ಮಕ್ಕಳಿಗೆ ರಜೆಯ ಓದು (ಭಾಗ ೫) - ಜಂಗಲ್ ಬುಕ್

ಮಕ್ಕಳಿಗೆ ರಜೆಯ ಓದು (ಭಾಗ ೫) - ಜಂಗಲ್ ಬುಕ್

ಜಂಗಲ್ ಬುಕ್ (The Jungle Book)

ಮಕ್ಕಳಿಗೆ ಓದಲು ಆನಂದ ಹಾಗೂ ರೋಚಕತೆಯನ್ನು ಕೊಡಬಹುದಾದ ಕಾಡಿನ ಮನಮೋಹಕ ಕಥಾವಸ್ತುವನ್ನು ಹೊಂದಿರುವ ಪುಸ್ತಕ ‘ಜಂಗಲ್ ಬುಕ್’. ೧೮೯೪ರಲ್ಲಿ ರುಡಿಯಾರ್ಡ್ ಕಿಪ್ಲಿಂಗ್ (Rudyard Kipling) ಬರೆದ ಈ ಕಾಡಿನ ಕಥೆಯಲ್ಲಿ ಬಹಳ ಸ್ವಾರಸ್ಯಕರವಾದ ಕಥಾ ವಸ್ತುವಿದೆ. ಕಾಡಿನಲ್ಲಿ ಸಿಕ್ಕ ಮಾನವನ ಮಗುವನ್ನು ತೋಳಗಳ ಹಿಂಡೊಂದು ರಕ್ಷಿಸಿ ಸಾಕಿ ದೊಡ್ಡ ಬಾಲಕನನ್ನಾಗಿ ಮಾಡುತ್ತದೆ. ಆ ಹುಡುಗ ನೋಡಲು ಮಾನವನಂತೆಯೇ ಇದ್ದರೂ ಅವನ ಗುಣ ಲಕ್ಷಣ, ಚಲನವಲನಗಳು ತೋಳದಂತೆಯೇ ಆಗಿತ್ತು. ಈ ಕಥಾ ವಸ್ತುವನ್ನು ಹೊಂದಿರುವ ಅಸಂಖ್ಯಾತ ಕಾರ್ಟೂನ್ ಚಿತ್ರಗಳು, ಚಲನ ಚಿತ್ರಗಳು ಬೇರೆ ಬೇರೆ ಭಾಷೆಯಲ್ಲಿ ಬಂದಿವೆ. ಆದರೆ ‘ಜಂಗಲ್ ಬುಕ್’ ಅನ್ನು ಓದಿ ಆನಂದಿಸುವುದರಲ್ಲಿ ಮಜಾ ಇದೆ. ಕನ್ನಡ ಭಾಷೆಯಲ್ಲೂ ಜಂಗಲ್ ಬುಕ್ ಪುಸ್ತಕ ಲಭ್ಯವಿದೆ.

‘ಮೋಗ್ಲಿ’ ಎಂಬ ತೋಳ ಸಾಕಿದ ಹುಡುಗನ ಕಥೆಯು ನಮಗೆ ಕಾಡಿನ ಕಾನೂನು, ಗೆಳೆತನ, ವೈರತ್ವ, ಸಾಹಸಗಳನ್ನು ತೆರೆದಿಡುತ್ತದೆ. ವಿಶೇಷ ಪಾತ್ರಗಳಾದ ಬಾಲೂ ಎನ್ನುವ ಕರಡಿ, ಬಘೀರಾ ಎನ್ನುವ ಕಪ್ಪು ಚಿರತೆ, ಶೇರ್ ಖಾನ್ ಎನ್ನುವ ಹುಲಿ ಜಂಗಲ್ ಬುಕ್ ಅನ್ನು ಸಾಹಸಮಯ ಕಥೆಯನ್ನಾಗಿಸುತ್ತದೆ. ಈ ಕತೆಗೆ ಭಾರತೀಯ ಕಾಡುಗಳ ವಾತಾವರಣದ ಸೆಳೆತ ಇದೆ. ಏಕೆಂದರೆ ಲೇಖಕರಾದ ಕಿಪ್ಲಿಂಗ್ ಅವರು ತಮ್ಮ ಬಾಲ್ಯವನ್ನು ಭಾರತದಲ್ಲಿ ಕಳೆದಿದ್ದರು. ಬಾಲ್ಯದ ಕೆಲವು ವರ್ಷಗಳನ್ನು ಭಾರತದಲ್ಲಿ ಕಳೆದು ನಂತರ ಇಂಗ್ಲೆಂಡ್ ಗೆ ತೆರಳಿದರೂ ಭಾರತದ ಮೋಹ ಅವರನ್ನು ಮತ್ತೆ ಇಲ್ಲಿಗೇ ಕರೆತಂದಿತು. ಇಲ್ಲಿನ ಕಾಡಿನ ಪರಿಸರದ ಬಗ್ಗೆ ಹಲವಾರು ಕಥೆಗಳನ್ನು ಜಂಗಲ್ ಬುಕ್ ಹೆಸರಿನಲ್ಲಿ ಬರೆದರು. 

