ಮಕ್ಕಳಿಗೆ ರಜೆಯ ಓದು (ಭಾಗ ೯) - ಚಾರ್ಲಿ ಮತ್ತು ಚಾಕಲೇಟ್ ಫ್ಯಾಕ್ಟರಿ

ಮಕ್ಕಳಿಗೆ ರಜೆಯ ಓದು (ಭಾಗ ೯) - ಚಾರ್ಲಿ ಮತ್ತು ಚಾಕಲೇಟ್ ಫ್ಯಾಕ್ಟರಿ

ಚಾರ್ಲಿ ಮತ್ತು ಚಾಕಲೇಟ್ ಫ್ಯಾಕ್ಟರಿ (Charlie and The Chocolate Factory)

ಚಾರ್ಲಿ ಬಕೆಟ್ ಎನ್ನುವ ಪುಟ್ಟ ಹುಡುಗನ ಒಂದು ಚಾಕಲೇಟ್ ಫ್ಯಾಕ್ಟರಿಯ ಪ್ರವಾಸವು ಆತನ ಜೀವನವನ್ನೇ ಬದಲಾಯಿಸಿದ ಕಥೆಯಿದು. ಒಳ್ಳೆಯತನಕ್ಕೆ ಯಾವತ್ತೂ ಬೆಲೆ ಇದೆ ಎನ್ನುವುದನ್ನು ಈ ಪುಸ್ತಕದ ಕಥಾ ವಸ್ತು ತಿಳಿಸುತ್ತದೆ. ಚಾರ್ಲಿ ಒಬ್ಬ ಸಹೃದಯ ಹಾಗೂ ಪ್ರಾಮಾಣಿಕ ಹುಡುಗ. ಆತ ತುಂಬಾ ಬಡವ. ಆದರೆ ಬಡವರಿಗೆ ಕನಸಿನ ಹಂಗಿಲ್ಲವೇ? ಆತ ದಿನಾಲೂ ಕನಸು ಕಾಣುತ್ತಿದ್ದ. ಆತ ಕಾಣುತ್ತಿದ್ದ ಕನಸು ಎಲ್ಲವೂ ವೊಂಕಾ ಎಂಬ ಚಾಕಲೇಟ್ ಫ್ಯಾಕ್ಟರಿಯದ್ದೇ. ಆತನ ಕನಸಿನಲ್ಲಿ ನಿಗೂಢವಾದ ವೋಂಕಾ ಚಾಕಲೇಟ್ ಫ್ಯಾಕ್ಟರಿಯೊಳಗೆ ಹೋಗುವ ಆತ ಅಲ್ಲಿ ಹಲವಾರು ಅದ್ಭುತಗಳನ್ನು ಕಾಣುತ್ತಾನೆ. ಒಮ್ಮೆ ಈ ಕನಸು ನನಸಾಗುವ ಅವಕಾಶ ಚಾರ್ಲಿಯದ್ದಾಗುತ್ತದೆ. 

