಿಗುತ್ತವೆ. ಅದೊಂದು ಕಾಲದಲ್ಲಿ, ಈ ಚಿಮಿಣಿಗಳು ಕರ್ನಾಟಕ ಮತ್ತು ಕೇರಳದ ಪಶ್ಚಿಮ ತೀರ ಮತ್ತು ಯುರೋಪ್ ಹಾಗೂ ಅರೇಬಿಯನ್ ಸಮುದ್ರದ ಹಲವು ದೇಶಗಳ ನಡುವಣ ವಾಣಿಜ್ಯವ್ಯವಹಾರಗಳ ಜಾಲದ ಸಂಕೇತವಾಗಿದ್ದವು. ಆ ಜಾಲ ವುಟೆನ್‌ಬರ್ಗ್ ಮತ್ತು ಬಾಸೆಲ್‌ನಿಂದ ಮಂಗಳೂರು ಮೂಲಕ ದೂರದ ಮೆಲ್ಬೋರ್ನ್ ವರೆಗೆ ವ್ಯಾಪಿಸಿತ್ತು!
ಮಂಗಳೂರಿನಲ್ಲಿ 1865ರಲ್ಲಿ ಹಂಚಿನ ಕಾರ್ಖಾನೆಗಳನ್ನು ಸ್ಥಾಪಿಸಿದ್ದು ಬಾಸೆಲ್ ಮಿಷನ್ ಎಂಬ ಸ್ವಿಸ್-ಜರ್ಮನ್ ಸಂಸ್ಥೆ. ದಕ್ಷಿಣ ಭಾರತದಲ್ಲಿ 1834ರಿಂದಲೇ ಸಕ್ರಿಯವಾಗಿದ್ದ ಈ ಕ್ರಿಶ್ಚನ್ ಮಿಷನರಿ ಸೊಸೈಟಿ, ಹಂಚಿನ ಕಾರ್ಖಾನೆಗಳ ಜೊತೆಗೆ, ಮುದ್ರಣ ಮತ್ತು ನೇಕಾರಿಕೆ ಉದ್ಯಮವನ್ನೂ ಶುರು ಮಾಡಿತು. ಇವೆಲ್ಲದರ ಉದ್ದೇಶ ಇಲ್ಲಿನ ಜನರಿಗೆ ಉದ್ಯೋಗವಕಾಶ ಒದಗಿಸುವುದು ಮತ್ತು ಆ ಮೂಲಕ ಅವರನ್ನು ಕ್ರೈಸ್ತ ಮತಕ್ಕೆ ಮತಾಂತರಗೊಳ್ಳಲು ಪ್ರೇರೇಪಿಸುವುದು ಆಗಿತ್ತು.
ಕರಾವಳಿಯಲ್ಲಿ ಹಂಚಿನ ಉದ್ಯಮ ಬೆಳೆಯಲು ಜಾರ್ಜ್ ಪ್ಲೆಬ್ಸ್ಟ್ (1823 - 1888) ಎಂಬ ಜರ್ಮನ್ ಮಿಷನರಿ ಇಂಜಿನಿಯರನ ಕೊಡುಗೆ ಪ್ರಧಾನವಾಗಿತ್ತು. ತನ್ನ ಅನಾರೋಗ್ಯದ ಚಿಕಿತ್ಸೆಗಾಗಿ ಆತ ಆಗಾಗ ಯುರೋಪಿಗೆ ಹೋಗಬೇಕಾಗುತ್ತಿತ್ತು. ಆಗೆಲ್ಲ ಆತ ದಕ್ಷಿಣ ಭಾರತದ ಆವೆಮಣ್ಣಿನ ಮಾದರಿಯನ್ನು ಯುರೋಪಿಗೆ ಒಯ್ದು ಅದನ್ನು ಅಲ್ಲಿ ಪರೀಕ್ಷಿಸುತ್ತಿದ್ದ. ಜೊತೆಗೆ, ಯುರೋಪಿನಲ್ಲಿ ಹಂಚು ಉತ್ಪಾದನಾ ತಂತ್ರಜ್ನಾನವನ್ನು ಅಧ್ಯಯನ ಮಾಡುತ್ತಿದ್ದ.
