ಮಕರ ಸಂಕ್ರಾಂತಿಯ ತಿನಸುಗಳ ಮಹತ್ವ

ಮಕರ ಸಂಕ್ರಾಂತಿಯ ತಿನಸುಗಳ ಮಹತ್ವ

ಕೆಲವೇ ದಿನಗಳ ಹಿಂದೆ ಮಕರ ಸಂಕ್ರಾಂತಿ ಹಬ್ಬ ಮುಗಿದಿದೆ. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಆಚರಣೆಯು ಕೇವಲ ಸಂಪ್ರದಾಯಕ್ಕೆ ಸೀಮಿತವಾದರೂ ಎಲ್ಲರ ಮನೆಗಳಲ್ಲೂ ಎಳ್ಳು ಬೆಲ್ಲ ತಿಂದೇ ಇರುತ್ತೀರಿ. ‘ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡಿ' ಎಂಬ ಮಾತು ಈ ಸಂದರ್ಭದಲ್ಲಿ ಬಹಳ ಪ್ರಸ್ತುತ. ಏಕೆಂದರೆ ಈಗ ಒಳ್ಳೆಯ ಮಾತು, ಒಳ್ಳೆಯ ಮನಸ್ಸು ಬಹಳ ಅಪರೂಪವಾಗುತ್ತಿವೆ. ಜನರು ಗೋಮುಖ ವ್ಯಾಘ್ರರಾಗುತ್ತಿದ್ದಾರೆ. ಮಾನವೀಯತೆ ಕಮ್ಮಿಯಾಗುತ್ತಿರುವ ಈ ಸಂದರ್ಭದಲ್ಲಿ ನಾವು ಹಬ್ಬಗಳ ಮುಖಾಂತರ ಇನ್ನಷ್ಟು ಹತ್ತಿರವಾಗಬೇಕಾಗಿದೆ. ಆಚರಣೆ ಸರಳವಾದರೂ ನಮ್ಮ ಸನಾತನ ಹಿಂದೂ ಸಂಪ್ರದಾಯದ ಮಾನ್ಯತೆಯಲ್ಲಿ ಆಚರಿಸಿಕೊಂಡು ಬರಬೇಕು. ಸದ್ಯಕ್ಕೆ ಜನರೊಂದಿಗೆ ಬೆರೆಯುವುದು ಕಷ್ಟವಾದರೂ ಹಬ್ಬಗಳ ಸವಿಯನ್ನು ಹಂಚಿಕೊಳ್ಳಲೇ ಬೇಕು.

ವೈಜ್ಞಾನಿಕವಾಗಿ ಗಮನಿಸುವುದಾದರೆ ಸೂರ್ಯನ ಚಲನೆಯನ್ನಾಧರಿಸಿದ ಒಂದು ಪ್ರಮುಖ ಆಚರಣೆಯೇ ಮಕರ ಸಂಕ್ರಮಣ. ಸಂಕ್ರಮಣ ಎಂದರೆ ದಾಟುವುದು (transition) ಎಂದು ಅರ್ಥ. ಆಗಸ ಒಂದು ಗೋಳ. ಇದರಲ್ಲಿ ಒಂದು ಸುತ್ತು ಎಂದರೆ 360°. ಇದನ್ನು ಹನ್ನೆರಡು ಸಮಭಾಗಗಳಾಗಿ ಮಾಡಿ (30°)  ಅದಕ್ಕೊಂದು ನಕ್ಷತ್ರ ಪುಂಜ ಕೂರಿಸಿ ಅವುಗಳನ್ನು ದ್ವಾದಶ ರಾಶಿಗಳೆಂದರು.  ಈ ರಾಶಿಗಳನ್ನು  ಎರಡೂಕಾಲು ಭಾಗ ಮಾಡಿ (12°)  ಅದಕ್ಕೊಂದು ನಕ್ಷತ್ರ ಸಿಕ್ಕಿಸಿ ದಿನ ನಕ್ಷತ್ರಗಳೆಂದರು. ಸೂರ್ಯನ ಚಲನೆ ರಾಶಿಯಲ್ಲಾದರೆ ಚಂದ್ರನ ಚಲನೆ ನಕ್ಷತ್ರಗಳಲ್ಲಿ. ಆದ್ದರಿಂದ ಆತ ತಾರಾಪತಿ. ಸೂರ್ಯ ಒಂದು ತಿಂಗಳಲ್ಲಿ ಒಂದು ರಾಶಿಯಲ್ಲಿದ್ದು ಮುಂದಿನ ರಾಶಿಗೆ ಚಲಿಸುತ್ತಾನೆ. ಮೇಷದಿಂದ ಮೀನದವರೆಗೆ. ಆದ್ದರಿಂದ ಹಿಂದೆ ಮುಂದೆ ಯೋಚಿಸುತ್ತಾ ಇರುವುದಕ್ಕೆ ಮೀನ ಮೇಷ ಎಣಿಸುವುದು ಎನ್ನುವುದು. ಈ ರಾಶಿ ದಾಟುವ ದಿನವೇ ಸಂಕ್ರಮಣ. ಮಕರ ಸಂಕ್ರಮಣದಂದು ಸೂರ್ಯ ಧನುವಿನಿಂದ ಮಕರ ರಾಶಿಗೆ ಚಲಿಸುತ್ತಾನೆ.

