ಮಂಚಿಯಲ್ಲಿ ಮಿಂಚಿದ ವಾಚನ ಗಾಯನ ಕುಂಚ ಪ್ರತಿಭೆ
ಬಂಟ್ವಾಳ ತಾಲೂಕಿನ ಇಪ್ಪತ್ತ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಘಮ ಘಮಿಸುವಿಕೆ ಇನ್ನೂ ದೂರ ಸರಿದಿಲ್ಲ. ಅಚ್ಚುಕಟ್ಟು ಮತ್ತು ಚೊಕ್ಕ ಎಲ್ಲೆಡೆಯೂ ಇರುವಂತೆ ಗಮನ ಹರಿಸಿದ ಸಂಘಟಕರ ಪ್ರಯತ್ನ ಪ್ರಶಂಸಾರ್ಹ. ಸಮಯದ ಮಿತಿಗೊಳಪಡಿಸಲು ಚಡಪಡಿಸಬೇಕಾಗಿ ಬಂದಿರುವುದನ್ನು ಬಿಟ್ಟರೆ ಶೇಕಡಾ ತೊಂಭತ್ತ ಒಂಭತ್ತು ಅಂಕ ನೀಡಬಹುದಾದ ಯಶಸ್ವೀ ಸಮ್ಮೇಳನ ಎಂಬುದರಲ್ಲಿ ಅತಿಶಯವಿಲ್ಲ.
ಎರಡು ದಿನ ನಡೆದ ಸಮ್ಮೇಳನದಲ್ಲಿ ದಿನಾಂಕ 05.01.2025ರ ಕೆಲವು ಕಾರ್ಯಕ್ರಮಗಳನ್ನು ಹತ್ತಿರದಿಂದ ನೋಡುವ ಪ್ರಯತ್ನ ಮಾಡಿದೆ. ವಿದ್ಯಾರ್ಥಿಗಳ ಗಾಯನ, ಭರತನಾಟ್ಯ ಬಹಳ ಖುಷಿ ನೀಡಿದುವು. ಅಂದು ಜರಗಿದ ಸಾಹಿತ್ಯ ಗೋಷ್ಠಿಯಲ್ಲಿ ಒಂದು ಹೊಸತನದ ಸ್ಪರ್ಶವಿತ್ತು. ಗೋಷ್ಠಿಯಲ್ಲಿ ಕವಿಗಳು ತಮ್ಮ ಸ್ವರಚನೆಗಳನ್ನು ವಾಚಿಸಿದರು. ಅವರ ಸ್ವರಚನೆಗೆ ಗಾಯಕರು ರಾಗ ಸಂಯೋಜಿಸಿ ಪಕ್ಕ ವಾದ್ಯಗಳ ಸಮೇತ ಹಾಡಿದರು. ಚಿತ್ರಕಾರರು ಗಾಯನಕ್ಕೆ ಅನುಗುಣವಾಗಿ ಚಿತ್ರ ಬರೆದುದು ಬಹಳ ಸೊಗಸಾಗಿ ಮೂಡಿ ಬಂತು.
ಶ್ರೀಯುತರುಗಳಾದ ಎಂ.ಪಿ ಬಶೀರ್ ಅಹಮ್ಮದ್, ದಾ.ನಾ ಉಮಣ್ಣ, ಗೀತಾ ಕೊಂಕೋಡಿ, ರವೀಂದ್ರ ಕುಕ್ಕಾಜೆ, ಗಣೇಶ್ ಪ್ರಸಾದ್ ಪಾಂಡೇಲು, ಅಶೋಕ್ ಕಡೇಶಿವಾಲಯ, ಶಶಿಕಲಾ, ಅಬೂಬಕ್ಕರ ಅಮ್ಮುಂಜೆ, ಪ್ರತಿಮಾ ತುಂಬೆ. ಎಂ.ಡಿ ಮಂಚಿ ಮುಂತಾದ ಕವಿಗಳು ತಮ್ಮ ಸ್ವರಚನೆಗಳನ್ನು ವಾಚಿಸಿದರು. ಪ್ರವೀಣ ಜಯ ವಿಟ್ಲ, ಎಲ್.ಕೆ ಧರಣ್ ಮಾಣಿ, ಯೋಗೀಶ್ ಆಳ್ವ ಪುದ್ದೊಟ್ಟು, ಕಾವ್ಯಶ್ರೀ ಗಡಿಯಾರ ಕವಿಗಳ ವಾಚಿತ ಸ್ವರಚನೆಗಳಿಗೆ ಗಾಯನ ಪ್ರಸ್ತುತ ಪಡಿಸಿದರು
ಬಂಟ್ವಾಳ ತಾಲೂಕಿನ ಪ್ರೌಢ ಶಾಲಾ ಚಿತ್ರಕಲಾ ಅಧ್ಯಾಪಕರುಗಳಾದ ಶ್ರೀಯುತ ತಾರಾನಾಥ ಕೈರಂಗಳ, ಮುರಲೀಕೃಷ್ಣ ರಾವ್ ವಾಮದಪದವು, ಮುರಳೀಧರ ಆಚಾರ್ ಪೊಳಲಿ, ಬಾಲಕೃಷ್ಣ ಖಂಡಿಗ ತಮ್ಮ ಕುಂಚದ ಮೂಲಕ ಕವನಗಳಿಗೆ ಚತ್ರ ಬರೆದು ಜೀವ ತುಂಬಿದರು.