ವಿಲ್ಲಿ ವೋಂಕಾ ಎಂಬಾತ ಆ ವೋಂಕಾ ಚಾಕಲೇಟ್ ಫ್ಯಾಕ್ಟರಿಯ ಮಾಲಿಕನಾಗಿದ್ದ. ಆತ ತನ್ನ ಚಾಕಲೆಟ್ ಗಳ ಪ್ರಚಾರಕ್ಕಾಗಿ ಒಂದು ಹೊಸ ಯೋಜನೆಯನ್ನು ಜಾರಿಗೆ ತರುತ್ತಾನೆ. ಅದರ ಪ್ರಕಾರ ಮಾರುಕಟ್ಟೆಯಲ್ಲಿ ಸಿಗುವ ವೋಂಕಾ ಚಾಕಲೇಟ್ ಗಳ ಪೈಕಿ ಐದರಲ್ಲಿ ‘ಲಕ್ಕಿ ಕೂಪನ್’ ಇರಿಸಿರುತ್ತಾನೆ. ಆ ಕೂಪನ್ ಸಿಕ್ಕ ಐದು ವಿಜೇತರಿಗೆ ಆತನ ಜೊತೆ ವೋಕಾ ಚಾಕಲೇಟ್ ಫ್ಯಾಕ್ಟರಿ ನೋಡುವ ದೊಡ್ಡ ಅವಕಾಶ. ಅದರೊಂದಿಗೆ ಆ ಐದು ಮಂದಿ ಅದೃಷ್ಟಶಾಲಿ ಮಕ್ಕಳಿಗೆ ಜೀವನ ಪರ್ಯಂತ ಚಾಕಲೇಟ್ ಉಚಿತ. ಈ ಪ್ರಕಟಣೆಯನ್ನು ಕಂಡ ಕೂಡಲೇ ಆ ಊರಿನ ಎಲ್ಲಾ ಮಕ್ಕಳು ವೋಂಕಾ ಚಾಕಲೇಟ್ ಖರೀದಿಸಿ ತಿನ್ನಲು ಪ್ರಾರಂಭಿಸುತ್ತಾರೆ. ಚಾರ್ಲಿ ಬಡವನಾಗಿದ್ದ ಕಾರಣ ಆತ ಕಷ್ಟ ಪಟ್ಟು ಹಣ ಸಂಪಾದಿಸಿ ಚಾಕಲೇಟ್ ಖರೀದಿಸುತ್ತಾನೆ. ಅದೃಷ್ಟ ಚಾರ್ಲಿಯ ಕೈ ಹಿಡಿಯುತ್ತದೆ. ಅದೃಷ್ಟ ಯೋಜನೆಯ ಕೊನೆಯ ಹಾಗೂ ಐದನೇ ವಿಜೇತನಾಗಿ ಚಾರ್ಲಿ ವೋಂಕಾ ಫ್ಯಾಕ್ಟರಿ ನೋಡುವ ಅವಕಾಶ ಪಡೆದುಕೊಳ್ಳುತ್ತಾನೆ. 

ಒಂದು ದಿನ ಫ್ಯಾಕ್ಟರಿಯ ಮಾಲೀಕನಾದ ವಿಲ್ಲಿ ವೋಂಕಾ ಜೊತೆ ಐದು ವಿಜೇತ ಮಕ್ಕಳು ಚಾಕಲೇಟ್ ಫ್ಯಾಕ್ಟರಿಯ ಪ್ರವಾಸಕ್ಕೆ ತಯಾರಾಗುತ್ತಾರೆ. ಈ ವಿಲ್ಲಿ ವೋಂಕಾ ಒಬ್ಬ ವಿಚಿತ್ರ, ವಿಕ್ಷಿಪ್ತ ಹಾಸ್ಯಮಯ ವ್ಯಕ್ತಿ. ಆತ ಈ ಮಕ್ಕಳಿಗೆ ಚಿತ್ರ ವಿಚಿತ್ರವಾದ ಆಟಗಳನ್ನು ಆಡಿಸುತ್ತಾನೆ. ವೂಂಪಾ ಲೂಂಪಾಸ್ ಎನ್ನುವ ವ್ಯಕ್ತಿ ಈತನ ಆಪ್ತ ಸಹಾಯಕ. ಚಾರ್ಲಿ ಜೊತೆಗೆ ಬಂದಿದ್ದ ನಾಲ್ಕು ಮಂದಿ ಮಕ್ಕಳು ತುಂಬಾ ತಂಟೆ ಮಾಡುವವರು ಮತ್ತು ಉತ್ತಮ ಗುಣ ನಡತೆಯವರಾಗಿರಲಿಲ್ಲ. ಈ ಕಾರಣದಿಂದ ಅವರಿಗೆ ಆ ಮ್ಯಾಜಿಕ್ ಚಾಕಲೇಟ್ ಫ್ಯಾಕ್ಟರಿಯಲ್ಲಿ ಚಿತ್ರ ವಿಚಿತ್ರ ಶಿಕ್ಷೆಗಳು ದೊರೆಯುತ್ತವೆ. ಅಗಸ್ಟಸ್ ಗ್ಲೂಪ್ ಎಂಬ ಹುಡುಗ ಚಾಕಲೇಟ್ ನದಿಯಲ್ಲಿ ಬೀಳುತ್ತಾನೆ, ವೆರುಕಾ ಸಾಲ್ಟ್ ನ್ನು ಕಸದ ರಾಶಿಗೆ ಎಸೆಯಲಾಗುತ್ತದೆ, ವೈಲೆಟ್ ದೊಡ್ಡ ಬ್ಲೂಬೆರಿಯ ಮರವಾಗಿ ಪರಿವರ್ತಿತಳಾಗುತ್ತಾಳೆ ಹಾಗೂ ಮೈಕ್ ಕುಬ್ಜನಾಗಿ ಹೋಗುತ್ತಾನೆ. ಹೀಗೆ ನಾಲ್ಕು ಮಂದಿ ವಿವಿಧ ಶಿಕ್ಷೆಗೆ ಪಾತ್ರರಾದರೂ ಚಾರ್ಲಿ ಮಾತ್ರ ತನ್ನ ಉತ್ತಮ ಗುಣ ನಡತೆ ಹಾಗೂ ಪ್ರಾಮಾಣಿಕತೆಯ ಕಾರಣದಿಂದ ವಿಲ್ಲಿ ವೋಂಕಾನ ಮನ ಗೆಲ್ಲುತ್ತಾನೆ. ಚಾಕಲೇಟ್ ಫ್ಯಾಕ್ಟರಿಯ ಪ್ರವಾಸದ ಕೊನೆಯಲ್ಲಿ ಆತನಿಗೆ ದೊಡ್ಡದಾದ ಒಂದು ಬಹುಮಾನ ಕಾದಿರುತ್ತೆ. ಅದು ಏನು ಗೊತ್ತಾ? ವಿಲ್ಲಿ ವೋಂಕಾ ಆತನ ಇಡೀ ಚಾಕಲೇಟ್ ಫ್ಯಾಕ್ಟರಿಯನ್ನು ಚಾರ್ಲಿಗೆ ಬಹುಮಾನದ ರೂಪದಲ್ಲಿ ನೀಡುತ್ತಾನೆ!