ಈ ಸೂರ್ಯನ ಚಲನೆ ಸಾಪೇಕ್ಷವಾದುದು. ನಾವು ಬಸ್ಸಿನಲ್ಲಿ ಚಲಿಸುವಾಗ ಗಿಡ ಮರಗಳು ಓಡಿದಂತೆ. ಭೂಮಿಯು ತನ್ನ ಅಕ್ಷದಲ್ಲಿ 23.5° ವಾಲಿಕೊಂಡಿರುವುದರಿಂದ ಉತ್ತರದಿಂದ ದಕ್ಷಿಣಕ್ಕೆ ಅಲ್ಲಿಂದ ಹಿಂದಕ್ಕೆ ಸಾಪೇಕ್ಷವಾಗಿ ಸೂರ್ಯನ ಓಲಾಟ. ಈ ಚಲನೆ ಕಾಣಿಸುವುದು ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತಗಳ ನಡುವೆ ಇರುವ ಪ್ರದೇಶಗಳಿಗೆ ಮಾತ್ರ. ಇಂಗ್ಲೆಂಡ್ ನವರಿಗೆ ಸೂರ್ಯನ ದಿಕ್ಕು ದಕ್ಷಿಣ ಆಸ್ಟ್ರೇಲಿಯಾದವರಿಗೆ ಸೂರ್ಯನ ದಿಕ್ಕು ಉತ್ತರ. ಹೀಗೆ ದಕ್ಷಿಣೋತ್ತರ ಓಲಾಟದಲ್ಲಿ ಒಂದು ದಿನ ನಮ್ಮ ನೆತ್ತಿಯ ಮೇಲೆ ಬಂದು ನಮ್ಮ ನೆರಳನ್ನೇ ನುಂಗಿ ಬಿಡುತ್ತಾನೆ ಅದೇ ನೆರಳು ರಹಿತ ದಿನ (zero shadow day ZSD). ಒಂದು ದಿನ ಗವಿಗಂಗಾಧರೇಶ್ವರನ ಎದುರು ಭಾಗದಲ್ಲಿರುವ ನಂದಿಯ ಕೊಂಬುಗಳ ನಡುವೆ ಹಾದು ಗವಿ ಗಂಗಾಧರೇಶ್ವರನ ಲಿಂಗ ಸ್ಪರ್ಶ ಮಾಡುವುದು ಅವನ ಚಲನೆಯ ಒಂದು ಭಾಗ. ಈ ದಿನವೇ ಮಕರ ಸಂಕ್ರಮಣ. ಈ ದಿನ ಸೂರ್ಯನ ಮೊದಲ ಕಿರಣಗಳು ಶೃಂಗೇರಿಯ ಮಕರ ಸ್ಥಂಭವನ್ನು ಸ್ಪರ್ಶಿಸುತ್ತವೆ.  ಆದರೆ ಯಾದಗಿರಿಯ ಸುರಪುರ ತಾಲೂಕಿನ ಕೃಷ್ಣೆಯ ದಡದ ಮೇಲಿರುವ ಛಾಯಾಭಗವತಿ ಗುಡಿಯನ್ನು ಕಟ್ಟಿದ ಶಿಲ್ಪಿ ಪ್ರತಿದಿನವೂ ಅರುಣ ಕಿರಣಗಳು ಛಾಯಾ ದೇವಿಯ ಮೂರ್ತಿಯನ್ನು ಸ್ಪರ್ಶಿಸುವಂತೆ ಪ್ರತಿಷ್ಠಾಪಿಸಿದ್ದಾನೆ. ದೇವಸ್ಥಾನದ ಬಾಗಿಲನ್ನು ಮೂರ್ತಿಯ ಸ್ಥಾನವನ್ನು ಸೂರ್ಯ ಚಲನೆಯ ಆಧಾರದ ಮೇಲೆ ಕರಾರುವಾಕ್ಕಾಗಿ ಗಣಿಸಿದ ಅವನ ಗಣಿತ ಮತ್ತು ಖಗೋಳ ಜ್ಞಾನಕ್ಕೆ ಉಘೇ ಎನ್ನಲೇಬೇಕು. ಈ ರೀತಿಯ ಚಲನೆಯ ಆವರ್ತನೆಯ ತಮ್ಮ ಪರಿಶೀನೆಯ ಮೂಲಕ ಸ್ಥಿರಗೊಳಿಸಿ ದೇವಸ್ಥಾನಗಳ ವಾಸ್ತು ರಚನೆ ಮಾಡಿದ ನಮ್ಮ ಹಿರಿಯರು ನಿಜಕ್ಕೂ ‘ಮಹಾನ್' ಅಲ್ಲವೇ?

