ಮಕ್ಕಳ ಕಿರುನಾಟಕ `` ಶ್ರೀಕೃಷ್ಣ ಕೌತುಕ ''

ಮಕ್ಕಳ ಕಿರುನಾಟಕ `` ಶ್ರೀಕೃಷ್ಣ ಕೌತುಕ ''

 

 
 
ಮಕ್ಕಳ ಕಿರುನಾಟಕ
`` ಶ್ರೀಕೃಷ್ಣ ಕೌತುಕ ''


ಶ್ರೀಕೃಷ್ಣನ ಕಥೆ ಹೇಳುವ ಮೊದಲು ಗಣಪನಿಗೊಂದಿಸುವೆ |
ಪ್ರಥಮದಿ ಗಣಪನಿಗೆ ||
ಈ ಕಾರ್ಯಕೆ ಯಶ ಕರುಣಿಸು ಎಂದು ಶಾರದೆಗೆ ಮಣಿವೆ |
ಗುರುವಡಿಗಳ ನೆನೆವೆ ||
ಸೇರಿದ ನಿಮಗೆಲ್ಲರಿಗಿದೋ ನಮನವ ಹೇಳುತ ಕೈ ಮುಗಿವೆ |
ಸ್ವಾಗತಿಸುತ ಕರೆವೆ ||
ತೋರಿಸಿ ಪ್ರೀತಿಯ ಕಿರಿಯರ ಆಟಕೆ ಎಂದೆನ್ನುತ  ನುಡಿವೆ |
ಹಿರಿಯರೆದೆ ಬರಿದೆ ?


ಸೂತ್ರಧಾರ 
  :
ಸೇರಿದಂತಾ ಬಂಧು ಬಾಂಧವರಿಗೆಲ್ಲಾ ಶರಣು ಶರಣಾರ್ಥಿಗಳು.  ಕೈ ಜೋಡಿಸಿ ತಲೆಬಾಗಿ ನಮಸ್ಕಾರ ಹೇಳ್ತಾ ಇದ್ದೀವ್ರೀ . ತಾವು ಮನಸ  ಮಾಡಿ ಕುಂತು ನಮ್ ಆಟಾ ನೋಡಾಕ್ ಶುರು ಮಾಡೀರಿ ಅಂದಮೇಲೆ ನಿಮ್ ದಯಾ ನಮ್ ಮೇಲೆ ಬಿದ್ದಾಂಗಾತು. ಅದೇ ನಮಗ ಬಲ ನೋಡ್ರಪಾ. ನೀವು ಹೀಂಗಾ ಸುಮ್ಗಾ ಕುಂತ್ರಾ ನಾವು ಛಲೋ ನಾಟಕ ಆಡ್ತೀವಿ.
                  ಸುಮ್ಗಾ ಕೂರೂಣನ್ದ್ರಾ ಹೀಂಗಾ ಸುಮ್ಗಾ ಕುಡ್ರುದಲ್ಲಾ, ಒಳ್ಳೊಳ್ಳೇ ಸಂದರ್ಭದಾಗ ಮೆಚ್ಚುಗೀ ಕೊಡ್ರೀ,  ಚಪ್ಪಾಳೆ ತಟ್ರೀ, ನಗು ಮುಂದ ಜೋರಾಗಿ ನಗ್ರೀ, ಆತೇನೂ ? ನಾವೇನು ನಾಟಕ್ ಕಂಪನಿ ನಟರಲ್ಲ ತಗೋರಿ. ನಾವು ಬರೀ ಶಾಲೆ ಮಕ್ಳು. ಯಾಕ ಇದ್ನೆಲ್ಲ ಹೇಳಾಕ್ ಹತ್ತೀನಂದ್ರ , ಏನಾರಾ ತಪ್ಪು ಗಿಪ್ಪು ಆತು ಅಂದ್ರ, ತೀರಾ ತಲೀಗ್ ತಗಳಾಕ್ ಹೋಗ ಬ್ಯಾಡ್ರಿ. ಸುಮ್ಗಾ ನಕ್ಕು ಬಿಟ್ಟು ಬಿಡ್ರಿ. ಒಳ್ಳೆದೇನಾರ ಕಂಡ್ರೆ ಹೇಳಾಕ್ ಮರೀ ಬ್ಯಾಡ್ರೀ ಮತ್ತ
.ಗಾಯಕ  : ಏ, ಏ, ಏ..,   ಸೂತ್ರಧಾರ ಏನು ಭಾಷಣ ಭಿಗೀತೀಯೋ ಯಪ್ಪಾ . ನಿನ್ನ ಭಾಷಣ ಕೇಳಿ ಬೇಜಾರಾಗಿ ಎದ್ದು ಹೋಗಿ ಬಿಟ್ಟಾರೋ ಜನ.  ತೀರಾ ಹಂಗೆಲ್ಲಾ ಹೇಳಾಕ್ ಹೋಗ್ಬ್ಯಾಡೋ,   ಜನ ತಿಳ್ದೋರ್ ಇದ್ದಾರಾ, ಅವರೂ ಅರ್ಥ ಮಾಡ್ಕೊತಾರ.
ಸೂತ್ರಧಾರ    : ಹಾಂಗತೀಯೇನೋ  ಗಾಯಕ ? ಆಟ ಶುರು ಮಾಡೂನನ್ತೀ, ಯಾವ ಕಥಿ ಆಡೂನೂ ?
ಮುತ್ಯಾ : ಏ ಈಗ ಶ್ರಾವಣ ಮಾಸ ಕಾಣ್ತಮಾ,  ಕೃಷ್ಣ ಪಕ್ಷದ ಅಷ್ಟಮಿ ದಿವಸ ನಮ್ಮ ನಂದ ಕಿಶೋರ ಕೃಷ್ಣ ಹುಟ್ಟಿದ್ನಲಪ್ಪಾ, ಅವನ ಕಥೀನ ಆಡೂನೂ, ಏನಂತೀರೋ ತಮ್ಮಂದಿರಾ ?
ಮೇಳದವರು : ವಾ ವಾ ವಾ ಎಂಥಾ ಕಥೀ ಆರ್ಸೀಯೋ ಮುತ್ಯಾ ಶಾಭಾಶ್ ಶಾಭಾಶ್
ಸೂತ್ರಧಾರ    : ಯಾರವನು ಕೃಷ್ಣ !   ವಾಸುದೇವ ದೇವಕಿಯರ ಎಂಟನೆ ಕಂದ
ಗಾಯಕ  : ಮುಂದೆ ಗೋಕುಲದಲ್ಲಿ ಬೆಳೆದು ಬಂದ
ಸೂತ್ರಧಾರ    : ಗೋವುಗಳನ್ನು ಕಾಯುತ್ತಾ ನಿಂದ
ಗಾಯಕ  : ಗೋಪಿಕೆಯರ ಮನೋಹರ ಮುಕುಂದ
ಸೂತ್ರಧಾರ   : ಕೊಳಲೂದುವುದೇನು ಚೆಂದ
ಗಾಯಕ  : ಮುಂದೆ ಮಾವ ಕಂಸನನ್ನೇ ಕೊಂದ
ಸೂತ್ರಧಾರ    : ಧರ್ಮವನ್ನು ಪಾಲನೆಗೆ ತಂದ,    ಏನು ಹೇಳಳಪ್ಪೋ,     ಅವನು ಗೋವಿಂದಾ | ಗೋವಿಂದ

