ಮಕ್ಕಳಿಗಾಗಿ ತತ್ತ್ವಚಿಂತನೆ (ಭಾಗ 1)

ಮಕ್ಕಳಿಗಾಗಿ ತತ್ತ್ವಚಿಂತನೆ (ಭಾಗ 1)

ಪುಸ್ತಕದ ಲೇಖಕ/ಕವಿಯ ಹೆಸರು
ಸುಂದರ್ ಸರುಕ್ಕೈ
ಪ್ರಕಾಶಕರು
ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ
ಪುಸ್ತಕದ ಬೆಲೆ
ರೂ. 260/-

ಇದೊಂದು ಅಪರೂಪದ ಪುಸ್ತಕ. ಸುಂದರ್ ಸರುಕ್ಕೈ ಬರೆದ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಮಾಧವ ಚಿಪ್ಪಳಿ. ನೋಡುವುದು, ಯೋಚನೆ, ಓದುವುದು, ಬರೆಯುವುದು, ಗಣಿತ, ಕಲೆ, ಒಳ್ಳೆಯತನ, ಕಲಿಯುವುದು - ಎಂಬ ಎಂಟು ಅಧ್ಯಾಯಗಳಲ್ಲಿ ಈ ಮೂಲಭೂತ ಸಂಗತಿಗಳ ಬಗ್ಗೆ ಸರಳವಾಗಿ ವಿವರಿಸಲಾಗಿದೆ.

ಪುಸ್ತಕದ ಪ್ರಸ್ತಾವನೆಯಲ್ಲಿ “ಮಕ್ಕಳಿಗಾಗಿ" ಮತ್ತು “ದೊಡ್ಡವರಿಗಾಗಿ" ಎಂಬ ಎರಡು ಭಾಗಗಳಿವೆ. “ಮಕ್ಕಳಿಗಾಗಿ” ಭಾಗದಲ್ಲಿ ಬರೆದಿರುವ ಕೆಲವು ವಿಷಯಗಳು ಹೀಗಿವೆ: “ಈ ಪುಸ್ತಕವು ನಿಮಗೆ ತಾತ್ತ್ವಿಕವಾಗಿ ಯೋಚನೆ ಮಾಡುವುದನ್ನು ಕಲಿಸುತ್ತದೆ. ತತ್ತ್ವಶಾಸ್ತ್ರ ಎಂದರೆ ಅದು ವಿಜ್ಞಾನ, ಗಣಿತಗಳಂತೆ ಮತ್ತೊಂದು ವಿಷಯ ಮಾತ್ರವಲ್ಲ, ಅದು ಯೋಚನೆ ಮಾಡುವ ಒಂದು ಮಾರ್ಗ - ನಮ್ಮ ಜಗತ್ತಿನ ಕುರಿತು ಯೋಚಿಸುವ ಮತ್ತು ಮನುಷ್ಯರಾಗಿರುವ ನಾವು ಯಾರು ಎಂದು ಅರ್ಥ ಮಾಡಿಕೊಳ್ಳುವ ಒಂದು ಮಾರ್ಗ. ನಾವು ಕಲಿಯುವ ಉಳಿದ ಎಲ್ಲ ವಿಷಯಗಳ ಅಡಿಪಾಯ ತತ್ತ್ವಶಾಸ್ತ್ರ. ಪ್ರಾಚೀನ ಸಂಸ್ಕೃತಿಗಳಲ್ಲಿ ಮೊಟ್ಟಮೊದಲು ವಿಕಾಸಗೊಂಡ ಶಾಸ್ತ್ರ ಇದು ….. ವಿಜ್ಞಾನ, ಕಲೆ ಮುಂತಾದ ವಿಷಯಗಳು ತತ್ತ್ವಶಾಸ್ತ್ರದಿಂದಲೇ ಹುಟ್ಟಿದವು. ಹಾಗಾಗಿ ಅವು ತತ್ತ್ವಶಾಸ್ತ್ರದ ಮಕ್ಕಳಿದ್ದಂತೆ ….."

