ಮಕ್ಕಳಿಗೆ ರಜೆಯ ಓದು (ಭಾಗ ೧೩) - ಹ್ಯಾರಿ ಪೊಟರ್


ಹ್ಯಾರಿ ಪೊಟರ್ (Harry Potter)
ಹ್ಯಾರಿ ಪೋಟರ್ ಮತ್ತು ಆತನ ಸಾಹಸ ಕಥೆಗಳ ಬಗ್ಗೆ ತಿಳಿಯದ ಮಕ್ಕಳೇ ಇರಲಿಕ್ಕಿಲ್ಲ. ಈ ಹ್ಯಾರಿ ಪೋಟರ್ ಎನ್ನುವ ಕಾಲ್ಪನಿಕ ಬಾಲಕನ ಮಾಯಾಜಾಲದ ಕಥೆಗಳು ಜನಜನಿತವಾಗಿವೆ. ಹ್ಯಾರಿ ಪೋಟರ್ ಸರಣಿಯಲ್ಲಿ ಈ ತನಕ ಏಳು ಪುಸ್ತಕಗಳು ಹೊರಬಂದಿವೆ. ಜನರು ಸರಣಿಗಟ್ಟಲೆ ಸಾಲಿನಲ್ಲಿ ನಿಂತು ಈ ಪುಸ್ತಕಗಳನ್ನು ಬಿಡುಗಡೆಯ ದಿನ ಖರೀದಿಸಿದ್ದಾರೆ. ಆದರೆ ಹ್ಯಾರಿ ಪೋಟರ್ ಸರಣಿಯ ಮೊದಲ ಪುಸ್ತಕ ಖರೀದಿಸಲು ಎಷ್ಟು ಜನ ಬಂದಿದ್ದರು ಗೊತ್ತೇ? ಒಬ್ಬರೂ ಇಲ್ಲ. ಅಷ್ಟೇ ಏಕೆ? ಆ ಕಾದಂಬರಿಯನ್ನು ಪ್ರಕಟಿಸಲು ಯಾವುದೇ ಒಬ್ಬ ಪ್ರಕಾಶಕ ಮುಂದೆ ಬರಲಿಲ್ಲ.
ಜಾನೆ ಕ್ಯಾಥಲೀನ್ ರೋಲಿಂಗ್ ಅಥವಾ ಜೆ ಕೆ ರೋಲಿಂಗ್ (J K Rowling) ಎಂಬ ಮಹಿಳೆಯೇ ಈ ಹ್ಯಾರಿ ಪೋಟರ್ ಎಂಬ ಕಾಲ್ಪನಿಕ ಬಾಲಕನ ಹಾಗೂ ಆತನ ಸಾಹಸಗಳ ಸೃಷ್ಟಿಕರ್ತೆ. ಈ ಕಾದಂಬರಿಯನ್ನು ಬರೆದಾಗ ಆಕೆ ಬಹಳ ಕಷ್ಟದ ಸಮಯವನ್ನು ಸಾಗಿಸುತ್ತಿದ್ದಳು. ಅವಳದ್ದು ಎಂದು ಹೇಳಲು ಆಕೆ ಬಳಿ ಇದ್ದದ್ದು ಕೇವಲ ಒಂದು ಟೈಪ್ ರೈಟರ್ ಮಾತ್ರ. ನಮ್ಮಲ್ಲಿರುವ ಅತ್ಯಂತ ಉತ್ತಮವಾದದ್ದು ಹೊರ ಬರುವುದು ತೀರಾ ಕಷ್ಟದ ಕಾಲದಲ್ಲೇ ಎಂದು ಒಂದು ಮಾತಿದೆ. ಅದೇ ರೀತಿ ತನ್ನ ಅತ್ಯಂತ ಕಷ್ಟದ ಸಮಯದಲ್ಲಿ ಜೆ ಕೆ ರೋಲಿಂಗ್ ಬರೆದ ಕಾದಂಬರಿಯೇ ಹ್ಯಾರಿ ಪೋಟರ್ ಮತ್ತು ಫಿಲೋಸೊಫೆರ್ ಸ್ಟೋನ್ (Harry