ಮಕ್ಕಳಿಗಾಗಿ ತತ್ತ್ವಚಿಂತನೆ (ಭಾಗ 2)

ಮಕ್ಕಳಿಗಾಗಿ ತತ್ತ್ವಚಿಂತನೆ (ಭಾಗ 2)

ಪುಸ್ತಕದ ಲೇಖಕ/ಕವಿಯ ಹೆಸರು
ಸುಂದರ್ ಸರುಕ್ಕೈ
ಪ್ರಕಾಶಕರು
ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ
ಪುಸ್ತಕದ ಬೆಲೆ
ರೂ. 260/-

ನಿನ್ನೆ ಪ್ರಕಟವಾದ ಭಾಗ-1ರಲ್ಲಿ ಈ ಪುಸ್ತಕದ “ಮಕ್ಕಳಿಗಾಗಿ" ಮತ್ತು “ದೊಡ್ಡವರಿಗಾಗಿ" ಎಂಬ 2 ಭಾಗಗಳ ಮಾಹಿತಿ ನೀಡಲಾಗಿತ್ತು.

"ಕಲಿಯುವುದು" ಎಂಬ ಕೊನೆಯ ಅಧ್ಯಾಯ ಹೀಗೆ ಆರಂಭವಾಗುತ್ತದೆ: "ಮಕ್ಕಳು ಏಕೆ ಶಾಲೆಗೆ ಹೋಗುತ್ತಾರೆ? ಅವರು ಏಕೆ ತರಗತಿಯಲ್ಲಿ ಕುಳಿತುಕೊಳ್ಳಬೇಕು? ಅವರು ಏಕೆ ಟೀಚರ್ ಹೇಳಿಕೊಡುವ ಪಾಠಗಳನ್ನು ಕೇಳಿಸಿಕೊಳ್ಳಬೇಕು? ಶಾಲೆಗೆ ಹೋಗುವುದಕ್ಕಿಂತ ಇಡೀ ದಿನ ಆಡುತ್ತಾ ಓಡುತ್ತಾ ಕಳೆಯುವುದೇ ಎಷ್ಟೋ ಚೆನ್ನಾಗಿರುತ್ತದೆ ಎಂದು ಬಹಳ ಮಕ್ಕಳಿಗೆ ಅನ್ನಿಸಬಹುದು." ಮುಂದುವರಿದು, ಪ್ರಾಣಿಗಳು ಮತ್ತು ಮನುಷ್ಯರಿಗೆ ಒಂದು ದೊಡ್ಡ ಶಕ್ತಿ ಇದೆ. ಅದೇ ಕಲಿಕೆಯ ಶಕ್ತಿ. ಹೊಸತನ್ನು ತಿಳಿಯುವ ನಿರಂತರ ಕ್ರಿಯೆಯೇ ಕಲಿಕೆ; ಅದು ಈಗಾಗಲೇ ತಿಳಿದಿರುವ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ಕ್ರಿಯೆಯೂ ಹೌದು ಎಂದು ವಿವರಿಸಲಾಗಿದೆ. ಬದುಕಿನಲ್ಲಿ ಪ್ರತಿ ದಿನವೂ ನಾವು ಹಲವು ವಿಚಾರಗಳನ್ನು ಕಲಿಯುತ್ತಿರುತ್ತೇವೆ ಎಂಬುದನ್ನು ಉದಾಹರಣೆಗಳ ಸಹಿತ ತಿಳಿಸಲಾಗಿದೆ.

ಹಾಗಿರುವಾಗ, ಕಲಿಕೆಗಾಗಿಯೇ ಶಾಲೆ ಎಂಬ ಬೇರೆ ಸ್ಥಳ ಏಕೆ ಬೇಕು? ಎಂಬ ಪ್ರಶ್ನೆಯನ್ನೆತ್ತಿ, ಉತ್ತರವನ್ನು ಪ್ರಸ್ತುತಪಡಿಸಲಾಗಿದೆ.  ಶಾಲೆಯಲ್ಲಿ ನಾವು ಹಲವು ರೀತಿಯಲ್ಲಿ ಕಲಿಯುತ್ತೇವೆ: ನಮ್ಮ ಅನುಭವಗಳಿಂದ (ಪಂಚೇಂದ್ರಿಯಗಳಿಂದ ಒದಗುವ), ಭಾಷೆಯ ಮೂಲಕ, ಟೀಚರ್ ಹೇಳುವುದನ್ನು ಕೇಳಿಸಿಕೊಂಡು ಮತ್ತು ಸಹಪಾಠಿಗಳಿಂದ. (ಪಾಠದ ಕೋಣೆಯಲ್ಲಿ ಮತ್ತು ಹೊರಗೆ ಕೂಡ) ಕಲಿಕೆಯ ಸುಲಭ ವಿಧಾನವೆಂದರೆ ಒಂದು ಮಾಹಿತಿ ತಿಳಿದುಕೊಂಡು ಅದನ್ನು ನೆನಪಿನಲ್ಲಿಟ್ಟುಕೊಳ್ಳುವುದು.