ಹೆಚ್ಚುಹೆಚ್ಚು ಜ್ಞಾನವು ಸಂಗ್ರಹವಾದಾಗ ತತ್ತ್ವಶಾಸ್ತ್ರವು ಭೌತಶಾಸ್ತ್ರ, ಜೀವಶಾಸ್ತ್ರ, ಭಾಷಾಶಾಸ್ತ್ರ, ಸಮಾಜಶಾಸ್ತ್ರ, ಎಂದೆಲ್ಲ ಬೇರೆ ಬೇರೆ ವಿಷಯಗಳಾಗಿ ಬೆಳೆಯತೊಡಗಿತು. ಹಾಗಾಗಿ ತತ್ತ್ವಶಾಸ್ತ್ರವು ಈ ಎಲ್ಲ ವಿಷಯಗಳ ತಾಯಿ. ಶಾಲೆಗಳಲ್ಲಿ ನಾವು ತತ್ತ್ವಶಾಸ್ತ್ರವನ್ನು ಕಲಿಸುವುದಿಲ್ಲ. ಆದರೆ ನೀವು ಬೇರೆ ವಿಷಯಗಳನ್ನು ಕಲಿಯುವಾಗ ಸ್ವಲ್ಪಸ್ವಲ್ಪ ತತ್ತ್ವಶಾಸ್ತ್ರವನ್ನೂ ಕಲಿತಿರುತ್ತೀರಿ. ನೀವು ಯಾವಾಗಲಾದರೂ “ಇದು ನಿಜವೇ" ಅಥವಾ "ನಿನಗೆ ಇದು ಗೊತ್ತಿದೆ ಎಂದು ಹೇಗೆ ಹೇಳುತ್ತಿಯ” ಎಂದು ಕೇಳಿದಾಗ ತತ್ತ್ವಶಾಸ್ತ್ರದ ಕೆಲಸ ಮಾಡುತ್ತಿರುತ್ತೀರಿ. ಸತ್ಯ ಸುಳ್ಳುಗಳ ಬಗ್ಗೆ ಮಾತನಾಡಿದಾಗಲೂ ನೀವು ತತ್ತ್ವಶಾಸ್ತ್ರದ ಬಗ್ಗೆಯೇ ಮಾತನಾಡುತ್ತಿರುತ್ತೀರಿ. ಈ ಸಣ್ಣ ಪುಸ್ತಕವು ತತ್ತ್ವಶಾಸ್ತ್ರಜ್ನರು ಏನೇನು ಹೇಳಿದರು ಎನ್ನುವುದನ್ನು ಕಲಿಸುವುದಿಲ್ಲ. ಬದಲಿಗೆ ತತ್ತ್ವಶಾಸ್ತ್ರ ಎನ್ನುವುದು ಹೇಗೆ ನಮ್ಮ ದಿನನಿತ್ಯದ ಕಲಿಕೆಯ ಭಾಗವಾಗಿದೆ ಎನ್ನುವುದನ್ನು ತೋರಿಸುತ್ತದೆ.… ಇದು ಮಾಹಿತಿಯನ್ನು ಕೊಡುವ ಪುಸ್ತಕವಲ್ಲ. ಬದಲಿಗೆ ನೀವು ನಿಮ್ಮ ಬಗ್ಗೆಯೇ ಕಲಿಯಲಿಕ್ಕಾಗಿ ಇರುವ ಪುಸ್ತಕ. …"

“ದೊಡ್ಡವರಿಗಾಗಿ" ಭಾಗದಲ್ಲಿರುವ ಕೆಲವು ವಿಷಯಗಳು: “ನಾನು ಮಕ್ಕಳಿಗಾಗಿ ತತ್ತ್ವಶಾಸ್ತ್ರದ ಕಾರ್ಯಾಗಾರಗಳನ್ನು ಮಾಡುತ್ತೇನೆ ಎಂದಾಗ ಹಲವರು ಹುಬ್ಬೇರಿಸಿದರು. ಏಕೆಂದರೆ ಅವರ ಪ್ರಕಾರ ತತ್ತ್ವಶಾಸ್ತ್ರ ಇರುವುದು ದೊಡ್ಡವರಿಗಾಗಿ ಮಾತ್ರ. ಆದರೆ ಮೊದಲ ಕಾರ್ಯಾಗಾರ ನಡೆದಾಗ ತತ್ತ್ವಶಾಸ್ತ್ರವು ಮಕ್ಕಳಿಗೆ ಎಷ್ಟು ಅಗತ್ಯ, ಮುಖ್ಯ ಮತ್ತು ಪ್ರಸ್ತುತ ಎನ್ನುವುದು ನಮಗೆ ಸ್ಪಷ್ಟವಾಯಿತು. ಈ ಒಳನೋಟವೇ ಮಕ್ಕಳ ಹಲವು ಗುಂಪುಗಳಿಗೆ ಈ ರೀತಿಯ ಕಾರ್ಯಾಗಾರಗಳನ್ನು ಮಾಡಲು ಶಕ್ತಿಯನ್ನು ಒದಗಿಸಿತು. ಆ ಕಾರ್ಯಾಗಾರಗಳಿಂದಲೇ ಹುಟ್ಟಿದ್ದು ಈ ಪುಸ್ತಕ. …"

