ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆಯೇ?

ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆಯೇ?

‘ನೂರಕ್ಕೆ ನೂರರಷ್ಟು ಸತ್ಯ ವಿಚಾರ’, ಖಂಡಿತಾ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆ ಆಗಿದೆ. ನಾವು ಹಿಂದಿನ ದಿನಗಳತ್ತ ಒಮ್ಮೆ ಕಣ್ಣು ಹಾಯಿಸಿ, ಸಿಂಹಾವಲೋಕನ ಮಾಡಿದಾಗ ಇದು ಸತ್ಯವೆಂದು ಅರಿವಾಗುತ್ತದೆ. ಆಗ ಮೊಬೈಲ್, ದೂರದರ್ಶನ ಯಾವುದೂ ಇಲ್ಲದ ಕಾಲ. ಮಕ್ಕಳು ಹೆಚ್ಚಾಗಿ ಸರಕಾರಿ ಮತ್ತು ಖಾಸಗಿ ಕನ್ನಡ ಮಾಧ್ಯಮ ಶಾಲೆಗೆ ಹೋಗುತ್ತಿದ್ದರು. ಆಟ ಆಡುವುದರ ಹೊರತಾಗಿ ಬೇರೆ ಯಾವುದೇ ವಿಷಯಾಸಕ್ತಿ ಇಲ್ಲ. ಶಾಲೆಯ ಕಲಿಕೆಯ ನಂತರ ಮನೆಗೆ ಬಂದಾಗ ಅಜ್ಜ, ಅಜ್ಜಿಯವರು ಕಥೆ ಹೇಳುತ್ತಿದ್ದರು. ಮನೆ, ತೋಟದ ಕೆಲಸಗಳಲ್ಲಿ ಹೆತ್ತವರಿಗೆ ಸಹಕಾರ, ಉಳಿದ ಸಮಯದಲ್ಲಿ ಓದು , ಬರಹ, ಪುನರಾವರ್ತನೆ ಚಟುವಟಿಕೆ. ಮುಂದೆ ಯಾವಾಗ ಬಣ್ಣದ ಮೂರ್ಖರ ಪೆಟ್ಟಿಗೆ ಲಗ್ಗೆಯಿಟ್ಟಿತೋ ಮಕ್ಕಳೆಲ್ಲ ಆ ಪರದೆಯೊಳಗೆ ಹೊಕ್ಕರು. ಆ ಬಣ್ಣದ ಲೋಕ ಹೆಚ್ಚು ಆಕರ್ಷಣೆಯಾಯಿತು. ಈಗ ಹೆಚ್ಚಿನ ಹೆತ್ತವರು ಹೊರಗೆ ಹೋಗಿ ದುಡಿಯುವವರು. ಆಗ ಮಕ್ಕಳ ಮೇಲೆ ಅವರ ನಿಗಾ ಕಡಿಮೆಯಾಯಿತು.

