ಮಕ್ಕಳಿಗೆ ಅಂತರ್ಜಾಲ ವಿಳಾಸ ಕಾದಿಡುವ ಹೆತ್ತವರು!

ಮಕ್ಕಳಿಗೆ ಅಂತರ್ಜಾಲ ವಿಳಾಸ ಕಾದಿಡುವ ಹೆತ್ತವರು!

ಬರಹ

(ಇ-ಲೋಕ-37)(27/8/2007)

ಮಕ್ಕಳು ಹುಟ್ಟಿದ ಕೂಡಲೇ ಶಾಲೆಗೆ ಅರ್ಜಿ ಹಾಕಿ ಸೀಟು ಕಾದಿಡುವ ಅಪ್ಪ-ಅಮ್ಮಂದಿರು ನಮ್ಮಲ್ಲಿ ಇದ್ದಾರೆ. ಆದರೆ ವಿದೇಶಗಳಲ್ಲಿ ಈಗ ಅದರ ಜತೆಗೆ ಮಕ್ಕಳ ಹೆಸರಿನ ಅಂತರ್ಜಾಲ ಪುಟದ ವಿಳಾಸವನ್ನು ಕಾದಿಡುವ ಚಾಳಿ ಜೋರ್‍ಆಗಿದೆ. ತಡವಾದರೆ,ಈ ವಿಳಾಸಗಳನ್ನು ಇತರರು ಪಡೆದು,ತಮ್ಮ ಮಕ್ಕಳಿಗೆ ಬೇಕಾದ ಹೆಸರು ಸಿಗದು ಎಂದು ಅವರಿಗೆ ಅಂಜಿಕೆ.ಅದು ನಿಜವೂ ಕೂಡಾ.ಹಲವು ಪ್ರಸಿದ್ಧ ಕಂಪೆನಿಗಳು ಅಂತರ್ಜಾಲ ಪುಟ ಆರಂಭಿಸಲು ಬಯಸಿದಾಗ,ತಾವು ಬಯಸಿದ ವಿಳಾಸವನ್ನು ಇತರರು ಖರೀದಿಸಿರುವುದು ಗೊತ್ತಾಗಿ,ದುಬಾರಿ ಹಣ ನೀಡಿ ತಮ್ಮ ವಿಳಾಸದ ಹಕ್ಕನ್ನು ಪಡೆದಿವೆ.ವೆಬ್ ವಿಳಾಸ ಮಾರುವ ಹಕ್ಕನ್ನು ಪಡೆದಕಂಪೆನಿಗಳಲಿ ಯಾರಿಗಾದರೂ ಬೇಕಾದ ವಿಳಾಸ ಇದ್ದರೆ,ನಿಗದಿತ ದರ ತೆತ್ತು ಅದರ ಹಕ್ಕನ್ನು ಪಡೆಯಬೇಕು.ನಂತರ ವರ್ಷವೂ ನವೀಕರಣ ಶುಲ್ಕ ಪಾವತಿಸಬೇಕು.ಹೆತ್ತವರು ಅಂತರ್ಜಾಲ ವಿಳಾಸ ಪಡೆದ ಬಳಿಕ,ಸಣ್ಣಮಟ್ಟದ ಪುಟವನ್ನು ರೂಪಿಸುವುದಿದೆ.ಮಕ್ಕಳ ಚಿತ್ರಗಳನ್ನು,ವೀಡಿಯೋಗಳನ್ನು ಅಲ್ಲಿ ಒದಗಿಸುವುದು ರೂಡಿ.

