ಮಂಜುಗಡ್ಡೆ ಕೆಳಗೆ 1640 ಅಡಿ ಆಳದಲ್ಲಿ ಹೊಸ ಜೀವಿಗಳ ಪತ್ತೆ

ಮಂಜುಗಡ್ಡೆ ಕೆಳಗೆ 1640 ಅಡಿ ಆಳದಲ್ಲಿ ಹೊಸ ಜೀವಿಗಳ ಪತ್ತೆ

ಮಂಜಿನ ಖಂಡ ಅಂಟಾರ್ಕ್‌ಟಿಕ್. ಅಲ್ಲಿ 1640 ಅಡಿ ಆಳದಲ್ಲಿರುವ ನದಿಯಲ್ಲಿ ಹೊಸ ಜೀವಿಗಳನ್ನು ಪತ್ತೆ ಮಾಡಿದ್ದಾರೆ ಸಂಶೋಧಕರು. ನ್ಯೂಝಿಲೆಂಡಿನ ಸಂಶೋಧಕರು ಮಂಜುಗಡ್ಡೆಯ ಬೃಹತ್ ಪದರವನ್ನು ಕೊರೆದು, ಆ ತೂತಿನಲ್ಲಿ ಆಳದ  ಗವಿಗೆ ಕೆಮರಾ ಇಳಿಸಿದಾಗ, ಹಿಂದೆಂದೂ ಕಂಡಿರದಿದ್ದ ಜೀವಿಗಳು ಪತ್ತೆಯಾಗಿವೆ. ಸಿಗಡಿಯಂತಿರುವ ಸಣ್ಣ ಗಾತ್ರದ ಸಾವಿರಾರು ಉಭಯಜೀವಿಗಳು ಕೆಮರಾವನ್ನು ಮುತ್ತಿದವು.

ರೊಸ್ಸ್ ಐಸ್ ಶೆಲ್ಫ್ ಎಂಬುದು ಅಂಟಾರ್ಕ್‌ಟಿಕ್ ದಕ್ಷಿಣ ತುದಿಯಲ್ಲಿರುವ ಜಗತ್ತಿನ ಅತ್ಯಂತ ದೊಡ್ಡ ತೇಲುವ ಐಸ್ ಶೆಲ್ಫ್. ಇದರ ಅಂಚಿನ ಆಳದಲ್ಲಿದೆ ಈ ಹೊಸ ಜೀವಲೋಕ. ವಾತಾವರಣ ಬದಲಾವಣೆಯು ಐಸ್ ಶೆಲ್ಫುಗಳನ್ನು ಹೇಗೆ ಕರಗಿಸುತ್ತಿದೆ ಮತ್ತು ಅಲ್ಲಿನ ಜೀವರಾಶಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ದಾಖಲಿಸುವ ಸಂಶೋಧನಾ ಯೋಜನೆಯ ಸಂಶೋಧಕರು ಈ ಶೋಧ ಮಾಡಿದವರು.

ಉಪಗ್ರಹದಿಂದ ತೆಗೆದ ಫೋಟೋಗಳನ್ನು ಪರಿಶೀಲಿಸಿದಾಗ, ಆ ಐಸ್ ಶೆಲ್ಫ್ ಭೂಭಾಗವನ್ನು ತಗಲಿಕೊಂಡಿರುವಲ್ಲಿ ಒಂದು ಸೂತ್ರಮಾರ್ಗ (ಗ್ರೂವ್)ವನ್ನು ಸಂಶೋಧಕರು ಗಮನಿಸಿದ್ದರು; ಅದು ಮಂಜುಗಡ್ಡೆ ಕೆಳಗಿರುವ ಅಳಿವೆ ಆಗಿರಬೇಕೆಂದು ಅವರು ಭಾವಿಸಿದ್ದರು. ಕ್ರಮೇಣ ಅದು ಒಂದು ಭೂಮ್ಯಂತರ್ಗತ ನದಿ ಎಂದು ನಿರ್ಧರಿಸಿದರು. ಅನಂತರ ಸಂಶೋಧನಾ ತಂಡದ ಸದಸ್ಯರು ಆ ಜಾಗದಲ್ಲಿ ಒಟ್ಟು ಸೇರಿದರು. ವೆಲ್ಲಿಂಗ್‌ಟನ್ನಿನ ವಿಕ್ಟೋರಿಯಾ ವಿಶ್ವವಿದ್ಯಾಲಯ ರೂಪಿಸಿದ ಒಂದು ವಿಶೇಷ ಬಿಸಿನೀರಿನ ಡ್ರಿಲ್ ಬಳಸಿ, ಬೃಹತ್ ಐಸ್ ಶೆಲ್ಫನ್ನು 1640 ಅಡಿ ಆಳಕ್ಕೆ ಕೊರೆದರು. ಮಂಜುಗಡ್ಡೆಯಾಳದ ಗವಿಯನ್ನು ಡ್ರಿಲ್ ತಲಪಿದಾಗ ಕೆಮರಾ ಕೆಳಗಿಳಿಸಿದರು. ಶುರುವಿಗೆ ಅವರಿಗೆ ಎಲ್ಲವೂ ಮಸಕಾಗಿ ಕಾಣಿಸಿತು. ಅನಂತರ, ಕೆಮರಾ ಫೋಕಸ್ ಮಾಡಿದಾಗ ರಾಶಿರಾಶಿ ಉಭಯಜೀವಿಗಳು ಕಾಣಿಸಿದವು!

