ಮಂಗ ರಾಜಕುಮಾರಿ
ಭಾರತದಲ್ಲಿ ನೂರಾರು ವರುಷಗಳ ಮುಂಚೆ ಒಬ್ಬ ಧನವಂತ ರಾಜನಿದ್ದ. ಅವನಿಗೆ ಏಳು ಮಗಂದಿರು. ಅವನು ಎಲ್ಲರನ್ನೂ ಪ್ರೀತಿಯಿಂದ ಬೆಳೆಸಿದ.
ಅವರೆಲ್ಲರೂ ಮದುವೆಯ ವಯಸ್ಸಿಗೆ ಬಂದಾಗ ರಾಜನಿಗೆ ಚಿಂತೆಯಾಯಿತು. ಎಲ್ಲ ರೀತಿಯಲ್ಲಿಯೂ ಸಮಾನ ವಿದ್ಯಾಬುದ್ಧಿಗಳಿರುವ ಏಳು ವಧುಗಳನ್ನು ಹೇಗೆ ಹುಡುಕುವುದು? ಅವನು ತನ್ನ ಪ್ರತಿನಿಧಿಗಳನ್ನು ದೂರದೂರದ ದೇಶಗಳಿಗೆ ಕಳಿಸಿದ. ಅವರೆಲ್ಲರೂ ಹಿಂತಿರುಗಿ ಬಂದು ರಾಜನಿಗೆ ತಿಳಿಸಿದ ಸಂಗತಿ: ಒಬ್ಬಳು ರೂಪವತಿ, ಇನ್ನೊಬ್ಬಳು ನಾಟ್ಯವಿಶಾರದೆ, ಮತ್ತೊಬ್ಬಳು ಸಂಗೀತಸಾಧಕಿ, ಮಗದೊಬ್ಬಳು ಬುದ್ಧಿವಂತೆ. ಆದರೆ ಸಮಾನರಾದ ಏಳು ವಧುಗಳು ಸಿಗಲಿಲ್ಲ.
ಕೊನೆಗೆ ಹಿರಿಯ ಮಂತ್ರಿ ರಾಜನಿಗೊಂದು ಸಲಹೆಯಿತ್ತ: ಈ ಸಮಸ್ಯೆಯನ್ನು ಅದೃಷ್ಟವೇ ಪರಿಹರಿಸಲಿ. ಅಂದರೆ, ಏಳು ರಾಜಕುಮಾರರು ಬಿಲ್ಲು-ಬಾಣಗಳೊಂದಿಗೆ ಅರಮನೆಯ ಅತ್ಯಂತ ಎತ್ತರದ ಗೋಪುರಕ್ಕೆ ಹೋಗಲಿ. ಪ್ರತಿಯೊಬ್ಬನೂ ತಾನು ಇಚ್ಛಿಸಿದ ದಿಕ್ಕಿನಲ್ಲಿ ಒಂದು ಬಾಣ ಬಿಡಲಿ. ಬಾಣ ಬಿದ್ದ ಜಾಗಕ್ಕೆ ಅತ್ಯಂತ ಹತ್ತಿರದಲ್ಲಿರುವ ವಧು ಆಯಾ ರಾಜಕುಮಾರನ ಮದುಮಗಳಾಗಲಿ. ಎಲ್ಲ ರಾಜಕುಮಾರರು ಫಲಿತಾಂಶವನ್ನು ಒಪ್ಪಿಕೊಳ್ಳಬೇಕು.
