ಮಂತ್ರ ಸ್ವಾಧ್ಯಾಯ

ಮಂತ್ರ ಸ್ವಾಧ್ಯಾಯ

ಪಾತಂಜಲ ಯೋಗ ಸೂತ್ರದ ಎರಡನೇ ಪಾದ, ಎರಡನೇ ಮೆಟ್ಟಿಲು, ನಾಲ್ಕನೇ ಉಪಾಂಗದಲ್ಲಿ ಬರುವ ಎರಡನೇ ಸ್ವಾಧ್ಯಾಯ ಮಂತ್ರ ಸ್ವಾಧ್ಯಾಯ. ಮಂತ್ರ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ಮಂತ್ರ ಸ್ವಾಧ್ಯಾಯ ಎಂದರೆ, ಮಂತ್ರವನ್ನು ಮತ್ತೆ ಮತ್ತೆ ನುಡಿಯಬೇಕು. ಮಂತ್ರ ಎಂದರೇನು? ಮಂತ್ರ ಎಂದರೆ ಪಾತಂಜಲರ ಪ್ರಕಾರ ಯಾವುದನ್ನು ಮನನ ಮಾಡಿದರೆ ಮನಸ್ಸು ಅರಳುತ್ತದೆ, ಯಾವುದನ್ನು ಮನನ ಮಾಡಿದರೆ ಮನಸ್ಸು ಪಾಪ ಮುಕ್ತವಾಗುತ್ತದೆ, ಯಾವುದನ್ನು ಮನನ ಮಾಡಿದರೆ ಮನಸ್ಸಿನ ತಾಪ ದೋಷ ಮರೆಯಾಗುತ್ತದೆ, ಯಾವುದನ್ನು ಮನನ ಮಾಡಿದರೆ ಚಿಂತೆ ದುಃಖ ಕಡಿಮೆಯಾಗುತ್ತದೆ ಅದು ಮಂತ್ರ. ಮಂತ್ರ ಎಂದರೆ ಮನನಾತ್ ತ್ರಾಯತೆ ಇತಿ ಮಂತ್ರ. ಬಸವಣ್ಣನವರ ಮಂತ್ರ ಕೂಡಲಸಂಗಮ ಅನ್ನುವುದೇ ಮಂತ್ರ. ಎದ್ದರೂ ಕೂಡಲಸಂಗಮ, ಮಲಗಿದರೂ ಕೂಡಲಸಂಗಮ. ಕೂಡಲಸಂಗಮ ಎಂದರೆ ಎಲ್ಲಾ ಎಲ್ಲಿ ಹೋಗಿ ಕೂಡುತ್ತದೆಯೋ ಅದೇ ಕೂಡಲಸಂಗಮ. ಎಲ್ಲ ಎಲ್ಲಿ ಮರೆಯಾಗಿ ಹೋಗುತ್ತದೆಯೋ ಅದೇ ಕೂಡಲಸಂಗಮ. ಎಲ್ಲಿ ಎಲ್ಲಾ ಐಕ್ಯ ಹೊಂದುತ್ತದೆಯೋ ಅದೇ ದೇವರು. ಅದೇ ಕೂಡಲಸಂಗಮ. ಕೂಡುವ ದಿವ್ಯ ಸಂಗಮ. ದೇವ ಎಂದರೆ ಸಂಗಮ. ಅಸ್ತಿತ್ವದ ಸಾಗರವೇ ದೇವರು. ಮಾನವನ ಅಸ್ತಿತ್ವ, ಜೀವಿಗಳ ಅಸ್ತಿತ್ವ, ಸಸ್ಯ ಜಗತ್ತಿನ ಅಸ್ತಿತ್ವ, ಎಲ್ಲ ಎಲ್ಲಿ ಹೋಗಿ ಒಂದಾಗಿ ಬಿಡುತ್ತದೆಯೋ ಅದೇ ದೇವರು. 