Potter and The Philosopher’s Stone). ಈ ಕಾದಂಬರಿಯ ಹಸ್ತಪ್ರತಿಯನ್ನು ಹಿಡಿದು ಆಕೆ ಸುಮಾರು ಹನ್ನೆರಡು ಮಂದಿ ಪ್ರಕಾಶಕರನ್ನು ಭೇಟಿಯಾಗಿದ್ದಳು. ಆದರೆ ಎಲ್ಲೆಡೆ ನಿರಾಶೆಯೇ ಕಾದಿತ್ತು. ಆಕೆಯ ಆರ್ಥಿಕ ಪರಿಸ್ಥಿತಿಯೂ ತುಂಬಾ ಬಿಗಡಾಯಿಸಿತ್ತು. ಅದೇ ಸಮಯಕ್ಕೆ ದೇವರಂತೆ ಬಂದವರು ಬ್ಯಾರಿ ಕನ್ನಿಂಗ್ ಹ್ಯಾಮ್ ಎನ್ನುವ ಪ್ರಕಾಶಕ. ಈ ವ್ಯಕ್ತಿ ನಿಗೆಲ್ ನ್ಯೂಟನ್ ಅವರಿಂದ ಬ್ಲೂಮ್ಸ್ ಬರಿ ಪಬ್ಲಿಷಿಂಗ್ ಅನ್ನು ಖರೀದಿಸಿದ್ದ. ಬ್ಲೂಮ್ಸ್ ಬರಿ ಪ್ರಕಾಶನಕ್ಕೆ ಜೆ ಕೆ ರೋಲಿಂಗ್ ತನ್ನ ಕಾದಂಬರಿಯ ಹಸ್ತಪ್ರತಿ ಕೊಟ್ಟು ಬಂದಿದ್ದಳು. ಆದರೆ ಬ್ಯಾರಿ ಕನ್ನಿಂಗ್ ಹ್ಯಾಮ್ ಅದನ್ನು ಓದಲು ಆಸಕ್ತಿ ತೋರಿಸಲಿಲ್ಲ. ಆದರೆ ಅವನ ಎಂಟು ವರ್ಷದ ಮಗಳು ಅನಿರೀಕ್ಷಿತವಾಗಿ ಈ ಪುಸ್ತಕದ ಮೊದಲ ಅಧ್ಯಾಯವನ್ನು ಓದಿ ಮುಗಿಸುತ್ತಾಳೆ. ಅವಳು ಅಪ್ಪನ ಬಳಿ ಈ ಮಾತು ಹೇಳಿದಾಗ ಆತನಿಗೆ ಹಿಂದೆ ಆತ ಜೆ ಕೆ ರೋಲಿಂಗ್ ಗೆ ಹೇಳಿದ ಮಾತು ನೆನಪಾಗುತ್ತದೆ. ‘ನೀನು ಮಕ್ಕಳ ಕಥೆಗಳನ್ನು ಬರೆದು ಹಣ ಮಾಡಲು ಸಾಧ್ಯವಿಲ್ಲ’ ಎಂದು ಆತ ಹೇಳಿರುತ್ತಾನೆ. ಆದರೆ ನಂತರ ನಡೆಯುವುದು ಬರೀ ಪವಾಡ. ಆತ ಆ ಪುಸ್ತಕವನ್ನು ಮುದ್ರಿಸುತ್ತಾನೆ. ೧೯೯೫ರಲ್ಲಿ ಮುದ್ರಣವಾದ ಹ್ಯಾರಿ ಪೋಟರ್ ಸರಣಿಯ ಮೊದಲ ಪುಸ್ತಕ ೫,೬೫೦ ಪ್ರತಿಗಳಷ್ಟೇ ಮಾರಾಟವಾಯಿತು. ಇದರ ಮಾರಾಟದಿಂದ ಜೆ ಕೆ ರೋಲಿಂಗ್ ಗೆ ಸುಮಾರು ೪,೨೦೦ ಡಾಲರ್ ಗಳಷ್ಟು ಗೌರವ ಧನ ದೊರೆಯಿತು.