ಆ ಸಂಶೋಧನಾ ತಂಡದ ಸದಸ್ಯರಾದ ರಾಷ್ಟ್ರೀಯ ಜಲ ಮತ್ತು ವಾತಾವರಣ ಸಂಶೋಧನಾ ಸಂಸ್ಥೆಯ ವಿಜ್ನಾನಿ ಕ್ರೇಗ್ ಸ್ಟೀವನ್ಸ್ ಹೀಗೆನ್ನುತ್ತಾರೆ: “ಭೂಭಾಗದಲ್ಲಿ ಅಂತಹ ಜೀವರಾಶಿ ಕಂಡಿದ್ದರೆ ಸಂತೋಷದಿಂದ ಕುಣಿದಾಡುತ್ತಿದ್ದೆವು; ಆದರೆ ಮಂಜುಗಡ್ದೆಯ ಮೇಲೆ ಕುಣಿದಾಡುವಂತಿರಲಿಲ್ಲ.” ಇನ್ನು ಅಲ್ಲಿನ ನೀರಿನ ಸ್ಯಾಂಪಲನ್ನು ವಿಶ್ಲೇಷಿಸಿ, ಅದರಲ್ಲಿರುವ ಪೋಷಕಾಂಶ ಇತ್ಯಾದಿಗಳ ಬಗ್ಗೆ ಅಧ್ಯಯನ ನಡೆಸಬೇಕಾಗಿದೆಯೆಂದೂ ಅವರು ತಿಳಿಸುತ್ತಾರೆ.

ಅಲ್ಲಿ ಸಂಶೋಧಕರು ಗಮನಿಸಿದ ಇನ್ನೊಂದು ಸಂಗತಿ: ಆ ನದಿಯ ನೀರು ಏಕರೂಪವಾಗಿರಲಿಲ್ಲ; ಅಲ್ಲಿ ಒಂದೇ ನದಿಯಲ್ಲಿ ನಾಲ್ಕೈದು ನೀರಿನ ಪ್ರವಾಹಗಳು ಬೇರೆಬೇರೆ ದಿಕ್ಕುಗಳಿಗೆ ಹರಿಯುತ್ತಿದ್ದವು. ನೀರಿನ ಉಷ್ಣತೆ ಮತ್ತು ಉಪ್ಪಿನಂಶದ ವ್ಯತ್ಯಾಸಗಳೇ ಇದಕ್ಕೆ ಕಾರಣ.

ಅಂಟಾರ್ಕ್‌ಟಿಕ್ ಐಸ್ ಶೆಲ್ಫುಗಳು ತೇಲುತ್ತಿರುವಾಗ ಅವುಗಳ ಕೆಳಗಡೆ ನೀರಿನ ಪ್ರವಾಹಗಳು ಹರಿಯುತ್ತಲೇ ಇರುತ್ತವೆ. ಸಾಗರದ ನೀರು ಒಂದು ದಿಕ್ಕಿನಲ್ಲಿ "ಒಳಕ್ಕೆ" ಹರಿದು ಬಂದು, ಇನ್ನೊಂದು ದಿಕ್ಕಿನಲ್ಲಿ “ಹೊರಕ್ಕೆ" ಹರಿಯುತ್ತದೆ. ಇಂತಹ ಕೆಲವು ನೀರಿನ ಪ್ರವಾಹಗಳು ಬಿಸಿಯಾಗಿದ್ದು, ಐಸ್ ಶೆಲ್ಫಿನ ಮಂಜುಗಡ್ದೆಯನ್ನು ಕರಗಿಸುತ್ತವೆ.

