ಮಕರ ಸಂಕ್ರಾಂತಿಯ ಪುಣ್ಯ ಕಥೆ
ಬ್ರಹ್ಮಾಂಡದ ಬದಲಾವಣೆಯಂತೆ ಭೂಮಿಯಲ್ಲಿ ನಡೆಯುತ್ತದೆ. ಬ್ರಹ್ಮಾಂಡದ ಚಲನೆಯು ಜೀವಿಗಳ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ಇಂಥ ದಿನಗಳನ್ನು ಹಬ್ಬಗಳಾಗಿ ಆಚರಿಸುತ್ತಾರೆ. ಈ ಆಚರಣೆಗಳು ನಾವೆಲ್ಲ ಭಾರತೀಯರು ಎಂಬುದನ್ನು ತಿಳಿಸುತ್ತದೆ. ಸೂರ್ಯ ತನ್ನ ಪಥವನ್ನು ಬದಲು ಮಾಡುವುದನ್ನು ‘ಸಂಕ್ರಾಂತಿ’ ಎಂದು ಕರೆಯುತ್ತಾರೆ. ಒಂದು ಮೂಲದ ಪ್ರಕಾರ ‘ಸಂಕ್ರಾಂತಿ’ ಎಂಬ ದೇವತೆ ‘ಸಂಕಾಸುರ’ ಎಂಬ ರಾಕ್ಷಸನನ್ನು ಸಂವರಿಸಿದ ದಿನವನ್ನೇ ‘ಸಂಕ್ರಾಂತಿ’ ದೇವತೆ ಹೆಸರಿನಲ್ಲಿ ಹಬ್ಬವನ್ನು ಆಚರಿಸುತ್ತಾರೆ. ಸೂರ್ಯ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುವ ಕಾಲ ‘ಮಕರ ಸಂಕ್ರಾಂತಿ’ ಮಾರ್ಗಶಿರ ಮಾಸದಲ್ಲಿ ಧನುರ್ಮಾಸದ ಆಚರಣೆ ಮಾಡಿದವರು ಸಂಕ್ರಾಂತಿ ಹಬ್ಬದ ದಿನ ವ್ರತವನ್ನು ಮುಕ್ತಾಯ ಮಾಡುತ್ತಾರೆ. ಸೂರ್ಯ ತನ್ನ ಆಯನವನ್ನು(ಪ್ರಯಾಣ) ದಕ್ಷಿಣದಿಂದ ಉತ್ತರ ದಿಕ್ಕಿಗೆ ಬದಲಾಯಿಸುವುದೇ ಉತ್ತರಾಯಣ ಕಾಲವಾಗಿದೆ. ದಕ್ಷಿಣಾಯಣ ಕಾಲದ ಕತ್ತಲೆ ಕಳೆದು ಉತ್ತರಾಯಣ ಕಾಲ ಹಗಲು ಹೆಚ್ಚಾಗುತ್ತದೆ. ಸೂರ್ಯ ಮಕರ ರಾಶಿಯನ್ನು ಪ್ರವೇಶ ಮಾಡುವ ದಿನದಂದು ದೇವರ ದೇವನಾದ ಮಹಾದೇವ ವಿಷ್ಣುವಿಗೆ ಆತ್ಮಜ್ಞಾನವನ್ನು ಬೋಧಿಸಿದ ದಿನ ಆದ್ದರಿಂದ ಇದನ್ನು ‘ಜ್ಞಾನಕಾರಕ’ ದಿನ ಎಂದು ದೇವಿ ಭಾಗವತದಲ್ಲಿ ಉಲ್ಲೇಖಿಸಿದ್ದಾರೆ. ಇಚ್ಛಾಮರಣಿ ಭೀಷ್ಮರು ಉತ್ತರಾಯಣ ಪುಣ್ಯ ಕಾಲದಲ್ಲಿ ಪ್ರಾಣೋಕ್ತ್ರಮಣ ಮಾಡಿದ ದಿನ. ಭಗಿರಥನ ತಪಸ್ಸಿಗೆ ಮೆಚ್ಚಿ ಗಂಗೆ ಕಪಿಲ ಮಹರ್ಷಿಗಳ ಆಶ್ರಮವನ್ನು ಪ್ರವೇಶ ಮಾಡಿದ ಪರ್ವದಿನ ಹಾಗೆ ಇದನ್ನು ಪಾಪನಾಶಕರ ಕಾಲ ಎಂದು ಕರೆಯುತ್ತಾರೆ. ಸುಗ್ಗೀ ಕಾಲದ ಸಂಭ್ರಮವು ಆಗಿದೆ. ಇಂಥ ವಿಶೇಷ ಕಾರ್ಯ ಕಾರಣಗಳಿಗೆ ‘ಸಂಕ್ರಾಂತಿ’ ಹಬ್ಬ ಪ್ರಮುಖವಾಗಿದೆ.