ಶತಮಾನದ ನಂತರವೂ ಜಂಗಲ್ ಬುಕ್ ಪುಸ್ತಕವನ್ನು ಓದುವುದು ಮನಸ್ಸಿಗೆ ಮುದ ನೀಡುತ್ತದೆ. ವಾಲ್ಟ್ ಡಿಸ್ನಿ ಸಂಸ್ಥೆಯು ೧೯೬೭ರಲ್ಲಿ ಮೊದಲ ಬಾರಿಗೆ ಈ ಕಥೆಯನ್ನು ಚಲನ ಚಿತ್ರಕ್ಕೆ ಅಳವಡಿಸಿತು. ಕಾಲಕ್ರಮೇಣ ಈ ಮೋಗ್ಲಿಯ ಪಾತ್ರದಲ್ಲಿ, ಕಥೆಯಲ್ಲಿ ಹಲವಾರು ಬದಲಾವಣೆಗಳಾದವು. ಏನೇ ಆದರೂ ಈಗಲೂ ಮೋಗ್ಲಿಯ ಹೆಸರು ಕೇಳಿದೊಡನೆ ಹಲವರಿಗೆ ತಮ್ಮ ಬಾಲ್ಯದ ಓದಿನ ನೆನಪಾಗುವುದು ಸಾಮಾನ್ಯ ಸಂಗತಿ.

ಟೋಮ್ ಸಾಯರ್ ನ ಸಾಹಸಗಳು (The Adventures of Tom Sawyer)

ಖ್ಯಾತ ಕವಿ, ಲೇಖಕ ಮಾರ್ಕ್ ಟ್ವೈನ್ ಬರೆದ ಟೋಮ್ ಸಾಯರ್ ಎಂಬ ಹುಡುಗನ ಸಾಹಸದ ಕಥೆಗಳು ಓದಲು ಬಹಳ ಆನಂದ ನೀಡುತ್ತವೆ. ಈ ಕೃತಿಯು ಮೊದಲಿಗೆ ೧೮೭೬ರಲ್ಲಿ ಪ್ರಕಟವಾಯಿತು. ಅಮೇರಿಕಾದ ಕ್ಲಾಸಿಕ್ ಕಥೆಗಳಲ್ಲಿ ಇದು ಇಂದಿಗೂ ಒಂದು ಪ್ರಮುಖ ಕೃತಿಯಾಗಿದೆ. ಟಾಮ್ ಸಾಯರ್ ಎಂಬ ಹುಡುಗನ ಸಾಹಸಮಯ ಜೀವನವೇ ಈ ಕೃತಿಯ ಕಥಾ ವಸ್ತು. ಈ ಕಥಾ ವಸ್ತುವನ್ನು ಆಯ್ದು ಹಲವಾರು ಚಲನ ಚಿತ್ರಗಳು ನಿರ್ಮಾಣವಾಗಿವೆ. 

ಓಲಿವರ್ ಟ್ವಿಸ್ಟ್ (Oliver Twist)