ಇದು ವೈಜ್ಞಾನಿಕ ವಿಷಯವಾಯಿತು. ಈಗ ಮಕರ ಸಂಕ್ರಾಂತಿಯಂದು ನಾವು ತಯಾರಿಸಿ ತಿನ್ನುವ ತಿನಸುಗಳ ಮಹತ್ವಗಳನ್ನು ಅರಿಯೋಣ. ಭಾರತ ದೇಶ ‘ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ'. ದೇಶಾದ್ಯಂತ ಇರುವ ವಿವಿಧ ರಾಜ್ಯಗಳಲ್ಲಿ ನೂರಾರು ಬಗೆಯ ಹಬ್ಬಗಳನ್ನು ಆಚರಿಸುತ್ತಾರೆ. ಒಂದೇ ಹಬ್ಬಕ್ಕೆ ಹಲವಾರು ಹೆಸರುಗಳು ಇವೆ. ನಾವು ಮಕರ ಸಂಕ್ರಾಂತಿ ಎಂದು ಹೇಳಿದರೆ ತಮಿಳುನಾಡಿನಲ್ಲಿ ‘ಪೊಂಗಲ್' ಎನ್ನುತ್ತಾರೆ. ಆಂಧ್ರಪ್ರದೇಶದಲ್ಲಿ ‘ಭೋಗಿ', ಗುಜರಾತ್ ನಲ್ಲಿ ‘ಉತ್ತರಾಯಣ', ಹಿಮಾಚಲದಲ್ಲಿ ‘ಮಾಘಿ' ಎಂಬ ಹೆಸರಿನಿಂದ ಕರೆಯಲಾಗುತ್ತದೆ. 

ರೈತರು ಬೆಳೆದ ಬೆಳೆಗಳನ್ನು ಕೊಯ್ಲು ಮಾಡುವ ಸಂದರ್ಭದಲ್ಲಿ ಈ ಹಬ್ಬ ಬರುತ್ತದೆ. ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ಗಾಳಿಪಟವನ್ನು ಹಾರಿಸುವುದರ ಮೂಲಕ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಆ ರಾಜ್ಯಗಳಲ್ಲಿ ಗಾಳಿಪಟ ಹಾರಾಟದ ಸ್ಪರ್ಧೆಗಳೂ ನಡೆಯುತ್ತವೆ. ಮಕ್ಕಳಿಗೆ ಈ ಹಬ್ಬ ಬಂತು ಎಂದ ಕೂಡಲೇ ಸಂಭ್ರಮ ಮನೆ ಮಾಡುತ್ತದೆ. ಈ ಹಬ್ಬದ ಬಳಿಕ ಚಳಿ ಕಡಿಮೆಯಾಗುತ್ತಾ ಹೋಗುತ್ತದೆ. 