ಪುರಾಣ ಕಥೆ:- ( ಹಲವಾರು ಕಥೆಗಳು ಇವೆ) ಮಕರ ಸಂಕ್ರಾಂತಿ ಸೂರ್ಯನಿಗೆ ಅರ್ಪಿತವಾದ ದಿನ. ಕಣ್ಣಿಗೆ ಕಾಣುವ ದೇವರು ಎಂದರೆ ಸೂರ್ಯ. ಕಶ್ಯಪ ಮಹರ್ಷಿ ಮತ್ತು ಅದಿತಿಯರ ಮಗ ‘ಆದಿತ್ಯ’. ಸೂರ್ಯನ ಪತ್ನಿ ವಿಶ್ವಕರ್ಮನ ಮಗಳು ಸಂಜ್ಞಾ.( ಸಂಧ್ಯಾ) ಇವರಿಗೆ ವೈವಸ್ವತ ಮನು, ಯಮ, ಮತ್ತು ಯಮುನ ಎಂಬ ಮೂರು ಮಕ್ಕಳು. ಪತ್ನಿ ಸಂಜ್ಞಾ ಕೋಮಲ ಸ್ವಭಾವದವಳು. ಇವಳಿಗೆ ತೇಜೋಮಯ ಸೂರ್ಯನ ಶಾಖದ ತಾಪವನ್ನು ಸಹಿಸಲು ಆಗುತ್ತಿರಲಿಲ್ಲ. ಆದರೂ ಇಷ್ಟು ವರ್ಷಗಳ ಕಾಲ ಕಷ್ಟಪಟ್ಟು ಸಹಿಸಿದ್ದಳು. ತನ್ನ ಕಷ್ಟವನ್ನು ಸೂರ್ಯನಿಗೆ ತಿಳಿಸಲಿಲ್ಲ. ಒಮ್ಮೆ ಯೋಚಿಸಿದಳು ಸೂರ್ಯನ ತಾಪ ಕಡಿಮೆ ಮಾಡಲು ಬರುವುದಿಲ್ಲ, ಸಹಿಸಲು ತನ್ನಿಂದ ಸಾಧ್ಯವಿಲ್ಲ. ಏನಾದರೂ ಮಾಡ ಬೇಕೆಂದು ಯೋಚಿಸಿ, ಅವಳ ಪ್ರತಿ ರೂಪ ನೆರಳಿಗೆ ಜೀವ ತುಂಬಿದಳು, ಅವಳನ್ನು ‘ಛಾಯಾ’ ಎಂದು ಕರೆದು ತನ್ನ ಪತಿ ಮತ್ತು ಮಕ್ಕಳ ಜವಾಬ್ದಾರಿ ವಹಿಸಿ, ಸಂಧ್ಯಾ ಕಾಡಿಗೆ ಹೋಗಿ ಕುದುರೆ ರೂಪ ಧರಿಸಿ ತಪಸ್ಸು ಮಾಡ ತೊಡಗಿದಳು.
