ಮಕ್ಕಳಂತೆ ಕಾಳಜಿ ವಹಿಸೋಣ...

ಮಕ್ಕಳಂತೆ ಕಾಳಜಿ ವಹಿಸೋಣ...

ವಿಶ್ವ ಪರಿಸರ ದಿನ ಎಂದ ತಕ್ಷಣ ನಮ್ಮ ಮನಸ್ಸು, ಕಣ್ಣು ಎಲ್ಲವೂ ಪರಿಸರ, ನಮ್ಮ ಸುತ್ತಮುತ್ತದತ್ತ ಹೋಗುವುದು ಸಹಜ. ಹೌದು, ಯಾಕಾಗಿ ನಾವು ಈ ಪರಿಸರವನ್ನು, ಅದಕ್ಕಾಗಿ ಒಂದು ದಿನವನ್ನು ಮೀಸಲಾಗಿಟ್ಟಿದ್ದೇವೆಂದು ಯೋಚಿಸೋಣ. ನಮ್ಮ ಹಿರಿಯ ತಲೆಮಾರಿನ ಕಾಲಕ್ಕೆ ಹೋದರೆ, ಎಲ್ಲೆಲ್ಲೂ ಕಾಡು, ಬೆಟ್ಟ, ಗುಡ್ಡಗಳಿದ್ದವು. ಹಾಗಾದರೆ ಈಗ ಇಲ್ಲವೇ? ಇದೆ, ೭೦% ಕೃತಕ ಎನ್ನಬಹುದು. ಯಾವಾಗ ಉಸಿರಿಗೆ ಕುತ್ತು (ತೊಂದರೆ) ಬಂತೋ ಆಗ ಜನ ಎಚ್ಚೆತ್ತರು. ಏನು ಮಾಡೋಣ, ಹೇಗೆ ಮುಂದಿನ ತಲೆಮಾರಿಗೆ ಹಸಿರು ಉಳಿಸೋಣ ಎಂದು ಹಲವಾರು ಚಿಂತನ-ಮಂಥನಗಳು ನಡೆದಾಗ ಈ ಪರಿಸರ ದಿನದ ಆಚರಣೆಯು  ಬಂತು ಹೇಳಬಹುದು.

ಮಾನವ ಜನ್ಮ ನಶ್ವರ, ಆದರೆ ಪ್ರಕೃತಿ ಶಾಶ್ವತವಲ್ಲವೇ? ಮನುಷ್ಯನ ಸಂಬಂಧ, ಜೀವಕೋಟಿಗಳ ಒಡನಾಟ ಪ್ರಕೃತಿಯೊಂದಿಗೆ ಅನಾದಿಕಾಲದಿಂದಲೂ ಇದೆ, ನಾವು ಆ ಬಗ್ಗೆ ಓದಿ ತಿಳಿದವರೇ ಆಗಿದ್ದೇವೆ.

ವಿಶ್ವದಾದ್ಯಂತ ಜೂನ್ ೫ರಂದು ಪರಿಸರ ದಿನವನ್ನು ಆಚರಿಸಲಾಗುತ್ತದೆ. ಮೊದಲು ಇದರ ಆರಂಭ ೧೯೭೨ರಲ್ಲಿ ಆಯಿತು. ೧೯೭೪ರಲ್ಲಿ ವಿಶ್ವಸಂಸ್ಥೆಯ ಮೂಲಕ ಇರುವ ಒಂದು ಭೂಮಿಗಾಗಿ ಹೋರಾಟ, ಹಸಿರಿನ ಹೆಚ್ಚಳ, ತಾಪಮಾನ ಏರಿಕೆಯ ತಡೆಗಟ್ಟುವಿಕೆ, ವನ್ಯಜೀವಿಗಳ ರಕ್ಷಣೆ, ಪ್ಲಾಸ್ಟಿಕ್ ಮುಕ್ತತೆ, ಹಸಿರೇ ಉಸಿರಿಗೆ ಮೂಲ ಎಂಬ ನಿಟ್ಟಿನಲ್ಲಿ ಆಚರಿಸಲಾಯಿತು.