        ಮೇಳದವರು  :         ಏನು ಹೇಳಲಪ್ಪೋ , ಅವನು ಗೋವಿಂದಾ | ಅವ ಬಲು ಚೆಂದಾ ||
                                                ತಾನಾಗಿ ಹುಟ್ಟಿ ಬಂದ ನಭದಿಂದ | ಆ ಲೋಕದಿಂದ ||ಪ||
                                              ಮಥುರೆಯಲ್ಲಿ ಹುಟ್ಟಿ ಗೋಕುಲಕ್ಕೆ ಬಂದ | ಆತ |
                                               ಚತುರನಾಗಿ ಗೊಲ್ಲರೊಳಗೆ ಬೆಳೆದು ಕೊಂಡ ||
                                              ನೀತಿ ತಪ್ಪಿದಂತಾ ಜನರ ಹಿಡಿದು ಬಡಿದು ಬುದ್ಧಿ ಹೇಳಿ |
                                              ಪ್ರೀತಿಯಿಂದ ಹಳ್ಳಿಯಲ್ಲಿ ದನಗಳನ್ನು ಕಾಯುತ್ತಿದ್ದ ||

ಕಥೆಗಾರ ೧ : ಅತ್ಯಂತ ದುಷ್ಟನಾದ ಕಂಸ ರಾಜ ಮಥುರೆಯನ್ನಾಳುತ್ತಿದ್ದ  . ತನ್ನ ತಂದೆ ತಾಯನ್ದಿರನ್ನೂ, ತಂಗಿ ಭಾವನ್ದಿರನ್ನೂ, ಊರ ಸಜ್ಜನರನ್ನೂ, ಬಹಳ ಹಿಂಸಿಸಿ, ಬಂಧಿಸಿ ಕಾರಾಗೃಹದಲ್ಲಿರಿಸಿದ್ದ. ಅವನಿಗೆ ತಂಗಿಯಾದ ದೇವಕಿಯ ಹೊಟ್ಟೆಯಲ್ಲಿ ಹುಟ್ಟಿ ಬರುವ ಎಂಟನೆ ಮಗುವಿನ ಕುರಿತಾಗಿ ಭಯ.
ಕಥೆಗಾರ ೨  : ಅದಕ್ಕಾಗಿ ಅವನು ವಸುದೇವ ದೇವಕಿಯರನ್ನು ಬಂಧನದಲ್ಲಿರಿಸಿದ್ದ. ಕೃಷ್ಣನು ಹುಟ್ಟಬಾರದು. ಹುಟ್ಟಿದರೂ ಬದುಕಬಾರದು ಎಂದೆಣಿಸಿ ತನ್ನ ಕ್ರೂರತೆಯಿಂದ ದೇವಕಿಯ ಎಳೂ ಮಕ್ಕಳನ್ನೂ ಕೊಂದ. ಆದರೂ ಕೃಷ್ಣ ಹುಟ್ಟಿ ಬಂದ.
ಕಥೆಗಾರ ೩ : ಶ್ರಾವಣ ಮಾಸದ ಬಿರುಸಾದ ಮಳೆ ಕೃಷ್ಣ ಪಕ್ಷದ ಅಷ್ಟಮಿಯಂದು ನಡು ರಾತ್ರಿಯ ಕಗ್ಗತ್ತಲೆಯಲ್ಲಿ ಮಥುರೆಯ ನಿವಾಸಿಗಳೆಲ್ಲಾ ಬೆಚ್ಚಗೆ ಹೊದ್ದು ಮಲಗಿ ನಿದ್ರಿಸುತ್ತಿದ್ದಾಗ ಕೃಷ್ಣ ಹುಟ್ಟಿದ. ಕಾವಲುಗಾರರೆಲ್ಲಾ ಮಲಗಿರುವುದನ್ನು ಕಂಡ ವಸುದೇವ, ಈ ಮಗುವಾದರೂ ಉಳಿಯಲೆಂದು ಆ ಹಸುಗೂಸನ್ನು ಎತ್ತಿಕೊಂಡು ಗೋಕುಲಕ್ಕೆ ತಂದ.
ಕಥೆಗಾರ ೪  : ತುಂಬಿ ಹರಿಯುತ್ತಿದ್ದ ಯಮುನೆ ದಾರಿ ಮಾಡಿ ಕೊಟ್ಟಳು. ನಂದ ಗೋಕುಲದ ಯಜಮಾನನಾದ ನಂದಗೋಪನ ಮಡದಿ ಯಶೋದೆ, ಅದೇತಾನೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ನಂದಗೋಪನ ಒಪ್ಪಿಗೆಯಂತೆ ವಸುದೇವನು ಮಗುವನ್ನು ಬದಲಾಯಿಸಿಕೊಂಡು ಬಂದು ಮತ್ತೆ ಕಾರಾಗೃಹ ಸೇರಿದನು. ಕಾವಲುಗಾರರು ಇನ್ನೂ ನಿದ್ರಿಸುತ್ತಲೇ ಇದ್ದರು.
ಕಥೆಗಾರ ೫  : ಮುಂಜಾನೆ ಕಂಸನಿಗೆ ದೇವಕಿಯ ಎಂಟನೇ  ಮಗು ಜನಿಸಿದ ಸುದ್ದಿ ತಿಳಿಯಿತು. ಆತ ಬಂದು ಅಲ್ಲಿದ್ದ ಮಗುವನ್ನೆತ್ತಿ ಅಪ್ಪಳಿಸಲು ತೊಡಗಿದ. ಆದರೆ ಅವನ ಹಿಡಿತದಿಂದ ಚಿಮ್ಮಿದ ಮಗುವು ಪಾರಾಗಿ ಹೋಯಿತು. ಕಂಸನಿಗೆ ಭಯವಾಯಿತು.