ಛಾಯಾಳು ಸಂಧ್ಯಾ ಪತಿ ಸೂರ್ಯನನ್ನು ಮತ್ತು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಸೂರ್ಯನಿಂದ ಛಾಯಾಗೆ. ಶನಿ- ಸಾವರಣಿಮನು- ಭದ್ರ ಎಂಬ ಮೂರು ಮಕ್ಕಳು ಜನಿಸಿದರು. ಶನಿ ಗರ್ಭದಲ್ಲಿದ್ದಾಗ ಮಗುವಿಗೆ ವಿಶೇಷ ಶಕ್ತಿ ಬರಲೆಂದು ಛಾಯಾ ನಿದ್ರಾಹಾರ ಬಿಟ್ಟು ಸೂರ್ಯನ ಶಾಖದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿದಳು. ಆದ್ದರಿಂದ ‘ಶನಿ’ ಗೆ ಹುಟ್ಟುತ್ತಲೇ ಕಳಾಹೀನವಾದ ಕಪ್ಪು ಬಣ್ಣ ಬಂದಿತು. ಮಗುವನ್ನು ನೋಡಲು ಬಂದ ಸೂರ್ಯನಿಗೆ ಶನಿಯನ್ನು ನೋಡಿ ಈ ಮಗು ತನ್ನದಲ್ಲ ಎನ್ನಿಸಿ ತಿರಸ್ಕಾರದಿಂದ ನೋಡಿದನು. ಶಿವನ ಕೃಪೆಯಿಂದ ಹುಟ್ಟಿದ ಶನಿಗೆ ತಂದೆಯ ತಿರಸ್ಕಾರ ಭಾವ ಗೊತ್ತಾಗಿ ಕ್ರೋಧದಿಂದ ಅದೇ ಮೊದಲ ಬಾರಿಗೆ (ಮಗು) ಸೂರ್ಯನನ್ನು “ವಕ್ರ ದೃಷ್ಟಿ”ಯಿಂದ ನೋಡಿತು. ಅದು ನೋಡುತ್ತಿದ್ದಂತೆ ಸೂರ್ಯನ ತೇಜಸ್ಸು ಕರಗಿ ‘ಕುಷ್ಟರೋಗಿ’ ಯಾದನು. ಹಾಗೆ ತನ್ನ ಪತ್ನಿ ಇವಳು ಸಂಧ್ಯಾ ಅಲ್ಲ ಛಾಯಾ ಎಂದು ಆಗ ಸೂರ್ಯಗೆ ತಿಳಿಯಿತು.
ಸೂರ್ಯನು ತನಗಾದ ಸ್ಥಿತಿಗೆ ಪರಮೇಶ್ವರನಿಂದ ಪರಿಹಾರ ಪಡೆಯಲು ಕೈಲಾಸಕ್ಕೆ ಹೊರಟನು. ರಥ ಏರಿದಾಗ, ಶನಿಯ ವಕ್ರದೃಷ್ಟಿಯ ಪರಿಣಾಮ ಕುದುರೆಗಳ ನಿಸ್ತೇಜವಾಗಿದ್ದವು. ಕೋಪಗೊಂಡ ಸೂರ್ಯ ಛಾಯಾ ಮತ್ತು ಶನಿಯನ್ನು ಮನೆಯಿಂದ ಹೊರಹಾಕಿದನು. ನಂತರ ಸಂಧ್ಯಾಳ ಮಗ ಯಮನನ್ನು ಕರೆಸಿ ಈ ವಿಷಯ ತಿಳಿಸಿ, ಕೈಲಾಸಕ್ಕೆ ಹೋಗಿ ಪರಮೇಶ್ವರನನ್ನು ಕಾಣಲು ಆಗುತ್ತಿಲ್ಲ ಎಂದು ಹೇಳುತ್ತಾನೆ. ‘ಯಮ’ ತಂದೆಯ ಪರವಾಗಿ ಘೋರ ತಪಸ್ಸನ್ನು ಆಚರಿಸಿ ಶಿವನ ಅನುಗ್ರಹ ಪಡೆದು ತನ್ನ ತಂದೆಯ ತೇಜಸ್ಸು ವಾಪಸ್ಸು ಕೊಟ್ಟನು ನಂತರ. ಶನಿಯು ನಿನ್ನ ಮಗ ಎಂಬ ಸತ್ಯಾಂಶ ಶಿವನು ತಿಳಿಸಿದನು. ಇದನ್ನು ಕೇಳಿ ಸೂರ್ಯನು ಪಶ್ಚಾತಾಪಗೊಂಡನು. ಈಗ ಶನಿ ಮತ್ತು ಛಾಯ ಕುಂಭ ಮನೆಯಲ್ಲಿ ಇದ್ದಾರೆಂದು ತಿಳಿದು ಆ ಮನೆಯನ್ನು ತನ್ನ ಜ್ವಾಲೆಯಿಂದ ಸುಟ್ಟು ಹಾಕಿದನು.