ರಾಜನೂ ರಾಜಕುಮಾರರೂ ಈ ಸಲಹೆಯನ್ನು ಸ್ವೀಕರಿಸಿದರು. ಎಲ್ಲ ರಾಜಕುಮಾರರೂ ಅತ್ಯಂತ ಎತ್ತರದ ಗೋಪುರಕ್ಕೆ ಹೋದರು. ಒಬ್ಬೊಬ್ಬರಾಗಿ ಬಾಣ ಹೂಡಿ, ಬಿಲ್ಲು ಬಾಗಿಸಿ, ದೂರಕ್ಕೆ ಬಾಣ ನುಗ್ಗಿಸಿದರು. ಮೊದಲ ಆರು ರಾಜಕುಮಾರರು ಅದೃಷ್ಟವಂತರು. ಅವರ ಬಾಣಗಳು ಬಿದ್ದ ಜಾಗದ ಹತ್ತಿರದಲ್ಲೇ ಅವರಿಗೆ ರೂಪವತಿಯರಾದ ವಧುಗಳು ಸಿಕ್ಕರು.
ಕಿರಿಯ ರಾಜಕುಮಾರನ ಬಾಣ ದೂರಕ್ಕೆ, ನಗರದ ಆವರಣ ಗೋಡೆ ದಾಟಿ, ಕಾಡಿಗೆ ಸಾಗಿತು. ಅದೊಂದು ಆಲದ ಮರದ ಕೊಂಬೆಗೆ ನಾಟಿತು. ಬಾಣದ ಪಕ್ಕದಲ್ಲೊಂದು ಹೆಣ್ಣು ಮಂಗವಿತ್ತು! ಪುನಃ ಬಾಣ ಬಿಡಬೇಕೆಂದು ರಾಜ ಒತ್ತಾಯಿಸಿದರೂ ಕಿರಿಯ ಮಗ ಒಪ್ಪಲಿಲ್ಲ. ಅವನು ಆ ಮಂಗವನ್ನೇ ಮುದ್ದಿನ ಪ್ರಾಣಿಯಾಗಿ ಸ್ವೀಕರಿಸಿ, ಅದನ್ನು ರಾಣಿ ಎಂದು ಹೆಸರಿಸಿದ.
ಅನಂತರ ಒಂದು ವಾರ ಮೊದಲ ಆರು ರಾಜಕುಮಾರರ ಮದುವೆ ನಡೆದು, ಸಂಭ್ರಮಾಚರಣೆಗಳು ಜರಗಿದವು. ಕೊನೆಯ ರಾಜಕುಮಾರ ತನ್ನ ಕೋಣೆಯಲ್ಲಿ ಸುಮ್ಮನೆ ಕುಳಿತಿದ್ದುದನ್ನು ಕಂಡು ರಾಜನಿಗೆ ವ್ಯಥೆಯಾಯಿತು.
ಅದೊಂದು ರಾತ್ರಿ, ಕಿರಿಯ ರಾಜಕುಮಾರ ಚಿಂತಿಸುತ್ತಾ ಕೂತಿದ್ದಾಗ ಆ ಮಂಗ ಅವನ ತೊಡೆಯನ್ನೇರಿ ಕುಳಿತಿತು. ರಾಜಕುಮಾರ ಅದರೊಂದಿಗೆ ಮಾತಾಡಿದ, "ಈಗ ನಾನೇನು ಮಾಡಲಿ? ನನ್ನ ಅಣ್ಣಂದಿರಂತೆ ತಂದೆಯನ್ನು ಸಂತೋಷ ಪಡಿಸಬೇಕೆಂಬುದು ನನ್ನ ಆಶೆ. ಆದರೆ ನನಗೆ ಹೆಂಡತಿಯಿಲ್ಲ.” ಆಗ ಮಂಗ "ಒಡೆಯಾ, ಚಿಂತಿಸಬೇಡ” ಎಂದು ಹೇಳಿದಾಗ ಅವನಿಗೆ ಅಚ್ಚರಿ.
