ಮಂಗಳೂರು ಬಜ್ಜಿ

ಮಂಗಳೂರು ಬಜ್ಜಿ

ಬೇಕಿರುವ ಸಾಮಗ್ರಿ

ಮೈದಾ ಹಿಟ್ಟು – 2 ಕಪ್, ಹುಳಿ ಮೊಸರು – ½ ಕಪ್, ಹಸಿ ಮೆಣಸಿನ ಕಾಯಿ – 2 ಅಥವಾ 3 (ಖಾರಕ್ಕೆ ತಕ್ಕಂತೆ), ಜೀರಿಗೆ – ½ ಚಮಚ, ಕೊತ್ತಂಬರಿ ಸೊಪ್ಪು – 4 ಅಥವಾ 5 ಎಸಳು, ಕರಿಬೇವಿನ ಸೊಪ್ಪು – 5 ಅಥವಾ 6 ಎಸಳು, ಉಪ್ಪು – ರುಚಿಗೆ ತಕ್ಕಂತೆ, ಅಡುಗೆ ಸೋಡಾ – ½ ಚಮಚ, ಎಣ್ಣೆ – ಕರಿಯಲು.

ತಯಾರಿಸುವ ವಿಧಾನ

ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಇವುಗಳನ್ನು ಚೆನ್ನಾಗಿ ತೊಳೆದುಕೊಂಡು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಅಗಲ ಬಾಯಿಯ ಪಾತ್ರೆಗೆ ಮೊಸರನ್ನು ಹಾಕಿ ಅದಕ್ಕೆ ಉಪ್ಪು, ಅಡುಗೆ ಸೋಡಾ, ಜೀರಿಗೆ, ಹೆಚ್ಚಿಟ್ಟುಕೊಂಡ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಇವುಗಳನ್ನು ಹಾಕಿ ಚೆನ್ನಾಗಿ ಕಲಕಿ ಮಿಶ್ರ ಮಾಡಿ. ನಂತರ ಈ ಮಿಶ್ರಣಕ್ಕೆ ಮೈದಾ ಹಿಟ್ಟನ್ನು ಹಾಕಿ ಕಲೆಸಿ. (ಹಿಟ್ಟು ಸಾಧಾರಣವಾಗಿ ಉದ್ದಿನ ವಡೆಯ ಹಿಟ್ಟಿನ ಹದ ಇರಬೇಕು) ದಪ್ಪ ತಳದ ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಡಿ. ಎಣ್ಣೆ ಕಾದ ನಂತರ ಕಲೆಸಿದ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಎಣ್ಣೆಯಲ್ಲಿ ಬಿಡಿ. ಹೊಂಬಣ್ಣ ಬರುವವರೆಗೂ ಕರಿಯಿರಿ. ಬಿಸಿ ಬಿಸಿ ಮಂಗಳೂರು ಬಜ್ಜಿ ಸಾಯಂಕಾಲ ಟೀ ಜೊತೆ ಸವಿಯಲು ಬಲು ರುಚಿಯಾಗಿರುತ್ತದೆ.

Comments

Submitted by ಸುಮ ನಾಡಿಗ್ Tue, 03/12/2013 - 11:34

ಬಜ್ಜಿ ರುಚಿ ಚೆನ್ನಾಗಿದೆ. ಬೆಂಗಳೂರಿನ ಜಯನಗರದ ಮೈಯಾಸ್ ನಲ್ಲಿ ಇದನ್ನು ರುಚಿಕರವಾಗಿ ಮಾಡುತ್ತಾರೆ. ಬೇರೆಲ್ಲೂ ಮಂಗಳೂರಿನಲ್ಲಿ, ಉಡುಪಿಯಲ್ಲಿ ಸವಿದ ರುಚಿ ಸಿಗದು.

Submitted by sasi.hebbar Tue, 03/12/2013 - 12:17

In reply to by ಸುಮ ನಾಡಿಗ್

ರುಚಿ ರುಚಿ ಬಜ್ಜಿಯನ್ನು ತಿನ್ನುವಾಗ ಊರಿನ ನೆನಪಾಗುತ್ತದೆ! ಆದರೆ, ಅದನ್ನು ತಯಾರಿಸುವ ಮೈದಾ ಹಿಟ್ಟು ಉತ್ಪಾದಿಸಲು ಬೆರೆಸುವ ರಾಸಾಯನಿಕ ವಸ್ತುಗಳಿಂದಾಗಿ, ಮೈದಾ ಜಾಸ್ತಿ ಸೇವಿಸಿದರೆ, ಪ್ಯಾಂಕ್ರಿಯಾಸ್ ತೊಂದರೆ ಉಂಟಾಗುವ ಸಂಭವ ಇದೆಯಂತೆ. ಎಚ್ಚರ! :) ಆದ್ದರಿಂದ, ಬಜ್ಜಿ ತಿನ್ನುವಾಗ ಕಣ್ಣುಮುಚ್ಚಿಕೊಂಡುತಿಂದು ಅದರ ಸವಿಯನ್ನು ಅನುಭವಿಸಬೇಕು.:)

Submitted by Shobha Kaduvalli Tue, 03/12/2013 - 21:53

:))

Submitted by ಗಣೇಶ Wed, 03/13/2013 - 23:56

ಬಿಸಿ ಬಿಸಿ ಮಂಗಳೂರು ಬಜ್ಜಿ ಸಾಯಂಕಾಲ ಟೀ ಜೊತೆ ಸವಿಯಲು ಬಲು ರುಚಿಯಾಗಿರುತ್ತದೆ. +೧. ಶೋಭಾ ಅವರೆ, ನಾನೂ ಒಮ್ಮೆ ಬಜ್ಜಿ ಮಾಡಿ ಸಂಪದಿಗರಿಗೆ ಬಡಿಸಿದ್ದೆ- http://www.sampada.net/blog/%E0%B2%AD%E0%B2%9C%E0%B3%86-%E0%B2%AD%E0%B2%9C%E0%B3%86%E0%B2%97%E0%B3%8B%E0%B2%B3%E0%B2%BF%E0%B2%AC%E0%B2%9C%E0%B3%86/02/08/2012/37745