                   ಮೇಳದವರು  :        ನಂದಗೋಕುಲದಲ್ಲಿ ಚೆಂದ | ಆನಂದದಿಂದ ||
                                                        ಆಡೀದ ಸುಂದರ ಮುಕುಂದ ||ಪ||
                                                    ಕೊಂಬನೂದಿದ ಬೆಳಗಾಗೆ | ಕೆಳುತಲೆದ್ದು |
                                                     ನಮ್ಬೂಗೆ ಗೊಲ್ಲರೊಂದುಗೂಡೆ ||
                                                     ಬಂದಾರೆಲ್ಲಾರು ಹರಿ ಮುಂದೆ | ತಮ್ಮೊಂದಿಗೆ |
                                                      ತಂದಾರೆಲ್ಲರು ಕರು ಮಂದೆ ||೧||
                                                     ನಂದಗೋಕುಲದಲ್ಲಿ ಚೆಂದ | ಆನಂದದಿಂದ ||
                                                                   ಆಡೀದ ಸುಂದರ ಮುಕುಂದ ||ಪ||
                                                       ಬಣ್ಣ ಬಣ್ಣದ ಮಾಲೆ ಹಾಕಿ | ಚಿನ್ನದ ವಂಕಿ |
                                                        ರನ್ನ ದಂಚಿನ ಜರಿ ಟೋಪಿ ||
                                                       ಕೋಲು ಕೊಳಲು ಬಾಲರೀಗೆ | ಕಂಬಳಿ ಹೊದ್ದು |
                                                       ಸಾಲು ಸಾಲಿನ ಮೆರವಣಿಗೆ ||೨|| 
                                                       ನಂದಗೋಕುಲದಲ್ಲಿ ಚೆಂದ | ಆನಂದದಿಂದ ||
                                                       ಆಡೀದ ಸುಂದರ ಮುಕುಂದ ||ಪ||


ಬಲರಾಮ  : ನೋಡು ಕೃಷ್ಣಾ ಈ ಮುಂಜಾವು ಎಷ್ಟೊಂದು ಸುಂದರವಾಗಿದೆ. ಈ ಸಾವಿರಾರು ಹಸುಗಳೂ, ಕರುಗಳೂ, ಗೊಲ್ಲಬಾಲಕರಿಂದ ನಮ್ಮ ಈ ಕೂಟವು ಎಷ್ಟು ದೊಡ್ಡದಾಗಿದೆ  ನೋಡು

ಕೃಷ್ಣ : ಹೌದಣ್ಣಾ , ಸದ್ಯಕ್ಕೆ ಸಂಕಟಗಳೆಲ್ಲಾ ಪರಿಹಾರವಾದಂತಾಗಿದೆ. ಪೂತನೆ ಮತ್ತು ಭಕರ ಸಾವಿನಿಂದ ಹಗೆತನ ಸಾಧಿಸಲು ಬಂದ ಅವರ ಸೋದರನಾದ ಅಘಾಸುರ ನನ್ನಿಂದ ನಾಶವಾದ. ಇದರಿಂದ ಗೋಕುಲವಾಸಿಗಳಿಗೆ ಹೊಸ ಹುರುಪು ಬಂದಿರಬೇಕು .
ಮಕರಂದ  : ನಿಜ ಕೃಷ್ಣ ಹೆಬ್ಬಾವಿನ ಬಾಯಿಗೆ ಇಡೀ  ನಮ್ಮ ಗೊಲ್ಲ ಬಾಲಕರ  ಸಮುಉಹವೇ  ಸಿಕ್ಕು  ಬಿದ್ದಿತ್ತಲ್ಲ . ಆದರೆ  ನಿನ್ನನ್ನು ನುಂಗಿ ಜೀರ್ಣಿಸಿ ಕೊಳ್ಳಲಾಗದೆ ಅಘಾಸುರ ಬಿದ್ದು ಸತ್ತು ಹೋದ . ನೀನು  ನಮ್ಮೆಲ್ಲರ  ಪಾಲಿನ  ದೇವರು  ಕೃಷ್ಣ .
ಸುಬಲ  : ( ವರೂಥಪನನ್ನು ಹೊತ್ತು ತರುತ್ತಾರೆ ) ಕೃಷ್ಣಾ  ಕೃಷ್ಣಾ ಇವನಿಗೆ  ಇನ್ನೂ ಎಚ್ಚರವಾಗಿಲ್ಲ. ಮೂರ್ಛೆ  ಹೋದಂತೆ  ಬಿದ್ದಿದ್ದಾನೆ  ನೋಡು.
ವಿಶಾಲ  : ಇವನು ಸತ್ತು  ಹೋದನೇನೋ ಕೃಷ್ಣ ?
ಋಷಭ : ನಿನ್ನೆ ನಮ್ಮೊಟ್ಟಿಗೆ ಆಡ್ತಾ ಇದ್ದವ , ಆ ಹೆಬ್ಬಾವಿನ ಬಾಯಿಗೆ ಸಿಕ್ಕಿ ಬಿದ್ದು ಸತ್ತೇ ಹೋದ. ನಿನ್ನ ದಯೆಯಿಂದ ನಾವೆಲ್ಲಾ ಬದುಕಿದೆವು. ಪಾಪ ಇವನು ಮಾತ್ರಾ ಎದ್ದೇ ಇಲ್ಲ. ಏನು ಮಾಡೋದೋ ಕೃಷ್ಣಾ ?
ಅಂಶು : ಇವನ ಮನೆಯವರೆಲ್ಲಾ ಅಳ್ತಾ ಇದ್ದಾರೆ ಕೃಷ್ಣಾ, ನಾವೇ ಇವನನ್ನ ಅಡಗಿಸಿದ್ವಿ. ಎದ್ದ ಮೇಲೆ ಕಳಿಸಿದ್ರಾಯ್ತು ಅಂತ. ಇವನಿಗೆ ಇನ್ನೂ ಏಚ್ಚರಾನೆ ಆಗ್ತಿಲ್ಲ. 
ಸುಬಲ  : ನೀರು ಹೊಯ್ದರೂ ಏಳ್ತಿಲ್ಲ. ಏನು ಮಾಡೋದು ಕೃಷ್ಣ ?

