ಮಂಜೀ ಮಹದೇವನ ಗಂಜೀ ಪುರಾಣ

ಮಂಜೀ ಮಹದೇವನ ಗಂಜೀ ಪುರಾಣ

ಪುಸ್ತಕದ ಲೇಖಕ/ಕವಿಯ ಹೆಸರು
ಜಿ.ಎಸ್.ಭಟ್ಟ ಸಾಗರ
ಪ್ರಕಾಶಕರು
ಚಾರುಮತಿ ಪ್ರಕಾಶನ, ಬೆಂಗಳೂರು. ಮೊ:9448235553
ಪುಸ್ತಕದ ಬೆಲೆ
₹ 350, ಪ್ರಕಟನೆಯ ವರ್ಷ: 2020

ಯಕ್ಷಗಾನದ ಆವರಣದಲ್ಲಿ ಸಿದ್ದಗೊಂಡ ಬೆರಳೆಣಿಕೆಯ ಕಾದಂಬರಿಗಳಲ್ಲಿ ಸಾಗರದ ಜಿ.ಎಸ್ ಭಟ್ಟರು ರಚಿಸಿರುವ ಮಂಜೀ ಮಹದೇವನ ಗಂಜೀ ಪುರಾಣ ಕಾದಂಬರಿಯೂ ಒಂದು. ಈ ಕಾದಂಬರಿಯ ಹೆಸರನ್ನು ಕೇಳುವಾಗಲೇ, ನಮಗೆ ಯಾವುದೋ ಒಂದು ಅವ್ಯಕ್ತ ಭಾವ ಒಡಮೂಡಿ, ಕುತೂಹಲವನ್ನು ಹೆಚ್ಚಿಸುತ್ತದೆ. ಇಲ್ಲಿ ಗಂಜೀ ಎನ್ನುವಾಗ ಮಹದೇವ ಎಂಬ ಯಕ್ಷಗಾನ ರಂಗಕರ್ಮಿಯ ಬದುಕಿಗಾಗಿ ನಡೆಸುವ ಹೋರಾಟವನ್ನು ತೆರೆದಿಟ್ಟು, ಅವನ ಜೀವನದ ಅನಿವಾರ್ಯತೆ ಮತ್ತು ತೀರ್ವತೆಯನ್ನು ಸಾದರಪಡಿಸುತ್ತದೆ. ತನ್ನ ಜನ್ಮಕ್ಕೆ ಕಾರಣನಾದ ಜಮೀನುದ್ದಾರ ಹಾಗೂ ಒಬ್ಬ ಹವ್ಯಾಸಿ ಕಲಾವಿದನ ಕ್ರೌರ್ಯ, ಮಹದೇವನ  ದಾಂಪತ್ಯ ಜೀವನದಲ್ಲಿ ಕೂಡ ದುರಂತಮಯವಾಗುತ್ತದೆ. ಇಂತಹ ಬದುಕಿನ ದುರಂತವನ್ನು ನುಂಗಿಕೊಳ್ಳುವುದಕ್ಕೆ, ಆತ ಯಕ್ಷಗಾನದ ಕಲಾಶಕ್ತಿಯನ್ನು ಬಳಸಿಕೊಂಡು ಯಕ್ಷಗಾನದ ಒಂದೊಂದೇ ಪಾತ್ರಗಳನ್ನು ರಂಗದಲ್ಲಿ ಮಾಡುತ್ತ, ಆ ಪಾತ್ರಗಳ ಆದರ್ಶಗಳನ್ನು ತನ್ನ ನಿಜ ಜೀವನದಲ್ಲಿ ಅಳವಡಿಸಿಕೊಂಡು, ತನ್ನ ನೋವನ್ನು ಕಳೆಯುವ ಪ್ರಯತ್ನವನ್ನು ಮಾಡಿ ಯಶಸ್ವಿಯಾಗುತ್ತಾನೆ. ಇದು ಕಾದಂಬರಿಯ ಕಥಾವಸ್ತುವಾದರೂ ಇಲ್ಲಿ ಲೇಖಕರು ಯಕ್ಷಗಾನದ ಆವರಣವನ್ನು ಬಳಸಿಕೊಂಡಿರುವುದು ವಿಶೇಷವಾಗಿದೆ.

