ಮಂಡೂಕ ಮಹಾರಾಜ

ಮಂಡೂಕ ಮಹಾರಾಜ

ಪುಸ್ತಕದ ಲೇಖಕ/ಕವಿಯ ಹೆಸರು
ರೋಹಿತ್ ಚಕ್ರತೀರ್ಥ
ಪ್ರಕಾಶಕರು
ಅಯೋಧ್ಯಾ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೮೦-೦೦ ಮೊದಲ ಮುದ್ರಣ: ಸೆಪ್ಟೆಂಬರ್ ೨೦೨೦

ಮಂಡೂಕ ಮಹಾರಾಜ ಎಂಬ ಹೆಸರಿನಲ್ಲಿ ನೆರೆಹೊರೆಯ ದೇಶಗಳ ಮಕ್ಕಳ ಕಥೆಗಳನ್ನು ಹುಡುಕಿ ತಂದು ರೋಹಿತ್ ಚಕ್ರತೀರ್ಥ ಪ್ರಕಟಿಸಿದ್ದಾರೆ. ಈಗಿನ ಮಕ್ಕಳು ಕಥೆ ಪುಸ್ತಕ ಓದುವುದೇ ಇಲ್ಲ ಎಂಬ ಅಪವಾದವಿದೆ. ಈಗಾಗಲೇ ನೀವು ಅಜ್ಜಿ ಹೇಳಿದ ಕಥೆಗಳು ಓದಿದ್ದರೆ, ಈ ಪುಸ್ತಕದ ಕಥೆಗಳೂ ಅವೇ ಸಾಲಿಗೆ ಸೇರುತ್ತವೆ. ಪುಟ್ಟ ಪುಟ್ಟ ಕಥೆಗಳು ಮಕ್ಕಳಿಗೆ ಓದಲೂ ಚೆನ್ನ, ಮಕ್ಕಳಿಗೆ ಕಥೆಯನ್ನು ಓದಿ ಹೇಳುವ ಹಿರಿಯರಿಗೂ ಅನುಕೂಲ.ರೋಹಿತ್ ಚಕ್ರತೀರ್ಥ ಗಣಿತ ಉಪನ್ಯಾಸಕರು. ಕನ್ನಡದಲ್ಲಿ ವಿಜ್ಞಾನ ಹಾಗೂ ಗಣಿತದ ವಿಷಯದಲ್ಲಿ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಲೇಖನಗಳನ್ನು ಬರೆಯುತ್ತಾರೆ. ಪತ್ರಿಕೆಗಳಲ್ಲಿ ಅಂಕಣಗಳನ್ನೂ ಬರೆಯುತ್ತಾರೆ. 

ರೋಹಿತ್ ನಿಮ್ಮೊಡನೆ ಒಂದಿಷ್ಟು.. ಎಂಬ ಮುನ್ನುಡಿಯಲ್ಲಿ ‘ಮಕ್ಕಳ ಕಥೆ ಬರೆಯುವುದು ನನಗೆ ಇಷ್ಟ. ಏಕೆಂದರೆ ಮಕ್ಕಳ ಕಥೆಗಳದು ಒಂದು ಮುಗ್ಧ ರಮ್ಯ ಪ್ರಪಂಚ. ಅಲ್ಲಿ ಏನು ಬೇಕಾದರೂ ಆಗಬಹುದು. ಕಾಗೆಯ ರೆಕ್ಕೆಗಳಿಗೆ ಬಣ್ಣ ಬರಬಹುದು. ಕಪ್ಪೆಯೇ ಕಾಡಿನ ರಾಜನಾಗಬಹುದು. ಆನೆಗಳಿಗೆ ರೆಕ್ಕೆ ಬಂದು ಅದು ಆಕಾಶದಲ್ಲಿ ಹಾರಬಹುದು. ಮಕ್ಕಳ ಕಥೆಗಳ ಜಗತ್ತಿನಲ್ಲಿ ಸತ್ಯ ಹೇಳಿದವರು ಗೌರವಿಸಲ್ಪಡುತ್ತಾರೆ. ತಪ್ಪುಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಮೋಸಗಾರರು ನರಕಕ್ಕೆ ಹೋಗುತ್ತಾರೆ., ಗುಣವಂತರು ಕಷ್ಟಪಟ್ಟರೂ ಕೊನೆಗೆ ಸುಖವನ್ನೇ ಉಣ್ಣುತ್ತಾರೆ. ಇದೊಂದು ಕಲ್ಪನಾಲೋಕ. ಅದಕ್ಕೆಂದೇ ಇದು ಆದರ್ಶಲೋಕವೂ ಹೌದು. ಈ ಬಾಲ್ಯದಲ್ಲಿ ಮಕ್ಕಳು ಸಿಕ್ಕಷ್ಟು ಕಥೆಗಳನ್ನು ತಮ್ಮೊಳಗೆ ತುಂಬಿಕೊಳ್ಳಬೇಕು. ಹಾಗೆ ತುಂಬಿಕೊಂಡ ಕಥೆಗಳೇ ಮುಂದೆ ಅವರ ಜೀವನದಲ್ಲಿ ಒಂದಿಲ್ಲೊಂದು ಬಗೆಯಲ್ಲಿ ದಾರಿದೀಪಗಳಾಗಿ ಬಂದಾವು.' ಎಂದು ಬರೆಯುತ್ತಾರೆ.