ಹಿರಿಯರು ಕಿರಿಯರು ಎನ್ನದೇ ದೂರದರ್ಶನ ವೀಕ್ಷಣೆ ಮಾಡಿದಾಗ ಪುಸ್ತಕಗಳು ಮೂಲೆಗುಂಪಾಯಿತು. ನಾವು ಸಣ್ಣವರಿರುವಾಗ ಎಷ್ಟೊಂದು ಮಕ್ಕಳ ಪತ್ರಿಕೆಗಳು ಹಾಗೂ ಪುಸ್ತಕಗಳು ಮಾರುಕಟ್ಟೆಯಲ್ಲಿ ಸಿಗುತ್ತಿದ್ದುವು? ಈಗ ನೋಡಲು ಹೋದರೆ ಒಂದು ಮಕ್ಕಳ ಪತ್ರಿಕೆಯೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಕೊರೋನಾ ಬರುವುದಕ್ಕೆ ಮೊದಲೇ ಮಕ್ಕಳ ಪತ್ರಿಕೆಗಳ ಪ್ರಸಾರ ಪಾತಾಳಕ್ಕೆ ಇಳಿದಿತ್ತು. ಕೊರೋನಾ ಕಾಲ ಪತ್ರಿಕೆಯ ಪ್ರಕಾಶಕರಿಗೆ ಈ ಪತ್ರಿಕೆಗಳನ್ನು ಸ್ಥಗಿತಗೊಳಿಸಲು ಒಂದು ನೆಪವಾಯಿತಷ್ಟೇ. ನಾನೊಂದು ಉದಾಹರಣೆ ಹೇಳುವೆ. ನಮ್ಮ ಮನೆಯ ಬಳಿಯ ಪತ್ರಿಕೆಗಳನ್ನು ಮಾರುವ ಅಂಗಡಿಯವರಿಗೆ ನಾನು ಪೇಟೆಗೆ ಹೋಗಿ ಬರುವಾಗ ಮಕ್ಕಳ ಪುಸ್ತಕಗಳನ್ನು ಮಾರಲು ತಂದುಕೊಡುತ್ತಿದ್ದೆ. ಸುಮಾರು ೭-೮ ವರ್ಷಗಳ ಹಿಂದೆ ಸುಮಾರು ೨೫ ಬಾಲಮಂಗಳಗಳನ್ನು ತಂದು ಕೊಡುತ್ತಿದ್ದೆ. ಅದರ ಜೊತೆಗೆ ಆಂಗ್ಲ ಭಾಷೆಯ ಮಕ್ಕಳ ಪತ್ರಿಕೆಗಳಾದ ಟಿಂಕಲ್, ಮ್ಯಾಜಿಕ್ ಪಾಟ್ ಸಹ ತಂದು ಕೊಡುತ್ತಿದ್ದೆ. ಒಳ್ಳೆಯ ಮಾರಾಟವೂ ಇತ್ತು. ಬೇಸಿಗೆ ರಜೆ, ಮಧ್ಯಾವಧಿ ರಜೆ ಸಮಯದಲ್ಲಿ ಈ ಮಾರಾಟವು ಜಾಸ್ತಿಯಾಗುತ್ತಿತ್ತು. ಕ್ರಮೇಣ ಪತ್ರಿಕೆಗಳನ್ನು ಓದುವ ಮಕ್ಕಳ ಕಮ್ಮಿಯಾದರು. ಕಾರಣ ಮಕ್ಕಳ ಹೆತ್ತವರ ಬಳಿ ಸ್ಮಾರ್ಟ್ ಫೋನ್ ಗಳು ಬಂದವು. ಕಷ್ಟ ಪಟ್ಟು ಓದುವ ರಗಳೆ ಯಾರಿಗೆ ಬೇಕು? ಮೊಬೈಲ್ ನಲ್ಲೇ ಮಕ್ಕಳು ಸರ್ವಸ್ವವನ್ನು ಕಾಣ ತೊಡಗಿದರು. ಕೊರೋನಾ ಬರುವ ಮೊದಲೇ ಮಕ್ಕಳ ಪತ್ರಿಕೆಯನ್ನು ಕೊಳ್ಳುವವರಿಲ್ಲವಾಗಿತ್ತು. ಈಗಂತೂ ಪತ್ರಿಕೆಗಳೇ ಇಲ್ಲ. 