ಪಠ್ಯಪುಸ್ತಕದಲ್ಲಿ ಹಲವಾರು ಮಾಹಿತಿ ಇದೆ; ಅದನ್ನು ಓದಿ ಕಲಿಯಲು ಸಾಧ್ಯ. ಹಾಗಾದರೆ, ಟೀಚರ್ ಯಾಕೆ ಬೇಕು? ಯಾಕೆಂದರೆ, ಪುಸ್ತಕದಲ್ಲಿ ಇರುವ ಮಾಹಿತಿಯ ಬಗ್ಗೆ ಹೇಗೆ ಯೋಚನೆ ಮಾಡಬೇಕು ಎಂಬುದನ್ನು ಕಲಿಸುವವರು ಟೀಚರ್. ಯೋಚನೆ ಮಾಡುವುದು ಎಂದರೆ ಪ್ರಶ್ನೆ ಕೇಳಲು, ಹಲವು ರೀತಿಯ ಉತ್ತರಗಳನ್ನು ಕೊಡಲು, ಊಹಿಸಲು, ಏನು ಹೇಳಿದ್ದಾರೆ ಎನ್ನುವುದನ್ನು ನಮ್ಮದೇ ಪದಗಳಲ್ಲಿ ಅರ್ಥ ಮಾಡಿಕೊಳ್ಳಲು, ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳಲು, ಕಾರಣಗಳನ್ನು ಹುಡುಕಲು, ಮಾಹಿತಿ ಮತ್ತು ಜ್ನಾನವನ್ನು ಬಳಸಲು ಮತ್ತು ವಿವರಿಸುವ ಹೊಸ ದಾರಿಗಳನ್ನು ಹುಡುಕಲು ಕಲಿಯುವುದು.

ನಾವು ಯಾರ್ಯಾರಿಂದ ಕಲಿಯುತ್ತೇವೆ ಎಂಬುದು ಒಂದು ಮುಖ್ಯ ಪ್ರಶ್ನೆ. ನಮ್ಮ ಬಹುಪಾಲು ಕಲಿಕೆ ತಂದೆತಾಯಿಯರಿಂದ, ಮನೆಯವರಿಂದ, ಅಧ್ಯಾಪಕರಿಂದ. ಜೊತೆಗೆ, ಇನ್ನೆರಡು ದಾರಿಗಳಿವೆ: ಮತ್ತೊಬ್ಬರಿಂದ ಕಲಿಯುವುದು ಮತ್ತು ನಾವೇ ಕಲಿಯುವುದು. ಇತರರು ಕೆಲವು ವಿಚಾರಗಳನ್ನು ನಮಗೆ ನೇರವಾಗಿ ಹೇಳುತ್ತಾರೆ. ಜೊತೆಗೆ ಮತ್ತೊಬ್ಬರ ಕೆಲಸಗಳನ್ನು ನೋಡುವುದರಿಂದ, ಕೆಲವು ಸಂದರ್ಭಗಳಲ್ಲಿ ಅವರ ನಡವಳಿಕೆಯಿಂದಲೂ ಕಲಿಯುತ್ತೇವೆ. ಗೆಳೆಯಗೆಳತಿಯರ ಹಾಗೂ ಅಕ್ಕಪಕ್ಕದವರ ಜೊತೆ ಮಾತುಕತೆ, ಚರ್ಚೆಯಿಂದಲೂ ಪರಸ್ಪರ ಕಲಿಯುತ್ತಲೇ ಇರುತ್ತೇವೆ.

