ಮಂಟಪ

ಮಂಟಪ

ನಾ ಎಂದೂ ನೋಡದ ಜಾಗ ದೇವನಳ್ಳಿ. ಇತ್ತೀಚೆಗೆ ಅಲ್ಲಿಯ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಪ್ರಾಂಗಣದಲ್ಲಿರುವ ಈ ಕಲ್ಲಿನ ಮಂಟಪ ಯಾಕೊ ಮನ ಸೆಳೆಯಿತು. ತೆಗೆದೆ ಮೊಬೈಲ್ಲನಲ್ಲೊಂದು ಚಿತ್ರ. ಇದನ್ನು ನೋಡಿದಾಗೆಲ್ಲ ಮನದೊಳಗೆ ಎನೇನೊ ವಿಚಾರಗಳ ಸಂಘಷ೯ ಕವನ ಬರೆಯಲು ಕಾರಣವಾಯಿತು.
ಭೂಮಿ ಆಕಾಶ
ಎರಡೂ ಒಂದೆ
ಇದಕ್ಕಿಲ್ಲ ತಡೆಗೋಡೆ
ಗಾಳಿ ಬೆಳಕಿನ
ಹಿಂಡುಗಳ ದಂಡು
ವಿಶಾಲ ಪ್ರಾಂಗಣ.
ನಿನ್ನಂಗಳದ ತುಂಬ
ರಂಗೋಲಿಯ ಸುಂದರ
ಚಿತ್ತಾರ ಬಿಡಿಸಿ
ಅರಿಶಿನ, ಕುಂಕುಮ
ರಂಗುಗಳಿಂದ ಶೃಂಗಾರಗೊಳಿಸಿ
ಹೂ ದಂಡೆಗಳೊಂದಿಗೆ
ಚುಕ್ಕಿ ದೀಪಗಳ ಮಾಲೆ ತೊಡಿಸಿ
ಹಸಿರು ತೋರಣಗಳ 
ಸೀರೆ ಉಡಿಸಿ
ಗೊನೆ ಬಾಳೆ ಬಳುಕುವ
ವೈಯ್ಯಾರವ ತೋರುತಿರಲು
ಯಾವ ಮದುಮಗಳಿಗೆ
ನೀ ಕಮ್ಮಿ ಹೇಳೆ!
ದಿಬ್ಬಣದ ಮೆರವಣಿಗೆಯಲ್ಲಿ
ಶಹನಾಯಿ ವಾದ್ಯವಿದ್ದರೂ
ಬಂದ ನೆಂಟರಿಷ್ಟರೆಲ್ಲ
ಕತ್ತೆತ್ತಿ ನೋಡುವುದು
ಮೊದಲು ನಿನ್ನನ್ನೆ
ಕಂಡು ಎಲ್ಲರ
ಮನಸ್ಸು ಅರಳುವುದು
ಸಂಭ್ರಮದಲ್ಲಿ
ಆಹಾ! ಎಷ್ಟು ಸುಂದರ.
ನಾ ಖಾಲಿ ಮಂಟಪ
ಎಂದು ಕೊರಗದಿರು
ಅಂದವಾಗಿ ಶೃಂಗಾರಗೊಂಡಲ್ಲಿ
ದೇವಲೋಕದ ಅಪ್ಸರೆಯರನ್ನೇ
ನಿನ್ನ ಮುಂದೆ ನಿವಾಳಿಸುವಷ್ಟು
ನೀ ಸುರಸುಂದರಾಂಗಿ.
ನೋಡುವ ದೃಷ್ಟಿ
ಭಾವನೆ ಬದಲಾದಲ್ಲಿ
ಎಲ್ಲವೂ ಸುಃಖಮಯ
ಅದಿಲ್ಲವಾದರೆ
ಬದುಕೆಂಬುದು ಸದಾ
ಖಾಲಿ ಮಂಟಪ!

Comments

Submitted by kavinagaraj Fri, 08/12/2016 - 15:36

ಭಾವನೆ ಬದಲಾದಲ್ಲಿ
ಎಲ್ಲವೂ ಸುಖಮಯ! - ನಿಜ.