ಬಾಲಮಂಗಳ ಪ್ರಕಟಣೆ ಸ್ಥಗಿತವಾಗುವ ತನಕ ನಾನೊಂದು ಪ್ರತಿಯನ್ನು ತಪ್ಪದೇ ಕೊಳ್ಳುತ್ತಿದ್ದೆ. ನನ್ನ ಹಳೆಯ ನೆನಪುಗಳನ್ನು ತಾಜಾ ಮಾಡಲು ಇದು ಅನುಕೂಲವಾಗುತ್ತಿತ್ತು. ೧೯೮೯ರಿಂದ ನನ್ನ ಬಳಿ ಬಾಲಮಂಗಳದ ಸಂಗ್ರಹವಿತ್ತು. ಕಳೆದ ೨ ವರ್ಷಗಳ ಹಿಂದೆ ಮನೆ ನವೀಕರಣದ ಸಮಯದಲ್ಲಿ ಯಾರಾದರೂ ಆಸಕ್ತರು ಓದುವುದಾದರೆ ಉಚಿತವಾಗಿ ಕೊಡುವೆ ಎಂದು ಪ್ರಚಾರ ಮಾಡಿದ್ದೆ. ಆದರೆ ಪತ್ರಿಕೆಗಳು ಯಾರಿಗೂ ಬೇಡವಾದ ವಸ್ತುವಾಗಿ ಹೋಯಿತು. ಇಟ್ಟರೆ ಧೂಳು ಹಿಡಿಯುತ್ತದೆ ಎಂಬ ಅಪವಾದ ಬೇರೆ. ನಮ್ಮ ಮನೆಯವರಿಂದ ಕಿರಿಕಿರಿ ಬೇರೆ. ಕಡೆಗೆ ನಮ್ಮ ಪರಿಚಿತರೊಬ್ಬರು ಎಲ್ಲಾ ಮಕ್ಕಳ ಪುಸ್ತಕಗಳನ್ನು ತೆಗೆದುಕೊಂಡುಹೋಗಿ ಗ್ರಾಮೀಣ ಭಾಗದ ಒಂದೆರಡು ಕನ್ನಡ ಮಾಧ್ಯಮ ಸರಕಾರಿ ಶಾಲೆಗೆ ಕೊಟ್ಟರು. ಮಕ್ಕಳೆಷ್ಟು ಓದಿದರೋ ಗೊತ್ತಿಲ್ಲ. ಆದರೆ ಎಲ್ಲಾದರೂ ಒಂದೆಡೆ ಸ್ವಲ್ಪ ಮಂದಿಗೆ ಉಪಯೋಗವಾಯಿತು ಎಂದು ಸಮಾಧಾನ ನನಗೆ.

ದಿನ ಕಳೆದಂತೆ ಪಾಕ್ಷಿಕಗಳನ್ನು, ಪತ್ರಿಕೆಗಳನ್ನು ತಂದರೂ ಓದಿಸಲು, ಓದಲು ಸಮಯ ಸಾಲದಾಯಿತು. ಸಾಮಾನ್ಯ ಜ್ಞಾನದ ಅರಿವೇ ಮಕ್ಕಳಲ್ಲಿ ಇಲ್ಲದಾಯಿತು. ಶಾಲೆ ಕೆಲಸವನ್ನೇ ಸಮರ್ಪಕವಾಗಿ ಮಾಡದೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಯಿತು. ಯಾವುದೇ ಪುಸ್ತಕಗಳನ್ನು ಓದುವ ಹವ್ಯಾಸ ಇಲ್ಲದೆ ಮಕ್ಕಳು, ಶಾಲಾ ಪಠ್ಯ ಮಾತ್ರ (ಪುಸ್ತಕದ ಬದನೆಕಾಯಿ) ಬಿಟ್ಟರೆ, ಬೇರೆ ಓದುವ ಕ್ರಮ ನಶಿಸಿತು. ಇದಕ್ಕೆ ನಾವು ಹಿರಿಯರು ಏನು ಮಾಡಬಹುದು? ಎಂದು ಆ  ಬಗ್ಗೆ ಯೋಚಿಸುವ ಅಗತ್ಯವಿದೆ.

ಮಕ್ಕಳಿಗೆ ಓದುವುದರಿಂದ ಜ್ಞಾನ ಹೆಚ್ಚಾಗುತ್ತದೆ. ಬರಿಯ ಪುಸ್ತಕದ ವಿಷಯಗಳಲ್ಲದೆ ಪರಿಸರ, ಸುತ್ತಮುತ್ತಲಿನ ವಿಷಯ, ಹೊರಪ್ರಪಂಚದ ಅರಿವು, ದೇಶದೊಳಗೆ, ಹೊರಗೆ ಏನಾಗುತ್ತದೆ ಎಂಬ ಮಾಹಿತಿ ಕುಳಿತಲ್ಲೇ ಸಿಗುತ್ತದೆ ಎಂದು ತಿಳಿಯ ಹೇಳಬಹುದು. ಬುದ್ಧಿಮಟ್ಟ ಹೆಚ್ಚಾಗುತ್ತದೆ. ಸಮನ್ವಯ, ಹೋಲಿಕೆ, ಸಮಾನತೆ, ಜ್ಞಾನ ಉಂಟಾಗುತ್ತದೆ. ಕೆಲವು ಮುಖ್ಯವಾದ ವಿಷಯಗಳನ್ನು ಬರೆದಿಟ್ಟು ಕೊಂಡು, ಸಂದರ್ಭ ಬಂದಾಗ ಉಪಯೋಗಿಸಲು ತಿಳಿಸಬಹುದು. ಮಕ್ಕಳದೇ ಪುಸ್ತಕಗಳು ತುಂಬಾ ಇವೆ. ಸಣ್ಣ ಸಣ್ಣ ಕಥೆ ಪುಸ್ತಕಗಳು, ಪಂಚತಂತ್ರ ಕಥೆಗಳು, ಮೆದುಳಿಗೆ ಮೇವು ಕೊಡುವಂಥ ಬರಹಗಳು, ಸರಳ ಗಣಿತ, ಭಗವದ್ಗೀತೆ, ಶ್ಲೋಕಗಳು, ಭಜನೆ ಹಾಡುಗಳು, ಅನುಪಮಾ ನಿರಂಜನ ಇವರ ದಿನಕ್ಕೊಂದು ಕಥೆಗಳು, ದೈನಂದಿನ ಪತ್ರಿಕೆಗಳು ಇವುಗಳನ್ನೆಲ್ಲ ಒದಗಿಸಿಕೊಟ್ಟು ಓದುವಂತೆ ಪ್ರೋತ್ಸಾಹಿಸುವುದು ನಮ್ಮ ಧರ್ಮ ಮತ್ತು ಅಗತ್ಯವೂ, ಅನಿವಾರ್ಯವೂ ಆಗಿದೆ. ದಿನಕ್ಕೊಂದು ಪತ್ರಿಕೆಯನ್ನು (ಕನ್ನಡ ಅಥವಾ ಇಂಗ್ಲೀಷ್) ಮಕ್ಕಳ ಬಳಿ ಓದಿಸುವುದು ಉತ್ತಮ ಬೆಳವಣಿಗೆ. ಈ ಮೊಬೈಲ್ ಯುಗದಲ್ಲಿ ಅದರ ವಿಪರೀತ ಬಳಕೆಯಿಂದ ನಮ್ಮ ಮಕ್ಕಳನ್ನು ಕಾಪಾಡಲೇ ಬೇಕು.

ಈಗ ಅಂತೂ ಅಂತರ್ಜಾಲ ಪಠ್ಯ ಚಟುವಟಿಕೆ (ಆನ್ ಲೈನ್ ತರಗತಿ) ಅನಿವಾರ್ಯ. ಈ ಸಮಯದಲ್ಲಿ ನಾಲ್ಕು ಗೋಡೆ ಮಧ್ಯೆ ಇರುವ ಮಕ್ಕಳಿಗೆ ಆದಷ್ಟೂ ಓದುವಂತೆ ಹುರಿದುಂಬಿಸುವ ಅಗತ್ಯವಿದೆ. ಪುಸ್ತಕಗಳನ್ನು ಓದುವುದರಿಂದ ಮಸ್ತಕದಲ್ಲಿ ಬೆಳವಣಿಗೆ, ಆಲೋಚನೆ ಮೂಡಿ ಮಗುವಿನ ಸರ್ವಾಂಗೀಣ ಅಭಿವೃದ್ಧಿ ಆಗಬಹುದು. ಪುಸ್ತಕ, ಪಾಕ್ಷಿಕಗಳಲ್ಲಿ, ನಿಯತಕಾಲಿಕೆಗಳಲ್ಲಿ ಮಕ್ಕಳ ಪುಟಗಳು ಇದ್ದೇ ಇರುತ್ತದೆ. ಎಲ್ಲರ ಮನೆಯಲ್ಲೂ ಒಂದು ಪುಟ್ಟ ಪುಸ್ತಕಾಲಯ ಇದ್ದರೆ ಉತ್ತಮ. ಒಂದಷ್ಟು ಹೊತ್ತು ಮಗು ಅಲ್ಲಿ ಕಾಲಕಳೆಯುವಂತೆ ನೋಡಿಕೊಳ್ಳಬೇಕು. 

ಗ್ರಾಮೀಣ ಭಾಗದಲ್ಲಿ ಈಗಲೂ ಕೆಲವು ಶಾಲೆಗಳಲ್ಲಿ ಮಕ್ಕಳೂ ಮನೆಯಲ್ಲಿ ಓದಿ ಮುಗಿಸಿದ ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಶಾಲೆಯ ಓದುವ ಕೋಣೆ, ಓದುವ ಮೂಲೆ, ಶಾಲಾ ಗ್ರಂಥಾಲಯದಲ್ಲಿ ತರಗತಿವಾರು, ವಯೋಗುಣಕ್ಕನುಸಾರವಾಗಿ ಜೋಡಿಸಿಟ್ಟು ನಿತ್ಯವೂ ಬಿಡುವಿನ ಸಮಯದಲ್ಲಿ ಓದಿಸುತ್ತಾರೆ. ಓದಿದ ವಿಷಯವನ್ನು ಮಕ್ಕಳು ವಾರಕ್ಕೊಮ್ಮೆ ಬರೆದು ತೋರಿಸುವ ಹಾಗೆ ಪ್ರೇರೇಪಿಸಿದರೆ ಮಕ್ಕಳ ಜ್ಞಾನಮಟ್ಟ ತುಂಬಾನೇ ಹೆಚ್ಚಾಗುತ್ತದೆ. ಶಿಕ್ಷಕರೂ ಈ ಬಗ್ಗೆ ಮುತುವರ್ಜಿ ವಹಿಸುವುದು ಅತ್ಯಗತ್ಯ. ಏಕೆಂದರೆ ಮನಸ್ಸಿದ್ದರೆ ಮಾರ್ಗವಿದೆ.

ಒಟ್ಟಿನಲ್ಲಿ ನಮ್ಮ ಮಕ್ಕಳು ಕಾಲಕ್ಕೆ ಸರಿಯಾಗಿ ಹೊಂದಾಣಿಕೆ ಮಾಡಿಕೊಳ್ಳಲು, ನಾವು ವ್ಯವಸ್ಥೆ ಕಲ್ಪಿಸಿ, ಚೆನ್ನಾಗಿ ಓದಿ ತಮ್ಮ ಮಿದುಳನ್ನು ಕ್ರಿಯಾಶೀಲವಾಗಿಡುವಲ್ಲಿ, ಜ್ಞಾನಕೋಶಗಳಾಗುವಲ್ಲಿ ಸಹಕರಿಸಿ 'ಸೃಜನಶೀಲತೆ ಹೊರಹೊಮ್ಮಲು ಬೇಕಾದ ಪೋಷಕಾಂಶಗಳನ್ನು' ನೀಡುವುದರ ಮೂಲಕ ಓದುವ ಅಗತ್ಯತೆಯನ್ನು ಮನದಟ್ಟು ಮಾಡೋಣ.

ಸಹಕಾರ: ಶ್ರೀಮತಿ ರತ್ನಾ ಭಟ್, ತಲಂಜೇರಿ (ನಿವೃತ್ತ್ತ ಮುಖ್ಯ ಶಿಕ್ಷಕಿ)

ಚಿತ್ರ ಕೃಪೆ: ಅಂತರ್ಜಾಲ ತಾಣ