ಫ್ರಾನ್ಸಿನಲ್ಲಿ ಪೇಟೆಂಟ್ ಮಾಡಲಾದ ಹಂಚಿನ ವಿನ್ಯಾಸಗಳಿಗೆ ಹೋಲಿಸಿದಾಗ, ಮಂಗಳೂರಿನ ಇಂಟರ್-ಲಾಕಿಂಗ್ ಬಾಸೆಲ್ ಮಿಷನ್ ಹಂಚುಗಳು ಅಲ್‌ಸೇಸ್‌ನಲ್ಲಿ (1841) ಪೇಟೆಂಟ್ ಮಾಡಲಾದ ಗಿಲಾರ್ಡೋನಿ ಹಂಚುಗಳನ್ನು ಹೋಲುತ್ತವೆ ಎಂದು ಕಂಡು ಬರುತ್ತದೆ. ಅನಂತರದ ಮಂಗಳೂರು ಹಂಚುಗಳ ವಿನ್ಯಾಸವು ಮಾರ್-ಸೆಲ್ಲಿ ಹಂಚುಗಳ ವಿನ್ಯಾಸವನ್ನು ಹೋಲುತ್ತವೆ.
ಅಂತೂ ಮಂಗಳೂರು ಹಂಚಿನ ಉದ್ಯಮ ಎಲ್ಲರ ನಿರೀಕ್ಷಗಳನ್ನು ಮೀರಿ ವೇಗವಾಗಿ ಬೆಳೆಯಿತು. ದಕ್ಷಿಣ ಭಾರತದ ಉದ್ದಗಲದಲ್ಲಿ ಮಾತ್ರವಲ್ಲ, ಹಿಂದೂ ಮಹಾಸಾಗರದ ಹಲವು ದೇಶಗಳಲ್ಲಿ ಮನೆಗಳ ಚಾವಣಿಗಾಗಿ ಮಂಗಳೂರು ಹಂಚುಗಳ
ಬಳಕೆ ಶುರುವಾಯಿತು. ಆ ಎಲ್ಲ ಪ್ರದೇಶಗಳಲ್ಲಿ ಮನೆ ನಿರ್ಮಾಣಕ್ಕೆ ಕೈಗಾರಿಕಾ ಉತ್ಪನ್ನವೊಂದನ್ನು ಬಳಸಿದ್ದು ಅದೇ ಮೊದಲು. ಅರೇಬಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರದಲ್ಲಿ ಸಂಚರಿಸುತ್ತಿದ್ದ ಹಡಗುಗಳು, ಮಂಗಳೂರು ಹಂಚನ್ನು ಸಾಂಬಾರ ಪದಾರ್ಥಗಳು ಇತ್ಯಾದಿಗಳಿಗೆ ಬದಲಾಗಿ ವಿನಿಮಯ ಮಾಡಿಕೊಳ್ಳತೊಡಗಿದವು. ಕೊನೆಗೆ, ಬ್ರಿಟಿಷರು ಬಾಸೆಲ್ ಮಿಷನ್ ಇಂಡಸ್ಟ್ರೀಸ್‌ನ ನಿಯಂತ್ರಣ ಪಡೆದರು. ಭಾರತಕ್ಕೆ ಸ್ವಾತಂತ್ರ್ಯ ಬಂದು ಮೂವತ್ತು ವರುಷಗಳ ನಂತರ 1977ರಲ್ಲಿ ಆ ಉದ್ಯಮ ಭಾರತೀಯರ ಒಡೆತನಕ್ಕೆ ಸೇರಿತು.
ಮಂಗಳೂರು ಹಂಚಿನದು ಸ್ಥಳೀಯ ಸಂಪನ್ಮೂಲ ಮತ್ತು ವಿದೇಶೀ ಅವಕಾಶವಾದ ಮೇಳೈಸಿದ ಚರಿತ್ರೆ. ಇಲ್ಲಿನ ನದಿ ದಡಗಳ ಆವೆಮಣ್ಣು ಮತ್ತು ಇಲ್ಲಿನ ಕಾಡುಗಳ ಕಟ್ಟಿಗೆ ಬಳಸಿ ಉತ್ಪಾದಿಸಿದ ಮಂಗಳೂರು ಹಂಚುಗಳು ಮನೆಗಳ ಚಾವಣಿ ರೂಪಿಸಿ, ಮನೆಗಳ ಒಳಗೆ ಉರಿಬಿಸಿಲು ಮತ್ತು ಬಿರುಮಳೆಯಿಂದ ರಕ್ಷಣೆ ಒದಗಿಸಿದವು. ಆದರೆ, ಒಂದೂವರೆ ಶತಮಾನದ ಅವಧಿ ಇಲ್ಲಿನ ಸಿಲಿಕಾಭರಿತ ಮಣ್ಣು ಮತ್ತು ಕಟ್ಟೆಗೆಯನ್ನು ಮಿತಿಮೀರಿ ಉಪಯೋಗಿಸಿದ ಕಾರಣ, ಕೊನೆಕೊನೆಗೆ ಸಂಪನ್ಮೂಲಗಳ ಕೊರತೆಯಿಂದ ಹಂಚಿನ ಉದ್ಯಮ ನಲುಗಿತು.