ಸಂಕ್ರಾಂತಿ ಹಬ್ಬದ ಸಮಯದಲ್ಲಿ ನಾವು ಆಹಾರವಾಗಿ ಬಳಸುವ ಪ್ರಮುಖ ವಸ್ತುಗಳು ಬೆಲ್ಲ, ಕಬ್ಬು, ಎಳ್ಳು, ತೆಂಗಿನ ಕಾಯಿ. ಈ ವಸ್ತುಗಳನ್ನು ಈ ಸಮಯದಲ್ಲಿ ಬಳಸಲು ಆರೋಗ್ಯಕರವಾದ ಕಾರಣಗಳೂ ಇವೆ. ನಮ್ಮ ಹಿರಿಯರು ಇವುಗಳನ್ನೆಲ್ಲಾ ತಿಳಿದುಕೊಂಡೇ ಹಬ್ಬಗಳನ್ನು ಆಚರಣೆ ಮಾಡುತ್ತಿದ್ದರು. ಆದರೆ ನಾವಿಂದು ಹಬ್ಬಗಳನ್ನು ಆಡಂಬರದ ಸ್ವರೂಪಕ್ಕೆ ತಂದು ನಿಲ್ಲಿಸಿದ್ದೇವೆ. ನಮ್ಮ ರಾಜ್ಯದಲ್ಲಿ ಪರಸ್ಪರರಿಗೆ ‘ಎಳ್ಳು-ಬೆಲ್ಲ' ನೀಡುವುದರ ಮೂಲಕ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಕೆಲವರು ಪೊಂಗಲ್ ಎಂಬ ಸಿಹಿ ತಿಂಡಿಯನ್ನೂ ಮಾಡುತ್ತಾರೆ. ಅನ್ನ, ಬೇಳೆ, ತೆಂಗಿನಕಾಯಿ ಮತ್ತು ಬೆಲ್ಲ ಸೇರಿಸಿದ ಈ ತಿಂಡಿ ಬಹಳ ರುಚಿಕರವಾಗಿರುತ್ತದೆ. 

ಎಳ್ಳು-ಬೆಲ್ಲ: ಎಳ್ಳು-ಬೆಲ್ಲದ ಮಿಶ್ರಣಕ್ಕೆ ಹುರಿದ ಶೇಂಗಾ (ಕಡಲೇ ಬೀಜ), ಕೊಬ್ಬರಿ ತುಂಡುಗಳು, ಹುರಿದ ಕಡಲೇ ಬೇಳೆಗಳನ್ನು ಸೇರಿಸಿ ಇನ್ನಷ್ಟು ರುಚಿಕರವನ್ನಾಗಿಸುತ್ತಾರೆ. ಹೆಚ್ಚಾಗಿ ಬಿಳಿ ಎಳ್ಳನ್ನು ಈ ಮಿಶ್ರಣ ಮಾಡಲು ಬಳಸುತ್ತಾರೆ. ಇದನ್ನು ತಿನ್ನುವುದರಿಂದ ನಮಗಾಗುವ ಆರೋಗ್ಯ ಸಂಬಂಧಿ ಉಪಯೋಗಗಳೇನು ನೋಡೋಣ

* ಚಳಿಗಾಲದ ಸಮಯವಾದುದರಿಂದ ಎಳ್ಳನ್ನು ಸೇವಿಸುವುದರಿಂದ ಅದರಲ್ಲಿರುವ ಸತುವಿನ ಅಂಶವು ನಮ್ಮ ದೇಹಕ್ಕೆ ಧೃಢತೆಯನ್ನು ತಂದುಕೊಡುತ್ತದೆ. ನಮ್ಮ ಚರ್ಮವು ಕಾಂತಿಯುತವಾಗಲು, ತಲೆಕೂದಲು ಚೆನ್ನಾಗಿ ಬೆಳೆಯಲು ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ.