ಬಲರಾಮ :  ಕೃಷ್ಣಾ , ಅಘಾಸುರನಿಂದ ಆದ ಆಘಾತ ಈ ವರೂಥಪನನ್ನು ಬಲಿ ತೆಗೆದು ಕೊಂಡಿರಬೇಕು.  ಈಗೇನು ಮಾಡುವುದು ಕೃಷ್ಣಾ ?  
ಕೃಷ್ಣ : ಗಾಬರಿ ಪಡಬೇಡಿ ಗೆಳೆಯರೇ ನಮ್ಮ ಮಿತ್ರ  ವರೂಥಪನು ವಿಶ್ರಾಂತಿ ಪಡೆಯುತ್ತಿದ್ದಾನೆ. ನೆರಳಿನಲ್ಲಿರಿಸಿ ಅವನನ್ನು ನೋಡಿಕೊಳ್ಳಿ. ನನಗೆ ಮಾತ್ರಾ ಈಗ ತುಂಬಾ ಹಸಿವೆಯಾಗುತ್ತಿದೆ. ತಿನ್ನಲು ಈಗ ನಮ್ಮಲ್ಲಿ ಏನುಂಟು ?
ಎಲ್ಲರು : ಏನು ಇಲ್ಲ ಕೃಷ್ಣ ಬುತ್ತಿಯೆಲ್ಲಾ ಬರಿದಾಗಿದೆ.
ಕೃಷ್ಣ : ನೋಡಿ ಅಲ್ಲಿ. ಆ ಹಳ್ಳಿಯಲ್ಲಿ ಒಂದಷ್ಟು ಜನ ಯಾಗ ಮಾಡುತ್ತಿದ್ದಾರೆ. ನೀವು ಕೆಲವರು ಅವರಲ್ಲಿಗೆ ಹೋಗಿ , ನನಗಾಗಿ ಸ್ವಲ್ಪ ಆಹಾರ ಬೇಡಿ ತನ್ನಿ.
ಸುಬಲ  : ಅವರು ಕೊಡುತ್ತಾರೇನೋ ಕೃಷ್ಣ ? ಅವರು ಮಡಿ ಮಡಿ ಮಡಿ ಎಂದು ಬಡಿದು ಓಡಿಸುತ್ತಾರಷ್ಟೇ   .
ಋಷಭ :  ಹೌದು ಕೃಷ್ಣಾ ಅವರು ಬೈದರೇ ? ಕದ್ದು ತರೋದಾ ?
ಕೃಷ್ಣ : ಬೇಡ ಬೇಡ ಹೋಗಿ ಭಿಕ್ಷೆ ಅಂತ ಕೇಳಿ , ಅವರು ಸಜ್ಜನರೆ ಆದರೆ ಕೊಡುತ್ತಾರೆ. ನಿರಾಕರಿಸಿದರೆ ಬಂದು ಬಿಡಿ . ಮತ್ತೆ ನೋಡೋಣ .
ಗೊಲ್ಲರು  : ಸರಿ  ಸರಿ  ಕೃಷ್ಣಾ  ನಾವು  ಹೋಗಿ ಬರುತ್ತೇವೆ . ಆಹಾರವನ್ನು ತರುತ್ತೇವೆ . ( ಹೋಗುವರು )
ಬಲರಾಮ : ಕೃಷ್ಣಾ, ನೀನೆಣಿಸಿದಂತೆ  ಯಜ್ಞಕ್ಕಾಗಿ ಸಿದ್ಧ ಪಡಿಸಿದ ಭಕ್ಷ್ಯ ಭೋಜ್ಯಗಳನ್ನು ನಮಗೆ ನೀಡುವರೆಂದು ನನಗೆ ಬರವಸೆಯಿಲ್ಲ.
ಕೃಷ್ಣ :  ಹೌದಣ್ಣಾ ನನಗೂ ನಂಬುಗೆಯಿಲ್ಲ. ಆದರೆ ಊಟ ಬೇಕೇ ಬೇಕು. ಏನು ಮಾಡೋಣ ? ಹ್ಞಾಂ ಇದೇ  ಸರಿ.  ಅಂಶು , ವಿಶಾಲರೆ ನೀವೂ ಆ ಯಾಗ ಶಾಲೆಯ ಬಳಿಗೆ ಹೋಗಿರಿ. ಅವರೇನಾದರೂ ನಮ್ಮವರಿಗೆ ಊಟ ಕೊಡಲೊಪ್ಪದಿದ್ದರೆ, ನೀವು ಅವರ ಮಡದಿಯರ ಬಳಿಗೆ ಹೋಗಿ " ಅಮ್ಮಾ ತಾಯೀ ಭಿಕ್ಷಾ" ಅಂತ ಕೂಗಿ. ಆಮೇಲೆ ಅವರು ಬಂದು ನೋಡಿದಾಗ ಬಲರಾಮ ಕೃಷ್ಣರಿಗೆ ತುಂಬಾ ಹಸಿವೆಯಾಗಿದೆಯಂತೆ, ತಿನ್ನುವುದಕ್ಕೆ ಏನಾದರೂ ಕೊಡುವಿರಾ ? ಅಂತ ಕೇಳಿ. ಅವರು ಕರುಣಾಮಯಿಗಳು. ಇಲ್ಲವೆನ್ನದೆ ಕೊಡುತ್ತಾರೆ. ಹೋಗಿ ಬನ್ನಿ.
ವಿಶಾಲ  : ಆದೀತು ಕೃಷ್ಣಾ , ಬಾರೋ ಅಂಶು ಹೋಗೋಣ ಊಟ ತರೋಣ . (ಹೋಗುವರು )
ಮಕರಂದ : ನೋಡು ಕೃಷ್ಣಾ ಮೊದಲು ಹೋದ ಸುಬಲ ಋಶಭರು ಬರುತ್ತಿದ್ದಾರೆ  . ಬರಿಗೈಯಲ್ಲಿದ್ದಾರೆ.
ಸುಬಲ :  ಅಯ್ಯೋ ಅಯ್ಯೋ ಕೃಷ್ಣಾ ! ಆ ಊಟವೂ ಬೇಡ, ಈ ಕಾಟವೂ ಬೇಡ. ಕಾಪಾಡು ಕೃಷ್ಣಾ  ಕಾಪಾಡು.
ಋಷಭ : ಕೃಷ್ಣಾ ಯಾಗ ಮಾಡುತ್ತಿದ್ದವರ  ಬಳಿಗೆ ಹೋಗಿ ಊಟವನ್ನು ಬೇಡಿದೆವು. ಅವರು ನಮ್ಮನ್ನು ಲೆಕ್ಕಿಸಲೇ ಇಲ್ಲ. ಹೊಮ ಮಾಡುವುದೇ ಅವರ ಕೆಲಸ. ನಮಗೆ ಊಟ ಕೊಡಲೇಯಿಲ್ಲ. ನಾವು ರಗಳೆ ಮಾಡಿದ್ದಕ್ಕೆ ಯಾಗದ ಯಜಮಾನರ ಆಳುಗಳು ನಮ್ಮನ್ನು ಬೈದು ಓಡಿಸಿದರು.
ಕೃಷ್ಣ : ಹೆದರಬೇಡಿ ಸ್ನೇಹಿತರೆ, ಅದೋ ಅಲ್ಲಿ ನೋಡಿ. ಒಂದಷ್ಟು ಜನ ತಾಯಂದಿರು ನಮಗಾಗಿ ಊಟವನ್ನು ತರುತ್ತಿದ್ದಾರೆ.
ವರೂಥಪ  : ಊಟವಾ ? ಎಲ್ಲಿ  ಎಲ್ಲಿ ? ಕೃಷ್ಣಾ ! ಎಲ್ಲಿ ?
ಗೊಲ್ಲರು : ಅಹ್ಹಹ್ಹಾ ! ಕೃಷ್ಣಾ ವರೂಥಪ ಎದ್ದು ಬಿಟ್ಟ.  ಕಣ್ಣು ಬಿಟ್ಟ , ಊಟಕ್ಕೆಂದು ಬಾಯಿ ಬಿಟ್ಟ.
ಸ್ತ್ರೀಯರು : ಕೃಷ್ಣಾ ಕೃಷ್ಣಾ ಈ ಪಾತ್ರೆಗಳಲ್ಲಿರುವ ರುಚಿರುಚಿಯಾದ ಭೋಜನವನ್ನು ನಿನಗಾಗಿ ನಿನ್ನವರಿಗಾಗಿ ತಂದಿದ್ದೇವೆ. ಸ್ವೀಕರಿಸು.
ಒಬ್ಬಳು : ಕೃಷ್ಣಾ ನಿನಗೆ ಹಿತಕರವಾದ ಭಕ್ಷ್ಯ, ಭೋಜ್ಯ, ಲೇಹ್ಯ, ಚೋಷ್ಯಗಳೆಲ್ಲವನ್ನು ತಂದಿದ್ದೇವೆ. ಈ ಗೊಲ್ಲ ಬಾಲರೊಂದಿಗೆ ತೆಗೆದುಕೋ ಕೃಷ್ಣಾ.
ಇನ್ನೊಬ್ಬಳು : ರಾಮ ಶ್ಯಾಮರು ನಮ್ಮ ಹಳ್ಳಿಯ ಸಮೀಪಕ್ಕೆ ಬಂದಿರುವರೆಂಬ ಸುದ್ದಿಕೇಳಿ ಎಷ್ಟು ಸಂತಸವಾಯಿತು ಗೊತ್ತೇ ಕೃಷ್ಣಾ ?
ಮತ್ತೊಬ್ಬಳು : ಲಗು ಬಗೆಯಿಂದ ನಿಮಗಾಗಿ ಸಿದ್ಧಪಡಿಸಿದ ಭೋಜನವಿದು. ಪರಿಶುದ್ಧವಾದ ಪಾತ್ರೆಗಳಲ್ಲಿ ತಂದಿದ್ದೇವೆ. ಊಟ ಮಾಡು ಕೃಷ್ಣಾ.
ಕೃಷ್ಣ : ತಾಯಂದಿರೆ, ನಿಮ್ಮ ಔದಾರ್ಯ ದೊಡ್ಡದು. ಆದರೆ ಯಾಗಕೆಂದು ಮೀಸಲಾಗಿದ್ದ ಆಹಾರ ಪದಾರ್ಥಗಳನ್ನು ನಮಗೆ ಕೊಡುತ್ತಿರುವುದು ನಿಮ್ಮವರಿಗೆ ಸರಿಬಾರದು ಅಲ್ಲವೇ ?
ಸ್ತ್ರೀಯರು : ಇಲ್ಲ ಕೃಷ್ಣ ಯಾಗಕ್ಕೆ ಬೇಕಾದ ಪದಾರ್ಥಗಳನ್ನು ಮೊದಲೇ ಸಿದ್ಧ ಪಡಿಸಿದ್ದೆವು. ನಮ್ಮವರ ಉಟೋಪಚಾರಕ್ಕೇನು ಕೊರತೆಯಿಲ್ಲ.  ಇದು ನಿಮಗಾಗಿಯೇ ನಾವು ಸಿದ್ಧಪಡಿಸಿ ತಂದ ಭಕ್ತಿಯ ಕಾಣಿಕೆ.  ದಯಮಾಡಿ ನಿರಾಕರಿಸಬೇಡ.
ಗೊಲ್ಲರು : ಬೇಡವೆನ್ನದಿರು ಕೃಷ್ಣ , ಎಲ್ಲರಿಗು ಹಸಿವೆಯಾಗಿದೆ.
ಕೃಷ್ಣ : ಸರಿ ಆದೀತು. ನಮಗೆಲ್ಲರಿಗೂ ಈ ತಾಯಂದಿರು ಪ್ರೀತಿಯಿಂದ ತಂದ ಊಟವನ್ನು ಬಡಿಸುತ್ತಾರೆ. ವರೂಥಪನೆಲ್ಲಿದ್ದಾನೆ ? ಅವನಿಗೆ ಮೊದಲು ನೀಡಿ. ಅವನು ತುಂಬಾ ಹಸಿದಿದ್ದಾನೆ.
 ವರೂಥಪ  : ನೀನೆಷ್ಟು ಜಾಣನೋ ಕೃಷ್ಣಾ.  ನಿಜವಾಗಿಯೂ ನನಗೆ ತುಂಬಾ ಹಸಿವೆಯಾಗಿದೆ. ನನಗೆ ಊಟ ಬೇಕು ಊಟ.