ಚಾರ್ಲ್ಸ್ ಡಿಕನ್ಸ್ ಬರೆದ ಆಲಿವರ್ ಟ್ವಿಸ್ಟ್ ಎನ್ನುವ ಕಾದಂಬರಿಯು ಒಬ್ಬ ಅನಾಥ ಹುಡುಗನ ಕಥಾ ವಸ್ತುವನ್ನು ಹೊಂದಿದೆ. ೧೯ನೇ ಶತಮಾನದಲ್ಲಿ ಆಲಿವರ್ ಟ್ವಿಸ್ಟ್ ಎನ್ನುವ ಹುಡುಗ ಲಂಡನ್ ನಗರದಲ್ಲಿ ಅನುಭವಿಸಿದ ಕಷ್ಟಗಳ ಸರಮಾಲೆಯ ಹಿನ್ನಲೆಯನ್ನು ಹೊಂದಿದೆ. ತನ್ನ ಬಾಲ್ಯದ ದಿನಗಳಿಂದಲೇ ಹಸಿವು ಮತ್ತು ಬಡತನವನ್ನು ಕಂಡ ಆಲಿವರ್ ಟ್ವಿಸ್ಟ್ ಸಮಾಜದ ತೆಗಳಿಕೆಯ ನಡುವೆ ಬಾಳಿ ಬದುಕಿದ ಕರುಣಾಜನಕ ಕಥೆ ಓದಲು ಯೋಗ್ಯ. ಆಲಿವರ್ ಲಂಡನ್ ನಲ್ಲಿ ವಾಸ ಮಾಡುತ್ತಿರುವಾಗ ಫಾಜಿನ್ ಎನ್ನುವ ಕ್ರೂರ ಕ್ರಿಮಿನಲ್ ಜೊತೆ ಸೇರಿಕೊಂಡು ಕೆಟ್ಟ ಕೆಲಸಗಳನ್ನು ಮಾಡುತ್ತಾನೆ. ಆದರೆ ಅವನ ಜೀವನಕ್ಕೆ ತಿರುವು ಸಿಗುತ್ತದೆ. ಮಿ.ಬ್ರೌನ್ ಲಾ ಎಂಬ ಸಹೃದಯ ವ್ಯಕ್ತಿಯ ಸಹಕಾರದಿಂದ ಆಲಿವರ್ ಟ್ವಿಸ್ಟ್ ಉತ್ತಮ ಜೀವನಕ್ಕೆ ಕಾಲಿಡುತ್ತಾನೆ. ೧೮೩೭ ರಿಂದ ೧೮೩೯ರ ಅವಧಿಯಲ್ಲಿ ಪ್ರಕಟವಾದ ಆಲಿವರ್ ಟ್ವಿಸ್ಟ್ ನ ಕಥಾ ವಸ್ತು ಹೊಂದಿದ ಮೂರು ಭಾಗಗಳು ಪ್ರಕಟಗೊಂಡವು. ಈ ಕಥಾ ವಸ್ತುವನ್ನು ಹಲವು ನಾಟಕ ಹಾಗೂ ಚಲನ ಚಿತ್ರಗಳಲ್ಲಿ ಬಳಸಿಕೊಳ್ಳಲಾಯಿತು.

ಈ ಮೇಲಿನ ಮೂರು ಪುಸ್ತಕಗಳ ಜೊತೆಗೆ ಚಾರ್ಲ್ಸ್ ಡಿಕೆನ್ಸ್ ಬರೆದ ಡೇವಿಡ್ ಕಾಪರ್ ಫೀಲ್ಡ್ (David Copperfield) ಎಂಬ ಕೃತಿ ಡೇವಿಡ್ ಎನ್ನುವ ಹುಡುಗನ ಕಥಾ ಹಂದರವನ್ನು ಹೊಂದಿದೆ. ೧೮೫೦ರಲ್ಲಿ ಪ್ರಕಟವಾದ ಈ ಪುಸ್ತಕ ಡೇವಿಡ್ ಎನ್ನುವ ಹುಡುಗನ ಆನಂದಮಯ ಹಾಗೂ ಯಾತನಾಮಯ ಬದುಕಿನ ಕಥಾ ವಸ್ತುವನ್ನು ಹೊಂದಿದೆ. ೧೮೬೧ರಲ್ಲಿ ಚಾರ್ಲ್ಸ್ ಡಿಕೆನ್ಸ್ ಬರೆದ ‘ಗ್ರೇಟ್ ಎಕ್ಸ್ಪೆಕ್ಟೇಷನ್ಸ್’ (Great Expectations) ಎನ್ನುವ ಪಿಪ್ ಎಂಬ ಹುಡುಗನ ಸಾಹಸಮಯ ಬದುಕಿನ ಕಥಾ ಹಂದರವನ್ನು ಹೊಂದಿದೆ. ೧೮೭೭ರಲ್ಲಿ ಪ್ರಕಟವಾದ ‘ಬ್ಲ್ಯಾಕ್ ಬ್ಯೂಟಿ’ (Black Beauty) ಎನ್ನುವ ಕಪ್ಪು ಕುದುರೆಯ ಸಾಹಸದ ಕಥಾನಕವೂ ಮಕ್ಕಳಿಗೆ ಓದಲು ಯೋಗ್ಯ. ಇದನ್ನು ಬರೆದವರು ಅನ್ನಾ ಸೀವೆಲ್. 

(ಇನ್ನಷ್ಟು ಕಥಾ ಪುಸ್ತಕಗಳ ವಿವರ ಮುಂದಿನ ಸಂಚಿಕೆಯಲ್ಲಿ…)

ಆಧಾರ

ಚಿತ್ರ ಕೃಪೆ: ಅಂತರ್ಜಾಲ ತಾಣ