ವಾಚಿಸಿದ ಕವನಗಳು ವೈವಿಧ್ಯಮಯವಾಗಿದ್ದುವು. ದೇಶಭಕ್ತಿ, ನಾಡು ನುಡಿಗಳಲ್ಲಿ ಪ್ರೇಮ, ಸಹಿಷ್ಣುತೆ, ಲಿಂಗ ಸಮಭಾವ, ಶಿಕ್ಷಣ, ಧರ್ಮ, ಪರಿಸರ ಹೀಗೆ ಒಬ್ಬೊಬ್ಬರು ಅವರವರವರ ಯೋಚನೆಗಳನ್ನು ಕವಿತೆಗಳ ಮೂಲಕ ತೆರೆದಿಟ್ಟರು. ಸಮಾಜದ ಅಂಕು ಡೊಂಕುಗಳನ್ನು ನೇರ್ಪಡಿಸುವಂತೆ ಸಂದೇಶ ನೀಡಿದರು. ಕವಿತೆಯೊಂದು ತಕ್ಷಣ ಹುಟ್ಟದು. ಅದು ಹಲವು ದಿನಗಳ ಚಿಂತನೆ ಮತ್ತು ಪ್ರಯತ್ನದ ಫಲ. ಸದಾಶಯ ಭರಿತ ಕವನಗಳೆಲ್ಲವೂ ಕೇಳುಗರನ್ನು ಸೆರೆ ಹಿಡಿದುವು. ಗಾಯನವೂ ಅದ್ಭುತವಾಗಿಯೇ ರಸದೌತಣ ನೀಡಿತು. ಸೂಕ್ತ ಪಕ್ಕ ವಾದ್ಯ, ರಸ ತಾಳ ನಾದಗಳ ಸಮನ್ವಯಿತ ಹಾಡುವಿಕೆ ಕವಿತೆಗಳಿಗೆ ಹೆಚ್ಚು ಭಾವ ತುಂಬಿದುವು. ಹಾಡುಗಾರರು ತಾವು ಆನಂದಿಸುತ್ತಾ ಹಾಡಿದರಲ್ಲದೆ ಕೇಳುಗರಿಗೂ ಕರ್ಣಾನಂದ ನೀಡಿದರು. ತಾಲೂಕಿನ ಪ್ರತಿಭಾವಂತ ಹಾಡುಗಾರರು ತಕ್ಷಣಕ್ಕೆ ಹಾಡಿಗೆ ರಾಗ ಅಳವಡಿಸಿ ಗಾಯನ ಶ್ರತಪಡಿಸುವುದು ಅಭಿಮಾನ ಪಡುವ ಕೆಲಸ. ವಿವಿಧ ಕಲೆಗಳು ಜೋಡಣೆಗೊಂಡಾಗ ಸಾಹಿತ್ಯದ ಮೆರುಗು ನೂರ್ಮಡಿಸುತ್ತದೆ.
ಕವಿಗೋಷ್ಠಿಯಲ್ಲಿ ವಾಚನ ಗಾಯನಗಳು ಕರ್ಣಗಳಿಗೆ ರಸಾಯನವಾದರೆ ಕುಂಚಗಳ ಓಟ ಕಣ್ಮನಗಳನ್ನು ತುಂಬಿದುವು. ಹಾಡುಗಾರರ ಕಂಠಕ್ಕೆ ಸಂವಾದಿಯಾಗಿ ಚಿತ್ರಕಾರರ ಕುಂಚ ನರ್ತಿಸಿ ಚುರುಕಿನ ಥಳಕಿನ ಪರಿಪೂರ್ಣ ಚಿತ್ರಗಳು ರೂಪು ಪಡೆಯಲಾರಂಭಿಸಿದವು. ಕವಿಯ ಬಹುಪಾಲು ಕಲ್ಪನೆಗಳನ್ನು ಬಿಂಬಿಸಲು ಪ್ರತಿಯೊಂದು ಚಿತ್ರವೂ ಸಫಲವಾಯಿತು. ಚಿತ್ರಕಾರರು ಅಂತಿಮ ಕುಂಚ ಸ್ಪರ್ಶ ನೀಡುತ್ತಿದ್ದಂತೆಯೇ ಹೆಚ್ಚಿನ ಗಾಯನಗಳೂ ಸಮಾಪ್ತಿಗೊಳ್ಳುತ್ತಿದ್ದುದು ಚಿತ್ರಕಾರರು ಮತ್ತು ಗಾಯಕರ ನಡುವಿನ ಏಕತಾನತೆ, ಹೊಂದಾಣಿಕೆಯನ್ನು ಪರಿಚಯಿಸಿತು. ಒಟ್ಟಿನಲ್ಲಿ ವಾಚನ ಗಾಯನ ಕುಂಚ ಕಾರ್ಯಕ್ರಮದ ಪ್ರಭೆ ಎಲ್ಲರನ್ನೂ ಸೆಳೆದು ಬಿಟ್ಟಿತೆನ್ನುವುದೇ ಸಂತಸ ಪಡುವ ವಿಷಯವಾಗಿದೆ. ನೋಡುಗರಿಗೆ ಸ್ಫೂರ್ತಿದಾಯಕ ಕಾರ್ಯಕ್ರಮವಿದು.
ಚಿತ್ರ - ಬರಹ : ರಮೇಶ ಎಂ. ಬಾಯಾರು, ಬಂಟ್ವಾಳ