ಕಾದಂಬರಿಯಲ್ಲಿ ಮಹದೇವನ ಬದುಕಿನ ಜೊತೆ ಜೊತೆಗೆ ಯಕ್ಷಗಾನ ರಂಗಭೂಮಿಯ ಕಥೆಯನ್ನು ಪ್ರಸ್ತಾಪಿಸುತ್ತಾರೆ. ಇದು ಕಾದಂಬರಿಯ ಭಾಗವಾಗಿಯೇ  ಬಂದಿರುವುದರಿಂದ ಕಥೆಗೆ ಸಂಬಂಧಪಡದೆಯಿರುವಂತೆ ಅನ್ನಿಸುವುದಿಲ್ಲ. ಕಾದಂಬರಿಯು ಯಕ್ಷಗಾನೇತರ ಓದುಗರಿಗೆ, ಯಕ್ಷಗಾನದ ಬಗ್ಗೆ ಪ್ರಾಥಮಿಕ ತಿಳುವಳಿಕೆಯನ್ನು ಮೂಡಿಸಿ, ಆ ಬಗ್ಗೆ ಆಸಕ್ತಿ ಮೂಡಿಸುವಂತೆ ಮಾಡಿದರೆ, ಯಕ್ಷಗಾನದ ಸಿದ್ದ ಪ್ರೇಕ್ಷರಿಗೆ, ತಾವು ಅನುಭವಿಸಿದ ಹಾಗೂ ನೋಡಿದ ಘಟನೆಗಳಿಗೆ ಹೊಲಿಸಿಕೊಂಡು, ಮತ್ತೇ ಮೆಲುಕು ಹಾಕುವಂತೆ ಮಾಡುತ್ತದೆ. ಇಲ್ಲಿ ಯಕ್ಷಗಾನದ ಬಗೆಗಿನ ಚಿಂತನೆಗಳನ್ನು ,ವಿಚಾರಗಳನ್ನು ಸಮೃದ್ದವಾಗಿ ಹೇಳಲಾಗಿದೆ. ಯಕ್ಷಗಾನವನ್ನು ಕಲಿಯುವ, ಕಲಿಸುವ ಇಂದಿನ ಸ್ಥಿತಿಗತಿಗಳು, ಡೇರೆ ಮೇಳದ ಸಂಘಟನೆ ಕಷ್ಟ-ಸುಖಗಳು, ಸಮಯಮಿತಿ ಪ್ರಯೋಗದ ಸಾಧಕ ಬಾಧಕಗಳು ಇತ್ಯಾದಿ ವಿಷಯಗಳ ಚರ್ಚಿಸಲಾಗಿದೆ. ಇದರ ಜೊತೆಗೆ ಭವಿಷ್ಯದ ಯಕ್ಷಗಾನದ ಬಗೆಗಿನ ಧೋರಣೆಗಳು ಯಕ್ಷಗಾನ ವಲಯ ಯೋಚಿಸುವಂತೆ ಮಾಡುತ್ತದೆ.

ಕಾದಂಬರಿಯನ್ನು ಓದುವಾಗ ಅನೇಕ ಮೇರು ಕಲಾವಿದರುಗಳು ಬಂದು ಹೋಗುತ್ತಾರೆ. ಉದಾಹರಣೆಗೆ ಹಾರಾಡಿ ರಾಮ ಗಾಣಿಗ,  ಕೆರೆಮನೆ ಶಿವರಾಮ ಹೆಗಡೆ,  ಮಟಪಾಡಿ ವೀರಭದ್ರನಾಯಕ , ಕೆರೆಮನೆ ಶಂಭು ಹೆಗಡೆ, ಶ್ರೇಣಿ ಗೋಪಾಲಕೃಷ್ಣ ಭಟ್, ಸಾಮಗ ದ್ವಯರು,  ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೆ ಗೊವಿಂದ ಭಟ್  ಮುಂತಾದ ಶ್ರೇಷ್ಠ ಕಲಾವಿದರುಗಳ ಪಾತ್ರಗಳು, ಅವರ ಅನುಭವಗಳು, ಅವರ ಜೀವನ ಆದರ್ಶಗಳನ್ನು ಕಾದಂಬರಿಯಲ್ಲಿ ಕಾಣಿಸಿ, ಅವರುಗಳು ಮತ್ತೆ ನಮ್ಮ ನೆನಪಿನಲ್ಲಿ ಸುಳಿಯುವಂತೆ ಮಾಡುತ್ತಾರೆ. ಜೊತೆಗೆ ಈ ಕಾದಂಬರಿಯನ್ನು ಯಕ್ಷಗಾನದ ಶ್ರೇಷ್ಠ ರಂಗಕರ್ಮಿ ಹೊಸ್ತೊಟ ಮಂಜುನಾಥ ಭಾಗವತರಿಗೆ ಅರ್ಪಿಸಿರುವುದನ್ನು ಕಾಣಬಹುದು

