ಮಕ್ಕಳಿಗಾಗಿ ಸ್ವಾಮಿ ಸಿದ್ದೇಶ್ವರರ ಕಥೆಗಳು

ಮಕ್ಕಳಿಗಾಗಿ ಸ್ವಾಮಿ ಸಿದ್ದೇಶ್ವರರ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ನಿರೂಪಣೆ: ರೋಹಿತ್ ಚಕ್ರತೀರ್ಥ
ಪ್ರಕಾಶಕರು
ಅಯೋಧ್ಯಾ ಪಬ್ಲಿಕೇಷನ್ಸ್, ಬನಶಂಕರಿ ಎರಡನೇ ಹಂತ, ಬೆಂಗಳೂರು-೫೬೦೦೭೦
ಪುಸ್ತಕದ ಬೆಲೆ
ರೂ.೧೨೦.೦೦, ಮುದ್ರಣ: ೨೦೨೩

ಇತ್ತೀಚೆಗೆ ನಮ್ಮನ್ನು ಅಗಲಿದ ಸ್ವಾಮಿ ಸಿದ್ದೇಶ್ವರರು ತಮ್ಮ ಪ್ರಖರವಾದ ಪ್ರವಚನಗಳಿಗೆ ಬಹಳ ಖ್ಯಾತಿಯನ್ನು ಪಡೆದವರು. ಅವರ ಮಾತುಗಳನ್ನು ಆಲಿಸಲು ಬೆಳ್ಳಂಬೆಳಿಗ್ಗೆ ಜನರು ತಂಡೋಪತಂಡವಾಗಿ ಅವರ ಆಶ್ರಮಕ್ಕೆ ಬರುತ್ತಿದ್ದರು. ಅವರು ತಮ್ಮ ಪ್ರವಚನಗಳಲ್ಲಿ ಹೇಳಿದ ಹಲವಾರು ಕಥೆಗಳು, ವಿಷಯಗಳು ಮಕ್ಕಳಿಗೆ ದಾರಿದೀಪವಾಗುವಂಥವುಗಳು. ಅಂತಹ ೩೬ ಕಥೆಗಳನ್ನು ಲೇಖಕರಾದ ರೋಹಿತ್ ಚಕ್ರತೀರ್ಥ ಇವರು ಮಕ್ಕಳಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ನಿರೂಪಣೆ ಮಾಡಿ ‘ಮಕ್ಕಳಿಗಾಗಿ ಸ್ವಾಮಿ ಸಿದ್ಧೇಶ್ವರರ ಕಥೆಗಳು' ಎಂಬ ಹೆಸರಿನಲ್ಲಿ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. 

ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಪತ್ರಕರ್ತ, ಲೇಖಕರಾದ ವಿಶ್ವೇಶ್ವರ ಭಟ್ ಇವರು. ಇವರು ತಮ್ಮ ಬರಹದಲ್ಲಿ “ ಬೇರೆಯವರಿಗೆ ಹೆಚ್ಚಾಗಿ ಗೊತ್ತಿಲ್ಲದ, ಗಡುಚಾದ ವಿಷಯವನ್ನು ಸಾಮಾನ್ಯರಲ್ಲಿ ಸಾಮಾನ್ಯನಿಗೂ ಅರ್ಥವಾಗುವಂತೆ ಹೇಳುವುದು ಸಾಮಾನ್ಯ ಕೆಲಸವಲ್ಲ. ನೀವು ಒಂದು ವಿಷಯವನ್ನು ಸ್ಪಷ್ಟವಾಗಿ ಆಳವಾಗಿ, ತಲಸ್ಪರ್ಶಿಯಾಗಿ ತಿಳಿದಿದ್ದರೆ ಮಾತ್ರ ಬೇರೆಯವರಿಗೆ ಸರಿಯಾಗಿ, ಸುಲಭವಾಗಿ ಅರ್ಥವಾಗುವಂತೆ ತಿಳಿಸಲು ಸಾಧ್ಯ. ವಿಷಯ ಗೊತ್ತಿದ್ದರೂ ನಿಮಗೆ ಬೇರೆಯವರಿಗೆ ಅರ್ಥವಾಗುವಂತೆ ಹೇಳಲು ಬರುವುದಿಲ್ಲ ಅಂದರೆ ಹೇಳಬೇಕೆಂದಿರುವ ವಿಷಯ ನಿಮಗೇ ಸಂಪೂರ್ಣವಾಗಿ ಅರ್ಥವಾಗಿಲ್ಲ ಎಂದರ್ಥ. ಕೆಲವರು ಬೇರೆಯವರಿಗೆ ವಿವರಿಸುವಾಗ ‘ಇದನ್ನು ನಿನಗೆ ಹೇಗೆ ಹೇಳುವುದೋ ಗೊತ್ತಾಗ್ತಾ ಇಲ್ಲ' ಎಂದು ಹೇಳುವುದನ್ನು ಕೇಳಿರಬಹುದು. ನಾವು ಚೆನ್ನಾಗಿ ತಿಳಿದುಕೊಂಡರೆ ಮಾತ್ರ ಇತರರಿಗೆ ತಿಳಿಯುವಂತೆ ಹೇಳುವುದು ಸಾಧ್ಯ. ಅದರಲ್ಲೂ ಬೇರೆಯವರಿಗೆ ಗೊತ್ತಿಲ್ಲದ ವಿಷಯವನ್ನು ‘ತಿಳಿ' ಹೇಳುವುದು ಸವಾಲು.

