ಮಕ್ಕಳನ್ನು ಆಟವಾಡಲು ಬಿಡಿ, ಪ್ಲೀಸ್!

ಮಕ್ಕಳನ್ನು ಆಟವಾಡಲು ಬಿಡಿ, ಪ್ಲೀಸ್!

ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ ‘ಆಟವಾಡದೇ ಬರೀ ವಿದ್ಯಾಭ್ಯಾಸ ಜಾಕ್ ನನ್ನು ಚುರುಕುತನವಿಲ್ಲದ ಹುಡುಗನನ್ನಾಗಿಸಿತು’ (All work and no play makes Jack a dull boy). ಇಲ್ಲಿ ಜಾಕ್ ಎಂಬ ಹುಡುಗನ ಹೆಸರು ಕೇವಲ ನಿಮಿತ್ತ ಮಾತ್ರ. ನಮ್ಮಲ್ಲೂ ಅಸಂಖ್ಯಾತ ಜಾಕ್ ಗಳಿದ್ದಾರೆ. ನಾವಿಂದು ನಮ್ಮ ಮಕ್ಕಳನ್ನು ಕೇವಲ ಯಶಸ್ಸಿನ ಹಿಂದೆ ಓಡಲೇ ಬೇಕಾದ ಕುದುರೆಗಳಂತೆ ತಯಾರು ಮಾಡುತ್ತಿದ್ದೇವೆ. ಮಗು ಹುಟ್ಟಿ ೩ ವರ್ಷವಾಗುವಾಗಲೇ ಅವರನ್ನು ನಾವು ಬೇಬಿ ಸಿಟ್ಟಿಂಗ್ ಎಂಬ ಕೂಪಕ್ಕೆ ದೂಡುತ್ತೇವೆ. ನಮ್ಮ ಸಮಾಜದಲ್ಲಿ ಅವಿಭಕ್ತ ಕೂಡು ಕುಟುಂಬಗಳು ಕಮ್ಮಿ ಆಗುತ್ತಿವೆ. ನಮ್ಮ ಮಕ್ಕಳಿಗೆ ಅಜ್ಜ ಅಜ್ಜಿ, ಚಿಕ್ಕಪ್ಪ-ದೊಡ್ಡಪ್ಪ, ಮಾವ-ಅತ್ತೆ ಹೀಗೆ ಸಂಬಂಧದ ಅರಿವೇ ಕಮ್ಮಿಯಾಗುತ್ತಿದೆ. ಒಂದು ಕಾಲದಲ್ಲಿ ಜೊತೆಯಾಗಿ ಇರುತ್ತಿದ್ದ ಸಂಬಂಧಗಳು ಈಗ ದೂರ ದೂರವಾಗ ತೊಡಗಿವೆ. ದಂಪತಿಗಳಿಬ್ಬರೂ ಕೆಲಸಕ್ಕೆ ಹೋಗುವವರಾದರೆ ಅವರು ಒಂದೇ ಮಗು ಸಾಕು ಎಂಬ ತೀರ್ಮಾನಕ್ಕೆ ಬಂದಿರುವುದರಿಂದ ಆ ಮಗುವಿಗೆ ಅಣ್ಣ-ತಮ್ಮ, ಅಕ್ಕ-ತಂಗಿ ಈ ಸಂಬಂಧಗಳ ಅರಿವು ಇಲ್ಲದೇ ಹೋಗುತ್ತದೆ. ಮನೆಯಲ್ಲೂ ದೊಡ್ಡಪ್ಪ-ಚಿಕ್ಕಪ್ಪ ಇಲ್ಲದೇ ಇರುವುದರಿಂದ ಅವರ ಮಕ್ಕಳ ಜೊತೆ ಆಡುವ ಅವಕಾಶವೂ ಇರುವುದಿಲ್ಲ. ಮಗು ಒಬ್ಬಂಟಿಯಾಗಿ ಬಿಡುತ್ತದೆ. ಏಕಾಂಗಿತನವನ್ನು ಅನುಭವಿಸುತ್ತದೆ. 

ಈಗಿನ ಮಕ್ಕಳನ್ನು ಗಮನಿಸಿದರೆ, ಅವರು ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಅವರಿಗಿಂತ ಅವರ ಪಾಲಕರು ಅಧಿಕ ಒತ್ತಡದಲ್ಲಿರುತ್ತಾರೆ. ೩-೪ ತರಗತಿಯಲ್ಲಿರುವ ಮಗುವನ್ನು ವೈದ್ಯಕೀಯ ಪರೀಕ್ಷೆಗೆ ತಯಾರಾಗುವಂತೆ ಒತ್ತಡ ಹೇರುತ್ತಾರೆ. ಇದರಿಂದ ಮಗುವೇನೋ ಪುಸ್ತಕದ ಬದನೇಕಾಯಿ ಕಲಿಯ ಬಹುದು. ಆದರೆ ಅದರ ಸುಪ್ತ ಮನಸ್ಸಿನಲ್ಲಿ ಈ ಒತ್ತಡವು ಬೆಳೆದು ಮುಂದೊಂದು ದಿನ ಅದನ್ನು ಪರಿಹರಿಸಲಾಗದೇ ಒದ್ದಾಡಬಹುದು.