1865ರಿಂದ 1905ರ ವರೆಗಿನ ಅವಧಿಯಲ್ಲಿ, ಏಳು ಬಾಸೆಲ್ ಮಿಷನ್ ಹಂಚಿನ ಕಾರ್ಖಾನೆಗಳನ್ನು ಮಲಬಾರ್ ಮತ್ತು ದಕ್ಷಿಣ ಕನ್ನಡದಲ್ಲಿ ಸ್ಥಾಪಿಸಲಾಯಿತು. ಅವುಗಳಲ್ಲಿ ಈಗ ಕಾರ್ಯಾಚರಿಸುತ್ತಿರುವುದು ಮೂರು ಮಾತ್ರ. ಉಳಿದ ನಾಲ್ಕು ಹಂಚಿನ ಕಾರ್ಖಾನೆಗಳು ಮುಚ್ಚಿವೆ. ಸ್ಥಳೀಯ ಉದ್ಯಮಶೀಲರು ಸ್ಥಾಪಿಸಿದ ನೂರಾರು ಹಂಚಿನ ಕಾರ್ಖಾನೆಗಳೂ ಮುಚ್ಚಿವೆ. ಇದಕ್ಕೆ ಪ್ರಧಾನ ಕಾರಣ ಮಂಗಳೂರು ಹಂಚಿಗೆ ಕುಸಿದ ಬೇಡಿಕೆ ಮತ್ತು ಸಂಪನ್ಮೂಲಗಳ ಕೊರತೆ.
ಹಂಚಿಗೆ ಬೇಡಿಕೆ ಕುಸಿಯುತ್ತಿದ್ದರೂ, ಆವೆ ಮಣ್ಣಿನ ಇತರ ಉತ್ಪನ್ನಗಳಿಗೂ ಟೆರಕೋಟಾ ಉತ್ಪನ್ನಗಳಿಗೂ ಮುಖ್ಯವಾಗಿ ನಗರಗಳಲ್ಲಿ ಈಗಲೂ ಬೇಡಿಕೆ ಇದೆ. ಉದಾಹರಣೆಗೆ, ಇಟ್ಟಿಗೆ, ಕುಂಡಗಳು, ನೆಲಕ್ಕೆ ಹಾಸುವ ಹಂಚುಗಳು, ವಿವಿಧ ಅಲಂಕಾರಿಕ ಹಂಚುಗಳು, ಪೈಪುಗಳು, ಗಾಳಿಯಾಡುವ ಜಾಲರಿಗಳು, ತುಳಸಿ ಕಟ್ಟೆಗಳು, ಪಾತ್ರೆಗಳು, ಹೂಜೆಗಳು ಇತ್ಯಾದಿ.
ಇವನ್ನೆಲ್ಲ ಉತ್ಪಾದಿಸುವ ಪಾರಂಪರಿಕ ಜ್ನಾನಕ್ಕೆ ಬೆಲೆ ಕಟ್ಟಲಾಗದು. ಇವನ್ನು ಉತ್ಪಾದಿಸುವ ಹಂಚಿನ ಕಾರ್ಖಾನೆಗಳು ಆ ಜ್ನಾವನಿಧಿಯನ್ನು ಉಳಿಸಿಕೊಳ್ಳುವ ಕೊಂಡಿಗಳಾಗಿವೆ. ಕರಾವಳಿಯ ದಿಗಂತದಲ್ಲಿ ಕಾಣಿಸುತ್ತಿರುವ ಹಂಚಿನ ಕಾರ್ಖಾನೆಗಳ ಕೆಲವೇ ಕೆಲವು ಚಿಮಿಣಿಗಳು ಗತಕಾಲದ ದೊಡ್ಡ ಉದ್ಯಮವೊಂದರ ಪಳೆಯುಳಿಕೆಗಳಾಗಿ ಉಳಿದಿವೆ.