                            

ಮೇಳದವರು :      ಊಟ ಬೇಕು ಊಟ.|
                                ಊಟ ಮಾಡಿ ಆಟ

ಆಟ ಊಟ ನೋಟದಲ್ಲೇ |
ಪಾಠ  ಕೃಷ್ಣನ ಮಾಟ ||
     ಊಟ ಬೇಕು ಊಟ.|
ಊಟ ಮಾಡಿ ಆಟ |
ಆಟ ಅಡಿ  ಓಟ |
ಕಾಟವಿಲ್ಲ ಕೂಟದಲ್ಲಿ |
 ಈಟು ಗೊಲ್ಲರ ಪರಿಪಾಠ ||
ಊಟ ಬೇಕು ಊಟ.|
ಊಟ ಮಾಡಿ ಆಟ |

ವಿಶಾಲ : (ಓಡಿಬಂದು ) ಕೃಷ್ಣಾ ಕೃಷ್ಣಾ ಎಲ್ಲಿ ನೋಡಿದರೂ ನಮ್ಮ ಕರುಗಳೊಂದೂ ಕಾಣಿಸುತ್ತಿಲ್ಲ. ಎಲ್ಲಿ ಹೋದವೋ ಕೃಷ್ಣಾ ?
ಕೃಷ್ಣ :   ಗೆಳೆಯರೇ ಯಾರೂ ಹೆದರಬೇಡಿ. ನೀವು ನಿಶ್ಚಿಂತೆಯಿಂದ  ಊಟ ಮಾಡಿ. ಕರುಗಳನ್ನು ನಾನು ಹುಡುಕಿ ಬರುತ್ತೇನೆ . 