೧೯೬೪ರಲ್ಲಿ ರೊನಾಲ್ಡ್ ದಹ್ಲ್ ಎಂಬಾತ ಈ ಖ್ಯಾತ ಪುಸ್ತಕವನ್ನು ಬರೆದ. ನಂತರದ ದಿನಗಳಲ್ಲಿ ಹಲವಾರು ಮುದ್ರಣಗಳನ್ನು ಕಂಡ ಈ ಪುಸ್ತಕ ಚಲನ ಚಿತ್ರವಾಯಿತು. ‘ವಿಲ್ಲಿ ವೋಂಕಾ ಆಂಡ್ ದಿ ಚಾಕಲೇಟ್ ಫ್ಯಾಕ್ಟರಿ’ ಎಂಬ ಹೆಸರಿನ ಚಿತ್ರ ೧೯೭೧ ತೆರೆಕಂಡರೆ, ‘ಚಾರ್ಲಿ ಆಂಡ್ ದಿ ಚಾಕಲೇಟ್ ಫ್ಯಾಕ್ಟರಿ’ ಎಂಬ ಚಿತ್ರವು ೨೦೦೫ರಲ್ಲಿ ತೆರೆಕಂಡಿತು. ೧೯೭೧ರಲ್ಲಿ ತೆರೆ ಕಂಡ ಚಿತ್ರದಲ್ಲಿ ಅಂದಿನ ಖ್ಯಾತ ನಟ ಜೇನ್ ವಿಲ್ಡರ್ ವಿಲ್ಲಿ ವೋಂಕಾನ ಪಾತ್ರ ಮಾಡಿದ್ದರು. ಸಾಹಸಮಯ ಬದುಕನ್ನು ಕಾಣ ಬಯಸುವ ಮಕ್ಕಳೆಲ್ಲಾ ಓದಲೇ ಬೇಕಾದ ಉತ್ತಮ ಪುಸ್ತಕ ಇದು.

***

ಮಕ್ಕಳು ಈ ವಾರ ಓದ ಬಹುದಾದ ಇನ್ನಿತರ ಪುಸ್ತಕಗಳು - ಲಿಟಲ್ ವುಮೆನ್ (Little Women): ೧೮೬೮ರಲ್ಲಿ ಲೂಯಿಸ್ ಮೇ ಅಲ್ಕೋಟ್ ಎಂಬಾಕೆ ಬರೆದ ನಾಲ್ಕು ಮಂದಿ ವಿಭಿನ್ನ ಪ್ರವೃತ್ತಿಯ ಸಹೋದರಿಯರ ಕಥೆಯೇ ಲಿಟಲ್ ವುಮೆನ್. ಈ ನಾಲ್ಕು ಮಂದಿ ಬಡ ಸಹೋದರಿಯರ ಕಷ್ಟ ಕಾರ್ಪಣ್ಯಗಳ ಕಥನ ಮಕ್ಕಳಿಗೆ ಮಾತ್ರವಲ್ಲ ಹಿರಿಯರಿಗೂ ಇಷ್ಟವಾಗುತ್ತದೆ. ಮಾರ್ಚ್ ಸಹೋದರಿಯರ ಬಗ್ಗೆ ಬರೆದ ಈ ಕಥಾ ಪುಸ್ತಕವು ನಾಲ್ಕು ಚಲನ ಚಿತ್ರಗಳಿಗೆ ಕಾರಣವಾಗಿದೆ. 