* ಎಳ್ಳು ಬೆಲ್ಲ ಮಿಶ್ರಣದಲ್ಲಿರುವ ಕೊಬ್ಬರಿ ತುಂಡುಗಳು, ಶೇಂಗಾ ಹಾಗೂ ಎಳ್ಳು ಇವುಗಳಲ್ಲಿ ಎಣ್ಣೆಯ ಅಂಶ ಇರುತ್ತವೆ. ಇವುಗಳ ಸೇವನೆಯಿಂದ ನಮ್ಮ ಗಂಟುಗಳಲ್ಲಿನ ತೊಂದರೆಯ ನಿವಾರಣೆಯಾಗುತ್ತದೆ. ದೇಹದಲ್ಲಿ ರಕ್ತ ಸಂಚಾರ ಸರಾಗವಾಗುತ್ತದೆ.

* ಎಳ್ಳು ಹಾಗೂ ಶೇಂಗಾ ಬೀಜಗಳಲ್ಲಿ ಮ್ಯಾಗ್ನೀಶಿಯಂ ಅಂಶ ಹೇರಳವಾಗಿರುವುದರಿಂದ ಅವು ನಮ್ಮ ದೇಹದ ತೂಕವನ್ನು ನಿಯಂತ್ರಿಸುತ್ತವೆ. ಸಕ್ಕರೆ ಪ್ರಮಾಣವನ್ನೂ ಸಮತೋಲನದಲ್ಲಿ ಇರಿಸಲು ಸಹಕಾರಿಯಾಗುತ್ತದೆ.

* ಭಾರತೀಯ ಸಂಸ್ಕೃತಿಯ ಪ್ರಕಾರ ತೆಂಗಿನ ಕಾಯಿಯನ್ನು ಶುಭ ಸಂಕೇತವಾಗಿ ನೋಡಲಾಗುತ್ತದೆ. ಅದೇ ರೀತಿ ತೆಂಗಿನ ಕಾಯಿಯ ಒಣ ಕೊಬ್ಬರಿಯನ್ನು ತಿನ್ನುವುದರಿಂದ ಮಕ್ಕಳಲ್ಲಿ ನೆನಪಿನ ಶಕ್ತಿಯು ವೃದ್ಧಿಸುತ್ತದೆ. 

* ತೆಂಗಿನ ಕಾಯಿಯಲ್ಲಿರುವ ಲ್ಯೂರಿಕ್ ಆಮ್ಲವು ವೈರಸ್ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ.

* 'ಸಕ್ಕರೆ ವಿಷ ; ಬೆಲ್ಲ ಅಮೃತ' ಎನ್ನುವ ಮಾತೊಂದಿದೆ. ಆ ಕಾರಣದಿಂದ ಬೆಲ್ಲವನ್ನು ಬಳಸುವುದರಿಂದ ಅದು ನಿಮ್ಮ ಜೀರ್ಣ ಕ್ರಿಯೆಯನ್ನು ಸರಾಗಗೊಳಿಸುತ್ತದೆ. 

* ಬೆಲ್ಲದ ಬಳಕೆಯು ನಮ್ಮ ಯಕೃತ್ತು (ಲಿವರ್) ಹಾಗೂ ಪಿತ್ತಜನಕಾಂಗದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕಲು ಸಹಕರಿಸುತ್ತದೆ.

* ನಿಮಗೆ ತಿಳಿದೇ ಇರುವಂತೆ ಕಡಲೇ ಬೇಳೆಯು ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದರಲ್ಲಿರುವ ಪ್ರೋಟೀನ್ ಅಂಶಗಳು ನಮ್ಮ ದೇಹಕ್ಕೆ ಬಹಳ ಪ್ರಯೋಜನಕಾರಿ. ಇದರ ಸೇವನೆಯು ನಮ್ಮ ದೇಹದ ತೂಕವನ್ನು ಸಮಪ್ರಮಾಣದಲ್ಲಿ ಇರಿಸುತ್ತದೆ.

