ಮಕ್ಕಳೆಂದ್ರೆ ಹೀಗೇನೇ
ಬರಹ
ಪಿಕ್ನಿಕ್ ಹೊರಟಿತ್ತು ನೂರು ಮಕ್ಕಳ ದಂಡು
ಅತ್ತಿಂದಿತ್ತ ಪುಟಿಯುತ್ತಿತ್ತು ಚೆಂಡು
ಟ್ರೈನಿನಲ್ಲೆಲ್ಲಾ ಇವರದೇ ದಾಂಧಲೆ
ಯಾರೂ ಹಾಕುವವರಿಲ್ಲವೇ ಸಂಕೋಲೆ
ಪೋಷಕರ ಕಾಟವಿಲ್ಲ ಈ ಬಾಲರಿಗೆ
ಬಾಲವಿಲ್ಲದವರಿಗೂ ಚಿಗುರಿತ್ತು ಬಾಲ
ನಿದ್ರಿಸುತಿಹ ಕೆಲ ಮಕ್ಕಳು ಮತ್ತು ಮಾಸ್ತರರು
ತುಂಟರು ಹಚ್ಚಿದವರ ಮೊಗಕೆ ಪೇಸ್ಟು, ಕ್ರೀಮು, ಲಿಪ್ಸ್ಟಿಕ್ಕು
ಶಾಲೆಯಲಿ ಸಿಂಹ ಸದೃಶರಾದ ಗುರುಗಳು
ತುಂಟಾಟಗಳ ಮುಂದಿಲ್ಲಿ ನಸು ನಗುವ ಇಲಿಗಳು
ಮನೆಯಲಿ ಸಿಗದಿಂತಹ ಮುಕ್ತ ವಾತಾವರಣ
ಬಾಲಗಳ ಮನ ಮರ್ಕಟವಾಗಲು ಕಾರಣ
ಮುಗ್ಧರು ತೀರಿಸಿಕೊಂಡಿದ್ದರು ಪುಂಡರ ಮೇಲಿನ ಸೇಡು
ಈ ಮಧ್ಯೆ ಹುಡುಗರಿಗೆ ಬಗೆದರು ಹುಡುಗಿಯರು ಕೇಡು
ಮೊದಲಾಗಿತ್ತು ಬಾಲರಿಗೆಲ್ಲರಿಗೂ ಉಪದೇಶ
ಕಡೆಗೆ ಮಾಸ್ತರರಿಂದಾಗಿತ್ತು ಆದೇಶ
ಹೊಟ್ಟೆ ಹಸಿಯಲು ಮಾಯವಾಗಿತ್ತೆಲ್ಲರ ದಾಂಧಲೆ
ಮರುಕಳಿಸಿತು ಮುಗ್ಧತೆ ಚಿಣ್ಣರ ಮೊಗದ ಮೇಲೆ
ಊಟವಾದೊಡನೆಯೇ ನಿದ್ರಾದೇವಿಯಾಸರೆ
ನಿಜಕ್ಕೂ ಮಕ್ಕಳು ಕಾಣದಾ ದೇವರೇ!