ಮಕ್ಕಳಿಗೆ ರಜೆಯ ಓದು (ಭಾಗ ೧೨) - ಮಾಟಗಾತಿಯರು

ಮಾಟಗಾತಿಯರು (The Witches)
ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಮಕ್ಕಳು ಓದಿದ ಪುಸ್ತಕಗಳಲ್ಲಿ ಒಂದು ‘ದಿ ವಿಚ್ಚಸ್’ ಅಂದರೆ ಮಾಟಗಾತಿಯರು. ಟಿವಿ, ಮೊಬೈಲ್ ಇಲ್ಲದ ಕಾಲದಲ್ಲಿ ಮಕ್ಕಳು ಯಾವುದೇ ಮಾಟ-ಮಂತ್ರದ ಕಥೆಗಳನ್ನು ಓದುವಾಗ ಅದರಲ್ಲಿನ ಪಾತ್ರಗಳ ಬಗ್ಗೆ ಕಲ್ಪನೆಯಷ್ಟೇ ಮಾಡಬೇಕಿತ್ತು. ಇಲ್ಲವೇ, ಆ ಪುಸ್ತಕದಲ್ಲಿ ನೀಡಿರುವ ಸೀಮಿತ ಚಿತ್ರಗಳನ್ನು ನೋಡಿ ಮಾಟಗಾತಿ ಅಂದ್ರೆ ಹೀಗಿರ್ತಾರೆ ಎಂದು ಅಂದಾಜು ಮಾಡಬೇಕಿತ್ತು.
ರೋಲ್ಡ್ ದಾಹ್ಲ್ ಎಂಬಾತ ೧೯೮೩ರಲ್ಲಿ ಬರೆದ ಭಯಾನಕ, ರೋಮಾಂಚಕ ಕಾದಂಬರಿಯೇ ದಿ ವಿಚ್ಚಸ್. ಇದು ಒಬ್ಬ ಸಣ್ಣ ಹುಡುಗನ ಕಥೆ. ಆತನ ತಂದೆ-ತಾಯಿಯರು ಬಾಲ್ಯದಲ್ಲೇ ಸತ್ತು ಹೋಗಿರುತ್ತಾರೆ. ಅನಾಥನಾಗಿದ್ದ ಆತನನ್ನು ಸಾಕಿದ್ದು ಆತನ ಅಜ್ಜಿ. ಆ ಅಜ್ಜಿ ಬಹಳ ಬುದ್ಧಿವಂತೆ ಹಾಗೂ ವಿಲಕ್ಷಣ ಸ್ವಭಾವದವಳಾಗಿದ್ದಳು. ಆಕೆ ಆತನಿಗೆ ಮಾಟಗಾತಿಯರ ಬಗ್ಗೆ ಸದಾ ಎಚ್ಚರದಿಂದಿರಲು ಹೇಳುತ್ತಿದ್ದಳು. ಮಾಟಗಾತಿಯರೆಂದರೆ ಭೂಮಿ ಮೇಲಿನ ವಿಚಿತ್ರ ಜೀವಿಗಳು ಹಾಗೂ ಬೇರೆ ಬೇರೆ ಬಗೆಯ ವೇಷಗಳನ್ನು ಧರಿಸಿ ಮೋಸ ಮಾಡುವವರು ಎಂದು ಅಜ್ಜಿಯ ನಂಬಿಕೆಯಾಗಿತ್ತು.
ಇತರೆ ಮಾಟ ಮಂತ್ರದ ಕಥೆಗಳ ಹಾಗೆ ಈ ಕಾದಂಬರಿಯಲ್ಲಿ ಬರುವ ಮಾಟಗಾತಿಯರು ಚೂಪಾದ ಟೊಪ್ಪಿಗಳನ್ನು ಧರಿಸುತ್ತಿರಲಿಲ್ಲ. ಈ ಕಾದಂಬರಿಯ ಮಾಟಗಾತಿಯರ ತಲೆಗಳು ಬೋಳಾಗಿದ್ದವು ಹಾಗೂ ಅವು ರೆಕ್ಕೆಗಳ ನಡುವೆ ಅಡಗಿಕೊಂಡಿರುತ್ತಿದ್ದವು. ಕೈಗಳಲ್ಲಿ ಉದ್ದನೆಯ ಉಗುರುಗಳಿರುತ್ತಿದ್ದವು. ಈ ಮಾಟಗಾತಿಯರು ಮಕ್ಕಳ ಮೈಯಿಂದ ಹೊರಹೊಮ್ಮುವ ವಾಸನೆಯನ್ನು ಗ್ರಹಿಸಿ ಅವರನ್ನು ಕದಿಯುತ್ತಿದ್ದರು.