* ಈ ಎಲ್ಲಾ ವಸ್ತುಗಳನ್ನು ಹೊಂದಿರುವ ‘ಎಳ್ಳು-ಬೆಲ್ಲ' ದ ಮಿಶ್ರಣವು ನಮ್ಮ ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

* ಮಧುಮೇಹಿಗಳು ಈ ಮಿಶ್ರಣವನ್ನು ಸೇವಿಸಬಹುದೇ ಎಂಬ ಸಂಶಯ ಬಹಳಷ್ಟು ಮಂದಿಯನ್ನು ಕಾಡುತ್ತಿರಬಹುದು. ಎಳ್ಳು ಮಧುಮೇಹಿಗಳಿಗೆ ಬಹಳ ಉತ್ತಮ. ಸ್ವಲ್ಪ ಪ್ರಮಾಣದಲ್ಲಿ ಬೆಲ್ಲವನ್ನು ಸೇರಿಸಿ ಸೇವನೆ ಮಾಡಬಹುದಾದರೂ ಅಧಿಕ ಪ್ರಮಾಣದ ಬೆಲ್ಲದ ಬಳಕೆ ಮಧುಮೇಹಿಗಳಿಗೆ ಉತ್ತಮವಲ್ಲ. ನಿಮ್ಮ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಗಮನಿಸಿ ನೀವು ‘ಎಳ್ಳು- ಬೆಲ್ಲ' ಸೇವನೆ ಮಾಡಬಹುದಾಗಿದೆ.

* ಸ್ತ್ರೀಯರಲ್ಲಿ ತಿಂಗಳ ಮುಟ್ಟಿನ ಸಮಸ್ಯೆಯನ್ನು ಸರಿದೂಗಿಸುವಲ್ಲಿ ‘ಎಳ್ಳು ಬೆಲ್ಲ' ಉಪಕಾರಿ ಎಂದು ಹಲವಾರು ಸಂಶೋಧನೆಗಳು ಹೇಳುತ್ತಿವೆ. ಇದು ಮುಟ್ಟಿನ ಹಾರ್ಮೋನ್ ಸ್ರವಿಸುವಿಕೆಯನ್ನು ನಿಯಂತ್ರಿಸಿ ಸಮಸ್ಯೆಗೆ ಕಡಿವಾಣ ಹಾಕುತ್ತದೆ.

ಕಬ್ಬು: ಇದೆಲ್ಲಾ ಎಳ್ಳು ಬೆಲ್ಲದ ಕಥೆಯಾದರೆ ಆ ಸಮಯದಲ್ಲಿ ನಾವು ಬಳಸುವ ಕಬ್ಬುವಿನಿಂದಾಗುವ ಉಪಯೋಗಗಳೇನು? ಯಂತ್ರದ ಸಹಾಯದಿಂದ ಕಬ್ಬಿನಿಂದ ಹಾಲು (ರಸ) ತೆಗೆದು ಕುಡಿಯುವುದಕ್ಕಿಂತಲೂ ಹಲ್ಲಿನಿಂದ ಜಗಿದು ರಸ ಕುಡಿಯುವುದು ಆರೋಗ್ಯಕರ. ಇದರಿಂದ ಹಲ್ಲಿನ ಆರೋಗ್ಯವೂ ಸುಧಾರಿಸುತ್ತದೆ. ಹಲ್ಲುಗಳು ಶುಚಿಯಾಗಿಡಲೂ ಸಹಕಾರಿ. ಕಬ್ಬಿನ ರಸವು ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದು ನಮ್ಮ ಯಕೃತ್ ನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಕಬ್ಬಿನ ಹಾಲಿನ ಸೇವನೆಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ.   

