ಮಕ್ಕಳಿಗೆ ರಜೆಯ ಓದು (ಭಾಗ ೧) - ಜಾತಕ ಕಥೆಗಳು

ಮಕ್ಕಳಿಗೆ ರಜೆಯ ಓದು (ಭಾಗ ೧) - ಜಾತಕ ಕಥೆಗಳು

ನಾವು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗ ದೂರದರ್ಶನ, ಮೊಬೈಲ್ ಗಳ ಹಾವಳಿ ಇಲ್ಲದ ಕಾರಣ ನಮಗೆ ಪುಸ್ತಕಗಳೇ ಅಚ್ಚುಮೆಚ್ಚಿನ ಸಂಗಾತಿಯಾಗಿದ್ದವು. ಶನಿವಾರ ಅರ್ಧ ದಿನದ ಶಾಲೆ ಮುಗಿಸಿ ನಾನು ಮತ್ತು ನನ್ನ ಗೆಳೆಯರು ಪುಸ್ತಕದ ಅಂಗಡಿಗೆ ಹೋಗಿ ಮಕ್ಕಳ ಕಥಾ ಪುಸ್ತಕವನ್ನು ಕೊಂಡು ತರುತ್ತಿದ್ದೆವು. ಸರದಿ ಪ್ರಕಾರ ಓದಿ ಅದರಲ್ಲಿರುವ ನೀತಿ, ಹಾಸ್ಯ, ಸಾಹಸ ಎಲ್ಲವನ್ನೂ ವಿಮರ್ಶೆ ಮಾಡಿಕೊಳ್ಳುತ್ತಿದ್ದೆವು. ಆಗ ಬಾಲಮಂಗಳ, ಚಂದಮಾಮ, ಬಾಲಮಿತ್ರ, ಬೊಂಬೆಮನೆ ಮೊದಲಾದ ಪತ್ರಿಕೆಗಳು ಬರುತ್ತಿದ್ದವು. ಇದರ ಜೊತೆಗೆ ಪಂಚತಂತ್ರದ ಕಥೆಗಳು, ಅರೇಬಿಯನ್ ನೈಟ್ಸ್ ಕಥೆಗಳು, ಬಾಲ ರಾಮಾಯಣ, ಬಾಲ ಮಹಾಭಾರತ, ಇಸೋಪನ ಕಥೆಗಳು, ಇಂದ್ರಜಾಲ ಕಾಮಿಕ್ಸ್ ಕಥೆಗಳಲ್ಲಿ ಮಾಂಡ್ರೇಕ್, ಫ್ಯಾಂಟಮ್ ಮೊದಲಾದ ಸಾಹಸಮಯ ಕಥೆಗಳು ಹೊರಬರುತ್ತಿದ್ದವು. ಈಗ ಅವೆಲ್ಲವೂ ಪುಸ್ತಕರೂಪದಿಂದ ಕಾರ್ಟೂನ್ ಅಥವಾ ಸಿನೆಮಾ ರೂಪಕ್ಕೆ ಬದಲಾಗಿವೆ. ಟಿ ವಿ ಅಥವಾ ಮೊಬೈಲ್ ಆನ್ ಮಾಡಿ ಈ ಕಥೆಗಳನ್ನು ಚಿತ್ರಗಳ ಸಹಿತ ನೋಡ ಬಹುದಾಗಿದೆ. ಆದರೂ ಅಂದಿನ ಕೆಲವು ಪುಸ್ತಕಗಳ ಬಗ್ಗೆ ತಿಳಿದುಕೊಂಡರೆ ಉತ್ತಮವಲ್ಲವೇ? ಈ ಪುಸ್ತಕಗಳು ಸಿಕ್ಕರೆ ಓದಲೂ ಬಹುದು. ಎಲ್ಲಾ ಕೃತಿಗಳು ಆಂಗ್ಲಭಾಷೆಯಲ್ಲಿರುವುದಾದರೂ ಅದರಲ್ಲಿ ಬಹುತೇಕ ಪುಸ್ತಕಗಳು ನಮಗೆ ತಿಳಿದಿರುವ ಕನ್ನಡ, ಹಿಂದಿ ಮೊದಲಾದ ಭಾಷೆಗಳಿಗೆ ಅನುವಾದಗೊಂಡಿವೆ.

ರಜೆಯ ಓದು ಮಾಲಿಕೆಯಲ್ಲಿ ಇವತ್ತು ನಾವು ಗೌತಮ ಬುದ್ಧ ಅಥವಾ ಭಗವಾನ್ ಬುದ್ಧರ ಪೂರ್ವ ಜನ್ಮಕ್ಕೆ ಸಂಬಂಧಿಸಿದ ಕಥೆಗಳಾದ ‘ಜಾತಕ ಕಥೆ’ ಗಳ ಬಗ್ಗೆ ತಿಳಿದುಕೊಳ್ಳುವ