ಗೊಲ್ಲರು  :               ಊಟ ಬೇಕು ಊಟ.|ಊಟ ಮಾಡಿ ಆಟ |

ಬ್ರಹ್ಮ  : ಅಬ್ಬಾ! ಶ್ರೀ ಕೃಷ್ಣನ ಲೀಲೆಗಳು  ಅದ್ಭುತವಾಗಿದೆಯಲ್ಲಾ. ತನ್ನವರಿಗೆಂದು ಅದೆಷ್ಟು  ಪ್ರೀತಿ ತೋರಿಸುತ್ತಾನೆ. ಇವರ ಕರುಗಳನ್ನು ಅಡಗಿಸಿದ್ದು ನಾನು. ಬ್ರಹ್ಮನಾದ ನನ್ನ ಮಾಯೆಯನ್ನು ಮೀರಿದವನು ಅವನು. ಆದರೂ ನೋಡೋಣ ಏನು ಮಾಡುತ್ತಾನೆಂಬ ಕುತೂಹಲದಿಂದ ಮುಂದಾದರೆ ಕೃಷ್ಣನು ತನ್ನವರನ್ನು ಊಟ ಮಾಡುವಂತೆ ಹೇಳಿ  ತಾನೇ  ಕರುಗಳನ್ನು ಹುಡುಕಲು  ಬಂದಿದ್ದಾನೆ . ಈಗ ಅವನಲ್ಲಿ ಇನ್ನೊಂದು ಕೌತುಕದ ಆಟ ಆಡುತ್ತೇನೆ . ಕರುಗಳು  ಸಿಗದೇ ಬಳಲಿದ ಕೃಷ್ಣನಿಗೆ ಗೊಲ್ಲ ಗೆಳೆಯರೂ ಸಿಗದಿದ್ದಲ್ಲಿ ಆಗ ಏನು ಮಾಡುತ್ತಾನೆ ? ನೋಡೋಣ ಸರಿ ಸರಿ . ಒಳ್ಳೆ ತಮಾಷೆ ಆಟ ಅಡಿ ಬಿಡೋಣ.
ಕೃಷ್ಣ :   ಇದೇನಿದು ನಮ್ಮ ಕರುಗಳೊಂದು ಕಾಣಿಸುತ್ತಿಲ್ಲವಲ್ಲ. ಇದಾರ ಕೈಚಳಕ ? ಓ ಹೋ ! ಹೀಗೋ ಸಮಾಚಾರ . ರಾಕ್ಷಸರಿಗೆ ನಮ್ಮ ಕುರಿತಾಗಿ ಭಯವಾದರೆ ದೇವತೆಗಳಿಗೆ ಕುತೂಹಲ. ಎಷ್ಟು ಹೊತ್ತು ಅಡಗಿಸುತ್ತಾರೆ ನೋಡುತ್ತೇನೆ.
ಅಬ್ಬಾ ! ಇಲ್ಲಿದ್ದ ಗೋಪಾಲಕರೂ ಮಾಯವಾಗಿದ್ದಾರಲ್ಲ. ಇವರನ್ನು ನೀನೆ ಅದಗಿಸಿದೆಯಾ ಬ್ರಹ್ಮದೇವಾ ?   ಅಣ್ಣಾ, ಬಲರಾಮಣ್ಣಾ  .
ಬಲರಾಮ  : ಏನು ಕೃಷ್ಣಾ ? ಕರುಗಳೆಲ್ಲಿ ? ಗೋಪಾಲರೆಲ್ಲಿ ?
ಕೃಷ್ಣ  :  ನೀನೇನು ಮಾಡುತ್ತಿದ್ದೆ ಅಣ್ಣಾ ? ನಿದ್ರಿಸಿದ್ದೆಯಾ ?
ಬಲರಾಮ  : ಹೌದು ತಮ್ಮಾ ,  ಆ ತಾಯಂದಿರು ಕೊಟ್ಟ ಸೊಗಸಾದ ಊಟ ಮಾಡಿ ಈ ನೆರಳಿನಲ್ಲಿ ಒರಗಿದೆ ನೋಡು. ನಿದ್ರೆ ಬಂದುದೇ ಗೊತ್ತಿಲ್ಲ. ಈಗ ನೀನು ಕರೆದಾಗಲೇ ಎಚ್ಚರವಾದುದು. ಏನು ಸಮಾಚಾರ ?      ಕರುಗಳು ?
ಕೃಷ್ಣ  :  ಕರುಗಳೂ ಇದ್ದಾವೆ. ಗೋಪಾಲಕರೂ  ಇದ್ದಾರೆ. ಆದರೆ ಇಲ್ಲಿಲ್ಲ ಅಷ್ಟೇ. ಎಲ್ಲಿದ್ದರೇನು ಬರದಿದ್ದರೆ ನಾನಿಲ್ಲವೇ ?
ಬಲರಾಮ  : ಏನೋ ಕೃಷ್ಣ ನೀನು ಒಗಟು ಒಗಟಾಗಿ ಮಾತನಾಡುತ್ತಿದ್ದೀ. ಕರುಗಳೂ ಗೋಪಾಲಕರೂ ಇಲ್ಲದಿದ್ದರೆ ನೀನೇನು ಮಾಡ್ತೀ ?
ಕೃಷ್ಣ  :  ಬದಲೀ ನಿರ್ಮಾಣ ಮಾಡ್ತೇನೆ. ಅಣ್ಣಾ ನಿನಗೊಂದು ತಮಾಷೆ ತೋರಿಸುವೆ. ಕಣ್ಣು ಮುಚ್ಚಿಕೋ
ಬಲರಾಮ  :  ಹೂಂ ಮುಚ್ಚಿಕೊಂಡೆ.
ಕೃಷ್ಣ  :  ಈಗ ಕಣ್ಣು ತೆರೆದು ನೋಡು.
ಬಲರಾಮ  : ಅರೇ ಇದೇನಿದು ? ಎಲ್ಲ ಕರುಗಳೂ ಗೋಪಾಲಕರೂ ಕಾಣಿಸುತ್ತಿದ್ದಾರಲ್ಲ. ಇವರು ಇಷ್ಟು ಹೊತ್ತು ಎಲ್ಲಿದ್ದರು ? ಈಗ ತಟ್ಟನೆ ಬಂದುದು ಹೇಗೆ ? ನನಗೊಂದೂ ಅರ್ಥವಾಗುತ್ತಿಲ್ಲ.  ಹೇಳು ಕೃಷ್ಣಾ ಏನಿದು ?
ಕೃಷ್ಣ  :  ಗಾಬರಿ ಬೇಡಣ್ಣಾ , ಸೂರ್ಯ ಮುಳುಗುವ ಹೊತ್ತಾಯಿತು ಸಂಜೆ ಮರಳಿ ಊರಿಗೆ ಹೋಗಬೇಕಲ್ಲ. ಹಾಗಾಗಿ ಶುದ್ಧ ಮನಸ್ಸಿನಿಂದ ಅಮ್ಮಾ, ಗೋ ಮಾತೆಯರಿರಾ, ಕರುಗಳಿರಾ, ನನ್ನ ನೆಚ್ಚಿನ ಸಂಗಡಿಗರಿರಾ, ಬನ್ನಿ ಬನ್ನಿ ಸಂಜೆಯಾಯಿತು ಎಂದು ಕರೆದೆ. ನೋಡು ಎಲ್ಲವೂ ಬಂದೇ ಬಿಟ್ಟವು. ಬಾ ಹೋಗೋಣ.                

