ಮಕ್ಕಳಿಗೆ ರಜೆಯ ಓದು (ಭಾಗ ೩) - ಇಸೋಪನ ನೀತಿಕಥೆಗಳು

ಮಕ್ಕಳಿಗೆ ರಜೆಯ ಓದು (ಭಾಗ ೩) - ಇಸೋಪನ ನೀತಿಕಥೆಗಳು

ಇಸೋಪನ ನೀತಿ ಕಥೆಗಳು (Aesop’s Fables)

“ಕಾಡಿನಲ್ಲಿ ಒಮ್ಮೆ ನಡೆದ ಓಟದ ಸ್ಪರ್ಧೆಯಲ್ಲಿ ಆಮೆಯು ಜಂಬದ ಮೊಲವನ್ನು ಸೋಲಿಸಿತು” ಎನ್ನುವ ನೀತಿ ಕಥೆಯನ್ನು ನೀವು ಬಾಲ್ಯದಲ್ಲಿ ಓದಿಯೇ ಇರುತ್ತೀರಿ. ಇದು ತಾಳ್ಮೆ ಮತ್ತು ಬದ್ಧತೆಗೆ ಉತ್ತಮ ಉದಾಹರಣೆಯಾಗುವ ಕಥೆ. ನಿಮಗೆಲ್ಲಾ ಈ ಇಸೋಪ ಅಥವಾ ಈಸೋಪ ಯಾರು ಎನ್ನುವ ಕುತೂಹಲ ಇರಬಹುದಲ್ಲವೇ? ಇಸೋಪ ಎನ್ನುವವನು ಗ್ರೀಸ್ ದೇಶದ ಓರ್ವ ಕಥೆಗಾರ. ಆತ ಜೀವಿಸಿದ ಅವಧಿ ಕ್ರಿ.ಪೂ ೬೨೦ ರಿಂದ ೫೬೪ ಎಂದು ಅಂದಾಜಿಸಲಾಗಿದೆ. 

ಇಸೋಪ ಒಬ್ಬ ಗುಲಾಮನಾಗಿದ್ದ. ಆದರೆ ಆತನಿಗೆ ಪ್ರಾಣಿ, ಪಕ್ಷಿಗಳ ಮೇಲೆ ತುಂಬಾ ಮಮಕಾರವಿತ್ತು, ಅವುಗಳ ವರ್ತನೆಗಳ ಬಗ್ಗೆ, ಮೈ ಬಣ್ಣದ ಬಗ್ಗೆ, ಅವುಗಳು ಕೂಗುವ, ಹಾಡುವ ಬಗ್ಗೆ ಎಲ್ಲಾ ಆತನಿಗೆ ತುಂಬಾ ಆಸಕ್ತಿ ಇತ್ತು. ಆ ಕಾರಣದಿಂದ ಆತ ತಾನು ರಚಿಸಿದ ನೀತಿ ಕಥೆಗಳಲ್ಲಿ ಪ್ರಾಣಿ ಪಕ್ಷಿಗಳನ್ನೇ ಮುಖ್ಯ ಪಾತ್ರವನ್ನಾಗಿಸಿಕೊಂಡಿದ್ದಾನೆ. ಈ ಕಥೆಗಳು ಅಂತ್ಯಗೊಳ್ಳುವಾಗ ಒಂದು ಉತ್ತಮ ನೀತಿಯನ್ನು ಹೇಳುತ್ತವೆ. ಈ ನೀತಿ ಕಥೆಗಳು ಸಣ್ಣದ್ದಾಗಿದ್ದು, ಮಕ್ಕಳಿಗೆ ಓದಿ ಅರ್ಥೈಸಲು ಬಹಳ ಸಹಕಾರಿಯಾಗಿವೆ. ಸುಮಾರು ೭೨೫ ಕಥೆಗಳನ್ನು ಇಸೋಪ ರಚಿಸಿದ್ದಾನೆಂದು ಹೇಳಲಾಗಿದೆ. 

ಇಸೋಪನ ಕಥೆಗಳು ಹಲವಾರು ಶತಮಾನಗಳಿಂದ ಬಾಯಿ ಮಾತಿನಲ್ಲೇ ಮುಂದುವರೆಯುತ್ತಾ ಬಂದಿವೆ. ಇಸೋಪನ ಕಥೆಗಳಲ್ಲಿ ಪ್ರಸಿದ್ಧವಾದ ಕಥೆಗಳೆಂದರೆ ‘ಹಳ್ಳಿ ಇಲಿ ಹಾಗೂ ಪಟ್ಟಣದ ಇಲಿ, ಬಂಗಾರದ ಮೊಟ್ಟೆ ಇಡುವ ಬಾತುಕೋಳಿ. ಈ ಕಥೆಗಳು ಪ್ರಾಣಿ ಪಕ್ಷಿಗಳಿಗೆ ಸಂಬಂಧಿಸಿದವೇ ಆದರೂ ಮನುಷ್ಯನ ಅಹಂಕಾರ, ಸ್ವಾರ್ಥ, ದುಷ್ಟತನ ನಿವಾರಣೆಗೆ ಸಹಕಾರಿಯಾಗಿವೆ. 