ಹತ್ತು ನಿಮಿಷದಲ್ಲಿ ಕ್ಯಾನ್ಸರ್ ಪತ್ತೆ

ಬಾಯಿಯ ಕ್ಯಾನ್ಸರನ್ನು ಹತ್ತು ನಿಮಿಷದಲ್ಲಿ ಪತ್ತೆ ಮಾಡುವ ಯಂತ್ರ ಇದೀಗ ಲಭ್ಯ.ಟೆಕ್ಸಸ್ ವಿಶ್ವವಿದ್ಯಾಲಯದ ಮೆಕ್‍ಡೆವಿಟ್ ಎನ್ನುವ ಪ್ರೊಫೆಸರ್ ಇದರ ಸಂಶೋಧಕ.ಸಾಮಾನ್ಯವಾಗಿ ಬಾಯಿ ಕ್ಯಾನ್ಸರ್ ಇದ್ದವರಿಗೆ ಹಲ್ಲು ಅಥವ ವಸಡಿನ ತೊಂದರೆಯಾಗಿ ಕಾಣಿಸಿಕೊಳ್ಳುತ್ತದೆ.ದಂತವೈದ್ಯರ ಬಳಿ ಚಿಕಿತ್ಸೆಗೆ ತೆರಳಿದಾಗ,ಅವರ ಬಾಯಿಯಿಂದ ಜೊಲ್ಲು ಮತ್ತು ಕೆರೆದ ಪದರವನ್ನು ಸಂಗ್ರಹಿಸಲು ಈ ಕ್ಯಾನ್ಸರ್ ಪರೀಕ್ಷಾ ಸಾಧನದಲ್ಲಿ ಅಕ್ರಿಲಿಕ್‍ನ ಸಣ್ಣ ಪಾತ್ರೆಯಿದೆ.ಬಾಯಿಯಿಂದ ಸಂಗ್ರಹಿಸಿದ ಜೊಲ್ಲು ಮತ್ತು ಪದರಗಳು ಸೋಸಿದಂತಾಗಿ,ರಾಸಾಯಿನಿಕದ ಜತೆ ವರ್ತಿಸುತ್ತದೆ.ಕ್ಯಾನ್ಸರ್‌ಕಾರಕ ಅಣುಗಳಿಗೆ ರಾಸಾಯಿನಿಕವು ಕ್ಯಾನ್ಸರ್ ಅಂಟಿಕೊಳ್ಳುತ್ತವೆ.ಫ್ಲೊರೆಸೆಂಟ್ ಸೂಕ್ಷ್ಮದರ್ಶಕದಲ್ಲಿ ಇದನ್ನು ವೀಕ್ಷಿಸಿದರೆ,ಕ್ಯಾನ್ಸರ್ ಕೋಶಗಳು ಹಸಿರು ಪ್ರಕಾಶದಿಂದ ಬೆಳಗುತ್ತವೆ. ಕ್ಯಾನ್ಸರನ್ನು ಮೊದಲೇ ಪತ್ತೆ ಹಚ್ಚಿದರೆ,ಅದಕ್ಕೆ ಚಿಕಿತ್ಸೆ ನೀಡುವುದು ಸುಲಭ.ತಡವಾದೆಂತೆಲ್ಲಾ ಅದು ಮಾರಣಾಂತಿಕವಾಗುವುದೇ ಹೆಚ್ಚು.ಈ ಪರೀಕ್ಷೆ ತುಂಬಾ ಅಗ್ಗದ್ದೂ ಆಗಿದೆಯಂತೆ.ಸದ್ಯ ಇರುವ ಕ್ಯಾನ್ಸರ್ ಪರೀಕ್ಷೆಗೆಳಿಗೆ ಹೋಲಿಸಿದರೆ,ಈಪರೀಕ್ಷೆ ಹತ್ತು ಪಟ್ಟು ವೇಗದಲ್ಲೂ ನಡೆದು ಬಿಡುತ್ತದೆ.

ಭೂತಕ್ಕೂ ಭೂತದ ಕಾಟ!

ಮೋನ್‍ಸ್ಟರ್ ಎನ್ನುವ ಅಂತರ್ಜಾಲ ತಾಣ ಕೆಲಸ ಹುಡುಕುವವರ ಪೈಕಿ ಬಹು ಜನಪ್ರಿಯ.ಇಲ್ಲಿ ಲಕ್ಷಾಂತರ ಉದ್ಯೋಗಾಂಕ್ಷಿಗಳು ತಮ್ಮ ಹೆಸರು ನೋಂದಾಯಿಸಿ,ಕೆಲಸದ ಹುಡುಕಾಟ ನಡೆಸುತ್ತಾರೆ.ಉದ್ಯೋಗದಾತರೂ ಈ ಸೈಟನ್ನು ಉತ್ತಮ ಆಯ್ಕೆಗೋಸ್ಕರ ಅವಲಂಬಿಸುವುದರಿಂದ,ಅವರಿಗೂ ಉತ್ತಮ ಅಭ್ಯರ್ಥಿಗಳು ಸಿಗುತ್ತಾರೆ.ಇತ್ತೀಚೆಗೆ ಈ ತಾಣಕ್ಕೂ ಅಂತರ್ಜಾಲದ ಪುಂಡರ ಹಾವಳಿ ಎದುರಾಯಿತು.ಪ್ರಸಿದ್ಧ ಉದ್ಯೋಗದಾತರ ಲಾಗಿನ್ ಐಡಿ,ಗುಪ್ತಸಂಕೇತಗಳನ್ನು ಕದಿದು,ಉದ್ಯೋಗಾಕಾಂಕ್ಷಿಗಳ ವಿವರಗಳನ್ನು ಕದ್ದು,ತಮಗೆ ಬೇಕಾದ ಸೈಟಿನಲಿ ಉಳಿಸುವಂತಹ ವೈರಸ್ ಮೋನ್‍ಸ್ಟರ್ ತಾಣವನ್ನು ಬಾಧಿಸಿತು.ಈ ಕಾಟ ಇಷ್ಟಕ್ಕೆ ನಿಂತಿತೇ?ಇಲ್ಲ,ನಂತರ ಈ ಕದ್ದ ಮಾಹಿತಿಯಲಿದ್ದ ಉದ್ಯೊಗಾಕಾಂಕ್ಷಿಗಳ ವಿವರ ಪಡೆದು,ಅವರು ಬಯಸಿದ್ದ ಕಂಪೆನಿಯ ಹೆಸರಿನಲ್ಲಿ ಅವರಿಗೆ ಮನೆಯಿಂದಲೇ ಕೆಲಸ ಮಾಡುವ ಉದ್ಯೋಗ ನೇಮಕಾತಿಯ ಮಿಂಚಂಚೆ ಹೋಗಲಾರಂಭಿಸಿತು.ಅಭ್ಯರ್ಥಿ ಬ್ಯಾಂಕ್ ವಿವರ ನೀಡಬೇಕು ಎನ್ನುವ ನಿರ್ದೇಶನ ಅದರಲ್ಲಿತ್ತು.ಬ್ಯಾಂಕ್ ವಿವರ ನೀಡಿದವರ ಖಾತೆ ಬರಿದಾಗುತ್ತಿತ್ತು ಎನ್ನುವುದನ್ನು ಊಹಿಸುವುದು ಸುಲಭ.