ಪೊಂಗಲ್: ನಮ್ಮಲ್ಲಿ ಪೊಂಗಲ್ ಎಂದರೆ ಒಂದು ಸಿಹಿ ತಿಂಡಿಯಾದರೆ, ತಮಿಳುನಾಡಿನಲ್ಲಿ ಸಂಕ್ರಾಂತಿ ಹಬ್ಬವನ್ನು ‘ಪೊಂಗಲ್’ ಎಂದು ಕರೆಯುತ್ತಾರೆ. ನಮ್ಮಲ್ಲಿ ಬೆಲ್ಲ, ಅಕ್ಕಿ, ಬೇಳೆ, ತೆಂಗಿನಕಾಯಿ, ತುಪ್ಪ ಹಾಗೂ ಅರಸಿನವನ್ನು ಬಳಸಿ ಸಿಹಿಯಾದ ಪೊಂಗಲ್ (ಕಿಚಡಿ) ತಯಾರಿಸುತ್ತಾರೆ. ಇವುಗಳಲ್ಲಿ ಬಳಸುವ ಎಲ್ಲಾ ವಸ್ತುಗಳು ಬಹಳ ಪೌಷ್ಟಿಕ ಹಾಗೂ ಆರೋಗ್ಯದಾಯಕ. ಅರಸಿನವು ನಂಜು ನಿವಾರಕ, ತುಪ್ಪವು ನಮ್ಮ ಚರ್ಮವು ಸುಕ್ಕು ಬೀಳದಂತೆ ಹಾಗೂ ಚಳಿಗಾಲದಲ್ಲಿ ತೇವರಹಿತವಾಗಿ ಒಡೆದು ಹೋಗದಂತೆ ಕಾಪಾಡುತ್ತದೆ. ಚಳಿಗಾಲದಲ್ಲಿ ಈ ಸಿಹಿ ತಿಂಡಿಯ ಸೇವನೆಯು ನಮ್ಮ ದೇಹದಲ್ಲಿ ಹೊಸ ಚೈತನ್ಯ ತುಂಬುತ್ತದೆ. ದೇಹವನ್ನು ಬಿಸಿಯಾಗಿಡುವುದರ ಜೊತೆಗೆ ನಮ್ಮ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ದೇಹದ ತೂಕದಲ್ಲೂ ನಿಯಂತ್ರಣವನ್ನು ಕಾಪಾಡುತ್ತದೆ. ಒಟ್ಟಿನಲ್ಲಿ ನಮ್ಮ ಆರೋಗ್ಯದ ರಕ್ಷಣೆ ಮಾಡುತ್ತದೆ.

ಈ ಮೇಲಿನ ಎಲ್ಲಾ ಕಾರಣಗಳಿಂದ ನಾವು ಸಂಕ್ರಾಂತಿಯ ಹಬ್ಬದ ಸಮಯದಲ್ಲಿ ಎಳ್ಳು ಬೆಲ್ಲ, ಕಬ್ಬು, ಪೊಂಗಲ್, ಕೊಬ್ಬರಿಗಳ ಸೇವನೆ ಮಾಡಬೇಕೆಂದು ಹಿರಿಯರು ಹೇಳಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಕೇವಲ ಆಚರಣೆ ಮಾತ್ರವಲ್ಲ, ನಮ್ಮ ಆರೋಗ್ಯವನ್ನು (ಮುಖ್ಯವಾಗಿ ಚಳಿಗಾಲದಲ್ಲಿ) ಕಾಪಾಡುವ ದೂರಾಲೋಚನೆಯೂ ಇದೆ. ಆದುದರಿಂದ ಮುಂದಿನ ವರ್ಷ ಸಂಕ್ರಾಂತಿ ಹಬ್ಬ ಬಂದಾಗ ತಪ್ಪದೇ ಮೇಲೆ ಹೇಳಿದ ವಸ್ತುಗಳನ್ನು ಬಳಸಿ, ಸಿಹಿ ತಿಂಡಿಗಳನ್ನು ತಯಾರಿಸಿ ತಿನ್ನಿ, ಆರೋಗ್ಯವನ್ನು ಕಾಪಾಡಿ.

(ಮಾಹಿತಿ ಮೂಲ: ಬಕೆಟ್ ಲಿಸ್ಟ್ ಡ್ರೀಮ್ಸ್ ಬ್ಲಾಗ್ ಮತ್ತು ವಾಟ್ಸಾಪ್ )

ಚಿತ್ರ ಕೃಪೆ: ಇಂಟರ್ನೆಟ್ ತಾಣ