ನಾವೇ ಕಲಿಯುವುದಂತೂ ಬಹಳ ಪ್ರಮುಖವಾದ ಕಲಿಕೆಯ ಮಾರ್ಗ. ದೊಡ್ಡವರು ಮತ್ತು ಅಧ್ಯಾಪಕರು ಎಷ್ಟೋ ವಿಚಾರಗಳ ಬಗ್ಗೆ ಹೇಳಿದರೂ ನಿಜವಾದ ಕಲಿಕೆ ಆಗುವುದು ನಮ್ಮ ಒಳಗೆ. ಟೀಚರ್ ಒಂದಷ್ಟು ಮಾಹಿತಿ ಹೇಳಬಹುದು. ಆದರೆ ಆ ಮಾಹಿತಿ ಅರ್ಥ ಮಾಡಿಕೊಳ್ಳುವುದು, ಅದರ ಬಗ್ಗೆ ಯೋಚನೆ ಮಾಡುವುದು, ಅದರ ಕುರಿತು ಪ್ರಶ್ನೆಗಳು ಹುಟ್ಟುವುದು, ಅವುಗಳಿಗೆ ಹೊಸಹೊಸ ಉತ್ತರ ಕಂಡುಕೊಳ್ಳುವುದು ಇವೆಲ್ಲವೂ ನಮ್ಮ ಒಳಗೆ, ನಮ್ಮ ಯೋಚನೆಯಿಂದ ಮಾತ್ರ ಸಾಧ್ಯ. ಆದ್ದರಿಂದ ನಮಗೆ ನಾವೇ ಅತ್ಯುತ್ತಮ ಗುರು. ಯಾವುದೇ ವಿಚಾರ ಅರ್ಥವಾಗದಿದ್ದರೆ, ಮೊದಲು ನಮಗೆ ನಾವೇ ವಿವರಿಸಿಕೊಳ್ಳಲು ಪ್ರಯತ್ನಿಸಬೇಕು. ಅದಕ್ಕಾಗಿ ನಮ್ಮೊಂದಿಗೆ ನಾವೇ ನಮ್ಮೊಳಗೆ ಮಾತಾಡಿಕೊಳ್ಳಬೇಕು. ಯಾಕೆಂದರೆ, ನಾವು ಕೇಳುವ ಎಲ್ಲ ಪ್ರಶ್ನೆಗಳಿಗೂ ಅಂತಿಮವಾಗಿ ಉತ್ತರಗಳು ಸಿಗುವುದು ನಮ್ಮೊಳಗೆ ಮಾತ್ರ.

ಮುಕ್ತಾಯದಲ್ಲಿ, “ಚೆನ್ನಾಗಿ ಕಲಿಯುವುದು ಹೇಗೆ?” ಎಂಬುದನ್ನು ಸರಳವಾಗಿ ವಿವರಿಸಲಾಗಿದೆ. ಅದಕ್ಕಾಗಿ ಕೆಲವು ಕೌಶಲ್ಯಗಳನ್ನು ಕಲಿಯಬೇಕು: ಗಮನ ಕೇಂದ್ರೀಕರಿಸುವುದು ಮತ್ತು ಸೂಕ್ಷ್ಮವಾಗಿ ಗ್ರಹಿಸುವುದು. ಪ್ರಶ್ನೆಗಳನ್ನು ಕೇಳುವುದು, ಹೆಚ್ಚೆಚ್ಚು ಓದುವುದು, ಹೊಸ ವಿಚಾರಗಳನ್ನು ಹುಡುಕುವುದು, ಯೋಚನೆಯೊಂದಿಗೆ ಆಟವಾಡುವುದು, ನಮ್ಮಿಂದ ನಾವೇ ಕಲಿಯುವುದು ಇವೆಲ್ಲವೂ ಚೆನ್ನಾಗಿ ಕಲಿಯಲು ಅತ್ಯವಶ್ಯವಾದ ಕೌಶಲ್ಯಗಳು. ಅಂತೂ, ವ್ಯಕ್ತಿತ್ವದ ಸಮಗ್ರ ವಿಕಾಸಕ್ಕಾಗಿ ದೊಡ್ಡವರೂ ಕಲಿಯಬೇಕಾದ ಹಾಗೂ ಅರ್ಥ ಮಾಡಿಕೊಳ್ಳಬೇಕಾದ ಹತ್ತುಹಲವು ವಿಷಯಗಳು ಈ ಪುಸ್ತಕದಲ್ಲಿವೆ.

ಫೋಟೋ: ಪುಸ್ತಕದ ಹಿಂದಿನ ರಕ್ಷಾಕವಚ