ಇದು ಆಕೆಯ ಬರವಣಿಗೆಯನ್ನು ಉತ್ತೇಜಿಸಲು ಸಾಕಾಗಿತ್ತು. ನಂತರ ಹಿಂದಿರುಗಿ ನೋಡದ ಜೆ ಕೆ ರೋಲಿಂಗ್ ಹಲವಾರು ಹ್ಯಾರಿ ಪೋಟರ್ ಸರಣಿಯ ಕಾದಂಬರಿಗಳನ್ನು ಬರೆದಳು. ೨೦೦೭ರ ಜುಲೈ ನಲ್ಲಿ ಹ್ಯಾರಿ ಪೋಟರ್ ಸರಣಿಯ ಕೊನೆಯ ಪುಸ್ತಕ ಹ್ಯಾರಿ ಪೋಟರ್ ಮತ್ತು ದಿ ಡೆತ್ಲೀ ಹೊಲೋಸ್ (Harry Potter and The Deathly Hallows) ಹೊರಬಂದಾಗ ಜನ ಸರತಿ ಸಾಲಿನಲ್ಲಿ ನಿಂತು ಪುಸ್ತಕ ಕೊಂಡರು. ಆಕೆ ಕೋಟ್ಯಾಧಿಪತಿಯಾಗಿದ್ದಳು. ಹ್ಯಾರಿ ಪೋಟರ್ ಸರಣಿಯಲ್ಲಿ ೮ ಚಲನ ಚಿತ್ರಗಳು ಬಂದಿವೆ.
ಹ್ಯಾರಿ ಪೋಟರ್ ಎಂಬ ಕಾಲ್ಪನಿಕ ವ್ಯಕ್ತಿ ಒಬ್ಬ ಮಾಂತ್ರಿಕ ಬಾಲಕ. ಆತನಿಗೆ ತಂದೆ ತಾಯಿ ಇರುವುದಿಲ್ಲ. ಆತನನ್ನು ಇಷ್ಟ ಪಡದ ಸಂಬಂಧಿಕರ ಜೊತೆ ಇರುತ್ತಾನೆ. ಕೆಟ್ಟತನದ ಮೇಲೆ ಒಳ್ಳೆಯತನದ ವಿಜಯದ ಆತನ ಮಾಂತ್ರಿಕ ಸಾಹಸಗಳನ್ನು ಓದುವಾಗ ಮೈ ಜುಮ್ಮೆನ್ನುತ್ತದೆ. ಆತನಿಗೆ ತನ್ನ ಹನ್ನೊಂದನೆಯ ವಯಸ್ಸಿನಲ್ಲಿ ಆತ ಸಾಮಾನ್ಯ ಬಾಲಕನಲ್ಲ, ಒಬ್ಬ ವಿಶೇಷ ಶಕ್ತಿಗಳಿರುವ ಮಾಂತ್ರಿಕ ಎನ್ನುವ ಅರಿವಾಗುತ್ತದೆ. ಆತನ ಗುಣ ಲಕ್ಷಣಗಳನ್ನು ಗಮನಿಸಿದ ಹೋಗ್ವಾರ್ಟ್ಸ್ ಸ್ಕೂಲ್ ಆಫ್ ವಿಚ್ ಕ್ರಾಫ್ಟ್ ಆಂಡ್ ವಿಜಾಡ್ರಿ ಆತನಿಗೆ ಪ್ರವೇಶ ಅನುಮತಿ ನೀಡುತ್ತದೆ. ಅಲ್ಲಿ ಆತ ರೋನ್ ಮತ್ತು ಹೆರ್ಮಿನೊ ರನ್ನು ಗೆಳೆಯರನ್ನಾಗಿ ಪಡೆಯುತ್ತಾನೆ. ಕಪ್ಪು ಮಾಂತ್ರಿಕನ ಜೊತೆಗಿನ ಆತನ ಸಂಬಂಧ, ಹೋರಾಟ ಬಗ್ಗೆ ಓದುವಾಗ ಲೇಖಕಿಯ ಕಲ್ಪನಾ ಶಕ್ತಿಗೆ ಮೆಚ್ಚುಗೆ ಸೂಸಲೇ ಬೇಕು ಅನ್ನಿಸುವಷ್ಟು ಇಷ್ಟವಾಗಿ ಬಿಡುತ್ತದೆ. ಇಂತಹದ್ದೇ ೭ ಸರಣಿಯಲ್ಲಿ ಹ್ಯಾರಿ ಪೋಟರ್ ಕಥಾನಕ ಮೂಡಿ ಬಂದಿದೆ. ಮಕ್ಕಳೇ, ಮರೆಯದೇ ಹ್ಯಾರಿ ಪೋಟರ್ ಸರಣಿಯ ಕಥೆ ಪುಸ್ತಕಗಳನ್ನು ಓದಿ…
(ಇನ್ನಷ್ಟು ಪುಸ್ತಕಗಳ ಪರಿಚಯ ಮುಂದಿನ ವಾರ)
(ಆಧಾರ) ಚಿತ್ರ ಕೃಪೆ: ಅಂತರ್ಜಾಲ ತಾಣ