ಒಮ್ಮೆ ಏರೋಡೈನಮಿಕ್ಸ್ ಥಿಯರಿ ಹೇಳುವಾಗ ದುಂಬಿಯ ಕತೆ ಹೇಳಿದ್ದರು. ‘ನೀವೆಲ್ಲ ದುಂಬಿಯನ್ನು ನೋಡಿದ್ದೀರಿ. ಅದರ ದೇಹ ದೊಡ್ದದು. ಅದರ ರೆಕ್ಕೆ ತೆಳು. ದೇಹದ ಗಾತ್ರಕ್ಕೂ ರೆಕ್ಕೆಗೂ ಬಹಳ ವ್ಯತ್ಯಾಸ. ಏರೋಡೈನಾಮಿಕ್ಸ್ ನಿಯಮದ ಪ್ರಕಾರ, ದುಂಬಿ ಹಾರಲೇ ಬಾರದು. ಹಾರುವುದು ಸಾಧ್ಯವೂ ಇಲ್ಲ. ಆದರೂ ಅದು ಅವೆಷ್ಟೋ ಸಾವಿರ ವರ್ಷಗಳಿಂದ ಹಾರುತ್ತಿವೆ. ವಿಮಾನವನ್ನು ಕಂಡುಹಿಡಿಯುವ ಮೊದಲಿಂದಲೂ ದುಂಬಿಗಳು ಹಾರುತ್ತಿವೆ. ಹೇಗೆ?’ ಎಂದು ಕೇಳಿದ್ದರು. ನಂತರ ಶ್ರೀಗಳೇ ವಿವರಿಸಿದ್ದರು - ‘ಯಾಕಂದ್ರ ಆ ದುಂಬಿಗಳಿಗೆ ಏರೋಡೈನಾಮಿಕ್ಸ್ ಥಿಯರಿ ಅಂದ್ರೆ ಏನೆಂದು ಗೊತ್ತಿಲ್ಲ. ಅವು ಆ ಥಿಯರಿಯನ್ನು ಓದಿಲ್ಲ. ಹೀಗಾಗಿ ಹಾರುತ್ತಿವೆ. ಮನುಷ್ಯ ಈ ಥಿಯರಿಯನ್ನು ಕಂಡುಹಿಡಿಯಲು ದುಂಬಿಗಳೂ ಒಂದು ಕಾರಣ. ದುಂಬಿಯ ಥರಾ ವಿಮಾನವನ್ನು ಡಿಸೈನ್ ಮಾಡಿದರೆ ಹಾರುತ್ತದೆ. ಆದರೆ ಬಹಳ ದೂರ ಹಾರೋಲ್ಲ.’ ಎಂದು ಸಾಮಾನ್ಯರಿಗೂ ತಿಳಿಯುವ ಹಾಗೆ ವಿವರಿಸಿದ್ದರು.’ ಎಂದಿದ್ದಾರೆ.