ಸ್ವಚ್ಛ ಸುಂದರ ಪರಿಸರದಡಿ ತ್ಯಾಜ್ಯ ನಿರ್ವಹಣೆ, ಗಿಡನೆಡುವಿಕೆ, ಅರಣ್ಯ ಇಲಾಖೆಯ ಮೂಲಕ ಸಸಿ ವಿತರಣೆ ಮನೆಗೊಂದು ಗಿಡ, ಬೀದಿವನ, ಉಪನ್ಯಾಸ, ಪ್ರಾತ್ಯಕ್ಷಿಕೆ, ಮೆರವಣಿಗೆ ಇತ್ಯಾದಿಗಳ ಮೂಲಕವೂ ಪರಿಸರ ಜಾಗೃತಿ ಮೂಡಿಸುವಂಥ ಕೆಲಸಗಳನ್ನು ಆಂದೋಲನವಾಗಿ ಹಮ್ಮಿಕೊಳ್ಳಲಾಯಿತು. ಶಾಲಾಮಕ್ಕಳಲ್ಲಿ ಪರಿಸರಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು, ಶಾಲಾಮಟ್ಟದಲ್ಲಿ ಕೈಗೊಳ್ಳಲಾಯಿತು. ಪ್ರತೀ ಶಾಲೆಯಲ್ಲಿ ಸಹ ಸ್ಥಳಾವಕಾಶ ಇದ್ದಲ್ಲಿ ಗಿಡಗಳನ್ನು ನೆಟ್ಟು, ಮಗುವಿಗೆ ಪರಿಚಯ ಮಾಡಿಸುವ ಕೆಲಸವನ್ನು ಹಮ್ಮಿಕೊಂಡುದೂ ಇದೆ. ನಾನು ಕರ್ತವ್ಯದಲ್ಲಿದ್ದ ಶಾಲೆಯಲ್ಲಿ ೧೫ ತೆಂಗಿನ ಗಿಡ, ೩೫ ಫಲ ಬರುವ ಗಿಡ ಮತ್ತು ೫೦ ಬಾಳೆಗಿಡ, ತುಳಸಿ, ಅಮೃತಬಳ್ಳಿ, ತುಂಬೆ, ಲಿಂಬೆ, ಅಲೋವೆರಾ (ಕುಮಾರಿಗಿಡ) ಹೊನಗನೆ ಇತ್ಯಾದಿಗಳೊಂದಿಗೆ ಒಂದಷ್ಟು ತರಕಾರಿ ಗಿಡ ಸಹ ಮಾಡಿದ್ದೆವು. ಎಲ್ಲಾ ಹೆತ್ತವರು ಸಹಕರಿಸಿದ್ದರು. ಪ್ರತೀ ಮಗುವಿನ ಹೆಸರಿನಲ್ಲಿ ಕುಂಡವನ್ನು ಖರೀದಿಸಿ, ಒಂದೊಂದು ಗಿಡ ನೆಟ್ಟು, ಅದರ ಪೋಷಣೆಯನ್ನು ಮಗುವೇ ಜವಾಬ್ದಾರಿ ನಿರ್ವಹಿಸುವ ಹಾಗೆ ವ್ಯವಸ್ಥೆ ಮಾಡಿ, ಪರಿಸರದ ಬಗ್ಗೆ, ಅವಶ್ಯಕತೆಯ ಬಗ್ಗೆ ಪ್ರಜ್ಞೆ ಮೂಡಿಸುವ ಕೆಲಸವನ್ನು ಸಹ ಮಾಡಿದ್ದೆವು. ತಿಂಗಳಿಗೆ ಎರಡು ಸಲ ಪರಿಸರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೆವು.

ಮಗುವಿನ ಹೆಸರಲ್ಲಿ ಮನೆಯಲ್ಲಿ ಸಹ ಗಿಡ ನೆಟ್ಟು ಬೆಳೆಸಿ ಅದರ ವರದಿಯನ್ನು ವಾರದಲ್ಲಿ ಒಂದು ಸಲ ನೋಡುವ ವ್ಯವಸ್ಥೆ ಇತ್ತು. ಮಕ್ಕಳಿಗೆಲ್ಲ ಪ್ರೋತ್ಸಾಹಕವಾಗಿ ಬಹುಮಾನ ಕೊಡುತ್ತಿದ್ದೆವು. ಇದೆಲ್ಲಾ ಯಾಕೆ ಎಂದರೆ, ಅದೇ ಮಗು ಮುಂದೆ ಸಮಾಜದಲ್ಲಿ ವ್ಯವಹರಿಸುವಾಗ ಪರಿಸರ ಕಾಳಜಿ ಅವನಲ್ಲಿ ಮೂಡಲು ಸಹಕಾರಿಯಾಗಬಲ್ಲುದು ಎನ್ನುವ ಆಶಯ.