ಹಾಗೆಂದ ಮಂಗ ಪಕ್ಕದ ಕೋಣೆಗೆ ಹೋಗಿ ಒಂದು ಪಿಂಗಾಣಿ ಚೂರನ್ನು ತಂದಿತು. ಅದರಲ್ಲಿ ಹೀಗೆ ಬರೆದಿತ್ತು: ಈ ಪಿಂಗಾಣಿ ಚೂರನ್ನು ಆಲದ ಮರದ ಪೊಟರೆಯಲ್ಲಿ ಬಿಸಾಡು. ಮರುದಿನ ಬೆಳಗ್ಗೆ ಎದ್ದಾಗ, ಮಂಗ ತನ್ನೊಂದಿಗೆ ಮಾತಾಡಿತು ಎಂಬುದನ್ನು ಅವನಿಗೆ ನಂಬಲಾಗಲಿಲ್ಲ. ಅದೊಂದು ಕನಸೆಂದು ಅವನು ಭಾವಿಸಿದ. ಆದರೂ ಅವನು ಕಾಡಿಗೆ ಹೋಗಿ, ಬಾಣ ತಗಲಿದ್ದ ಆಲದ ಮರದ ಪೊಟರೆಯಲ್ಲಿ ಆ ಪಿಂಗಾಣಿ ಚೂರನ್ನು ಎಸೆದ.
ಆಗ ಆ ಪೊಟರೆಯಲ್ಲಿ ಒಬ್ಬ ರೂಪವತಿ ಯುವತಿ ಕಾಣಿಸಿಕೊಂಡು ಅವನನ್ನು ಒಳಕ್ಕೆ ಕರೆದಳು. ಅವನು ಪೊಟರೆಯೊಳಗೆ ಹೋಗಿ ಅವಳನ್ನು ಹಿಂಬಾಲಿಸಿದ. ಆದರೆ ಅವಳು ಕಣ್ಮರೆಯಾದಳು. ಅವನೆದುರು ಒಂದು ಸುರಂಗವಿತ್ತು. ಅವನು ಮುನ್ನಡೆದಾಗ ಸುರಂಗದ ಕೊನೆಯಲ್ಲೊಂದು ಉದ್ಯಾನವಿತ್ತು. ಅಲ್ಲಿ ಮಂಟಪದಲ್ಲಿ ಆಸನದಲ್ಲಿ ಒಬ್ಬ ಸುರಸುಂದರಿ ಕುಳಿತಿದ್ದಳು. ಕಿರಿಯ ರಾಜಕುಮಾರ ತಕ್ಷಣವೇ ಅವಳಿಂದ ಮೋಹಿತನಾದ. “ನೀನಿಲ್ಲಿಗೆ ಬಂದದ್ದಕ್ಕೆ ಸಂತೋಷವಾಗಿದೆ. ನನ್ನ ಹತ್ತಿರ ಬರಬೇಡ. ಅರಮನೆಗೆ ಹೋಗಿ, ನಾಡದು ಮದುವೆಯ ಸಂತೋಷಕೂಟಕ್ಕೆ ತಯಾರಿ ನಡೆಸು” ಎಂದಳು ಅವಳು.
ರಾಜಕುಮಾರ ಅರಮನೆಗೆ ಮರಳಿ, ಎಲ್ಲ ಸಂಗತಿಯನ್ನು ಮಂಗಕ್ಕೆ ಹೇಳಿದ. ಈಗ ಅದೇನೂ ಮಾತಾಡಲಿಲ್ಲ. ಮದುವೆಯ ದಿನ ಬೆಳಗ್ಗೆ ಎದ್ದಾಗ ರಾಜಕುಮಾರ ತನ್ನ ಕಣ್ಣುಗಳನ್ನು ತಾನೇ ನಂಬಲಿಲ್ಲ. ಅವನ ಅರಮನೆ ಐಷಾರಾಮಿ ಕಟ್ಟಡವಾಗಿ ಬದಲಾಗಿತ್ತು. ಎಲ್ಲ ಬಾಗಿಲುಗಳಿಗೆ ಚಿನ್ನಬೆಳ್ಳಿಯ ಅಲಂಕಾರ! ಆತ ಉದ್ಯಾನಕ್ಕೆ ಹೋದಾಗಲೂ ಅಚ್ಚರಿ ಕಾದಿತ್ತು. ಅಲ್ಲಿ ಹೊಸಹೊಸ ಕೊಳಗಳು, ಕಾರಂಜಿಗಳು!
