ಮಂಡಕ್ಕಿ ಭಟ್ಟಿಯ ತಿಮ್ಮನ ಹಾಡು

ಮಂಡಕ್ಕಿ ಭಟ್ಟಿಯ ತಿಮ್ಮನ ಹಾಡು

ಕವನ

ದುಡಿದು ಸವೆಸಿದ ಕೈಯ ರೇಖೆಗಳೂ 

ನಿರೀಕ್ಷೆಯ ಹಾಡನ್ನು ಕೊಂದಿವೆ

ತಿದಿಯೂದಿದ ಕುಲುಮೆಯ ಕಾವು - ಹೊಗೆ

ಚಹರೆಯ ರೂಪಕ್ಕೆ ಕಪ್ಪುಡಿಸಿವೆ.

ಪಟ ಪಟನೆ ಅರಳುವ ಮಂಡಕ್ಕಿಯಂತೆ

ನನ್ನ ಕನಸುಗಳು ಅರಳುವುದಿಲ್ಲ 

ಸಂಜೆ ಹಟ್ಟಿ ಎದುರು ಕಾದು ಕೂತ ಅಪ್ಪ 

ಹೆಂಡದಂಗಡಿಯ ಮೇಲೆ ಚಂದ್ರ ಬಿಂಬದ ನಿರೀಕ್ಷೆಯಲ್ಲಿದ್ದರೆ

ಅವ್ವ ಅನ್ನ ಯಜ್ಞದ ಒಲೆಗೆ ಬೆಂಕಿಯಿಡಲು ಒದ್ದಾಡುತಿರುತ್ತಾಳೆ. 

ತಮ್ಮನ ಶಾಲೆಯ ಪುಸ್ತಕದ  ಚಿತ್ರದಲ್ಲಿನ

ಅಪ್ಪ ಅಮ್ಮ ಮಕ್ಕಳು ನಮ್ಮನ್ನು

ನೋಡಿ ನಕ್ಕಂತೆ ಅನಿಸುತ್ತದೆ.

ಗಂಜಿಗೊಂದಿಷ್ಟು ಉಪ್ಪು ಬೆರೆಸಿ ಕುಡಿದು

ಸಗಣಿ ಮೆತ್ತಿದ ನೆಲದ ಮೇಲೆ ಮಲಗುತ್ತೇನೆ

ಕೇರಿಯ ನಾಯಿಗಳ ಕುಯ್ಯೋ ಮರ್ರೋ ಸಂಗೀತ

ಗುಂಯ್ಗುಡುವ ಸೊಳ್ಳೆಗಳ ಆಲಾಪ

ಮತ್ತೆ ಮತ್ತೆ  ಹುಟ್ಟುವ ಸೂರ್ಯ

ನಾಳೆ ಸತ್ತು ಹೋಗಲಿ ಎಂದು ಬೇಡುತ್ತೇನೆ

ಆದರೆ............................................ 


(ವಾಣಿ ಶೆಟ್ಟಿಯವರ ಕವನ 'ಬಾಲ ಕಾರ್ಮಿಕನ ಸ್ವಗತ' ಮೂಡಿಸಿದ ಚಿಂತನೆಯಿಂದ ಹುಟ್ಟಿದ ಸಾಲುಗಳು)

Comments