ಇಸೋಪ ಬದುಕಿದ್ದಾಗ ಆತನ ಕಥೆಗಳು ಬರೆಯಲ್ಪಟ್ಟಿರಲಿಲ್ಲ. ಆಗ ಏನಿದ್ದರೂ ಬಾಯಿಯಿಂದ ಕಿವಿಗೆ ಈ ಮುಖಾಂತರ ಹಂಚಲ್ಪಡುತ್ತಿತ್ತು. ಇಸೋಪನ ಸಾವಿನ ೩೦೦ ವರ್ಷಗಳ ಬಳಿಕ ಈ ಕಥೆಗಳು ಲಿಖಿತ ರೂಪದಲ್ಲಿ ಹೊರಬಂದವು. ಇಸೋಪನಿಗೆ ಸಲ್ಲಬೇಕಾದ ಗೌರವ ಅರ್ಹವಾಗಿಯೇ ಸಂದಿತು. ಇಸೋಪನ ಕಥೆಗಳ ಪ್ರಮುಖ ಅಂಶವೆಂದರೆ ಸರಳವಾದ ಕಥಾ ಹಂದರ, ಯಾರಿಗೂ ಅರ್ಥವಾಗಬಲ್ಲ ನೀತಿ. ಇಸೋಪನ ಕಾಲಾವಧಿ ಮುಗಿದು ಇಷ್ಟು ಶತಮಾನಗಳು ಸಂದರೂ ಆತನ ಕಥೆಗಳು ಈಗಲೂ ಪ್ರಸ್ತುತವಾಗಿವೆ. ಇದೇ ಇಸೋಪನ ನೀತಿ ಕಥೆಗಳ ಹೆಗ್ಗಳಿಕೆ.

***

ರಾಬಿನ್ ಸನ್ ಕ್ರೂಸೊ (Robinson Crusoe)

ಸಾಹಸಮಯ ಕಥೆಗಳನ್ನು ಇಷ್ಟ ಪಡುವ ಪುಣಾಣಿಗಳು ರಾಬಿನ್ ಸನ್ ಕ್ರೂಸೊ ಎಂಬ ವ್ಯಕ್ತಿಯ ಸಾಹಸ ಕಥೆಗಳನ್ನು ಓದಬಹುದು. ಈ ಕಥೆಗಳನ್ನು ಬರೆದದ್ದು ಡೇನಿಯಲ್ ಡೆಫೊ (Daniel Defoe). ರಾಬಿನ್ ಸನ್ ಕ್ರೂಸೊ ಅವರ ಸಾಹಸಮಯ ಕಥೆಗಳು ಮೊದಲು ಪ್ರಕಟವಾದದ್ದು ೧೭೧೯ರಲ್ಲಿ. ಈ ಕಥೆಗಳನ್ನು ಆಂಗ್ಲ ಸಾಹಿತ್ಯದ ಶ್ರೇಷ್ಟ ಕಥೆಗಳ ಸಾಲಿಗೆ ಸೇರಿಸಲಾಗಿದೆ. 

ರಾಬಿನ್ ಸನ್ ಕ್ರೂಸೊನ ಕಥೆಗಳು ಆತನ ನೌಕಾಯಾನದ ಸಾಹಸಗಳು, ನಿರ್ಜನ ದ್ವೀಪದಲ್ಲಿ ಸಿಲುಕಿ ಬದುಕಿ ಬಂದ ಬಗ್ಗೆ, ಗುಲಾಮಗಿರಿಯ ಬಗ್ಗೆ ಹೇಳುತ್ತವೆ. ಈತನ ಸಾಹಸಗಳ ಕುರಿತಾದ ಹಲವಾರು ಚಲನ ಚಿತ್ರಗಳು ಬಿಡುಗಡೆಯಾಗಿವೆ. ರಾಬಿನ್ ಸನ್ ಕ್ರೂಸೊ ಎಂಬ ಕಾಲ್ಪನಿಕ ವ್ಯಕ್ತಿಯ ಗೌರವಾರ್ಥ ಚಿಲಿ ದೇಶವು ೧೯೬೬ರಲ್ಲಿ ತನ್ನ ಒಂದು ದ್ವೀಪಕ್ಕೆ ರಾಬಿನ್ ಸನ್ ಕ್ರುಸೊ ದ್ವೀಪ ಎಂದು ಮರು ನಾಮಕರಣ ಮಾಡಿತು. ‘ಮಾಸ್ ಎ ತಿಯರಾ’ (Mas a Tierra) ಎನ್ನುವ ದ್ವೀಪದ ಹೆಸರನ್ನು ರಾಬಿನ್ ಸನ್ ಕ್ರೂಸೊ ದ್ವೀಪ ಎಂದು ಬದಲಾಯಿಸಲಾಗಿದೆ. ಇದು ಈ ಕಥೆಗಳನ್ನು ಬರೆದ ಡೇನಿಯಲ್ ಡೆಫೊ ಗೆ ಸಂದ ಗೌರವ ಎಂದು ಆತನ ಅಭಿಮಾನಿಗಳು ಹೇಳುತ್ತಾರೆ. ರಾಬಿನ್ ಸನ್ ಕ್ರೂಸೊ ಕಥೆಗಳು ಕನ್ನಡದಲ್ಲೂ ಲಭ್ಯವಿದೆ.  

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ  (ವಿವಿಧ ಪ್ರಕಾಶಕರಿಂದ ಪ್ರಕಟವಾದ ಇಸೋಪನ ನೀತಿ ಕಥೆಗಳು)