ಈ ಕಾದಂಬರಿಯಲ್ಲಿ ಬರುವ ಹುಡುಗ ಒಮ್ಮೆ ಅನಿರೀಕ್ಷಿತವಾಗಿ ಆಗಿ ಮಾಟಗಾತಿಯರ ಗುಂಪಿನಲ್ಲಿ ಸಿಕ್ಕಿ ಬೀಳುತ್ತಾನೆ. ಆದರೆ ಮಾಟಗಾತಿಯರಿಗೆ ಇವರ ಬರವಿನ ಅರಿವಾಗುವುದಿಲ್ಲ. ಆತ ಅಡಗಿಕೊಂಡು ಮಾಟಗಾತಿಯರ ಮಾತುಗಳನ್ನು ಕೇಳುತ್ತಾನೆ. ಅವರು ಮಕ್ಕಳನ್ನು ಹಿಡಿದು ಇಲಿಗಳನ್ನಾಗಿ ಮಾಡುತ್ತಿದ್ದಾರೆ ಎಂದು ಅವರ ಮಾತುಗಳಿಂದ ಆತನಿಗೆ ತಿಳಿದು ಬರುತ್ತದೆ. ಆತ ತನ್ನ ಅಜ್ಜಿಯ ಸಹಾಯದಿಂದ ಮಾಟಗಾತಿಯರ ಯೋಜನೆಯನ್ನು ಬುಡಮೇಲು ಮಾಡುತ್ತಾನೆ. ಅವರ ಆಲೋಚನೆಗಳು ಅವರಿಗೇ ತಿರುಮಂತ್ರವಾಗುವಂತೆ ಅಜ್ಜಿ ಮತ್ತು ಮೊಮ್ಮಗ ಉಪಾಯ ಮಾಡಿ ಅದರಲ್ಲಿ ಸಫಲತೆಯನ್ನು ಕಾಣುತ್ತಾರೆ.
ಇದರ ಕಥಾ ವಸ್ತು ಇತರೆ ಮಾಯಾ ಮಂತ್ರದ ಕಥೆಗಳಿಗಿಂತ ಭಿನ್ನವಾಗಿದ್ದ ಕಾರಣ ‘ಮಾಟಗಾತಿಯರು’ ಪುಸ್ತಕ ಖ್ಯಾತಿಯನ್ನು ಪಡೆಯುತ್ತದೆ. ನಾರ್ವೆ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಈ ಪುಸ್ತಕ ಉತ್ತಮ ರೀತಿಯ ಮಾರಾಟ ಕಾಣುತ್ತದೆ. ಲೇಖಕರಾದ ರೋಲ್ಡ್ ದಾಹ್ಲ್ ಕಥೆಯನ್ನು ಹೇಳುವ ರೀತಿ ಓದುಗರ ಮನಗೆಲ್ಲುತ್ತದೆ. ಪುಸ್ತಕ ಎಲ್ಲರ ಮನೆಮಾತಾಗುತ್ತದೆ. ಇದೇ ಖ್ಯಾತಿ ಹರಡಿ ಈ ಕಥೆಯನ್ನು ಚಲನಚಿತ್ರ, ನಾಟಕಗಳಲ್ಲಿ ಬಳಸಲಾಗುತ್ತದೆ. ೧೯೯೦ರಲ್ಲಿ ‘ದಿ ವಿಚ್ಚಸ್’ ಎನ್ನುವ ಚಿತ್ರ ಮೊದಲಬಾರಿಗೆ ತೆರೆ ಕಾಣುತ್ತದೆ. ಈ ಚಿತ್ರದಲ್ಲಿ ಆಂಜಲಿಕಾ ಹಸ್ಟನ್ ನಟಿಸಿದ್ದರು. ೨೦೨೦ರಲ್ಲಿ ಮತ್ತೊಮ್ಮೆ ಈ ಕಥೆಯು ಚಲನಚಿತ್ರ ರೂಪದಲ್ಲಿ ಪ್ರದರ್ಶಿತವಾಗುತ್ತದೆ. ಎಲ್ಲಾ ಬಗೆಯ ವಯೋಮಾನದವರಿಗೆ ಅಚ್ಚುಮೆಚ್ಚಾದ ಕಾದಂಬರಿ ‘ದಿ ವಿಚ್ಚಸ್’ ಎಂದರೆ ತಪ್ಪಿಲ್ಲ. ಮಕ್ಕಳು ಈ ಪುಸ್ತಕವನ್ನು ಓದಿ ಆನಂದಿಸಬಹುದು.