ಆ ಸಂಶೋಧಕರು ಈ ಎಲ್ಲ ಮಾಹಿತಿ ದಾಖಲಿಸುತ್ತಿರುವಾಗ, ಸಾವಿರಾರು ಕಿಲೋಮೀಟರ್ ದೂರದಲ್ಲಿ, ದಕ್ಷಿಣ ಶಾಂತ ಸಾಗರದಲ್ಲಿ, ಹುಂಗ-ಟೊಂಗಾ-ಹುಗ-ಹಾಫೈ ಜ್ವಾಲಾಮುಖಿ ಸ್ಫೋಟಿಸಿತು; ಅದರಿಂದಾಗಿ ತ್ಸುನಾಮಿ ಪುಟಿದೆದ್ದಿತು. ಮಂಜುಗಡ್ದೆಯಲ್ಲಿ ಕೊರೆದಿದ್ದ ಸುರಂಗದ ಆಳದಲ್ಲಿ ಜ್ವಾಲಾಮುಖಿ ಸ್ಫೋಟದಿಂದಾಗಿ ಆದ ಒತ್ತಡದ ಬದಲಾವಣೆಗಳನ್ನೂ ಅವರು ದಾಖಲಿಸಿಕೊಂಡರು.

ಅಂತೂ ಈ ವರೆಗೆ ಕಂಡುಕೇಳರಿಯದ ಜೀವಲೋಕವೊಂದು ಅಂಟಾರ್ಕ್‌ಟಿಕ್ ಮಂಜಿನ ಖಂಡದ ಆಳದಲ್ಲಿ ಪತ್ತೆಯಾಗಿದೆ. ನಮ್ಮ ಭೂಮಿಯಲ್ಲಿ ನಾವರಿಯದ ಇಂತಹ ಇನ್ನೆಷ್ಟು ವಿಸ್ಮಯಗಳು ಇವೆಯೋ!

ಸಾಂದರ್ಭಿಕ ಫೋಟೋ 1 ಮತ್ತು 2: ಅಂಟಾರ್ಕ್‌ಟಿಕ್‌ನ ಸಂಶೋಧನಾ ಕೇಂದ್ರಗಳು … ಕೃಪೆ: ಪಿಕ್ಸಬೇ.ಕೋಮ್

Comments

Submitted by Shreerama Diwana Mon, 06/20/2022 - 09:30

ರೋಚಕ ಕಥಾನಕ !

ಮಂಜುಗಡ್ಡೆಯ ಕೆಳಗೆ ಅದೂ ೧೬೪೦ ಅಡಿಗಳ ಆಳದಲ್ಲಿ ಜೀವಿಗಳು ವಾಸ ಮಾಡುತ್ತಿರುವ ರೋಚಕ ಕಥಾನಕವನ್ನು ಓದಿದೆ. ಬಹಳ ಅದ್ಭುತವಾದ ಮಾಹಿತಿ. ಮುಂದಿನ ದಿನಗಳಲ್ಲಿ ಈ  ಜೀವಿಗಳ ಬಗ್ಗೆ ಇನ್ನಷ್ಟು ವಿಷಯಗಳು ತಿಳಿಯಬಹುದೇನೋ? 

ಸಮುದ್ರದ ಆಳದಲ್ಲಿ ಬೆಳಕು ಹೋಗದ ಜಾಗದಲ್ಲೂ ಹಲವಾರು ಜೀವಿಗಳು ಇವೆಯೆಂದು ಓದಿರುವೆ. ಅವುಗಳಿಗೆ ಕಣ್ಣುಗಳೇ ಇಲ್ಲವಂತೆ. ಏಕೆಂದರೆ ಹಲವಾರು ವರ್ಷಗಳಿಂದ ಕತ್ತಲೆಯನ್ನೇ ಬದುಕು ಮಾಡಿಕೊಂಡಿರುವ ಇವುಗಳಿಗೆ ದೃಷ್ಟಿಯ ಅಗತ್ಯತೆಯೇ ಬಿದ್ದಿಲ್ಲವೆಂದು ಓದಿದ ನೆನಪು. 

ಇಂತಹ ಲೇಖನಗಳು ಇನ್ನಷ್ಟು ನಿಮ್ಮ ಲೇಖನಿಯಿಂದ ಮೂಡಿ ಬಂದು ನಮ್ಮ ಜ್ಞಾನದ ತೃಷೆಯನ್ನು ತೀರಿಸಲಿ ಎಂದು ಆಶಿಸುವೆ.