  ---೦೦೦---

ಬ್ರಹ್ಮ  : ಎಲಾ ! ಎಂತಹ ತುಂಟ ಕೃಷ್ಣ. ನಾನಿಲ್ಲಿ ಗೋಕುಲದ ಕರುಗಳನ್ನೂ, ಗೋಪಾಲಬಾಲರನ್ನೂ, ನನ್ನ ಮಾಯಾ ಹಾಸಿಗೆಯಲ್ಲಿ ಮಲಗಿಸಿದ್ದೇನೆ, ಆದರೆ ಅಲ್ಲಿ ಕೃಷ್ಣ ತನ್ನ ಮಾಯೆಯಿಂದ ಎಲ್ಲವನ್ನೂ ಬದಲಾಗಿ ಮಾಡಿಬಿಟ್ಟನಲ್ಲ.  ಈಗ ನಾನೇನು ಮಾಡಲಿ ? ಇದೊಳ್ಳೆ ಪೇಚಾಟವಾಯಿತಲ್ಲ. ಇವರೆಲ್ಲ ಎಚ್ಚರಾಗದಂತೆ ನೋಡಿಕೊಳ್ಳಬೇಕು. ಶ್ರೀಹರೀ ನಿನ್ನ ಲೀಲೆ ಅಗಾಧ.

ಮೇಳದವರು :        ಮಾಯಾ ಮಾಯಾ ಎಲ್ಲಾ ಮಾಯಾ |

ನಾನು ನೀನು ಅವರು ಇವರು ಎಲ್ಲ ಮಾಯಾ ||

ಗೊಲ್ಲ ಬಾಲರೆಲ್ಲ ಮಾಯ | ಪುಟ್ಟ ಕರುಗಳೆಲ್ಲ ಮಾಯ |
ಮಾಯಗಾರ ಹರಿಯೇ ಎಲ್ಲ ಕಡೆಗಳಲ್ಲಿ ಮಾಯಾ ಮಾಯ ||೧||
ಬ್ರಹ್ಮ ದೇವ ಸೋತು ಹೋದ | ಕಪಟ ಮಾಡಿ ಪೇಚು ಬಿದ್ದ |
ಗೊಲ್ಲ ಕಳ್ಳ ಕೃಷ್ಣ ಗೆದ್ದು | ಎಲ್ಲವನ್ನು ಮೀರಿಬಿಟ್ಟ ||೨||

ಕಥೆಗಾರ  ೧ : ತಮಾಷೆ ಮಾಡಲು ಬಂದ ಬ್ರಹ್ಮ ದೇವ ಸೋತುಹೋದ. ಅಸಲಿ ಗೊಲ್ಲರನ್ನೂ ಕರುಗಳನ್ನೂ ಏನು ಮಾಡುವುದು ? ಹೇಗೆ ಮರಳಿ ಬಿಡುವುದೂ ? ಎಂದು ಅವನಿಗೆ ತೋಚದೆ ಪೇಚಿಗೆ ಬಿದ್ದ.
ಕಥೆಗಾರ  ೨ : ಕೊಳಲಿನ ಧ್ವನಿಯನ್ನು ಕೇಳುತ್ತಲೇ ಗೋಪಿಯರು ತಟ್ಟನೆ ಮೇಲೆದ್ದು, ಶ್ರೀಕೃಷ್ಣನ ಸ್ವರೂಪಿಗಳಾಗಿದ್ದ  ಗೋಪಬಾಲಕರನ್ನು ತಮ್ಮ ತಮ್ಮ ಮಕ್ಕಳೆಂದೇ ಭಾವಿಸಿ ವರ್ತಿಸಿದರು. ಶ್ರೀಕೃಷ್ಣನೂ ಆ ಗೊಲ್ಲ ಬಾಲಕರ ರೂಪದಲ್ಲಿ ಮನೆಮನೆಗಳಲ್ಲಿ ಆನಂದವನ್ನು ತುಂಬಿದನು. ಗೋಪಿಕೆಯರು ಕೃಷ್ಣನನ್ನು ಬಹಳ ಉಪಚರಿಸಿದರು.
ಕಥೆಗಾರ  ೩  : ಶ್ರೀಕೃಷ್ಣನೇ ಕರುಗಳ ರೂಪದಲ್ಲಿ ಕೊಟ್ಟಿಗೆಗೆ ಬಂದಾಕ್ಷಣ ಆ ಹಸುಗಳು ಹಂಬಾ ಎಂದು ಕೂಗುತ್ತಿದ್ದವು. ನಾಗಾಲೋಟದಿಂದ ತಾಯಿಯ ಬಳಿಗೆ ಓಡೋಡಿ ಬಂದ ಕರುಗಳು ಲಲ್ಲೆಗರೆಯುತ್ತಿದ್ದವು. ಹಸುಗಳೂ ಆ ಕರುಗಳನ್ನು ಅಕ್ಕರೆಯಿಂದ ನೆಕ್ಕುತ್ತಾ , ತಮ್ಮ ಅಮೃತೋಪಮವಾದ ಹಾಲನ್ನು ಪ್ರೀತಿಯಿಂದ ಕೃಷ್ಣನಿಗೆ ಉಣಿಸುತ್ತಿದ್ದವು.
ಕಥೆಗಾರ  ೪  :  ಹೀಗೆ ನಂದ ಗೋಕುಲದಲ್ಲಿ ಎಲ್ಲರ ಮನೆಗಳಲ್ಲೂ ಕೊಟ್ಟಿಗೆಗಳಲ್ಲೂ ವಾಸಮಾಡುತ್ತಿದ್ದ ಶ್ರೀಕೃಷ್ಣ ಕೌತುಕದಿಂದ ಇಡೀ ಊರಿನಲ್ಲಿಯೇ ಕರುಗಳ ಗೋಪಾಲಕರ ನೆಪದಿಂದ ಕ್ರೀಡಿಸುತ್ತಾ ಆನಂದದ ಹೊನಲೇ ಹರಿಯಿತು. ಎಲ್ಲಿ ನೋಡಿದರೂ ಪ್ರೇಮಮಯ ವಾತಾವರಣವೇ ಸಂಭ್ರಮಿಸುತ್ತಿತ್ತು.
ಕಥೆಗಾರ  ೫  : ಹೀಗೆಯೇ ಸರಿ ಸುಮಾರು ಒಂದು ವರ್ಷವೇ ಕಳೆಯಿತು. ಊರಿನಲ್ಲಿ ಮೂಡಿದ ಹೊಸ ವಾತಾವರಣದಿಂದ ಎಲ್ಲರಿಗೂ ಸಂತಸವಾಯಿತಾದರು ಕಾರಣದ ಮೂಲ ಗೊತ್ತಾಗಲೇಯಿಲ್ಲ. ಒಬ್ಬೊಬ್ಬರೂ ತಮತಮಗೆ ತೋಚಿದಂತೆ ಆಡಿಕೊಳ್ಳತೊಡಗಿದರು .    