ಜಾತಕ ಕಥೆಗಳು

“ಮರದಿಂದ ಮರಕ್ಕೆ ಜಿಗಿಯುತ್ತಿದ್ದ ಪುಟ್ಟ ಮಂಗವೊಂದು ತನ್ನ ಬುದ್ಧಿವಂತಿಕೆಯಿಂದ ಮೋಸಗಾರ ಮೊಸಳೆಯ ದಾಳಕ್ಕೆ ಸಿಲುಕದೆ ತನ್ನ ಹಾಗೂ ತನ್ನ ಕುಟುಂಬದ ಪ್ರಾಣವನ್ನು ಕಾಪಾಡಿತು.” ಈ ಕಥೆ ನಿಮಗೆ ಗೊತ್ತೇ? ಇಲ್ಲಿ ಮಂಗನ ತೀಕ್ಷ್ಣವಾದ ಬುದ್ದಿಶಕ್ತಿಯ ಕಾರಣದಿಂದಾಗಿ ಅದು ತನ್ನ ಜೀವವನ್ನು ಉಳಿಸಿಕೊಂಡಿತು. ಇಲ್ಲಿ ‘ಶಕ್ತಿಗಿಂತ ಯುಕ್ತಿ ಮೇಲು’ ಎನ್ನುವ ನೀತಿಪಾಠ ನಮಗೆ ಕಲಿಯಲು ಸಿಗುತ್ತದೆ., ಇಂತಹ ನೂರಾರು ಕಥೆಗಳ ಸಂಗ್ರಹ ‘ಜಾತಕ ಕಥೆ’ ಗಳಲ್ಲಿವೆ. ಜಾತಕ ಕಥೆಗಳು ಆಂಗ್ಲ ಭಾಷೆಯ ಜೊತೆಗೆ ಕನ್ನಡ ಸಹಿತ ಹಲವಾರು ಭಾಷೆಗಳಲ್ಲಿ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.

ಈ ಜಾತಕ ಕಥೆಗಳು ನೀತಿಯ ಜೊತೆಗೆ ಸಾಹಸ, ಬುದ್ಧಿಶಕ್ತಿ, ಹಾಸ್ಯರಸಗಳನ್ನೂ ಉಣಬಡಿಸುತ್ತದೆ. ಇವು ಕ್ರಿ. ಪೂ.೩೦೦ರ ಆಸುಪಾಸಿನಲ್ಲಿ ಭಗವಾನ್ ಬುದ್ಧರ ಅನುಯಾಯಿಗಳು ಬುದ್ಧನ ಪೂರ್ವ ಜನ್ಮದ ಕಥೆಗಳನ್ನು ಹೇಳುತ್ತಾ ಬಂದು ಅವುಗಳು ಜಾತಕ (ಹೊಸ ಜನ್ಮ) ಕಥೆಗಳಾಗಿರಬಹುದು ಎಂಬುದು ಕೆಲವರ ಅನಿಸಿಕೆ. ಈ ಕಥೆಗಳು ಸ್ವಾರಸ್ಯಕರವಾಗಿದ್ದು ಮಕ್ಕಳನ್ನು ಓದುವಂತೆ ಪ್ರೇರೇಪಿಸುತ್ತವೆ. ಪ್ರತೀ ಕಥೆಗಳನ್ನು ಓದಿ ಮುಗಿಸುವಾಗ ನಮಗೆ ಉತ್ತಮ ನೀತಿ ಪಾಠವಾಗುತ್ತದೆ. ಈ ಕಥೆಗಳು ಮೂಲತಃ ಪಾಲಿ ಅಥವಾ ಪಾಳೀ ಭಾಷೆಯಲ್ಲಿ ಬರೆಯಲ್ಪಟ್ಟಿವೆ. ಜೀವನದಲ್ಲಿ ಉತ್ತಮ ನಡೆ ನುಡಿ ಎಷ್ಟೊಂದು ಅಗತ್ಯ ಎನುವುದನ್ನು ಈ ಕಥೆಗಳು ತಿಳಿ ಹೇಳುತ್ತವೆ. 

ಈ ಕಥೆಗಳ ಮೂಲ ಗಂಗಾ ನದಿಯ ತೀರದಲ್ಲಿರುವ ಬನಾರಸ್ (ಈಗ ವಾರಣಾಸಿ) ಎನ್ನುವ ಊರು ಎಂದು ಹೇಳಲಾಗುತ್ತಿದೆ. ಈ ಕಥೆಗಳು ಬಹಳ ಸರಳವಾಗಿದ್ದು ಪುಟ್ಟ ಮಕ್ಕಳಿಗೂ ಅರ್ಥವಾಗುವಂತಿವೆ. ಕಥೆಗಳಲ್ಲಿ ಪ್ರಾಣಿ, ಪಕ್ಷಿ, ನದಿ, ಬೆಟ್ಟ ಮೊದಲಾದ ವಿಷಯಗಳು ಬರುವುದರಿಂದ ಮಕ್ಕಳಿಗೆ ಇಷ್ಟವಾಗುತ್ತವೆ. ಪ್ರತಿಯೊಂದು ಕಥೆ ಪ್ರಾಮಾಣಿಕತೆ, ಇತರರಲ್ಲಿ ಕರುಣೆ ಮತ್ತು ಬದುಕಿನಲ್ಲಿ ತಾಳ್ಮೆಯನ್ನು ಕಲಿಸುತ್ತದೆ. ಅಬಾಲವೃದ್ಧರಿಗೆ ಈ ಕಥಾ ಪುಸ್ತಕದಿಂದ ಕಲಿಯುವುದು ಬಹಳಷ್ಟಿದೆ. ಮಕ್ಕಳು ‘ಜಾತಕ ಕಥೆ’ ಳನ್ನು ತಮ್ಮ ರಜಾ ಕಾಲದ ಓದಿಗೆ ಬಳಸಿಕೊಳ್ಳಬಹುದು.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ  (ವಿವಿಧ ಪ್ರಕಾಶಕರಿಂದ ಪ್ರಕಟವಾದ ಜಾತಕ ಕಥೆಗಳು)