ಈ ಪುಸ್ತಕದಲ್ಲಿರುವ ಕಥೆಗಳೆಲ್ಲವೂ ಭಾರತದ ನೆರೆಹೊರೆಯ ದೇಶಗಳಾದ ಚೀನಾ, ಜಪಾನ್, ಕೊರಿಯ, ಟಿಬೆಟ್, ಫಿಲಿಫೈನ್ಸ್ ಮತ್ತು ರಷ್ಯಾ ದೇಶದವುಗಳು. ಭಾಷೆ ಯಾವುದಾದರೇನಂತೆ. ಕಥೆಗಳು ಯಾವುದೇ ದೇಶದ್ದು ಆದರೂ ಅವುಗಳು ನಮ್ಮ ದೇಶದ್ದೇ ಎಂಬ ಭಾವನೆ ಕೊಡುತ್ತದೆ. ಸರಳ ಹಾಸ್ಯ ಕಥೆಗಳಿವೆ. ಮನುಷ್ಯರಂತೆಯೇ ಮಾತನಾಡುವ ಪ್ರಾಣಿಪಕ್ಷಿಗಳಿವೆ. ನಮ್ಮ ಸುತ್ತಮುತ್ತ ಕಾಣುವ ಮೋಸಗಾರರು ಅಲ್ಲಿಯ ಕಥೆಗಳಲ್ಲೂ ಇದ್ದಾರೆ. ಕಥೆಗಳನ್ನು ಓದಿದ ನಂತರ ಅವರೂ ನಮ್ಮಂತೆಯೇ ಮನುಷ್ಯರು ಎಂಬುದು ಗೊತ್ತಾಗುತ್ತದೆ. ಜನಪದ ಕಥೆಗಳು ಯಾವಾಗಲೂ ಓದಲು ಹಿತಕರ. ಇಲ್ಲಿಯ ಕತೆಗಳಿಗೆ ಶೈಲೇಶ್ ಕುಮಾರ್ ಉಜಿರೆ ಇವರು ರೇಖಾಚಿತ್ರಗಳನ್ನು ಬಿಡಿಸಿದ್ದಾರೆ. ಇದರಿಂದ ಮಕ್ಕಳಿಗೆ ಚಿತ್ರಗಳನ್ನು ನೋಡುತ್ತಾ ಓದುವುದಕ್ಕೆ ಆಸಕ್ತಿ ಕುದುರಬಹುದು. ಮಕ್ಕಳ ಪೋಷಕರೂ ಇಲ್ಲಿ ನೀಡಿರುವ ಕತೆಗಳನ್ನು ಓದಿ ತಮ್ಮ ಮಕ್ಕಳಿಗೆ ಹೇಳಲೂ ಬಹುದು. ಪುಸ್ತಕದಲ್ಲಿ ೧೮ ಪುಟ್ಟ ಪುಟ್ಟ ಕತೆಗಳಿವೆ. ಅಯೋಧ್ಯಾ ಪ್ರಕಾಶನದವರ ೯ನೇ ಪುಸ್ತಕವಾದ ಇದರಲ್ಲಿ ಸುಮಾರು ೧೦೫ ಪುಟಗಳಿವೆ. ಮೊಬೈಲ್, ಟಿವಿಗಳ ಹಿಂದೆ ಬಿದ್ದಿರುವ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಈ ಕಿಶೋರ ಕಥಾಕೋಶವು ಸಹಕಾರಿಯಾಗಬಲ್ಲುದು.