ಪ್ಲಾಸ್ಟಿಕ್ ಮುಕ್ತವಂತೂ ಮಾಡಲು ಸಾಧ್ಯವಾಗಿಲ್ಲ, ಹಾಗಾದರೆ ಮರುಬಳಕೆ ಮಾಡುವ ಬಗ್ಗೆ ಯಾದರೂ ಒಂದಷ್ಟು ಸಂಶೋಧನೆಗಳು ನಡೆದವು. ಬೇಡದ ಇ--ತ್ಯಾಜ್ಯ ವಸ್ತುಗಳ ದೊಡ್ಡ ದೊಡ್ಡ ಸಂಗ್ರಹಗಳೇ ಸೃಷ್ಟಿಯಾಯಿತು. ಪರಿಹಾರವೇನು? ಎಲ್ಲಾ ಕಡೆ ಹಸಿರಿನಿಂದ ಉಸಿರು, ಉಸಿರಿನಿಂದ ಬದುಕು  ಎಂಬುದನ್ನು ಪ್ರಚಾರ ಮಾಡಿ, ಆದಷ್ಟೂ ಸಸಿಗಳನ್ನು ನೆಟ್ಟು, ಪೋಷಿಸುವ ಕ್ರಮ ಕೈಗೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಸರಕಾರ, ಸಂಘಸಂಸ್ಥೆಗಳು, ಎನ್.ಜಿ.ಒ ಸಂಸ್ಥೆಗಳು ಕೈಗೊಂಡವು.

ನೆಲ, ಮಣ್ಣು, ಜಲ, ಹವೆ, ಹಣ್ಣು ತರಕಾರಿಗಳು ನಮಗೆ ಬೇಕೇ ಬೇಕು. ನಗರೀಕರಣ, ಕಂಪೆನಿಗಳ ಸ್ಥಾಪನೆ, ಎಲ್ಲರೂ ಕಾಂಕ್ರೀಟ್ ಮನೆಗಳತ್ತ ಒಲವು ಬೆಳೆಸಿಕೊಂಡುದು, ಮರಗಿಡಗಳ ನಾಶ ಆರಂಭವಾಯಿತು.

ಪ್ರಕೃತಿ ತತ್ವ, ಪುರುಷ ತತ್ವದ ಸಮ್ಮಿಲನದ ಕ್ರೀಯಾಶೀಲತೆಯಡಿ ಸಹಜತೆ ಮತ್ತು ಆರೋಗ್ಯ ಮತ್ತು ಸ್ವಾಭಾವಿಕ. ನಾಶದಿಂದಾಗಿ ಕೃತಕತೆ ಹೆಚ್ಚಾಯಿತು. ಮಣ್ಣು ಕಲುಷಿತ, ನೀರು ಕಲುಷಿತ, ಉಸಿರಾಡುವ ಗಾಳಿ ಕಲುಷಿತವಾಗಿ, ಸಾಂಕ್ರಾಮಿಕ ರೋಗಗಳು,ಅಸ್ತಮಾ, ಅಲರ್ಜಿ, ವಾಂತಿ ಬೇಧಿ, ಜ್ವರಗಳು, ನರಮಂಡಲ ಕಾಯಿಲೆಗಳು, ದುರ್ಬಲತೆ, ದೀರ್ಘ ಕಾಲದ ರೋಗಗಳು, ಕ್ಯಾನ್ಸರ್ ಮುಂತಾದವುಗಳು ತಲೆದೋರಿ ಮಾನವರು ನರಳುವಂತಾಯಿತು.

ಆಮ್ಲಜನಕದ ಕೊರತೆ ಏನಾಗುತ್ತದೆ ಎಂಬುದನ್ನು ಇದೀಗ ಕಣ್ಣಾರೆ ಕಂಡವರಿದ್ದೇವೆ. ಇಂಗಾಲದ ಡೈ ಆಕ್ಸೈಡ್ ಅಲರ್ಜಿ ಮತ್ತು ಅಸ್ತಮಾಕ್ಕೆ ಕಾರಣವಾಗಿದೆ. ನಗರಗಳನ್ನು ಹಸಿರಾಗಿಸುವುದು, ಸಮುದ್ರತೀರ ಪ್ರದೇಶಗಳನ್ನು ಸ್ವಚ್ಛ ಗೊಳಿಸುವುದು, ಅಂತರ್ಜಲಮಟ್ಟವನ್ನು ಹೆಚ್ಚಿಸಲು, ಮರಗಳು ಅಗತ್ಯ, ಇಂಗುಗುಂಡಿಗಳ ನಿರ್ಮಾಣ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಹ ಪ್ರಚಾರ ಮಾಡುವುದು. ಇದರಿಂದ ಸ್ವಲ್ಪ ಮಟ್ಟಿನ ಪ್ರಯೋಜನವಾಗಬಹುದು. ಹಲವಾರು ದೈವಿಕ ಶಕ್ತಿಗಳಿಂದ ಕೂಡಿದ ಈ ನಮ್ಮ ಬುವಿಯನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಶುದ್ಧದಿಂದ ಪ್ರಜ್ವಲಿಸುವ ಭೂತಾಯಿ ಜ್ಯೋತಿರ್ಮಯಶಕ್ತಿಯಾಗಿ ಕಂಗೊಳಿಸಿ ತನ್ನೆಲ್ಲ ಮಕ್ಕಳನ್ನು ಸಲಹುತ್ತಾಳೆ ಎಂಬ ನಂಬಿಕೆ ನಮ್ಮೆಲ್ಲರದು. ಅನಿವಾರ್ಯತೆಯಿಂದಾಗಿ ಮತ್ತು ಸ್ವಾರ್ಥ, ಹಣ ಸಂಪಾದನೆಗೆ ಬೇಕಾಗಿ ಇದ್ದ ಕಾಡನ್ನೆಲ್ಲ ಕಡಿದೊಗೆದ ಮಾನವ. ಇಂದು ಅದರ ಪರಿಣಾಮವನ್ನು ಉಣ್ಣುತ್ತಿದ್ದಾನೆ.ಈಗ ಎಚ್ಚೆತ್ತು ಇನ್ನಾದರೂ ಹಸಿರಾಗಿಸದಿದ್ದರೆ, ಮುಂದೆ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಖಂಡಿತಾ. ಮುಖ್ಯವಾಗಿ ಶುದ್ಧ ಗಾಳಿ ಬೆಳಕು,ಉತ್ತಮ ಪರಿಸರ,ಪ್ರಶಾಂತ ವಾದ ನಿದ್ದೆ, ಬದುಕು, ಉಲ್ಲಾಸ, ಮನಃಶಾಂತಿ ಇವಿಷ್ಟು ನಮಗೆ ಬೇಕೇ ಬೇಕು.