ಸಿದ್ದೇಶ್ವರ ಸ್ವಾಮಿಯವರ ಮಾತುಗಳನ್ನು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ನಿರೂಪಿಸಿದ ರೋಹಿತ್ ಚಕ್ರತೀರ್ಥ ಇವರು ತಮ್ಮ ಮಾತುಗಳಲ್ಲಿ ಹೇಳಿರುವುದು ಹೀಗೆ..."ಸಿದ್ದೇಶ್ವರ ಸ್ವಾಮೀಜಿ ಹುಟ್ಟಿದ್ದು ವಿಜಯಪುರದಲ್ಲಿ. ಒಂದು ಸಾಮಾನ್ಯ ಬಡ ರೈತಾಪಿ ಕುಟುಂಬ. ಆದರೆ ಬಾಲಕ ಚುರುಕು. ಆಧ್ಯಾತ್ಮದ ಸೆಳೆತಕ್ಕೆ ಸಿಕ್ಕಿ ಈ ಹುಡುಗನ ಅಂತಃಶಕ್ತಿಯನ್ನು ಜ್ಞಾನಯೋಗಾಶ್ರಮದ ಸಂಸ್ಥಾಪಕರಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿ ಮಹಾಸ್ವಾಮಿಗಳು ಅಂದೇ ಗುರುತಿಸಿದ್ದರು. ಆತನ ವಿದ್ಯಾಭ್ಯಾಸವೆಲ್ಲ ಸಾಂಗವಾಗಿ ನೆರವೇರುವಂತೆ ಮಾಡಿ ನಂತರ ಸಿದ್ದಗೊಂಡನೆಂಬ ಆ ಯುವಕನಿಗೆ ಸಿದ್ದೇಶ್ವರನೆಂಬ ನಾಮಕರಣ ಮಾಡಿ ಶಿಷ್ಯನಾಗಿ ಸ್ವೀಕರಿಸಿದರು.

ಹೇಳುವವರು, ಉಪದೇಶಿಸುವವರು, ಹೇಳಿಕೆಗಳನ್ನು ಕೊಡುವವರು ಬಹಳಷ್ಟು ಮಂದಿ ಇರುತ್ತಾರೆ. ‘ನನ್ನ ಉಪದೇಶವನ್ನು ತೆಗೆದುಕೊಳ್ಳಿ . ಯಾಕೆಂದರೆ ನನಗದೇನೂ ಬೇಕಾಗಿಲ್ಲ' ಎಂಬ ವರ್ಗದ ಮಂದಿಯೂ ಲೋಕದಲ್ಲಿ ಬಹಳಷ್ಟು ಸಿಗುತ್ತಾರೆ. ಸಿದ್ದೇಶ್ವರ ಸ್ವಾಮೀಜಿಗಳದ್ದು ಅನುಸರಿಸಿ ಬೋಧಿಸುವ ಪಂಥ. ಅವರೇನೋ ಹೇಳಿದರೋ ಅದನ್ನು ಅನುಸರಿಸಿದ ಮೊದಲ ವ್ಯಕ್ತಿ ಅವರೇ. ಮಾತು-ಕೃತಿಗಳಲ್ಲಿ ಇಂಥ ಬೆಸುಗೆಯನ್ನು ಸಾಧಿಸಿದ ವ್ಯಕ್ತಿಗಳು ದುರ್ಲಭ. ಹಾಗಾಗಿಯೇ ಇರಬೇಕು, ಜನ ಅವರನ್ನು ‘ನಡೆದಾಡುವ ದೇವರು' ಎಂದೇ ಮಾನ್ಯ ಮಾಡಿದರು. ಸ್ವಾಮೀಜಿ ಸರಕಾರಗಳು ಕೊಡುವ ಪ್ರಶಸ್ತಿಗಳನ್ನು ವಿನಯದಿಂದ ನಿರಾಕರಿಸಿದರು. ಸಹಸ್ರ ಸಹಸ್ರ ಮಂದಿಯ ಹೃದಯ ಸಿಂಹಾಸನದಲ್ಲಿ ಪ್ರತಿಷ್ಟೆಗೊಳ್ಳುವುದಕ್ಕಿಂತ ದೊಡ್ದ ಪ್ರಶಸ್ತಿ ಯಾವುದು ಬೇಕು!” 

ಚಿತ್ರಮಿತ್ರ, ಮುಂಬೈ ಇವರ ಸೊಗಸಾದ ರೇಖಾಚಿತ್ರಗಳು ಕಥೆಯನ್ನು ಅಲಂಕರಿಸಿವೆ. ಕಥೆಗಳೂ ಪುಟ್ಟದಾಗಿದ್ದು, ನೀತಿಯುಕ್ತವಾಗಿವೆ. ೬೨ ಪುಟಗಳ ಪುಟ್ತ ಪುಸ್ತಕವನ್ನು ಯಾವಾಗ ಬೇಕಾದರೂ ಓದಿ ಮುಗಿಸಬಹುದು. ಬೆಳೆಯುತ್ತಿರುವ ಮಕ್ಕಳಿಗೆ ಇಂತಹ ಪುಸ್ತಕಗಳನ್ನು ಓದಲು ನೀಡಿದರೆ ಅವರ ಮನೋಸ್ಥೈರ್ಯ ಬೆಳೆಯುವುದರ ಜೊತೆಗೆ ಉತ್ತಮ ಮಾನವನಾಗಿ ಬೆಳೆಯುವುದು ಖಂಡಿತ.