ಈ ಕೃತ್ಯವನ್ನು ಕಂಡ ಮಗನಾದ ಯಮನು ಹೀಗೆಲ್ಲಾ ಮಾಡಬಾರದು ಎಂದು ತಂದೆಗೆ ಬುದ್ಧಿವಾದ ಹೇಳಿದ. ಈ ರೀತಿ ಮಾಡಿದ್ದು ತಪ್ಪು ಎಂದು ಗೊತ್ತಾಗಿ ಶನಿ ಮತ್ತು ಛಾಯಾಳನ್ನು ನೋಡಲು ಬಂದನು. ಸೂರ್ಯನ ಜ್ವಾಲೆಯಿಂದ ಕುಂಭ ಮನೆ ಪೂರ್ಣವಾಗಿ ಸುಟ್ಟು ಏನೂ ಉಳಿದಿರಲಿಲ್ಲ. ಮೂಲೆಯಲ್ಲಿ ಸ್ವಲ್ಪ ಎಳ್ಳು ಮಾತ್ರ ಇತ್ತು. ಶನಿಯು ತನ್ನ ಮನೆಗೆ ಬಂದ ತಂದೆಯನ್ನು ಕಂಡ ಸಂತೋಷಕ್ಕೆ ಎಳ್ಳಿನಿಂದಲೇ ಅರ್ಚಿಸಿ ಸೂರ್ಯನನ್ನು ಪ್ರಾರ್ಥಿಸಿದನು. ಪ್ರಸನ್ನಗೊಂಡ ಸೂರ್ಯನು ತನ್ನ ಮಗನಾದ ಶನಿಗೆ ವಾಸಿಸಲು ತನ್ನ ಇನ್ನೊಂದು ಮನೆ ‘ಮಕರ’ ಮನೆಯನ್ನು ಕೊಡುತ್ತಾನೆ.
ಈ ರೀತಿ ಶನಿ ಸೂರ್ಯನಿಗೆ ಎಳ್ಳಿನಿಂದ ಪೂಜೆ ಮಾಡಿ ಸ್ವಂತ ಮನೆ ಮತ್ತು ತಂದೆಯ ಪ್ರೀತಿ, ಎಲ್ಲವನ್ನು ಪಡೆದನು, ತಂದೆ ಸೂರ್ಯ ಮಗ ಶನಿ ಒಂದಾದ ದಿನವೇ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ. ಈ ಕಾರಣದಿಂದ ಈ ದಿನ ಎಳ್ಳಿಗೆ ಮಹತ್ವ ಬಂದು, ಒಂದುಗೂಡಿದ ಬಾಂಧವ್ಯದ ನೆನಪಿಗಾಗಿ, ರುಚಿಗಾಗಿ ಹಾಗೂ ವೈಜ್ಞಾನಿಕವಾಗಿ ಚಳಿಗಾಲದಲ್ಲಿ ದೇಹಕ್ಕೆ ಜಿಡ್ಡಿನ ಪಸೆ ಇರಬೇಕೆಂದ ಜಿಡ್ಡಿನ ಅಂಶವಿರುವ ಎಳ್ಳು ಜೊತೆಗೆ ಬೆಲ್ಲ ಕಡಲೆ ಬೀಜ ಪುಟಾಣಿಯ ಒಣ ಕೊಬ್ಬರಿ ಹದವಾಗಿ ಒಣಗಿಸಿ ಹುರಿದು ಮಿಶ್ರಣ ಮಾಡಿ, ದೇವರಿಗೆ ಅರ್ಪಿಸಿ ಬಂಧು ಬಾಂಧವರಿಗೆ, ಊರು ಮನೆ ಬಾಗಿಲವರಿಗೆ ಹಂಚಿ ಎಲ್ಲರೂ ತಿಂದು ಹಬ್ಬದ ಸಂಭ್ರಮ ಆಚರಿಸುತ್ತಾರೆ.