ವಾಯುಮಾಲಿನ್ಯಜಲಮಾಲಿನ್ಯ, ಪರಿ‌ಸರ ನಾಶ ಇವಿಷ್ಟು ಸರಿದೂಗಿಸಿಕೊಂಡು ಹೋಗಲು, ತಡೆಗಟ್ಟಲು, ಹೆಚ್ಚೆಚ್ಚು  ಹಸಿರಾಗಿಸುವುದೊಂದೇ ದಾರಿ. ಎಲ್ಲವೂ ಸಮತೋಲನ, ಸಮತೂಕದಲ್ಲಿರಲು ನಾವೀಗ ತಲೆಗೊಂದು ಮರ ನೆಟ್ಟರೆ ಮಾತ್ರ ಸರಿದೂಗಿಸಿಕೊಂಡು ಹೋಗಬಹುದು.ನೆಟ್ಟರೆ ಸಾಲದು *ಮಗುವಿನಂತೆ ಆರೈಕೆ ಮಾಡಿ* ನಮ್ಮ ಆರೋಗ್ಯದ ಜೊತೆಗೆ ಪರಿಸರದ ಸ್ವಚ್ಛತೆ, ನೈರ್ಮಲ್ಯ, ಸೌಂದರ್ಯ ಎಲ್ಲವನ್ನೂ ಹೆಚ್ಚಿಸುವ ಕೆಲಸಮಾಡಬೇಕಾಗಿದೆ.

ತ್ಯಾಜ್ಯ ನಿರ್ವಹಣೆ, ಕೊಳಕು ನೀರು  ಹರಿದು ಹೋಗಲು ಸರಿಯಾದ ವ್ಯವಸ್ಥೆ ಮಾಡಬೇಕು. ಉದ್ಯಾನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ನಗರದ ಜನರಿಗೆ ಅದುವೇ ಗತಿ. ಹಳ್ಳಿಗಳಲ್ಲಿ ಈ ಸಮಸ್ಯೆ ಅಷ್ಟಿಲ್ಲ. ಸ್ವಾಭಾವಿಕ ಗಿಡಮರಗಳಿವೆ. ಪ್ರಾಣವಾಯುವಿಗಾಗಿ ಇಂದೇ ಸಂಕಲ್ಪ ಮಾಡೋಣ. ದೇಶವನ್ನು ರಕ್ಷಿಸೋಣ. ಜೀವ ಸಂಕುಲದ ನಾಶವನ್ನು ತಡೆಗಟ್ಟೋಣ. ಬೀದಿ ಹೆಣಗಳಾಗಿ ಅನಾಥರಾಗುವುದು ಬೇಡ. ನೀರು ಆಹಾರ ಇಲ್ಲದೆ ಕೆಲವು ದಿನ ಇರಬಹುದು. ಆದರೆ ಶುದ್ಧ ಗಾಳಿ ಇಲ್ಲದೆ ಕ್ಷಣ ಇರಲಾಗದು.

“ಜೈ ಪ್ರಕೃತಿ ಮಾತೆ, ಉಸಿರಿನ ದಾತೆ”