ಮಂಗಳೂರಿನ ಹಲಸು ಹಬ್ಬ: ದಾಖಲೆ ಹಲಸು ಮಾರಾಟ
ಜೂನ್ ೨೨ ಮತ್ತು ೨೩, ೨೦೧೯ರಂದು ಮಂಗಳೂರಿನ ಹಂಪನಕಟ್ಟೆ ಹತ್ತಿರದ ಬಾಳಂಭಟ್ ಸಭಾಂಗಣದಲ್ಲಿ ಜನವೋ ಜನ. ಅದಕ್ಕೆ ಕಾರಣ ಸಾವಯವ ಕೃಷಿಕ ಗ್ರಾಹಕ ಬಳಗ ಆಯೋಜಿಸಿದ್ದ ೪ನೇ ವರುಷದ ಹಲಸು ಹಬ್ಬ.
ಅಲ್ಲಿ ಈ ಬಾರಿ ಬೆಂಗಳೂರು ಗ್ರಾಮೀಣ ಜಿಲ್ಲೆಯ ತೂಬಗೆರೆಯ ಹಲಸು ಬೆಳೆಗಾರರ ಸಂಘದ ಸದಸ್ಯರು ಕಾರ್ಯದರ್ಶಿ ಎಂ.ಜಿ. ರವಿಕುಮಾರ್ ಮುಂದಾಳುತನದಲ್ಲಿ ಸುಮಾರು ನಾಲ್ಕು ಟನ್ ಚಂದ್ರಹಲಸು ಮತ್ತು ರುದ್ರಾಕ್ಷಿ ಹಲಸು ಮಾರಾಟ ಮಾಡಿದ್ದು ಒಂದು ದಾಖಲೆ. ಅವೆಲ್ಲವೂ ಕೇವಲ ೨೪ ಗಂಟೆಗಳಲ್ಲಿ ಮಾರಾಟವಾದದ್ದು ಗಮನಾರ್ಹ. ಕೇಸರಿ ಬಣ್ಣದ ಚಂದ್ರಹಲಸಿನ ತೊಳೆಗಳಿಗಾಗಿ ಗ್ರಾಹಕರು ನಿರಂತರವಾಗಿ ಸಾಲುಗಟ್ಟಿ ನಿಂತಿದ್ದರು. ಆ ತಂಡದ ಸದಸ್ಯರಿಗೆ ತೊಳೆ ಬಿಡಿಸಿ ಕೊಡುವ ಕೆಲಸದಿಂದ ಒಂದು ಕ್ಷಣವೂ ಬಿಡುವಿರಲಿಲ್ಲ. ಹಲಸು ಹಬ್ಬದಲ್ಲಿ ಒಟ್ಟು ಹತ್ತು ಟನ್ ಹಲಸು ಮಾರಾಟವಾದದ್ದು ನಿರ್ಲಕ್ಷಿತ ಹಣ್ಣಿನ ಬಗ್ಗೆ ಜನಪ್ರೀತಿ ಬೆಳೆಯುತ್ತಿದೆ ಎಂಬುದರ ಪುರಾವೆ.
ಅಬ್ಬ, ಹಲಸು ಹಬ್ಬದಲ್ಲಿ ಅದೆಷ್ಟು ಬಗೆಯ ಹಲಸಿನ ತಿನಿಸುಗಳು! ಹಲಸಿನ ಗಟ್ಟಿ, ಹಲ್ವ, ದೋಸೆ, ಕಡುಬು, ಗಾರಿಗೆ, ಪಾಯಸ, ಬಜೆ, ಬನ್ಸ್, ವಡೆ, ಅಂಬೊಡೆ, ಚಟ್ಟಂಬಡೆ, ಪೋಡಿ, ಸೋಂಟೆ,ಕೇಸರಿಬಾತ್, ಬರ್ಫಿ, ಮಂಚೂರಿ, ಕಬಾಬ್, ಚಿಲ್ಲಿ, ರೋಸ್ಟ್, ಹಲಸಿನ ಬೀಜದ ಹೋಳಿಗೆ, ಜಾಮೂನ್, ಬಿಸ್ಕಿಟ್ - ಇವನ್ನೆಲ್ಲ ಸವಿಯಲು ಜನ ಮುಗಿ ಬಿದ್ದಿದ್ದರು. ಹಲಸಿನ ಮೌಲ್ಯವರ್ಧಿತ ತಿನಿಸುಗಳಾದ ಐಸ್-ಕ್ರೀಮ್, ಹಪ್ಪಳ, ಚಿಪ್ಸ್, ಉಪ್ಪುಸೊಳೆ, ಹಲಸಿನ ಬೀಜದ ಉಪ್ಪಿನಕಾಯಿ - ಇವುಗಳ ಮಾರಾಟಗಾರರಿಗೆ ಅಲ್ಲಿ ಭರ್ಜರಿ ವ್ಯಾಪಾರ. ಶ್ರೀ ರಾಧಾಕೃಷ್ಣ ದೇವಸ್ಥಾನದ ಅಡುಗೆ ಬಳಗದವರ ಸ್ಟಾಲಿನಲ್ಲಿ ಹಲಸಿನ ವಿವಿಧ ತಿನಿಸುಗಳಿಗೆ ದಿನವಿಡೀ ಭಾರೀ ಬೇಡಿಕೆ. ಅವರು ಜೂನ್ ೨೩ರ ಭಾನುವಾರ ಐವತ್ತು ರೂಪಾಯಿಗೆ ಒದಗಿಸಿದ ಹಲಸಿನ ಪಲ್ಯ, ಹಲಸಿನ ಗಸಿ ಮತ್ತು ಹಲಸಿನ ಪಾಯಸದ ಊಟಕ್ಕೆ ಗ್ರಾಹಕರು ಸಾಲುಗಟ್ಟಿ ನಿಂತಿದ್ದರು.