"ತತ್ತ್ವಶಾಸ್ತ್ರವನ್ನು ಅಧ್ಯಾಪನ ಮಾಡುತ್ತಾ, ಅದರ ಬಗ್ಗೆ ಬರೆಯುತ್ತಾ ಎಷ್ಟೋ ವರ್ಷಗಳ ನಂತರ ನನಗೆ ತತ್ತ್ವಶಾಸ್ತ್ರದ ಕುರಿತು ಮಕ್ಕಳೊಂದಿಗೆ ಮಾತನಾಡುವುದು ತೀರಾ ಅಗತ್ಯ ಮತ್ತು ತುರ್ತಿನ ಕೆಲಸ ಎಂದು ಅರಿವಾಯಿತು. ಕಾರಣವೇನೆಂದರೆ, ಇವತ್ತಿನ ಶಿಕ್ಷಣ ಪದ್ಧತಿಯಲ್ಲಿ ಹಲವು ಹೊಸ ಸವಾಲುಗಳಿವೆ. ಇಂದು ವಿಜ್ನಾನದ ಕಲಿಕೆಯ ಬಗ್ಗೆ ಅಪಾರ ಒತ್ತನ್ನು ಕೊಟ್ಟು ಉಳಿದ ವಿಷಯಗಳ ಬೋಧನೆಯ ಬಗ್ಗೆ ನಿರ್ಲಕ್ಶ್ಯ ತೋರುತ್ತಾರೆ. ಮಿತಿಯಿಲ್ಲದಷ್ಟು ಮಾಹಿತಿ ಎಲ್ಲೆಡೆ ದೊರಕುವಂತಾದ ಈ ತಂತ್ರಜ್ನಾನ ಯುಗದಲ್ಲಿ ಕಲಿಕೆಯ ಬಗ್ಗೆ ಕೆಲವು ಮೂಲಭೂತವಾದ ಪ್ರಶ್ನೆಗಳು ಹುಟ್ಟುತ್ತವೆ. ಇವತ್ತಿನ ಶಾಲಾ ಶಿಕ್ಷಣದ ಒತ್ತು ಹೇಗಿದೆಯೆಂದರೆ ಅರ್ಥಪೂರ್ಣವಾಗಿ, ತೃಪ್ತಿಕರ ಜೀವನವನ್ನು ನಡೆಸಲು ಬೇಕಾದ ಜ್ನಾನ ಮತ್ತು ಕೌಶಲ್ಯಗಳು ಮಕ್ಕಳಿಗೆ ದೊರಕದಿರುವಂತೆ ಆಗಿ ಬಿಟ್ಟಿದೆ. ಶಿಕ್ಷಣ ಎಂದರೆ ಒತ್ತಡ ಎನ್ನುವಂತಾಗಿದೆ ಮತ್ತು ಕಲಿಕೆಯ ಖುಷಿಯ ಜಾಗದಲ್ಲಿ ಭಯ ಬಂದು ಕುಳಿತಿದೆ.… ಇದು ಮತ್ತೊಂದು ವಿಷಯದ ಮೇಲೆ ಇರುವ ಇನ್ನೊಂದು ಪುಸ್ತಕವಲ್ಲ. ಸ್ವತಂತ್ರವಾಗಿ ಯೋಚನೆ ಮಾಡಿ, ಬೇರೆ ವಿಷಯಗಳಲ್ಲಿ ಅವರು ಏನನ್ನು ಕಲಿಯುತ್ತಾರೋ ಅದರ ಆಳವಾದ ಅರ್ಥವನ್ನು ಹುಡುಕಲು ಸಾಧ್ಯವಾಗುವಂತೆ ಮಕ್ಕಳನ್ನು ಬಲಪಡಿಸುವುದು ಈ ಪುಸ್ತಕದ ಗುರಿ.”

(ಭಾಗ 2 - ನಾಳೆ ಪ್ರಕಟವಾಗಲಿದೆ)