ಮಕ್ಕಳು ಓದಿದ ಟೀಚರ್ ಡೈರಿ

ಮಕ್ಕಳು ಓದಿದ ಟೀಚರ್ ಡೈರಿ

ಪುಸ್ತಕದ ಲೇಖಕ/ಕವಿಯ ಹೆಸರು
ವೈ ಜಿ ಭಗವತಿ
ಪ್ರಕಾಶಕರು
ವಿಜಯಾ ಪ್ರಕಾಶನ, ಕಲಘಟಗಿ
ಪುಸ್ತಕದ ಬೆಲೆ
ರೂ. 110.00, ಮುದ್ರಣ: 2021

ಇದ್ದವರಿಗಿಂತ ಇಲ್ಲದವರೇ ತಮಗೆ ಮಾಡಿದ ಸಹಾಯವನ್ನ ನೆನಪಿಡುತ್ತಾರೆ ಹಾಗೆಯೇ ಯಾವುದಾದರೊಂದು ರೀತಿಯಲ್ಲಿ ತೀರಿಸುತ್ತಾರೆ. ಇದು ಲೋಕದ ನಿಯಮ ಶಾಂತವ್ವ ಈ ನಿಯಮಕ್ಕೆ ಹೊರತಾಗಿರಲಿಲ್ಲ. ಇಂತಹ ಅನೇಕ ಆದರ್ಶ ನುಡಿಗಳನ್ನು ಕಾದಂಬರಿಯ ಉದ್ದಕ್ಕೂ ನೋಡಬಹುದು. "ಮಕ್ಕಳು ಓದಿದ ಟೀಚರ್ ಡೈರಿ" ಒಮ್ಮೇಲೆ ಓದಿಸಿಕೊಂಡು ಹೋಗುವ ಕಾದಂಬರಿ. ವೈ ಜಿ ಭಗವತಿಯವರು ನವರಸಗಳನ್ನು ಬೆರೆಸಿ ಹೆಣೆದ ಮಕ್ಕಳ ಕಾದಂಬರಿ ಇದಾಗಿದೆ. ಈ ಕಾದಂಬರಿಯೂ ಸಮನ್ವಯ ಶಿಕ್ಷಣಕ್ಕೆ ಒತ್ತು ನೀಡುತ್ತದೆ. ಇದರಲ್ಲಿ ಬರುವ ಪ್ರತಿಯೊಂದು ಪಾತ್ರವೂ ಭಾರತದ ಭಾವೈಕ್ಯತೆಯ ಪ್ರತಿರೂಪದಂತೆ ಕಂಗೊಳಿಸುತ್ತವೆ. ಶಾಲಿನಿ ಎಂಬ ತರುಣ ಮಹಿಳಾ ಶಿಕ್ಷಕಿ ಬರೆದಿರುವ ಡೈರಿಯನ್ನು ಅವರು ಕಲಿಸುತ್ತಿರುವ ಮಕ್ಕಳು ಅವರಿಲ್ಲದ ಸಮಯದಲ್ಲಿ ಓದುವ ಮಕ್ಕಳಲ್ಲಿ ಆಗುವ ಬದಲಾವಣೆಗಳನ್ನು ಈ ಕಾದಂಬರಿಯಲ್ಲಿ ಕಾಣಬಹುದು. ಹಮೀದಾ, ರೇಷ್ಮಾ, ಕಸ್ತೂರಿ, ಮಹಾವೀರ, ರುಸ್ತುಂ ಪಪ್ಪಾ ಇಂತಹ ಅನೇಕ ಪಾತ್ರಗಳು ಕಾದಂಬರಿಯನ್ನು ಓದಿಸಿಕೊಂಡು ಹೋಗುವಂತೆ ಮಾಡುತ್ತವೆ.
ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲೋ ಸೇರುವ ನದಿಯಂತೆ ಶಾಲಿನಿ ಎಂಬ ಮಹಿಳಾ ಶಿಕ್ಷಕಿಯ ಬದುಕು ಒಂಥರಾ ನದಿಯಂತೆ ಆಗಿಹೋಗಿದೆ. ಮಹಿಳೆಯು ಸ್ವಾಭಿಮಾನದಿಂದ ಬದುಕಬೇಕು ಎಂಬುದನ್ನು ಈ ಕಾದಂಬರಿಯು ಒತ್ತಿ ಹೇಳುತ್ತದೆ ಎಲ್ಲಮ್ಮನ ಗುಡ್ಡದಲ್ಲಿ ಸಿಕ್ಕ ಪುಟ್ಟ ಹೆಣ್ಣುಮಗು ಸರಿಯಾದ ಪಾಲಕರ ಕೈಯಲ್ಲಿ ಸಿಕ್ಕು , ಬೆಳೆದು ದೊಡ್ಡವಳಾಗಿ ಸ್ವಾಭಿಮಾನದ ಬದುಕನ್ನ ಬದುಕುತ್ತಿದ್ದಾಳೆ ಎಂಬುದನ್ನು ಈ ಕಾದಂಬರಿಗಳು ತಿಳಿಸುತ್ತದೆ. ಎಷ್ಟು ಮಕ್ಕಳು ಅನಾಥರಾಗಿ ಬದುಕುತ್ತಿದ್ದಾರೆ. ಅವರಿಗೂ ಒಂದು ಸೂರು ಸಿಕ್ಕರೆ ಅವರು ಕೂಡಾ ಸಮಾಜದಲ್ಲಿ ಉತ್ತಮರಾಗಿ ಬೆಳೆಯಬಹುದಲ್ಲ ಎಂಬುವ ಪ್ರಶ್ನೆ ಓದುಗರಲ್ಲಿ ಕಾಡದೇ ಇರದು.