ಫೋಟೋ 1: ಮಂಗಳೂರಿನ ಹಂಚಿನ ಕಾರ್ಖಾನೆಯೊಂದರ ನೋಟ …. ಕೃಪೆ: ಆರ್ಕಿಟೆಕ್ಚರಲ್ ಡೈಜೆಸ್ಟ್.ಇನ್
ಫೋಟೋ 2: ಮಂಗಳೂರಿನ ಹಂಚಿನ ಕಾರ್ಖಾನೆಯ ಚಿಮಿಣಿ …. ಕೃಪೆ: ಆರ್ಕಿ-ಟೆಕ್ಸರ್ಸ್.ನೆಟ್
ಫೋಟೋ 3: ಮಂಗಳೂರು ಹಂಚುಗಳು …. ಕೃಪೆ: ಸಿವಿಲ್ ಸೂತ್ರಾಸ್.ಕೋಮ್
ಫೋಟೋ 4: ಮಂಗಳೂರು ಹಂಚಿನ ಚಾವಣಿ …. ಕೃಪೆ: ಎಕ್ಸ್-ಪರ್ಟ್-ಸಿವಿಲ್.ಕೋಮ್
ಫೋಟೋ 5: ಚಾವಣಿಗೆ ಮಂಗಳೂರು ಹಂಚು ಜೋಡಿಸುವುದು …. ಕೃಪೆ: ಡ್ರೀಮ್-ಸಿವಿಲ್.ಕೋಮ್
Comments
ಮರೆತು ಹೋದ ಹಂಚಿನ ಕಾರ್ಖಾನೆಗಳ…
ಮರೆತು ಹೋದ ಹಂಚಿನ ಕಾರ್ಖಾನೆಗಳ ನೆನಪಾಯ್ತು !
ಮಂಗಳೂರು ಹಂಚಿನ ಕಾರ್ಖಾನೆಗಳ ಬಗ್ಗೆ ಅಡ್ಡೂರು ಜೀ ಅವರು ಬರೆದ ಲೇಖನದಿಂದ ನನ್ನ ಹಳೆಯ ನೆನಪುಗಳು ತಾಜಾ ಆದುವು. ಸಣ್ಣವರಿರುವಾಗ ಹಂಚಿನ ಕಾರ್ಖಾನೆಗೆ ಹೋಗಿ ಗಿಡನೆಡುವ ಚಟ್ಟಿಗಳನ್ನು ತಂದದ್ದು ಈಗಲೂ ನೆನಪಿದೆ. ಈಗಲೂ ಗುರುಪುರ, ಎಡಪದವು ಮಾರ್ಗವಾಗಿ ಸಂಚರಿಸುವಾಗ ದಾರಿಯಲ್ಲಿರುವ ಹಂಚಿನ ಕಾರ್ಖಾನೆಗಳನ್ನು ನೋಡುವಾಗ ಹಿಂದಿನ ದಿನಗಳ ನೆನಪಾಗುತ್ತದೆ.
ಸೋಜಿಗದ ಸಂಗತಿಯೆಂದರೆ ೧೯೯೫ರಲ್ಲಿ ನಾನು ಗುಜರಾತ್ ರಾಜ್ಯದ ವೆರಾವಲ್ ಎಂಬ ಊರಿನಲ್ಲಿ ಸುಮಾರು ಆರು ತಿಂಗಳು ಇದ್ದೆ. ವೆರಾವಲ್ ನಿಂದ ವಿಶ್ವವಿಖ್ಯಾತ ಸೋಮನಾಥ ದೇವಾಲಯ ಬಹಳ ಹತ್ತಿರ. ಸೋಮನಾಥ ದೇವಾಲಯಕ್ಕೆ ಹೋಗುವ ದಾರಿಯಲ್ಲಿ ಬಲರಾಮನ ಒಂದು ಮಂದಿರ ಸಿಗುತ್ತದೆ. ದ್ವಾಪರಾಯುಗದ ಕೊನೆಗೆ ಬಲರಾಮ (ಆದಿಶೇಷ) ನು ಹಾವಿನ ರೂಪಧರಿಸಿ ಈ ಸ್ಥಳದಿಂದ ಸುರಂಗ ಮಾರ್ಗದಲ್ಲಿ ಪಾತಾಳಕ್ಕೆ ಹೋಗಿದ್ದ ಎಂಬ ಪ್ರತೀತಿ ಇದೆ. ಆ ಮಂದಿರಕ್ಕೆ ನಾನು ತೆರಳಿದಾಗ ಅಚಾನಕ್ ಆಗಿ ನನ್ನ ಗಮನ ಅಲ್ಲಿಯ ಮೇಲಿನ ಛಾವಣಿಯತ್ತ ಹೋಯಿತು. ಅಲ್ಲಿ ಹಂಚಿನ ಹೊದಿಕೆಯಿತ್ತು. ಆ ಹಂಚಿನ ಮೇಲೆ 'ಮಂಗಳೂರು ಹಂಚುಗಳು' ಎಂದು ಬರೆಯಲಾಗಿತ್ತು. ಇದನ್ನು ನೋಡಿ ನಮ್ಮ ಊರಿನ ಹಂಚುಗಳು ಆ ಪುಟ್ಟ ಊರಿಗೂ ತಲುಪಿದ್ದು ಆಚ್ಚರಿಯಂತೆ ಕಂಡಿತ್ತು.