ಇಲ್ಲಿ ಬಹಳ ಮುಖ್ಯವಾಗಿ ಲೇಖಕರು ಬಳಸಿದ ಕಾದಂಬರಿಯ ತಂತ್ರವನ್ನು ಹೇಳಬೇಕಾಗುತ್ತದೆ. ಇದೊಂದು ಕಾಲ್ಪನಿಕ ಕಾದಂಬರಿಯಾಗಿದ್ದರೂ  ಅನ್ಯನಿರೂಪಿತ ಆತ್ಮಚರಿತ್ರೆಯ ತಂತ್ರವನ್ನು ಅಳವಡಿಸಿಕೊಂಡಿರುವುದು ವಿಶೇಷ. ಕಾದಂಬರಿಯ ಮೊದಲ ಭಾಗದಲ್ಲಿ ಆತ್ಮಚರಿತ್ರೆ ಮತ್ತು ಅನ್ಯನಿರೂಪಿತ ಆತ್ಮಚರಿತ್ರೆಯ ಇತಿಮಿತಿಗಳನ್ನು ತಿಳಿಸಲಾಗಿದೆ. ಇದೊಂದು ಭವಿಷ್ಯದ ಯಕ್ಷಗಾನ ಲೇಖಕರಿಗೆ ಮಾರ್ಗದರ್ಶನವಾಗಬಹುದು. ಜೊತೆಗೆ ಭೌಗೋಳಿಕ ಪ್ರದೇಶದಲ್ಲಿರುವ ಎಲ್ಲ ವಿವಿಧ ಜನಾಂಗಗಳೂ  ಇಲ್ಲಿ ಹೇಗೆ ರಂಗಭೂಮಿಯಲ್ಲಿ ತಮ್ಮನ್ನು ತೋಡಗಿಸಿಕೊಂಡಿದ್ದಾರೆ, ಈ ರಂಗಭೂಮಿಯಲ್ಲಿ ಸ್ತ್ರೀಯರ ಪ್ರವೇಶ ಇತ್ಯಾದಿಗಳ ಬಗ್ಗೆ ಚರ್ಚೆಯನ್ನು ಮಾಡಿ ಗಮನವನ್ನು ಸೆಳೆಯುತ್ತದೆ. ಸಂದರ್ಭಕ್ಕೆ ಅನುಗುಣವಾಗಿ ಯಕ್ಷಗಾನದ ಪಾರಿಭಾಷಿಕ ಶಬ್ದಗಳು, ಯಕ್ಷಗಾನದ ಪದ್ಯಗಳು ಚೆನ್ನಾಗಿ  ಬಳಸಿಕೊಂಡಿರುವುದು   ಮಾತ್ರವಲ್ಲದೇ  ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಪ್ರಚಲಿತವಿರುವ ಹಾಗೂ ಕಣ್ಮರೆಯಾಗಿರುವ ಅನೇಕ ಗಾದೆಗಳು/ಮಾತುಗಳು ಓದುಗರಿಗೆ ಬಹಳ ಮುದವನ್ನು ಕೊಡುತ್ತದೆ.  

ಒಬ್ಬ ಹವ್ಯಾಸಿ ಕಲಾವಿದನಾಗಿ ಕಾದಂಬರಿಯ ಬಗ್ಗೆ ಹೇಳುವುದಿದ್ದರೆ ಈ ಕೃತಿಯನ್ನು ಯಕ್ಷಗಾನ ಕಲಾವಿದರು ಓದಲೇಬೇಕು. ಇಲ್ಲಿರುವ ಯಕ್ಷಗಾನದ ಸ್ಥಿತ್ಯಂತರಗಳು, ಪಾತ್ರಗಳನ್ನು ಮಾಡಬೇಕಾದ ರೀತಿ, ಶೈಕ್ಷಣಿಕವಾಗಿ ಯಕ್ಷಗಾನ ಅನುಸರಿಸ ಬೇಕಾದ ಧೋರಣೆಗಳು ಇತ್ಯಾದಿಗಳು ನಮ್ಮ ಕಲಾಬದುಕಿಗೆ ಯೋಗ್ಯ ಮಾರ್ಗದರ್ಶನವನ್ನು ಮಾಡುತ್ತದೆ. ಒಟ್ಟಿನಲ್ಲಿ ಈ ಕಾದಂಬರಿ ಕೊನೆಯವರೆಗೂ ಕುತೂಹಲದಿಂದ ಓದಿಸಿಕೊಂಡು ಹೋಗಿ, ಯಕ್ಷಗಾನಕ್ಕೆ ಅಪೂರ್ವ ಮತ್ತು ಸಂಗ್ರಹಯೋಗ್ಯ ಕೃತಿ ಎನಿಸುತ್ತದೆ. ಈ ನಿಟ್ಟಿನಲ್ಲಿ ಯಕ್ಷಗಾನ ಆವರಣನಲ್ಲಿ ರೂಪಗೊಂಡ ಜಿ.ಎಸ್ ಭಟ್ಟರ ಮೊದಲ ಈ ಪ್ರಯತ್ನ ಯಶಸ್ವಿಯಾಗಿದೆ ಎನ್ನಲೂ ಅಡ್ಡಿಯಿಲ್ಲ

-ರವಿ ಮಡೋಡಿ, ಬೆಂಗಳೂರು