ಬಸವಣ್ಣ ಬದುಕಿರುವ ತನಕ ಬಳಸಿದ ಮಂತ್ರ. ಭಗವಂತನನ್ನು ಆ ರೀತಿ ತೋರಿಸಿತು. ಅಲ್ಲಮ ಪ್ರಭುದೇವರ ಮಂತ್ರ ಗುಹೇಶ್ವರ. ಎದೆಯೊಳಗೆ ಇರುವ ಈಶ್ವರ. ಜಗತ್ತಿನ ಮೂಲ ಕೇಂದ್ರದಲ್ಲಿ ಇರುವ ಈಶ್ವರ. ಗುಹೆ ಅಂದರೆ ಒಳಗೆ ಇರುವವ. ನನ್ನೊಳಗೆ, ನಿಮ್ಮೊಳಗೆ, ವಿಶ್ವದೊಳಗೆ ಯಾವುದು ಶಾಂತವಾಗಿದೆಯೋ ಅದೇ ಗುಹೇಶ್ವರ. ಒಬ್ಬೊಬ್ಬರಿಗೆ ಒಂದೊಂದು ಮಂತ್ರ. ತುಕಾರಾಮನಿಗೆ ವಿಠಲ. ಅಕ್ಕಮಹಾದೇವಿಯ ಮಂತ್ರ ಚನ್ನಮಲ್ಲಿಕಾರ್ಜುನ. ಚೆನ್ನ ಮಲ್ಲಿಕ ಅರ್ಜುನ ಎಂದರೆ ಶುದ್ಧ, ಸ್ವಚ್ಛ, ಸುಂದರ. ಯಾವುದನ್ನು ನೋಡಿದರೆ ಮನಸ್ಸು ಮಧುರವಾಗುತ್ತದೆ ಅದೇ ಚೆನ್ನಮಲ್ಲಿಕಾರ್ಜುನ. ದೇವರು ಅಂದರೆ ಸುಂದರ ಹೂ ಇದ್ದಂತೆ. ಅಕ್ಕನ ದೃಷ್ಟಿಯಲ್ಲಿ ಮಧುರತೆಯೇ ದೇವರು. ವಿಶ್ವದಲ್ಲಿ ಯಾವುದರಿಂದ ಸೌಂದರ್ಯ ಹರಿದು ಬರುತ್ತದೆಯೋ, ಯಾವುದರಿಂದ ಮಧುರತೆ ಹರಿದು ಬರುತ್ತದೆಯೋ, ಅದೇ ಚೆನ್ನಮಲ್ಲಿಕಾರ್ಜುನ. ಮೀರಾ ಬಾಯಿಗೆ ಕೃಷ್ಣ. ವಾಲ್ಮೀಕಿಗೆ ರಾಮ. ಒಬ್ಬೊಬ್ಬರಿಗೆ ಒಂದೊಂದು ಮಂತ್ರ. ಈ ಮಂತ್ರಗಳನ್ನು ಮತ್ತೆ ಮತ್ತೆ ಹೇಳಿಕೊಳ್ಳುವುದು, ನುಡಿಯುವುದು, ಮಂತ್ರಸ್ವಾಧ್ಯಾಯ. ನಾರಾಯಣ ಒಂದು ಮಂತ್ರ. ಮೂಲ ವಸ್ತು ಸತ್ಯ. ಸತ್ಯ ಆತ್ಮ ಯಾವುದರಿಂದ ಹೊರಬರುತ್ತದೆ, ಸತ್ಯ ಆತ್ಮಕ್ಕೆ ಯಾವುದು ಆಶ್ರಯ ನೀಡಿದೆಯೋ ಅದೇ ನಾರಾಯಣ. ಎಲ್ಲಾ ಯಾವುದರಲ್ಲಿದೆ, ಯಾವುದರಲ್ಲಿ ಎಲ್ಲ ಇದೆ ಅದು ನಾರಾಯಣ. ಯಾವುದು ಮನಸ್ಸನ್ನು ಓಡೆಯುತ್ತದೆ, ಹಾಳು ಮಾಡುತ್ತದೆ ಅದು ಮಂತ್ರವಲ್ಲ. ಯಾವುದು ಆಸೆ ಹುಟ್ಟಿಸುತ್ತದೆ, ಭಯ ಹುಟ್ಟಿಸುತ್ತದೆ ಅದು ಮಂತ್ರ ಅಲ್ಲ. ನಾವು ಮಂತ್ರಗಳನ್ನು ವಿಭಜಿಸಿಕೊಂಡು, ಗುಂಪು