ಅವತ್ತು ಸಂಜೆ ಕಿರಿಯ ರಾಜಕುಮಾರನ ಅತಿಥಿಗಳು ಅರಮನೆಗೆ ಆಗಮಿಸಿದರು. ಅವರಿಗೆ ಭೂರಿಭೋಜನ ಏರ್ಪಡಿಸಲಾಗಿತ್ತು. ಎಲ್ಲ ಅತಿಥಿಗಳಿಗೂ ಅದು ಅವನ ಮದುವೆಯ ಸಂತೋಷಕೂಟ ಎಂದು ತಿಳಿಸಲಾಗಿತ್ತು. ಆದರೆ ಅಲ್ಲಿ ಮದುಮಗಳೇ ಇರಲಿಲ್ಲ. ರಾಜಕುಮಾರ ಚಿಂತಾಕ್ರಾಂತನಾಗಿದ್ದ.
ಕೊನೆಗೆ ಅವನು ತನ್ನ ಕೋಣೆಗೆ ಹೋದ - ಮಂಗದ ಬಳಿ ಕಾರಣ ಕೇಳಲಿಕ್ಕಾಗಿ. ಅಲ್ಲಿ, ಮಂಗನ ಬದಲಾಗಿ ಅದೇ ಸುರಸುಂದರಿ ಕುಳಿತಿದ್ದುದನ್ನು ನೋಡಿ ಅವನು ದಂಗು ಬಡಿದು ಹೋದ. ಆಕೆ ನಾಚುತ್ತಾ ಮಾತನಾಡಿದಳು, “ರಾಜಕುಮಾರಾ, ನೀನು ಮದುಮಗಳಿಗಾಗಿ ಕಾಯುತ್ತಿದ್ದೆ. ಈಗ ನಾನು ಬಂದಿದ್ದೇನೆ. ನಾನೂ ಮೊದಲ ನೋಟದಲ್ಲೇ ನಿನ್ನಿಂದ ಮೋಹಿತಳಾದೆ.”
ರಾಜಕುಮಾರ ಸುತ್ತಲೂ ನೋಡಿ, ಮಂಗ ಎಲ್ಲಿದೆಯೆಂದು ಕೇಳಿದ. “ನೀನು ಆ ಮಂಗವನ್ನು ಇನ್ನೆಂದೂ ಕಾಣೋದಿಲ್ಲ. ಯಾಕೆಂದರೆ ನಾನೇ ಆ ಮಂಗವಾಗಿದ್ದೆ. ನಿನ್ನ ಬಾಣ ಆಲದ ಮರಕ್ಕೆ ನಾಟಿದೊಡನೆ ನಾನು ಮಂಗವಾಗಿ ಬದಲಾದೆ. ನೀನು ನಿನ್ನ ಮಾತು ಉಳಿಸಿಕೊಳ್ಳುತ್ತಿಯೋ ಇಲ್ಲವೋ ಎಂದು ನನಗೆ ಪರೀಕ್ಷಿಸಬೇಕಾಗಿತ್ತು. ನೀನು ಮಾತು ತಪ್ಪಲಿಲ್ಲ” ಎಂದಳು ಆಕೆ.
ಇಬ್ಬರೂ ಸಂತೋಷದಿಂದ ಅಪ್ಪಿಕೊಂಡರು. ಅನಂತರ ರಾಜಕುಮಾರ ಮದುಮಗಳನ್ನು ಕರೆದೊಯ್ದು ಅತಿಥಿಗಳಿಗೆ ಪರಿಚಯಿಸಿದ. ಅವರು ಯಾರಿಗೂ ಮಂಗ-ರಾಜಕುಮಾರಿಯ ರಹಸ್ಯ ತಿಳಿಯಲಿಲ್ಲ.