ಸಂಕ್ರಾಂತಿ ಪುರುಷ:- ಕಪ್ಪು ಬಟ್ಟೆ ಧರಿಸಿದ್ದಾನೆ. ಆದ್ದರಿಂದ ಕಪ್ಪು ಬಟ್ಟೆಗೆ ಬೆಲೆ ಏರಿಕೆ ಆಗುತ್ತದೆ. ವಾಹನ ಕುದುರೆ, ಉಪವಾಹನ ಸಿಂಹ. ಕೈಯಲ್ಲಿ ಭರ್ಜಿ. ಈ ಸಾರಿ ಸಂಕ್ರಾಂತಿ ಪುರುಷ ಉತ್ತರದಿಂದ ದಕ್ಷಿಣಕ್ಕೆ ಬಂದು ನೈರುತ್ಯ ದಿಕ್ಕನ್ನು ನೋಡುತ್ತಿದ್ದಾನೆ. ಆದ್ದರಿಂದ ನೈರುತ್ಯ ದಿಕ್ಕಿನವರಿಗೆ ಒಳ್ಳೆಯ ಶುಭಫಲಗಳಿವೆ.
ಸಂಕ್ರಾಂತಿ ಪುರುಷ ಹಳದಿ ನಾಮ ಧರಿಸಿ, ಚಿನ್ನಾಭರಣಗಳನ್ನು ತೊಟ್ಟು ವೃದ್ಧ ಬ್ರಾಹ್ಮಣನಾಗಿ ಕುಳಿತಿದ್ದಾನೆ. ಸಂಕ್ರಾಂತಿ ಪರ್ವಕಾಲದಲ್ಲಿ ಸ್ನಾನಾದಿಗಳು ಜಪ ತಪಗಳನ್ನು ಮಾಡಿ, ದಾನ ಕೊಡುವುದು ಮುಖ್ಯವಾಗಿದೆ ವಸ್ತ್ರಗಳು,ಎಳ್ಳು ಬೆಲ್ಲ, ತುಂಬಿಸಿದ ಹಿತ್ತಾಳೆ ಪಾತ್ರೆ, ಎಳ್ಳು ಬೆಲ್ಲದ ಜೊತೆ ಹಣ್ಣು,ಕಬ್ಬು, ತೆಂಗಿನಕಾಯಿ ಅರಿಶಿನ ಕುಂಕುಮದ ಬಟ್ಟಲು ಅಥವಾ ಪಂಚವಾಳ, ( ಹಿತ್ತಾಳೆ ಅಥವಾ ಬೆಳ್ಳಿ) ಬೆಳ್ಳಿಯ ಕೃಷ್ಣ, ಗೋವು, ಹೀಗೆ ದಾನಗಳನ್ನು ಕೊಡುತ್ತಾರೆ. ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬ ಶುಭಾಶಯಗಳು.
(ಆಧಾರ)
‘ಅಮರ ದೇವ’ (ಅಮರನಾಥ ದೇವಧರ್), ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