ಪೀಟರ್ ಪಾನ್ (Peter Pan): ನೆವರ್ ಲ್ಯಾಂಡ್ ಎನ್ನುವ ಪ್ರದೇಶದಲ್ಲಿ ವಾಸಿಸುವ ಪೀಟರ್ ಪಾನ್ ಎನ್ನುವ ಮಾಯಾ ಹುಡುಗನ ರೋಚಕ ಕಥೆಯಿದು. ಖ್ಯಾತ ಸ್ಕಾಟೀಷ್ ನಾಟಕಕಾರ ಜೆ ಎಂ ಬಾರಿ ಎಂಬಾತ ಬರೆದ ನಾಟಕಕ್ಕಾಗಿ ಬರೆದ ಕಥೆಯಿದು. ೧೯೦೪ರಲ್ಲಿ ಪೀಟರ್ ಪಾನ್ ನಾಟಕ ರೂಪದಲ್ಲಿ ಪ್ರದರ್ಶನವನ್ನೂ ಕಂಡಿತು. ೧೯೧೧ರಲ್ಲಿ ಪುಸ್ತಕ ರೂಪದಲ್ಲಿ ಹೊರಬಂದು ಮಕ್ಕಳ ಮೆಚ್ಚುಗೆಗೆ ಪಾತ್ರವಾಯಿತು. ಪೀಟರ್ ಪಾನ್ ಪಾತ್ರವನ್ನು ೧೯೫೩ರಲ್ಲಿ ವಾಲ್ಟ್ ಡಿಸ್ನಿ ಕಂಪೆನಿಯು ತಮ್ಮ ಕಾರ್ಟೂನ್ ಚಿತ್ರಗಳಲ್ಲಿ ಬಳಸಿಕೊಂಡಿತು.

ಸೀಕ್ರೆಟ್ ಗಾರ್ಡನ್ (The Secret Garden): ನಿಗೂಢ ಉದ್ಯಾನವನವು ಮೇರಿ ಲೆನಾಕ್ಸ್ ಎಂಬ ಹತ್ತು ವರ್ಷದ ಹುಡುಗಿಯ ಕಥೆ. ಭಾರತ ದೇಶದಲ್ಲಿ ತನ್ನ ತಂದೆ-ತಾಯಿಯ ಜೊತೆ ವಾಸಿಸುವ ಮೇರಿ ತುಂಬಾ ಸ್ವಾರ್ಥಿ. ಮೇರಿಯ ಭವಿಷ್ಯದ ಬದುಕಿನ ದಿನಗಳಲ್ಲಿ ಆಕೆ ಸ್ವಾರ್ಥವನ್ನು ಬಿಡುತ್ತಾಳೆಯೇ ಅದೇ ಈ ಪುಸ್ತಕದ ಕುತೂಹಲ. ೧೯೧೧ರಲ್ಲಿ ಫ್ರಾನ್ಸಿಸ್ ಹೋಡ್ಜ್ ಸನ್ ಬರ್ನೆಟ್ ಎಂಬಾತ ಈ ‘ಸೀಕ್ರೆಟ್ ಗಾರ್ಡನ್’ ಎಂಬ ಕೃತಿಯನ್ನು ಬರೆದು ಪ್ರಕಟಿಸಿದ. ನಂತರದ ದಿನಗಳಲ್ಲಿ ಈ ಪುಸ್ತಕದ ಜನಪ್ರಿಯತೆ ಉತ್ತುಂಗಕ್ಕೇರಿ ಈ ಕಥಾ ವಸ್ತುವನ್ನೊಳಗೊಂಡ ಹಲವಾರು ಟಿವಿ ಸರಣಿಗಳು ಮತ್ತು ಚಲನ ಚಿತ್ರಗಳು ಮೂಡಿಬಂದವು. 

(ಇನ್ನಷ್ಟು ಪುಸ್ತಕಗಳ ಪರಿಚಯ ಮುಂದಿನ ವಾರ)

(ಆಧಾರ) ಚಿತ್ರ ಕೃಪೆ: ಅಂತರ್ಜಾಲ ತಾಣ