ಮಕ್ಕಳು ನಾವು ಹೇಳುವುದನ್ನು ಮಾಡುವುದಿಲ್ಲ. ನಾವು ಮಾಡುವುದನ್ನು ಅನುಸರಿಸುತ್ತಾರೆ. ವರ್ಗ ಕೋಣೆಯಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ಕಲಿಯಬೇಕೆಂದರೆ ಅವರ ಮಟ್ಟಕ್ಕೆ ಇಳಿದು ನಾವು ಕಲಿಸಬೇಕು. ಶಾಲೆಗಳಲ್ಲಿ ಎಲ್ಲಾ ರೀತಿಯ ಮಕ್ಕಳು ಬರುತ್ತಾರೆ. ಬುದ್ಧಿವಂತರು, ಸೃಜನಶೀಲರು, ಕಲಿಕೆಯಲ್ಲಿ ಹಿಂದುಳಿದವರು, ವಿಶೇಷ ಚೇತನ ಮಕ್ಕಳು ಈ ರೀತಿಯ ಎಲ್ಲಾ ಮಕ್ಕಳಿಗೆ ಸಮನ್ವಯ ಶಿಕ್ಷಣದ ಮೂಲಕ ಕಲಿಸಿದರೆ ಅವರು ಉತ್ತಮವಾಗಿ ಕಲಿಯಬಹುದು. ಪಕೀರ ಎನ್ನುವ ವಿದ್ಯಾರ್ಥಿ ಬುದ್ದಿಮಾಂದ್ಯನಾಗಿದ್ದರೂ ಶಾಲಿನಿ ಟೀಚರ್ ದೆಸೆಯಿಂದ ಸಾಮಾನ್ಯರಂತೆ ವರ್ತಿಸುವುದನ್ನು ಕಲಿಯುತ್ತಾನೆ. ಕಸ್ತೂರಿ ಎನ್ನುವ ವಿದ್ಯಾರ್ಥಿನಿ ತೊದಲು ಮಾತನಾಡುತ್ತಾಳೆ. ಆದರೆ ಅವಳು ಚೆನ್ನಾಗಿ ತನ್ನ ಮನಸ್ಸಿನ ಮಾತುಗಳನ್ನು ಬರೆಯುತ್ತಾಳೆ. ಇಂತಹ ಅನೇಕ ಸನ್ನಿವೇಶಗಳು ಶಿಕ್ಷಣದ ಮಹತ್ವವನ್ನು ತಿಳಿಸುತ್ತವೆ. ಶಿಕ್ಷಣವೇ ಶಕ್ತಿ ಎಂಬುದನ್ನು ಈ ಕಾದಂಬರಿಯಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಕಾದಂಬರಿ ಕೊನೆಯವರೆಗೂ ನಮ್ಮಲ್ಲಿ ಕುತೂಹಲ ರೋಮಾಂಚನ, ದುಃಖ, ಸಂತೋಷ, ತೊಳಲಾಟ ಎಲ್ಲವನ್ನುಂಟುಮಾಡುತ್ತದೆ.
ಮಗಾ‌‌ ಜೀವನದಲ್ಲಿ ಬಂದಹಾಗೆ ಹೋಗಬೇಕು. ನೀನಾರೋ.. ನಾನಾರೋ..‌ ಆದರೂ ಅಪ್ಪ ಮಗಳ ಸಂಬಂಧ, ಹೇಗಿದೆ ನೋಡು. ಇದರಲ್ಲಿ ಆನಂದ ಪಡಬೇಕು. ನಿರಾಶೆ, ನೋವು ಸಮೀಪಕ್ಕೆ ತಂದುಕೊಳ್ಳಬೇಡಾ. ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದಿದ್ದರು. ಶಾಲಿನಿ ಟೀಚರ್ ಗೆ ಕಣ್ಣಂಚಿನಲ್ಲಿ ಬಂದ ಹನಿ ನೀರನ್ನು ಒರಿಸಿಕೊಂಡರು. ಒಬ್ಬ ಅನಾಥ ಮಗುವಿಗೆ ಆಶ್ರಯ ನಿಂತ ಅಪ್ಪನ ಕಥೆ ಎಂದುಕೊಳ್ಳಬಹುದು ಅದರಂತೆ ತನ್ನ ನೋವುಗಳನ್ನು ಮರೆತು ತನ್ನ ಶಾಲೆಗೆ ಬರುವ ಬುದ್ದಿಮಾಂದ್ಯ ಮಗುವಿಗೆ ಎಲ್ಲರಂತೆ ಬದುಕಲು ದಾರಿ ತೊರುವ ಗುರುಮಾತೆ ಶಾಲಿನಿ ಮೇಡಂ ರವರ ಕಥೆ ಓದುಗರ ಮನ ಕಲಕುತ್ತದೆ.
ಈಗಾಗಲೇ ಈ ಕಾದಂಬರಿಯು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಅವುಗಳಲ್ಲಿ ಪ್ರಮುಖವಾಗಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ, ಜಿ ಬಿ ಹೊಂಬಾಳ ರಾಜ್ಯ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ವಾಸುದೇವ ಬೋಪಾಲಂ ದತ್ತಿ ಪುರಸ್ಕಾರ, ಅಂತೆಯೇ ಈ ಕೃತಿಯು ಇನ್ನೂ ಅನೇಕ ಪ್ರಶಸ್ತಿಗಳನ್ನು ಪಡೆಯುವುದರಲ್ಲಿ ಸಂದೇಹವಿಲ್ಲ. ಲೇಖಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

- ಜಗದೀಶ್‌ ಚಲವಾದಿ