ಕಾರಿನ ಚಕ್ರ ಬದಲಿಸುವುದು ಹೇಗೆಂದು ತೋರುವ ವಿಡಿಯೋ ಕ್ಲಿಪ್ ಬೇಕೇ?

ಕಾರಿನ ಚಕ್ರ ಬದಲಿಸುವುದು ಹೇಗೆ ಎಂಬುದರಿಂದ ಹಿಡಿದು ಬೇರೆ ಬೇರೆ ಕೆಲಸಗಳನ್ನು ಮಾಡುವುದು ಹೇಗೆ ಎನ್ನುವುದನ್ನು ಚಿತ್ರೀಕರಿಸಿ ತೋರಿಸುವ ಅಂತರ್ಜಾಲ ತಾಣವಿದ್ದರೆ ಎಷ್ಟು ಉಪಯುಕ್ತ ಅಲ್ಲವೇ?ವಿಡಿಯೋಜಗ್ ಎನ್ನುವುದು ಅಂತಹ ತಾಣಗಳಲ್ಲೊಂದು.ಸುಮಾರು ಹದಿನೇಳು ಸಾವಿರ ಇಂತಹ ವಿಡಿಯೋ ಕ್ಲಿಪ್ಪಿಂಗ್‍ಗಳನ್ನು ಈಗಾಗಲೇ ತಯಾರುಮಾಡಿ ಬಳಕೆಗೆ ಲಭ್ಯವಾಗಿಸಲಾಗಿದೆ.ಹೆಚ್ಚಿನ ವಿಡಿಯೋ ತುಣುಕುಗಳನ್ನು ವೃತ್ತಿಪರರೇ ತಯಾರಿಸಿದ್ದಾರೆ ಎನ್ನುವುದು ವಿಡಿಯೋಜಗ್‍ನ ಹೆಗ್ಗಳಿಕೆ.ಬಳಕೆದಾರರೇ ಒದಗಿಸಿದ ವಿಡಿಯೋ ಕಳಪೆ ಗುಣಮಟ್ಟದ್ದಾಗಿರುವುದು,ವಿಷಯಕ್ಕೆ ಸಂಬಂಧಿಸದೆ ಇರುವುದು ಮುಂತಾದ ಸಮಸ್ಯೆಗಳಿರುತ್ತವೆ.

ಸ್ಥಿರದೂರವಾಣಿ ಅಸ್ಥಿರ

ಮೊಬೈಲ್ ಬಂದ ನಂತರ ಸ್ಥಿರ ದೂರವಾಣಿ ಜನರಿಂದ ದೂರವಾಗುತ್ತಿದೇ ತಾನೇ?ಇಂಗ್ಲೆಂಡಿನಿಂದ ಬಂದ ಸುದ್ದಿಯಂತೆ ಅಲ್ಲಿನ ಬಳಕೆದಾರರು ದೂರವಾಣಿ ಬಳಕೆಯ ಮೂರನೇ ಒಂದು ಭಾಗವನ್ನು ಮೊಬೈಲ್ ಬಳಕೆಯಲ್ಲೇ ಕಳೆಯುತ್ತಾರೆ.ಒಟ್ಟು ಕರೆಗಳು ಇನ್ನೂರಮೂವತ್ತನಾಕು ಬಿಲಿಯನ್ ನಿಮಿಷಗಳಾದರೆ,ಮೊಬೈಲ್ ಬಳಕೆ ಸಮಯ ಎಂಭತ್ತನಾಲ್ಕು ಬಿಲಿಯನ್ ನಿಮಿಷಗಳಂತೆ.ಶೇಕಡಾ ಒಂಭತ್ತು ಬಳಕೆದಾರರ ಬಳಿ ಮೊಬೈಲ್ ಮಾತ್ರಾ ಇದ್ದರೆ,ಸ್ಥಿರ ದೂರವಾಣಿ ಮಾತ್ರಾ ಇರುವವರ ಭಾಗ ಶೇಕಡಾ ಏಳು.ದೂರಸಂಪರ್ಕಕ್ಕಾಗಿ ಅಲ್ಲಿನ ಬಳಕೆದಾರರು ಮಾಡುವ ವೆಚ್ಚವು ಎಪ್ಪತ್ತಾರು ಪೌಂಡ್‍ಗಳಿಂದ,ಅರುವತ್ತೊಂಭತ್ತು ಪೌಂಡುಗಳಿಗಿಳಿದಿದೆ.

*ಅಶೋಕ್‍ಕುಮಾರ್ ಎ