ಈ ಹಲಸು ಹಬ್ಬದಲ್ಲಿ ಗ್ರಾಹಕರ ಆರೋಗ್ಯ ರಕ್ಷಣೆಗಾಗಿ ತಿಂಡಿತಿನಿಸುಗಳ ಮಾರಾಟಗಾರರಿಗೆ ಕೆಲವು ನಿಬಂಧನೆಗಳನ್ನು ವಿಧಿಸಿದ್ದು ವಿಶೇಷ. ಎಲ್ಲ ಮೌಲ್ಯವರ್ಧಿತ ತಿನಿಸುಗಳ ತಯಾರಿಕೆಗೆ ತೆಂಗಿನೆಣ್ಣೆಯನ್ನೇ ಬಳಸಬೇಕು. ಯಾವುದೇ ಕೃತಕ ಬಣ್ಣಗಳನ್ನು ಬಳಸಬಾರದು. ಟೇಸ್ಟ್-ಮೇಕರ್, ಸಕ್ಕರೆ, ಮೈದಾ ಹಾಕಿದ ತಿನಿಸುಗಳ ನಿಷೇಧ ಇತ್ಯಾದಿ.
ಹಲಸು ಹಬ್ಬದ ಜೊತೆಯಲ್ಲೇ ಕರ್ನಾಟಕದ ವಿವಿಧ ಜಿಲ್ಲೆಗಳ ಸಾವಯವ ಕೃಷಿಕರಿಂದ ಸಾವಯವ ಧಾನ್ಯ ಹಾಗೂ ಮೌಲ್ಯವರ್ಧಿತ ವಸ್ತುಗಳ ನೇರ ಮಾರಾಟ ಏರ್ಪಡಿಸಲಾಗಿತ್ತು. ಸಾವಯವ ಬೆಲ್ಲ, ಎಳ್ಳೆಣ್ಣೆ, ಸಾವಯವ ಮತ್ತು ಸಿರಿಧಾನ್ಯಗಳಿಂದ ತಯಾರಿಸಿದ ಹಲವಾರು ತಿನಿಸುಗಳು ಬಿರುಸಿನಿಂದ ಮಾರಾಟವಾದವು. ಹಲಸಿನ ತಿನಿಸುಗಳ ಸ್ಟಾಲುಗಳು ಮಾತ್ರವಲ್ಲದೆ, ಹಲಸಿನ ವಿವಿಧ ತಳಿಗಳ ಕಸಿಗಿಡಗಳ ಮತ್ತು ತರತರದ ಹಣ್ಣುಗಳ ಕಸಿಗಿಡಗಳನ್ನು ಮಾರುವ ಸ್ಟಾಲುಗಳೂ ಅಲ್ಲಿದ್ದವು.
ಶ್ರೀಮತಿ ದೀಪಶ್ರೀ ದೊಡ್ಡಮಾಣಿ ಅವರು ಜೂನ್ ೨೨ರ ಶವಾರ ಸಂಜೆ ಹಲಸಿನ ಮೌಲ್ಯವರ್ಧಿತ ಖಾದ್ಯ ತಯಾರಿಯ ತರಬೇತಿ ನಡೆಸಿ ಕೊಟ್ಟರು. ಹಲಸಿನ ಕೇಕ್, ಹಲಸು ಬೀಜದ ಬಿಸ್ಕಿಟ್ ಮತ್ತು ದಿಡೀರ್ ರಸಂ ಹುಡಿ ತಯಾರಿಯ ವಿಧಾನವನ್ನು ಆಸಕ್ತರಿಗೆ ಕಲಿಸಿದರು.