ಮಾಡಿಕೊಂಡು ಹೋರಾಡುತ್ತಿದ್ದೇವೆ. ಅದು ಅಲ್ಲ. ಓಂ ಇದು ಮೊದಲ ಮಂತ್ರ. ಎಲ್ಲದರಲ್ಲೂ ಓಂಕಾರ ಇರುವುದರಿಂದ ಇದು ಮೊದಲ ಮಂತ್ರ. ಇಲ್ಲಿ ಹರಿ, ಹರ, ನಾರಾಯಣ ಇಲ್ಲ. ಎಲ್ಲದರ ಹಿಂದೆ ಯಾವುದು ಇದಿಯೋ ಅದು ಓಂ. ಯಾವ ಶಬ್ದ ನುಡಿದರೆ ಮನಸ್ಸಿಗೆ ಶಾಂತಿ, ಸಮಾಧಾನ ಸಿಗುತ್ತದೆಯೋ ಅದು ಮಂತ್ರ. ಯಾವುದು ಇಷ್ಟವಿಲ್ಲದಿದ್ದರೆ, ನೀವೇ ಒಂದು ಸುಂದರ ಶಬ್ದ ಬಳಸಿ ಅದೇ ಮಂತ್ರ. ಬೋಂತಾದೇವಿ ಶರಣೆ, ಆಕೆಯದೊಂದು ಮಂತ್ರ ಮಾಡಿಕೊಂಡಿದ್ದಳು. ದೇವರಿಗೆ ಬೀಡಾಡಿ ಎಂದು. ಹಾಗೆಯೇ ವಚನದ ಅಂತ್ಯದಲ್ಲಿ ಬೀಡಾಡಿ ಎಂದಿದೆ. ಬೀಡಾಡಿ ಎಂದರೆ ಯಾವುದಕ್ಕೂ ಬಂಧನ ಇಲ್ಲದೆ ಇರುವುದು. ದೇವರು ಯಾವುದಕ್ಕೂ ಬಂಧಿಸಿಲ್ಲ ಅಂತ ಆಕೆಯ ಮಂತ್ರ. ಇರೋ ಮಂತ್ರ ಪದೇ ಪದೇ ಹೇಳಿಕೊಳ್ಳಬೇಕು. ಇಲ್ಲವೇ ನಾವೇ ಒಂದು ಮಂತ್ರ ಮಾಡಿಕೊಂಡು ಪದೇಪದೇ ಹೇಳಿಕೊಳ್ಳುವುದು. ಮಂತ್ರ ಹೇಗೆ ಹೇಳಬೇಕೆಂದರೆ ಅದು ಮನಸ್ಸನ್ನು ಬೆಳಗಬೇಕು. ಹಾಗೆ ಮಂತ್ರದ ಧ್ವನಿ ಎಷ್ಟು ಮಹತ್ವದ್ದು. ಅದರ ಅರ್ಥ ಅಷ್ಟೇ ಬಹಳ ಮಹತ್ವದ್ದು. ಅರ್ಥ ಗೊತ್ತಿಲ್ಲದೆ 1000 ಬಾರಿ ಹೇಳಿದರೂ ಏನೂ ಉಪಯೋಗವಿಲ್ಲ. ಅರ್ಥ ತಿಳಿದು ಮಂತ್ರ ಹೇಳಬೇಕು. ಮಂತ್ರದಲ್ಲಿ ಒಂದು ಅಕ್ಷರ, ಎರಡು ಅಕ್ಷರ, ಮೂರು ಅಕ್ಷರ ಹೀಗೆ ಇವೆ. ಏಕಾಕ್ಷರ ಮಂತ್ರ ಓಂಕಾರ. ಇದೇ ನಾದ ಪ್ರವಾಹ. ಜಗತ್ತಿನಲ್ಲಿ ಒಂದು ಬಗೆಯ ಕಂಪನವಿದೆ, ತರಂಗದಿಂದ ಕೂಡಿದೆ.... ಕಂಪನ ಇಲ್ಲದಿದ್ದರೆ ಜಗತ್ ನಿರ್ಮಾಣ ಇಲ್ಲ. ಬೀಜ ಕಂಪಿಸದಿದ್ದರೆ ಮೊಳಕೆ ಇರುವುದಿಲ್ಲ. ಜೀವ ಅಂದರೆ ಒಂದು ಬಗೆಯ ಕಂಪನ ಅಲ್ಲವೇ?

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