ಮಕ್ಕಳಿಂದ ಕಲಿತ ಪಾಠ
ಮೊನ್ನೆ ಶಾಲೆ ಮುಗಿಸಿ ಮನೆಗೆ ಹೊರಟ ನಾನು, ಬಸ್ ನಲ್ಲಿ ಕುಳಿತು, ಹೊರಗಡೆ ಸುರಿಯುತ್ತಿದ್ದ ಧಾರಾಕಾರದ ಮಳೆಯ ಜೊತೆ ತಣ್ಣನೆಯ ಗಾಳಿಗೆ ಮುಖವೊಡ್ಡಿದ್ದೆ... ಅಲ್ಲೇ ಕಣ್ಣು ಕೂತಿತು.. ಮರುಕ್ಷಣವೇ ಹಿಂದೆಯಿಂದ ಗುನುಗುನು ಶಬ್ಧ ಕೇಳುತಿತ್ತು. ಮೊದಲು ಗಮನವಿಟ್ಟು ಕಿವಿ ಕೊಡದೆ ಹೋದೆನಾದರೂ, ನಂತರ ಕಣ್ಣು ಮುಚ್ಚಿಯೇ ಇದ್ದವು. ಆದರೆ ಕಿವಿಗಳು ಮಾತ್ರ ನೆಟ್ಟಾಗದವು. ಕಾರಣ ಹಿಂದೆ ಕುಳಿತು ಮಾತನಾಡುತ್ತಿದ್ದ ಇಬ್ಬರು ಮಕ್ಕಳ ಸಂಭಾಷಣೆ ಅವರ ಶಿಕ್ಷಕರ ಬಗ್ಗೆ ಆಗಿತ್ತು. ನನ್ನ ಸ್ಟಾಪ್ ಬರುವಲ್ಲಿಯವರೆಗೂ ಅವರ ಸಂಭಾಷಣೆಯೇ ಸಾಗಿತ್ತು.
ಒಬ್ಬಳು ಹೇಳಿದಳು. "ಅಲ್ಲ ಈ ಟೀಚರ್ಸ್ ಎಲ್ಲ ಏನ್ ಪಾಠ ಮಾಡ್ತಾರೋ ಏನಪ್ಪಾ? ಅವ್ರ್ ಹೇಳಿದ್ದು ನಮ್ ತಲೆಗೆ ಹೋಗೋದಿಲ್ಲ.. ಅದೇನ್ ತಯಾರಿ ಮಾಡ್ಕೊಂಡ್ ಬಂದಿರ್ತಾರೋ ಗೊತ್ತಿಲ್ಲ. ನಂಗಂತೂ ತಲೆ ಕೆಟ್ಟೋಯಿತು" ಇನ್ನೊಬ್ಬಳ ಉತ್ತರ.. "ಪಾಠ ಅರ್ಥ ಆಗೋದು ಇರಲಿ ಮಾರಾಯ್ತಿ ಅವರ ಮುಖಗಳಾದ್ರು ನೋಡೋಕಾಗತ್ತಾ? ನಾವೇನೋ ಅವರ ಆಸ್ತಿ ತಿಂದಿದೀವಿ ಅನ್ನೋ ಥರ ಗಂಟು ಮುಖ ಹಾಕಿ ತರಗತಿಗೆ ಬರೋದು, ಯಾರದ್ದೋ ಸಿಟ್ಟನ್ನ ನಮ್ಮ ಮೇಲೆ ಹಾಕಿ ಪಾಠ ಮಾಡೋದು. ಇನ್ನೇನ್ ಅರ್ಥ ಆಗತ್ತೆ ನಮಗೆ...?" ಮತ್ತೊಬ್ಬಳ ಸಮರ್ಥನೆ.. "ಬೇರೆ ಕಡೆ ಹೋದ ಕಾರ್ಯಕ್ರಮಗಳಲ್ಲಿ ಇವರ ಭಾಷಣ, ಮಕ್ಕಳ ಮನಸ್ಸನ್ನು ಮೊದಲು ಓದಬೇಕು ನಂತರ ತರಗತಿಗೆ ಹೋಗಬೇಕು, ಮೊದಲು ಶಿಕ್ಷಕರು ಮಕ್ಕಳಿಗೆ ಇಷ್ಟವಾಗಬೇಕು ಆಗ ಮಾತ್ರ ಪಾಠ ಅವರ ತಲೆಗೆ ಹೋಗುತ್ತದೆ... ಇದೆಲ್ಲ ಅವರ ಭಾಷಣಕ್ಕೆ ಮಾತ್ರ ಮೀಸಲು... ಟೀಚರ್ಸ್ ನಮ್ಮ ಮನಸ್ಸನ್ನು ಓದಲು ಪ್ರಯತ್ನಿಸುವುದೇ ಇಲ್ಲ... ಅವರು ಬರೀ ಪುಸ್ತಕ ಓದೋದು, ಸಿಲಬಸ್ ಹಿಂದೆ ಓಡೋದು, ಅಷ್ಟೇ ಮಾಡೋದು. ಒಂದು ದಿನ ಆದ್ರೂ ನಮ್ ಹತ್ರ ಬಂದು, ಮಕ್ಕಳೇ ನಾ ಮಾಡಿದ್ದೂ ಅರ್ಥ ಆಯಿತಾ? ಇಲ್ಲ ಅಂದ್ರೆ ಕೇಳಿ ಮತ್ತೊಮ್ಮೆ ಹೇಳ್ತೇನೆ ಅಂತ ಕೇಳೋದೇ ಇಲ್ಲ. ಪ್ರಶ್ನೆ ಕೇಳಿ ಅಂತಾರೆ, ಕೇಳಿದ್ರೆ ತಲೆಹರಟೆ ಸುಮ್ನೆ ಕ್ಲಾಸ್ ಕೇಳು ಅಂತಾರೆ... ಇವ್ರೆಲ್ಲ ಬರಿ ಸರ್ಟಿಫಿಕೇಟ್ ಹೋಲ್ಡರ್ಸ್ ಅಷ್ಟೇ.. ಇವ್ರ್ಗೆಲ್ಲ ನಮ್ಮ ಮನಸ್ಸು ಅರ್ಥ ಮಾಡ್ಕೊಳ್ಳೋ ಶಕ್ತಿ ಇಲ್ಲ... ಬರೀ ಪಾಠ ಮಾಡಿ ಹೋಗೋದಲ್ಲ.. ಕೆಲವೊಮ್ಮೆ ಮಕ್ಕಳ ಮನಸ್ಸಲ್ಲಿ ಏನಿದೆ? ಅವರು ಏಕೆ ಬೇಜಾರಲ್ಲಿದ್ದಾರೆ ಅಂತ ಅವ್ರು ತಿಳ್ಕೊಳೋ ಪ್ರಯತ್ನ ಮಾಡಬೇಕು.. ಆಗ ಮಾತ್ರ ಅವ್ರು ನಮಗೆ ಇಷ್ಟ ಆಗೋದು.." ಎಂದು ಸಿಟ್ಟಿನಲ್ಲಿ ಬಡ ಬಡನೆ, ಒಂದೇ ಉಸಿರಿನಲ್ಲಿ ತನ್ನ ಮಾತು ಮುಗಿಸಿದಳು..
ಆಗ ಪಕ್ಕದವಳು ಹೇಳಿದಳು "ಅವ್ರಿಗೆ ಪಾಠ ಮಾಡೋದ್ ಹೇಗೆ, ಸಿಲಬಸ್ ಮುಗ್ಸೋದ್ ಹೇಗೆ ಅಂತ ಮಾತ್ರ ಹೇಳಿ ಕೊಟ್ಟಿರ್ತಾರೆ ಅನ್ಸತ್ತೆ ಕಣೆ ಟ್ರೇನಿಂಗ ಲಿ... ಇನ್ನೊಬ್ಬರ ಮನಸ್ಸನ್ನ ತಿಳಿಯೋಕೆ psychology ಓದ್ಬೇಕು. ಟೀಚರ್ ಟ್ರೇನಿಂಗ ಅಲ್ಲ." ಎಂದು ಅಣಕದ ತಮಾಷೆ ಮಾಡುತ್ತಾ, ಸಿಟ್ಟಿನಲ್ಲಿದ್ದ ತನ್ನ ಗೆಳತಿಯನ್ನು ನಗಿಸಲು ಪ್ರಯತ್ನಿಸಿದಳು..... ನನ್ನ ಸ್ಟಾಪ್ ಬಂತು ನಾನು ಮನೆಗೆ ಬಂದು ಆಲೋಚಿಸಿದೆ. ನಾನು ಕೆಲವಾರು ತರಬೇತಿಗಳನ್ನು ಪಡೆದಿದ್ದೆ, ಅಲ್ಲಿ ಹೇಳಿಕೊಡುತ್ತಿದ್ದುದು ಮಕ್ಕಳನ್ನು, ಅವರ ಮನಸ್ಸನ್ನು ಮೊದಲು ಸೆಳೆಯಬೇಕು ನಂತರ ಅವರು ನೀವು ಹೇಳಿಕೊಟ್ಟದ್ದನ್ನು ಸುಲಭವಾಗಿ ಕಲಿಯುತ್ತಾರೆ ಎಂದು... ಆದರೆ ಆ ವಿಧಾನ ಹೇಗೆ ಎಂದು ಅರ್ಥವಾಗಿರಲಿಲ್ಲ. ಈ ಮಕ್ಕಳ ಮಾತು ಕೇಳಿ ಅನ್ನಿಸಿತು... ಯಾವ ತರಬೇತಿಗಳು, ಕ್ಲಾಸ್ ಗಳಿಂತ ಮಿಗಿಲಾದದ್ದು.. ಮಕ್ಕಳ ಜೊತೆ ಒಡನಾಟ ಎಂದು. ದಿನಕ್ಕೆ ಇಬ್ಬರು ಮಕ್ಕಳನ್ನು 5 ನಿಮಿಷ ಸಮಯ ಕೊಟ್ಟು ಮಾತನಾಡಿದರೆ, ಮಕ್ಕಳ ಮನಸ್ಸನ್ನು ತಿಳಿಯಲು ಅಷ್ಟೇ ಸಾಕು ಎಂದು...!
-ರಮ್ಯಾ ಆರ್ ಭಟ್, ಕುಂದಾಪುರ
ಚಿತ್ರ ಕೃಪೆ: ಇಂಟರ್ನೆಟ್ ತಾಣ