ಕ್ಯಾಂಪ್ಕೊ ಅಧ್ಯಕ್ಷರಾದ ಶ್ರೀ ಎಸ್.ಆರ್. ಸತೀಶ್ಚಂದ್ರ ಅವರು ಜೂನ್ ೨೨ರ ಶನಿವಾರ ಸಂಜೆ ೪ ಗಂಟೆಗೆ ಹಲಸು ಹಬ್ಬವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಅವರು ತಮ್ಮ ಬಾಲ್ಯದಲ್ಲಿ ಹಲಸು ಸವಿಯುತ್ತಿದ್ದುದನ್ನು ನೆನಪು ಮಾಡಿಕೊಂಡರು. ಹಲಸಿನ ಚಾಕೊಲೆಟ್ ತಯಾರಿಸಲು ಕ್ಯಾಂಪ್ಕೊ ಯೋಜನೆ ರೂಪಿಸಿದ್ದು, ಈಗಾಗಲೇ ಪ್ರಾಯೋಗಿಕವಾಗಿ ಚಾಕೊಲೆಟ್ ಉತ್ಪಾದಿಸಿದೆಯೆಂದು ತಿಳಿಸಿದರು.
ಸಾವಯವ ಕೃಷಿಕ ಗ್ರಾಹಕ ಬಳಗದ ಅಧ್ಯಕ್ಷರಾದ ಅಡ್ಡೂರು ಕೃಷ್ಣ ರಾವ್ ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ ಕೋಟಿಗಟ್ಟಲೆ ರೂಪಾಯಿ ಬೆಲೆಯ ಹಲಸು ಹಾಳಾಗುತ್ತಿದ್ದು, ಹಲಸಿನ ಬಳಕೆ ಮತ್ತು ಮೌಲ್ಯವರ್ಧನೆ ಬಗ್ಗೆ ಜನಜಾಗೃತಿ ಮೂಡಿಸಲಿಕ್ಕಾಗಿ ಕಳೆದ ಮೂರು ವರುಷಗಳಂತೆ ಈ ವರುಷವೂ “ಹಲಸು ಹಬ್ಬ" ಆಯೋಜಿಸಲಾಗಿದೆ ಎಂದರು. ಹಲವಾರು ಪೋಷಕಾಂಶಗಳಿರುವ ಎಳೆಹಲಸು, ಹಣ್ಣು ಹಲಸು ಮತ್ತು ಹಲಸಿನ ಬೀಜ ಅತ್ಯುತ್ತಮ ಆಹಾರವಾಗಿದ್ದು, ದಶಕಗಳ ಮುಂಚೆ ಮಳೆಗಾಲದಲ್ಲಿ ಕರಾವಳಿಯ ಬಡಜನರ ಹಸಿವು ನೀಗಿಸುತ್ತಿತ್ತು ಎಂಬುದನ್ನು ಜ್ನಾಪಿಸಿದರು. ಎಳೆಹಲಸು ಡಯಬಿಟಿಸ್ ಪೀಡಿತರ ರಕ್ತದ ಸಕ್ಕರೆಯಂಶ ಕಡಿಮೆ ಮಾಡಲು ಪರಿಣಾಮಕಾರಿ ಎಂಬುದು ವೈಜ್ನಾನಿಕ ಪ್ರಯೋಗಗಳಿಂದ ಸಾಬೀತಾಗಿದೆ ಎಂಬ ಮಾಹಿತಿ ನೀಡಿದರು.
ಹಲಸು ಹಬ್ಬದ ಆಕರ್ಷಣೆಯ ಕೇಂದ್ರ ಗಾಯತ್ರಿ ಭಟ್, ದಾಕ್ಷಾಯಿಣಿ ಮತ್ತು ಸ್ವಪ್ನ ಹಾಕಿದ್ದ ನೂತನ ವಿನ್ಯಾಸದ ಹಲಸಿನ ರಂಗೋಲಿ. ಅಲ್ಲಿನ ೫೦ ಸ್ಟಾಲುಗಳಿಗೆ ಭಾನುವಾರ ಬೆಳಗ್ಗೆ ೭ ಗಂಟೆಯಿಂದ ಸಂಜೆಯ ತನಕ ನಿರಂತರವಾಗಿ ಬರುತ್ತಿದ್ದ ಹಲಸುಪ್ರೇಮಿಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬ.