ಮಕರ ಸಂಕ್ರಾಂತಿ ಹಬ್ಬದ ಆಚರಣೆ - ಏನು? ಹೇಗೆ?

ಮಕರ ಸಂಕ್ರಾಂತಿ ಹಬ್ಬದ ಆಚರಣೆ - ಏನು? ಹೇಗೆ?

ಹಿಂದೂಗಳ ಹಬ್ಬವನ್ನು ಚಂದ್ರನನ್ನು ಆಧರಿಸಿದ ಪಂಚಾಂಗದ ಮೂಲಕ ಲೆಕ್ಕ ಹಾಕಲಾಗುತ್ತದೆ. ಆದರೆ ಮಕರ ಸಂಕ್ರಾಂತಿಯನ್ನು ಸೂರ್ಯನನ್ನು ಆಧರಿಸಿದ ಪಂಚಾಂಗದ ಲೆಕ್ಕಾಚಾರದ ಮೂಲಕ ನಿರ್ಧರಿಸಲಾಗುತ್ತದೆ. ಸಂಕ್ರಾಂತಿ ಎಂದರೆ ಸೌರಮಾನದ ಪರ್ವ, ಮಕರ ಮಾಸದ ಆರಂಭದ ದಿನದಂದೇ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಮಣದಿಂದ ಋತುವಿನಲ್ಲಿ ಬದಲಾವಣೆ ಆಗುತ್ತದೆ. ಶರತ್ಕಾಲ ಕಳೆದು ವಸಂತ ಕಾಲದ ಆಗಮನವಾಗುತ್ತದೆ, ಇದರಿಂದಾಗಿ ದಿನಗಳು ಹೆಚ್ಚಾಗಿ, ರಾತ್ರಿಯ ಅವಧಿ ಕಡಿಮೆಯಾಗುತ್ತದೆ.

*ಸಂಕ್ರಾಂತಿ ಹಬ್ಬವನ್ನು ಎಳ್ಳು-ಬೆಲ್ಲದ ಹಬ್ಬ ಎನ್ನುತ್ತಾರೆ*. ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ಈ ಕಾರಣಕ್ಕಾಗಿ ಈ ಸಂಕ್ರಾಂತಿ ಹಬ್ಬವನ್ನು ಸುಗ್ಗಿಯ ಹಬ್ಬ ಎನ್ನುತ್ತಾರೆ. ಸಂಕ್ರಾಂತಿಯ ಹಬ್ಬದ ದಿನ ಎಳ್ಳು ದಾನ ಮಾಡಬೇಕು ಎಂಬ ನಿಯಮವಿದೆ. ಎಳ್ಳು ಶನಿ ಗ್ರಹದ ಪ್ರತಿನಿಧಿ ಹಾಗೂ ಆತನ ಧಾನ್ಯವಾಗಿದೆ. (ಶನಿಗ್ರಹ ಎಂದೊಡನೆ ಎಲ್ಲರಿಗೂ ಏನೋ ಒಂದು ರೀತಿ ಭಯ) ಎಳ್ಳನ್ನು ನಾವು ದಾನ ಮಾಡಲು ಹೋದಾಗ ಸಾಮಾನ್ಯವಾಗಿ ಅದನ್ನು ತೆಗೆದುಕೊಳ್ಳಲು ಇಷ್ಟ ಪಡುವುದಿಲ್ಲ. ಕಾರಣ ಅವರ ಪಾಪ ನಾವು ತೆಗೆದುಕೊಂಡ ಹಾಗೆ ಎಂದು ಹಾಗೂ ದೋಷ ಉಂಟಾಗುವುದು ಎಂದು ನಂಬಲಾಗಿದೆ. ಆದ್ದರಿಂದ ಈ ಕಾರಣದಿಂದ ಎಳ್ಳಿನ ಜತೆಯಲ್ಲಿ ಬೆಲ್ಲ, ಕಡಲೆಬೀಜ, ಕೊಬ್ಬರಿಯನ್ನು ಮಿಶ್ರಣ ಮಾಡಿ ದಾನ ಮಾಡುವ ಪದ್ಧತಿ ಪ್ರಾರಂಭವಾಯಿತು. ಅಲ್ಲದೆ ಆ ಬೆಳೆಗಳು ಆಗ ತಾನೆ ಬೆಳೆದು ಮಾರುಕಟ್ಟೆಗೆ ಬಂದಿರುತ್ತದೆ. ಅವುಗಳನ್ನು ಪೂಜೆ ಮಾಡಿ ದಾನ ಧರ್ಮ ಮಾಡಿದರೆ ಇನ್ನು ಫಲ ಹೆಚ್ಚು ಬರುವುದು ಎಂಬ ನಂಬಿಕೆಯೂ ಇದೆ.

ಜಗಚ್ಚಕ್ಷುವಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಹೆಸರು. ಸೌರಮಾನದ ಪ್ರಕಾರ ಸೂರ್ಯನು ಮೇಷಾದಿ ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿ ಬರುತ್ತದೆ. ಆದರೆ ಅವುಗಳಲ್ಲಿ ಕರ್ಕಾಟಕ ಸಂಕ್ರಾಂತಿ ಹಾಗೂ ಮಕರ ಸಂಕ್ರಾಂತಿಗಳು ದಕ್ಷಿಣಾಯನ ಮತ್ತು ಉತ್ತರಾಯಣಗಳ ಪ್ರಾರಂಭದ ದಿನಗಳಾದ್ದರಿಂದ ವಿಶೇಷ ಮಹತ್ವವುಳ್ಳವುಗಳಾಗಿವೆ.

ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದೆ.  ಸೂರ್ಯ ಆತ್ಮಾ ಜಗತಃ ತಸ್ಥುಷಶ್ಚ,  ಅಂದರೆ ಸೂರ್ಯದೇವ ವಿಶ್ವದ ಆತ್ಮ; ಜಗತ್ತಿನ ಕಣ್ಣು; ಎಂದರ್ಥ. ಮಳೆ ಬೀಳಲು, ಬೆಳೆ-ಬೆಳೆಯಲು, ಸೂರ್ಯನೇ ಕಾರಣ.ಆದ್ದರಿಂದ ಈ ಹಬ್ಬವನ್ನು ರೈತರು ಹೆಚ್ಚಾಗಿ ಆಚರಿಸುತ್ತಾರೆ.

"ಸಂಕ್ರಾತಿ" ಎಂಬ ಪದ "ಸತ್ ಬದಲಾವಣೆ" ಯ ಸೂಚಕವಾಗಿದೆ. *ಈ ಸಮಯದಲ್ಲಿ ಸೂರ್ಯನು ಸಹ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸ್ಥಿತ್ಯಂತರಗೊಂಡು ತನ್ನ ಪಥವನ್ನೇ ಬದಲಾಯಿಸುತ್ತಾನೆ. ಇದರಿಂದಾಗಿ ಪ್ರಕೃತಿಯಲ್ಲಿ ಹಸಿರು ಆವರಿಸಿ ಸಮೃದ್ಧಿ ಪಸರಿಸುತ್ತದೆ. ಈ ಹಿನ್ನೆಲೆಯಲ್ಲಿ  ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ ಎಲ್ಲವೂ ಕ್ಷಣಿಕ ಎಂಬುದೇ ಸತ್ಯ. ಅದ್ದರಿಂದ ಮನುಷ್ಯರಾದ ನಾವುಗಳು ಅಪ್ರೀತಿ, ಅಸಹಿಷ್ಣತೆ, ಅಸಹಕಾರ, ಅಸಹನೆ, ಅಹಂಕಾರ, ಅಜ್ಞಾನ ಹಾಗೂ ಅಂಧಕಾರಗಳನ್ನು ತೊರೆದು ಬದುಕಿರುವಷ್ಟು ದಿನಗಳಲ್ಲಿ ಎಲ್ಲರೊಂದಿಗೆ ಬೆರೆತು ಒಂದಾಗಿ ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳೋಣ ಎಂಬುದೆ ನಮ್ಮ ಆಶಯ ವಾಗಿದೆ.

*ಸಂಕ್ರಾಂತಿಯ ಮಹತ್ವ*

ಮಕರವೆಂದರೆ ಹತ್ತನೇ ರಾಶೀ ಚಕ್ರ, ಮಕರ ಸಂಕ್ರಾಂತಿ ಎಂದರೆ ಬದಲಾವಣೆ. ಸೂರ್ಯನು ಮಕರ ರಾಶಿಗೆ ಪ್ರವೇಶವಾಗುವ ದಿನವನ್ನು ಸಂಕ್ರಾಂತಿ ಹಬ್ಬವಾಗಿ ಆಚರಿಸುತ್ತಾರೆ. ಜ್ಯೋತಿಷ್ಯದ ಪ್ರಕಾರ ಮಕರ ರಾಶಿಯನ್ನು ಆಳುವವನು ಶನೀಶ್ವರ. ಇವನು ಸೂರ್ಯಪುತ್ರ. ಈ ದಿನದಂದು ಸೂರ್ಯನು ತನ್ನ ಮಗನ ಆಡಳಿತಕ್ಕೊಳಪಟ್ಟ ಮನೆಯನ್ನು ಪ್ರವೇಶಿಸುತ್ತಾನೆ ಎಂದು ಹೇಳಲಾಗುತ್ತದೆ.

ಒಂದು ರೀತಿಯಲ್ಲಿ ಸ್ವತಃ ತಂದೆ ಮಗನಾದ ಸೂರ್ಯ ಶನೀಶ್ವರರು ಇಬ್ಬರೂ ವಿರುದ್ಧವಾದವರು. ಆದರೆ ಈ ಸಂಕ್ರಾಂತಿಯ ಸಂದರ್ಭದಲ್ಲಿ ತನ್ನ ಮಗನಾದ ಶನಿಯ ಬಳಿ ಸೂರ್ಯನು ಹೋಗುವುದರಿಂದಾಗಿ ಈ ಸಂದರ್ಭವು ಮನುಷ್ಯರಿಗೆ ದ್ವೇಷ ಹಾಗೂ ಜಗಳವನ್ನು ಬಿಟ್ಟು ಒಂದಾಗಿ ಎನ್ನುವ ಸಂದೇಶವನ್ನು ನೀಡುತ್ತದೆ.

ಯಾವುದೇ ಹಳೆಯ ಕಹಿ ನೆನಪು ಹಾಗೂ ಅಸಮಾಧಾನವನ್ನು ಬಿಟ್ಟು ಜಗತ್ತಿನ ಸೌಂದರ್ಯವನ್ನು ಆಸ್ವಾದಿಸುವ ಹಾಗೂ ಪ್ರೀತಿಸುವ ಅವಕಾಶವನ್ನು ಈ ಸಂಕ್ರಾಂತಿಯು ಹೊತ್ತು ತರುತ್ತದೆ. ಹಾಗಾಗಿ ಸೂರ್ಯನ ಶಕ್ತಿ ಹಾಗೂ ಹೃದಯ ವೈಶಾಲ್ಯತೆಯನ್ನು ಸ್ಮರಿಸಿ, ಅನಗತ್ಯವಾದ ವಿವಾದಗಳನ್ನು ಬದಿಗಿಟ್ಟು ಅರ್ಥಪೂರ್ಣ ಸಂಬಂಧಗಳನ್ನು ಮುಂದುವರಿಸಿಕೊಂಡು ಹೊಗುವುದು ಒಳ್ಳೆಯದು.ವೈಜ್ಞಾನಿಕ ರೀತಿಯಲ್ಲಿ ನೋಡಿದಾಗ ಸಂಕ್ರಾಂತಿಯ ಸಮಯದಲ್ಲಿ ಚಳಿ ಹೆಚ್ಚು ಇರುತ್ತದೆ. ಎಳ್ಳು ಸೇವನೆಯಿಂದ ದೇಹದ ಉಷ್ಣತೆ ಹೆಚ್ಚು ಆಗುತ್ತದೆ ಹಾಗೂ ಚರ್ಮದ ಕಾಂತಿಯೂ ಹೆಚ್ಚುತ್ತದೆ. ಈ ಹಬ್ಬವು ಅತ್ಯಂತ ಪ್ರಾಚೀನ ಕಾಲದಿಂದಲೂ ಆಚರಣೆಗೆ ಬಂದಿದೆ.   

ಶಿವ ಮತ್ತು ಪಾರ್ವತಿಯರು ಲೋಕ ಸಂಚಾರ ಪ್ರಾರಂಭಿಸುತ್ತಾರಂತೆ. ಈ ಸಂಕ್ರಮಣದ ಕಾಲದ ಗೋಧೂಳಿ ಲಗ್ನಕ್ಕಿಂತ ಹೆಚ್ಚು ಸಮಯ ಈ ಭೂಲೋಕದಲ್ಲಿರುತ್ತಾರೆ ಎಂದು ಪುರಾಣದಲ್ಲಿ ಇದೆ. ಈ ಪುಣ್ಯ ದಿನದಲ್ಲಿ ಹಲವಾರು ದೇವತೆಗಳಿಗೆ ಶಾಪ ವಿಮೋಚನೆ ಉಂಟಾಗಿದೆ. ಉದಾಹರಣೆಗೆ ಇಂದ್ರ ಮತ್ತು ಚಿತ್ರಸೇನ. ಪ್ರತಿ ವರ್ಷ ಸಂಕ್ರಾಂತಿಯ ಹಬ್ಬದ ದಿನ ಸಂಜೆ ಶಬರಿ ಮಲೆಯಲ್ಲಿ ಅಯ್ಯಪ್ಪ ಸ್ವಾಮಿಯು ಜ್ಯೋತಿ ರೂಪದಲ್ಲಿ ದರ್ಶನ ನೀಡುತ್ತಾನೆ ಎಂಬ ನಂಬಿಕೆ ಇದೆ. ಗ್ರಾಮೀಣ ಪ್ರದೇಶದಲ್ಲಿ ರೈತರು ಆ ದಿನ ಎತ್ತುಗಳಿಗೆ ಪೂಜೆ ಸಲ್ಲಿಸಿ ಕಿಚ್ಚು ಹಾಯಿಸುತ್ತಾರೆ.  

ಒಂದು ವರ್ಷದಲ್ಲಿ (ಸಂವತ್ಸರ) 12 ಮಾಸಗಳು ಅವುಗಳನ್ನು ಎರಡು ಭಾಗ ಮಾಡಿರುವರು. *ಉತ್ತರಾಯಣ ಹಾಗೂ ದಕ್ಷಿಣಾಯನ*.  ಸೂರ್ಯ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ. ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ. ಸೂರ್ಯ, ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ.

ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ ರಾಶಿಗೆ ಸೂರ್ಯ ಪ್ರವೇಶ ಮಾಡುತ್ತಾನೆ ಹಾಗೂ ಆನಂತರ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ. 6 ತಿಂಗಳು ಕಾಲ ಉತ್ತರಾಯಣ ನಂತರ ಅಂದರೆ ಜೂನ್ 15ರ ನಂತರ ದಕ್ಷಿಣಾಯನ ಪ್ರಾರಂಭ ಆಗುತ್ತದೆ.

ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ನಂಬಿಕೆಯಿದೆ. ಈ ಸಮಯದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಶ್ರೀಕೃಷ್ಣನು ಗೀತೆಯಲ್ಲಿ ಆಯಣದಲ್ಲಿ ಉತ್ತರಾಯಣ ಅತಿ ಶ್ರೇಷ್ಠ ಎಂದು ಹೇಳಿರುವನು. ಭೀಷ್ಮ ಪಿತಾಮಹನು ಬಾಣಗಳ ಮಂಚದ ಮೇಲೆ ಮಲಗಿ ಯಮ ಯಾತನೆಯನ್ನು ಅನುಭವಿಸುತ್ತಿದ್ದರೂ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಒಪ್ಪದೆ ಉತ್ತರಾಯಣದ ಪುಣ್ಯಕಾಲದ ಅಷ್ಟಮಿ ದಿನ ಸಾವನ್ನು ಬರ ಮಾಡಿಕೊಳ್ಳುತ್ತಾರೆ.

ಎಲ್ಲ ಹಬ್ಬಗಳಂತೆ ಈ ಹಬ್ಬದಲ್ಲಿಯೂ ಮನೆಯನ್ನು ಸ್ವಚ್ಛ ಮಾಡಿ ಅಲಂಕರಿಸುತ್ತಾರೆ. ಮನೆಯ ಮುಂದೆ ವಿಶೇಷ ರಂಗೋಲಿ ಹಾಕುತ್ತಾರೆ. ಈ ಹಬ್ಬಕ್ಕೆ ಪ್ರತ್ಯೇಕವಾದ ಯಾವುದೇ ಪೂಜಾ ವಿಧಾನ / ವ್ರತ ಇರುವುದಿಲ್ಲ. 

ಉತ್ತರಾಯಣ ಪರ್ವಕಾಲದಲ್ಲಿ ಕರಿಎಳ್ಳು ಅರೆದು ಅದನ್ನು ಹಚ್ಚಿಕೊಂಡು ಎಲ್ಲರೂ ಸ್ನಾನಮಾಡಲೇಬೇಕು. ಹೆoಗಸರು, ಮಕ್ಕಳು ಕೂಡ. ಆದರಿoದ ಮನುಷ್ಯ ರೋಗದಿಂದ ಮುಕ್ತಿ ಯಾಗುವರು ಎಂದು ಧರ್ಮಶಾಸ್ತ್ರ  ಹೇಳುತ್ತದೆ.

*|| ತಿಲಸ್ನಾಯಿ ತಿಲೋದ್ವರ್ತಿ ತಿಲಹೋಮಿ ತಿಲೋದಕೀ |*

*ತಿಲಬುಕ್ ತಿಲದಾತ ಚ ಷಟ್ತಿಲ.  ಪಾಪನಾಶನಃ  ||*

ಮಕರ ಸಂಕ್ರಮಣ ದಂದು ಯಾರು ಎಳ್ಳು ಹಚ್ಚಿ  ಸ್ನಾನ, ಎಳ್ಳು ದಾನ ಎಳ್ಳು ಭಕ್ಷಣ, ಎಳ್ಳಿನಿಂದ ತರ್ಪಣ  ಎಳ್ಳೆಣ್ಣೆಯ ದೀಪಹಚ್ಚುವರೋ ಅವರ ಪಾಪಗಳು ನಾಶವಾಗುವುದು.

ಈ ಹಬ್ಬದ ವಿಶೇಷತೆ ಎಳ್ಳು, ಸಕ್ಕರೆ ಅಚ್ಚು, ಬೆಲ್ಲ , ಕೊಬ್ಬರಿ, ಕಡಲೇಕಾಯಿ ಬೀಜ ಹಾಗೂ ಹುರಿಗಡಲೆ,  ಈ ಐದು ಸಾಮಗ್ರಿಗಳನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರ ಮಾಡಿ ತಯಾರಿಸುತ್ತಾರೆ. 

ಎಳ್ಳು ಸಕ್ಕರೆ ಅಚ್ಚನ್ನು ದೇವರ ಮುಂದೆ ಇಟ್ಟು ನೈವೇದ್ಯ ಮಾಡಿ ಪೂಜೆಯ ನಂತರ ಮನೆಯವರೆಲ್ಲ ತಿನ್ನುವುದು. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ ಎಂಬ ನುಡಿಯಂತೆ ಎಲ್ಲರೂ ಸಿಹಿಯಾದ, ಒಳ್ಳೆಯ ಮಾತಾಡಿ, ಒಳ್ಳೆ ವಿಷಯಗಳನ್ನು  ಹಂಚಿಕೊಳ್ಳುತ್ತಾರೆ. ಈ ಸಂಕ್ರಾಂತಿ ಹಬ್ಬವು ಪುರುಷನಿಗೆ ಪ್ರಿಯವಾದದ್ದು  ಹಾಲು ,ಪಾಯಸ ,ಅನ್ನ ,ಬೆಲ್ಲ ,ಮಧು ,ಸಕ್ಕರೆ ,ಆಜ್ಯ(ತುಪ್ಪ) ಇವುಗಳನ್ನು ಸೇರಿಸಿ ಗುಡೋದನ (ಪೊಂಗಲ್)ತಯಾರಿಸಿ ಭಗವಂತನಿಗೆ ನೇವಿದ್ಯ ತೋರಿಸುತ್ತಾರೆ ಇದರಿಂದ ಸಂಕ್ರಾಂತಿ ಪುರುಷನು ತುಷ್ಟನಾಗುವನು ಸಂಕ್ರಮಣ ದೋಷವು ಪರಿಹಾರವಾಗುತ್ತದೆ*.