***
ಈ ಕಥೆ ಪುಸ್ತಕದ ಜೊತೆಗೆ ದಿ ಪೋಲಾರ್ ಎಕ್ಸ್ ಪ್ರೆಸ್ (The Polar Express) ಎನ್ನುವ ಕಾದಂಬರಿಯನ್ನೂ ಓದಬಹುದು. ಇದೊಂದು ಕ್ರಿಸ್ ಮಸ್ ಸಮಯದ ಕಥೆ. ೧೯೮೫ರಲ್ಲಿ ಈ ಕಾದಂಬರಿಯನ್ನು ಬರೆದವರು ಕ್ರಿಸ್ ವಾನ್. ಇದು ಸಾಂತಾಕ್ಲಾಸ್ ಕ್ರಿಸ್ ಮಸ್ ಹೊತ್ತಿಗೆ ಬರುತ್ತಾನೆ ಎಂಬುದನ್ನು ನಂಬಲು ಒಪ್ಪದ ಹುಡುಗನೊಬ್ಬನ ಕಥೆ. ಆತನ ನಂಬಿಕೆ ನಿಜವಾಯಿತೇ ಅಥವಾ ಸುಳ್ಳಾಯಿತೇ ಎಂಬುದನ್ನು ಈ ಕಥೆ ಪುಸ್ತಕ ಓದಿ ತಿಳಿದುಕೊಳ್ಳಬಹುದು.
ಇದರ ಜೊತೆಗೆ ಬ್ರಿಡ್ಜ್ ಟು ತೆರಭಿತಿಯಾ (Bridge to Terabithia) ಎನ್ನುವ ಕಥೆಯನ್ನೂ ನಿಮ್ಮ ಓದಿನ ಜೋಳಿಗೆಗೆ ಹಾಕಿಕೊಳ್ಳಬಹುದು. ಈ ಕಾದಂಬರಿಯನ್ನು ಬರೆದವರು ಕ್ಯಾಥರೀನ್ ಪೆಟರ್ಸನ್. ಇದು ೧೯೭೭ರಲ್ಲಿ ಮೊದಲ ಬಾರಿಗೆ ಮುದ್ರಣ ಭಾಗ್ಯವನ್ನು ಕಂಡಿತು. ಇದೊಂದು ದುರಂತ ಕಥೆಯಾದರೂ ಗೆಳೆತನದ ಮಹತ್ವವನ್ನು ಸಾರುತ್ತದೆ. ಜೆಸ್ಸಿ ಆರೋನ್ಸ್ ಮತ್ತು ಲೆಸ್ಲಿ ಬರ್ಕ್ ಎಂಬ ಇಬ್ಬರು ಗೆಳೆಯರು ಕಟ್ಟಿದ ಕಾಲ್ಪನಿಕ ರಾಜ ಸಂಸ್ಥಾನವೇ ‘ತೆರಭಿತಿಯಾ’ ಆ ಸಂಸ್ಥಾನಕ್ಕೆ ಜೆಸ್ಸಿ ಹಾಗೂ ಲೆಸ್ಲಿಯೇ ರಾಜ ರಾಣಿಯರು. ನಂತರದ ಕಥೆಯನ್ನು ಓದಿ ತಿಳಿಯುವುದರಲ್ಲಿ ಮಜಾ ಇದೆ. ಈ ಪುಸ್ತಕಕ್ಕೆ ೧೯೭೮ರಲ್ಲಿ ಪ್ರತಿಷ್ಟಿತ ನ್ಯೂಬೆರಿ ಮೆಡಲ್ ದೊರೆತ ಗರಿಮೆ ಇದೆ.
(ಇನ್ನಷ್ಟು ಪುಸ್ತಕಗಳ ಪರಿಚಯ ಮುಂದಿನ ವಾರ)
(ಆಧಾರ) ಚಿತ್ರ ಕೃಪೆ: ಅಂತರ್ಜಾಲ ತಾಣ