ಮಕ್ಕಳಿಗೆ ರಜೆಯ ಓದು (ಭಾಗ ೬) - ಅದ್ಭುತ ಲೋಕದಲ್ಲಿ ಆಲಿಸ್

ಅದ್ಭುತ ಲೋಕದಲ್ಲಿ ಆಲಿಸ್ (Alice’s Adventures in Wonderland)
ಸುಮ್ಮನೇ ನೀವೊಂದು ಕಲ್ಪನೆ ಮಾಡಿ, ಅಕಸ್ಮಾತ್ ಆಗಿ ನೀವೊಂದು ಮೊಲದ ಬಿಲದೊಳಗೆ ಜಾರಿ ಬಿದ್ದು ಅದ್ಭುತವಾದ ಲೋಕಕ್ಕೆ ತಲುಪುವಿರಿ ಎಂದು ಕಲ್ಪಿಸಿ. ಅದೊಂದು ಕಲ್ಪನಾತೀತ ಲೋಕ. ಇಂತಹುದ್ದೇ ಮಕ್ಕಳ ಕಥಾ ಸರಣಿಯನ್ನು ಬರೆದಿದ್ದಾರೆ ಲೂಯಿಸ್ ಕಾರೊಲ್. ಈ ಅದ್ಭುತ ಲೋಕವನ್ನು ಪ್ರವೇಶಿಸುವ ಪಾತ್ರದ ಹೆಸರು ಆಲಿಸ್. ಅದ್ಭುತ ಲೋಕದಲ್ಲಿ ಆಲಿಸ್ ನ ಸಾಹಸಗಳು ಎನ್ನುವ ಕೃತಿಯು ೧೮೬೫ರಲ್ಲಿ ಪ್ರಕಟವಾಯಿತು. ಟಿವಿ, ಮೊಬೈಲ್ ಗಳಿಲ್ಲದ ಸಮಯದಲ್ಲಿ ಈ ಕಥೆಯಲ್ಲಿನ ಅದ್ಭುತ ಲೋಕವನ್ನು ಕಲ್ಪನೆ ಮಾಡಿಕೊಳ್ಳಬೇಕಷ್ಟೇ.
ಮೊಲದ ಬಿಲದ ಒಳಗೆ ಜಾರಿ ಬೀಳುವ ಆಲಿಸ್ ಅದ್ಭುತ ಲೋಕವನ್ನು ತಲುಪುತ್ತಾಳೆ. ಅಲ್ಲಿ ಆಕೆ ಮ್ಯಾಡ್ ಹೇಟರ್, ಮಾರ್ಚ್ ಮೊಲ, ಕೆಂಪು ರಾಣಿ ಮೊದಲಾದ ವಿಚಿತ್ರ ಜೀವಿಗಳನ್ನು ಭೇಟಿಯಾಗುತ್ತಾಳೆ. ಕಳೆದ ಹಲವಾರು ವರ್ಷಗಳಿಂದ ಆಲಿಸ್ ನ ವಂಡರ್ ಲ್ಯಾಂಡ್ ಮಕ್ಕಳಿಗೆ ಮೋಡಿ ಮಾಡುತ್ತಾ ಬಂದಿದೆ. ಈ ಕಥೆಯಾಧರಿತ ಹಲವಾರು ಟಿವಿ ಧಾರವಾಹಿಗಳು, ಕಾರ್ಟೂನ್ ಚಿತ್ರಗಳು, ಪುಸ್ತಕಗಳು ಬಂದಿವೆ. ಈ ರೀತಿಯ ಕಥೆಗಳು ಮಕ್ಕಳ ಕಲ್ಪನಾ ಶಕ್ತಿಯನ್ನು ಹೆಚ್ಚಿಸುತ್ತವೆ. ಆಲಿಸ್ ತಲುಪಿದ ವಂಡರ್ ಲ್ಯಾಂಡ್ ಅಥವಾ ಅದ್ಭುತ ಲೋಕ ಹೇಗಿರಬಹುದು ಎನ್ನುವ ಕಲ್ಪನೆ ಮನಸ್ಸಿನಲ್ಲಿ ಮೂಡುತ್ತದೆ. ಈ ಕಾರಣದಿಂದ ಈ ಕೃತಿಯ ಲೇಖಕರಾದ ಲೂಯಿಸ್ ಕಾರೋಲ್ ಪ್ರಶಂಸೆಗೆ ಅರ್ಹರು.
ಹಕಲ್ ಬೆರಿ ಫಿನ್ ನ ಸಾಹಸಗಳು (The Adventures of Huckleberry Finn)
೧೮೮೪ರಲ್ಲಿ ಬ್ರಿಟನ್ ನಲ್ಲಿ ಮೊದಲಬಾರಿಗೆ ಪ್ರಕಟವಾದ ಹಕಲ್ ಬೆರಿ ಫಿನ್ ನ ಸಾಹಸ ಕಥೆಗಳು ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡ ಪರಿಣಾಮ ಮುಂದಿನ ವರ್ಷವೇ ಅಮೇರಿಕದಲ್ಲೂ ಪ್ರಕಟವಾಯಿತು. ಖ್ಯಾತ ಕವಿ, ಲೇಖಕ ಮಾರ್ಕ್ ಟ್ವೈನ್ ಇದರ ಲೇಖಕ. ಈ ಪುಸ್ತಕವು ಸಾಹಸವನ್ನು ಇಷ್ಟ ಪಡುವ ಮಕ್ಕಳಿಗಾಗಿಯೇ ಬರೆದದ್ದು. ಹಕಲ್ ಬೆರಿ ಫಿನ್ ಎನ್ನುವ ಯುವಕನ ಸಾಹಸಮಯ ಬದುಕಿನ ಕಥೆ. ಬದುಕಿನಲ್ಲಿ ನಾನಾ ಬಗೆಯ ಕಷ್ಟಗಳನ್ನು ಅನುಭವಿಸಿದ ಫಿನ್ ಒಂದು ದಿನ ಎಲ್ಲವನ್ನೂ ಬಿಟ್ಟು ದೂರದೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡುತ್ತಾನೆ. ದಾರಿ ಮಧ್ಯದಲ್ಲಿ ಮಿಸ್ಸಿಸಿಪ್ಪಿ ನದಿಯ ತಟದಲ್ಲಿ ಆತನಿಗೆ ಜಿಮ್ ಎನ್ನುವ ಯುವಕನ ಪರಿಚಯವಾಗುತ್ತದೆ. ಆತ ತನ್ನ ಯಜಮಾನನಿಂದ ತಪ್ಪಿಸಿಕೊಂಡು ಬಂದಿದ್ದ ಗುಲಾಮನಾಗಿದ್ದ. ದಿನಕಳೆದಂತೆ ಇವರ ನಡುವಿನ ಗೆಳೆತನ ಗಾಢವಾಗುತ್ತದೆ. ಸ್ನೇಹದ ಪರ್ಯಾಯವಾಗಿ ಫಿನ್ ಮತ್ತು ಜಿಮ್ ಅವರನ್ನು ಗುರುತಿಸಲಾಗುತ್ತದೆ. ಈ ಕಥೆಯನ್ನು ಓದುವ ಮಕ್ಕಳಿಗೂ ಈ ರೀತಿಯ ಗೆಳೆತನ ಆದರ್ಶವಾಗಬೇಕು. ಈ ಕಾದಂಬರಿಯು ಆಮೇರಿಕದ ವರ್ಣಬೇಧ ಮತ್ತು ಜನಾಂಗೀಯ ದ್ವೇಷದ ಕಥೆಯನ್ನು ಹೇಳುತ್ತದೆ. ಅಮೇರಿಕನ್ ಸಾಹಿತ್ಯ ಲೋಕದಲ್ಲಿ ಈ ಕೃತಿ ಮಿನುಗು ತಾರೆ ಎಂದೇ ಹೇಳಬಹುದಾಗಿದೆ.
ಈ ಪುಸ್ತಕಗಳ ಜೊತೆ ರಾಬರ್ಟ್ ಲೂಯಿಸ್ ಸ್ಟೀವನ್ ಸನ್ ಬರೆದ ಟ್ರೆಶರ್ ಐಲ್ಯಾಂಡ್ (Treasure Island) ಕಾದಂಬರಿಯನ್ನು ಮಕ್ಕಳು ಓದಬಹುದು. ಈ ಕಾದಂಬರಿಯು ನಿಧಿಯನ್ನು ಹುಡುಕಲು ಹೊರಟ ಜಿಮ್ ಹಾಕಿನ್ಸ್ ಎನ್ನುವ ಯುವಕನ ಸಾಹಸಮಯ ಪ್ರಯಾಣದ ಬಗ್ಗೆ ಹೇಳುತ್ತದೆ. ಸಾಹಸಮಯ ಕಥೆಯನ್ನು ಓದಲು ಬಯಸುವ ಮಕ್ಕಳು ಹರ್ಮನ್ ಮೆಲ್ವಿಲ್ಲೆ ಅವರು ಬರೆದ ಮೊಬಿ ಡಿಕ್ (Moby Dick) ಎನ್ನುವ ಕಾದಂಬರಿಯನ್ನು ಓದಬಹುದು. ಇದು ಮಾನವ ಮತ್ತು ತಿಮಿಂಗಿಲದ ನಡುವಿನ ಸಾಹಸಮಯ ಕಥೆಯನ್ನು ತೆರೆದಿಡುತ್ತದೆ. ಆಂಗ್ಲ ಭಾಷೆಯೇ ಪ್ರಮುಖವಾಗಿರುವ ಈ ಕೆಲವು ಕಥಾ ಪುಸ್ತಕಗಳಲ್ಲಿ ಕೆಲವು ಕನ್ನಡದಲ್ಲೂ ಲಭ್ಯವಿದೆ. ಕನ್ನಡದಲ್ಲಿ ಓದಬೇಕು ಎಂದು ಬಯಸುವವರು ಪುಸ್ತಕ ಮಳಿಗೆಗೆ ಭೇಟಿ ನೀಡಿ ವಿಚಾರಿಸಿ.
ಇನ್ನಷ್ಟು ಮಕ್ಕಳ ಕಥಾ ಲೋಕದ ಪರಿಚಯ ಮುಂದಿನ ವಾರ…
(ಆಧಾರ)
ಚಿತ್ರಗಳು: ವಿವಿಧ ಅಂತರ್ಜಾಲ ತಾಣಗಳಿಂದ