*ಈ ಸಂಕ್ರಾಂತಿ ಹಬ್ಬದ ಒಂದು ವಿಶೇಷವೆಂದರೆ ದನಕರುಗಳಿಗೆ ಮೈ ತೊಳೆದು ಭೂತ ಪೀಡೆಗಳಿಂದ ಅವುಗಳನ್ನು ರಕ್ಷಿಸುವ ಸಲುವಾಗಿ ಬೀದಿಗಳಲ್ಲಿ ಹೊತ್ತಿಸಿದ ಬೆಂಕಿಯನ್ನು ನೆಗೆದು ದಾಟಿಸುವುದು ಉಂಟು.

*ಪೊಂಗಲ್ ಎಂದರೆ ಅಕ್ಕಿ, ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲದಿಂದ ಮಾಡಿದ ಸಿಹಿ  ಖಾದ್ಯ. ಸುಗ್ಗಿಯ ಉತ್ಪನ್ನಗಳಿಂದ ಮಾಡಿದ ಇದನ್ನು ಸೂರ್ಯದೇವನಿಗೆ ನೈವೇದ್ಯ ಮಾಡಲಾಗುವುದು.

*ಕರ್ನಾಟಕದಲ್ಲಿ ಎಳ್ಳು, ಸಕ್ಕರೆ - ಅಚ್ಚುಗಳನ್ನು ನೆರೆಯವರಿಗೆ ಬಂಧು ಮಿತ್ರರಿಗೆ ಹಂಚುವ ಸಾಮಾಜಿಕ ಸಂಪ್ರದಾಯವಿದೆ.

*ಮಕರ ಸಂಕ್ರಾಂತಿ ಪ್ರಸಿದ್ದವಾಗಿರುವ ಸುಗ್ಗಿಯ ಕಾಲದ ಹಬ್ಬ. ಇದನ್ನು ತಮಿಳುನಾಡಿನಲ್ಲಿ ಪೊಂಗಲ್ ಎಂದು ಕರೆಯಲಾಗುತ್ತದೆ.

*ಉತ್ತರಾಯಣ ಪರ್ವಪುಣ್ಯಕಾಲದಲ್ಲಿ ವಸ್ತ್ರದಾನ, ಸುವರ್ಣದಾನ , ಎಳ್ಳುದಾನ ಈ ಮೂರು ಅತ್ಯಂತ ಶ್ರೇಷ್ಠ ದಾನವಾಗಿದ್ದು ಎಲ್ಲರೂ ಈ ಮೂರು ದಾನಮಾಡಬೇಕು

*ನೂತನ ವಸ್ತ್ರಗಳನ್ನು ದಾನ ಮಾಡುವುದರಿಂದ ನಮ್ಮ ಅನಾರೋಗ್ಯದ ಸಮಸ್ಯಗಳು ದೂರವಾಗುತ್ತವೆ*

 *ಅಮವಾಸ್ಯೆಯಂದು ಲಕ್ಷೀ ಪೂಜೆ ಮಾಡಿದರೆ ಹಣಕಾಸಿನ ತೊಂದರೆಗಳು ದೂರವಾಗುತ್ತವೆ.*

*ಎಳ್ಳು ಬೆಲ್ಲ ಈ ಸಂಕ್ರಾಂತಿಯಂದು ದಾನ ಮಾಡುವುದರಿಂದ ನಮ್ಮ ಪಾಪಗಳು ದೂರವಾಗುತ್ತವೆ..*

 *ಎಳ್ಳಣ್ಣೇ ದಾನ *ಮಾಡುವುದರಿಂದ ಶನಿ ದೇವರ ಕ್ರಪಗೇ ಪಾತ್ರರಾಗುತ್ತಾರೆ. ಅನೇಕ ರೀತಿಯ ಕಷ್ಟಗಳು ದೂರವಾಗುತ್ತವೆ..

 

(ಚಿತ್ರ- ಮಾಹಿತಿ ಸಂಗ್ರಹ)