ನೀವು ಗಮನಿಸಿ ನೋಡಿ ಪೇಟೆಯಲ್ಲಿರುವ ಮಗುವಿಗಿಂತ ಹಳ್ಳಿಯಲ್ಲಿರುವ ಮಕ್ಕಳು ಚುರುಕಾಗಿರುತ್ತಾರೆ. ಸರಕಾರೀ ಶಾಲೆಗೆ ಹೋಗುತ್ತಾರೆ. ತೋಟದಲ್ಲಿ, ಗದ್ದೆಯ ಬದುವಿನಲ್ಲಿ ನಡೆದುಕೊಂಡೇ ಶಾಲೆಗೆ ಹೋಗುತ್ತಾರೆ. ಬಿಡುವಿನ ಸಮಯದಲ್ಲಿ ತೋಟ ತಿರುಗಾಡುತ್ತಾರೆ. ಮರ ಹತ್ತುತ್ತಾರೆ. ಹಣ್ಣು ಕೀಳುತ್ತಾರೆ. ಮರಕೋತಿ ಆಟವಾಡುತ್ತಾರೆ. ಹಲವಾರು ಗ್ರಾಮೀಣ ಕ್ರೀಡೆಗಳನ್ನು ಆಡುತ್ತಾರೆ. ಕೆಸರಲ್ಲಿ, ಮಳೆಯಲ್ಲಿ ಆಡುತ್ತಾರೆ. ಹೀಗೆ ತಮ್ಮ ಬಾಲ್ಯವನ್ನು ಪರಿಸರದಲ್ಲೇ ಕಳೆಯುತ್ತಾರೆ. ಇದರಿಂದ ಅವರು ಮಾನಸಿಕವಾಗಿಯೂ, ದೈಹಿಕವಾಗಿಯೂ ಬಲಿಷ್ಟರಾಗುತ್ತಾರೆ. ಅದೇ ಪೇಟೆಯಲ್ಲಿರುವ ಮಕ್ಕಳಿಗೆ ಈ ಸೌಲಭ್ಯಗಳು ಕಮ್ಮಿ. ಎಲ್ಲರೂ ಗ್ರಾಮೀಣ ಭಾಗಕ್ಕೆ ಹೋಗಲು ಆಗುವುದಿಲ್ಲ ನಿಜ. ಆದರೆ ತಾವಿರುವ ಸ್ಥಳದಲ್ಲೇ ಮಕ್ಕಳಿಗೆ ಆಟವಾಡಲು ಬಿಡಬಹುದಲ್ವೇ? ಈಗಂತೂ ಕೊರೋನಾ ಮಹಾಮಾರಿ ಬಂದಿದೆ. ಪಾರ್ಕ್ ಗಳಿಗೆ ಹೋಗಲೂ ಆಗುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳನ್ನು ಓಡಾಡಿಸುವುದು ಕಷ್ಟ. ಆದರೆ ಸಣ್ಣ ಮಕ್ಕಳನ್ನು ಮನೆಯಲ್ಲಿ ಆಟವಾಡಲು ಬಿಡಿ. ಅವರ ಆಟಗಳು ನಿಮಗೆ ಕಿರಿಕಿರಿಯಾಗಬಹುದು ಆದರೆ ಅವರನ್ನು ಅವರ ಮನಸ್ಸೋ ಇಚ್ಛೆ ಆಟವಾಡಲು, ಓಡಾಡಲು ಬಿಟ್ಟರೆ ಅವರ ಒಳಗಿರುವ ಆಂತರಿಕ ಶಕ್ತಿಯ ಉಪಯೋಗವಾಗುತ್ತದೆ. ಇದರಿಂದ ಅವರ ದೇಹಕ್ಕೆ ವ್ಯಾಯಾಮ ದೊರಕುವುದರ ಜೊತೆಗೆ ಮನಸ್ಸಿಗೂ ಆರಾಮ ದೊರೆಯುತ್ತದೆ ಎನ್ನುತ್ತಾರೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಭಾಸ್ಕರ್ ಶೆಣೈ ಇವರು. ಅವರು ಒಂದು ಸಂದರ್ಶನದಲ್ಲಿ ಹೇಳುತ್ತಾರೆ ‘ ಮಕ್ಕಳನ್ನು ಈಗ ಕೊರೋನಾ ಎಂದು ಮನೆಯ ಒಳಗೇ ಕೂಡಿ ಹಾಕದೇ, ಮನೆಯ ಆವರಣದಲ್ಲಿ ಸ್ವಲ್ಪ ಸಮಯವಾದರೂ ಪೋಷಕರ ನಿರೀಕ್ಷಣೆಯಲ್ಲಿ ಆಟವಾಡಲು ಬಿಡಿ. ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳು ಇದ್ದರೆ ಅವರೇ ಆಟವಾಡಲು ಬಿಡಿ. ಇದರಿಂದ ಅವರ ಮನೋಬಲ ಹೆಚ್ಚಾಗುತ್ತದೆ’. 

ಮಕ್ಕಳ ಪೋಷಕರು ಗಮನಿಸಬೇಕಾದ ಸಂಗತಿ ಎಂದರೆ ತಮ್ಮ ಮನೆಯಲ್ಲಿ ಸ್ವಲ್ಪವಾದರೂ ತೋಟವಿದ್ದರೆ ಅವರಿಗೆ ತಮ್ಮದೇ ತೋಟದ ಬೆಳೆಗಳ ಪರಿಚಯ ಮಾಡಿಕೊಡಿ. ತಮ್ಮದೇ ತೋಟದಲ್ಲಿರುವ ಗಿಡಗಳು, ಮರಗಳು, ಹೂವು-ಕಾಯಿ-ಹಣ್ಣುಗಳ ವಿವರಗಳನ್ನು ಹೇಳಿಕೊಡಿ. ಈಗ ಹೇಗೂ ಶಾಲೆಗಳು ಪುನರಾರಂಭವಾಗಿಲ್ಲ. ಮಕ್ಕಳಿಗೆ ಇಡೀ ದಿನ ಮೊಬೈಲ್ ಕೊಟ್ಟು ಬಿಡಬೇಡಿ. ಪ್ರಕೃತಿಯನ್ನು ಪ್ರೀತಿಸುವ ಕಲೆ ಹೇಳಿಕೊಡಿ. ಸಾಧ್ಯವಾದರೆ ಒಂದು ಮಕ್ಕಳ ಕೈಯಿಂದಲೇ ಒಂದು ಹಣ್ಣಿನ, ತರಕಾರಿಯ ಅಥವಾ ಹೂವಿನ ಗಿಡ ನೆಡಿ. ಆ ಮಗು ಬೆಳೆದಂತೆ ಆ ಗಿಡವೂ ಬೆಳೆಯುತ್ತೆ. ಗಿಡ ಬೆಳೆಯುವ ಖುಷಿಯನ್ನು ಆ ಮಗು ಬೆರಗುಗಣ್ಣಿನಿಂದ ನೋಡುತ್ತದೆ. ಅದನ್ನು ನೀರು, ಗೊಬ್ಬರ ಹಾಕಿ ಆರೈಕೆ ಮಾಡುವಂತೆ ಕಲಿಸಿ. ಮುಂದೊಂದು ದಿನ ಗಿಡ ಬೆಳೆದು ಹಣ್ಣು ಅಥವಾ ಹೂವು ಕೊಡುವಾಗ ಆ ಮಗುವೂ ಬೆಳೆದು ದೊಡ್ಡದಾಗಿರುತ್ತೆ. ಅಂದು ಅವರು ಅನುಭವಿಸುವ ತೃಪ್ತಿ, ಸಂತೋಷವನ್ನು ವರ್ಣಿಸಲು ಅಸಾಧ್ಯ.  

ಕೊರೋನಾ ಮುಖಾಂತರ ಪ್ರಕೃತಿ ನಮಗೆ ಪಾಠ ಕಲಿಸಿದೆ. ಮನೆಯಲ್ಲೇ ಇರಿ, ಸಾಮಾಜಿಕ ಅಂತರ ಕಾಪಾಡಿ ಎಂಬುದನ್ನು ಕಲಿಸಿದೆ. ಇದರ ಸದುಪಯೋಗ ಮಾಡುವ, ನಮ್ಮ ಮಕ್ಕಳನ್ನು ಪ್ರಕೃತಿಯ ಮಡಿಲಲ್ಲಿ ಬೆಳೆಸುವ. ಕೊನೆಗೊಮ್ಮೆ ನಾವೆಲ್ಲ ‘ಮರಳಿ ಮಣ್ಣಿಗೆ' ಅಲ್ವಾ ಸೇರಬೇಕಾದದ್ದು.

 

ತೋಟದಲ್ಲಿರುವ ಮಕ್ಕಳು: ದಿಯಾ, ಮಾಲ್ವಿ, ಸಾನ್ವಿ ಹಾಗೂ ಹವೀಕ್ಷ್