            ಮೇಳದವರು :          ಮಾಯಾ ಮಾಯಾ ಎಲ್ಲಾ ಮಾಯಾ |

ನಾನು ನೀನು ಅವರು ಇವರು ಎಲ್ಲ ಮಾಯಾ ||
ಗೊಲ್ಲ ಬಾಲರೆಲ್ಲ ಮಾಯ | ಪುಟ್ಟ ಕರುಗಳೆಲ್ಲ ಮಾಯ |
ಮಾಯಗಾರ ಹರಿಯೇ ಎಲ್ಲ ಕಡೆಗಳಲ್ಲಿ ಮಾಯಾ ಮಾಯ ||೧||     
 
ಗೊಲ್ಲರ ಕೋಲಾಟ :    


ಕೋಲಾಟ ವಾಡೋಣ ಗೆಳೆಯರೇ | ನಾವೆಲ್ಲಾ |
  
ಕೋಲಾಟ ವಾಡೋಣ ಬನ್ನಿರೆ  ||ಪ||

ಬಣ್ಣ ಬಣ್ಣದ ಕೋಲ ತನ್ನಿರಿ |
ಚೆಲುವ ಕೃಷ್ಣನ  ಬಳಿಗೆ ಬನ್ನಿರಿ | ಹೊಯ್
ನೀಲಮೇಘನಾ ಸುತ್ತ ಸೇರಿರಿ
ತಾಳ ಮೇಳದಿ ಆಟ ಆದಿರಿ ||೧||
 
ಹಾಲು ಮೊಸರು ಬೆಣ್ಣೆಗಳ  ತನ್ನಿರಿ
ಒಳ್ಳೆ ಒಳ್ಳೆ ಬುತ್ತಿ ಕಟ್ಟಿ ಕೊಳ್ಳಿರಿ | ಹೊಯ್ |
ರಾಮಶ್ಯಾಮರನ್ನು ಕೂಡಿ ಬನ್ನಿರಿ
ಅವರ ಜೊತೆಗೆ ತಂದ ತಿನಿಸ ತಿನ್ನಿರಿ ||೨||

ನಂದ ಗೋಕುಲ ಸುಖದ ಸಾಗರ |
ಹೊಂದಿ ಬದುಕುವಂತ ಜನರ ಆಗರ | ಹೊಯ್ |
ಆನಂದ ತುಂಬಿಕೊಂಡ ಗೋಕುಲ |
ನಲಿವನುಣ್ಣುತಿದ್ದುದೆಲ್ಲ ಸಂಕುಲ ||೩||

ಹಿರಿಯಣ್ಣ  : ಅಬ್ಬಬ್ಬಾ ! ಈ ನಮ್ಮ ಮಕ್ಕಳ ಆಟ ಏನಂತೀನಿ. ಶಿವಶಿವಾ ಏನು ಕಾಲ ಬಂತಪ್ಪ ಇದು
ಮಹಾಶಯ  :  ಯಾಕೆ ಹಿರಿಯಣ್ಣಾ ಗೊಣಗೊಣ ಗೊಸಗೊಸ ಮಾಡ್ತಾ ಇದ್ದೀಯಾ ಏನಾತೋ ಏನ್ಸಮಾಚಾರ ?
ಹಿರಿಯಣ್ಣ : ಅಲ್ಲಾಪ್ಪಾ ಮಹಾಶಯ ಈ ನಂ ಹುಡುಗ್ರು ಇತ್ತಿತ್ತಲಾಗಿ ತುಂಬಾನೇ ಹೆಚ್ಕೊಂಡಿದಾರೆ ಏನಂತೀಯಾ ? ಏನು ಕುಣಿತ ! ಏನು ಹಾಡು ! ಅಬ್ಬಬ್ಬಾ !
ಮಹಾಶಯ  : ಹೀಂಗಂದ್ರೆ ಹ್ಯಾಂಗೋ ಹಿರಿಯಣ್ಣಾ ? ಕುಣುದ್ರೆ, ಹಾಡಿದರೆ ಅದೂ ತಪ್ಪು ಅಂತೀಯೇನೋ ಮಾರಾಯ . ಈಗೊಂದು ವರ್ಷದೀಚೆಗೆ ನಮ್ಮ ಮಕ್ಕಳು ತುಂಬಾ ತುಂಬಾ ಸುಧಾರ್ಸಿದಾರೆ. ಏನು ನಯಾ , ಏನು ವಿನಯಾ
ಹಿರಿಯಣ್ಣ  :  ಏನೋಪ್ಪಾ ನನಗಂತೂ ಏನು ಗೊತ್ತಾಗ್ತಿಲ್ಲ.
ಮಧ್ಯಸ್ಥ  : ಏನು ಮಾತಾಡ್ತಾ ಇದ್ರೀ,  ನಂಗು ಸ್ವಲ್ಪ ಹೇಳ್ರಪ್ಪಾ.
ಹಿರಿಯಣ್ಣ : ಏನಿಲ್ಲ . ವರ್ಷದೀಚೆಗೆ ನಮ್ಮ ಮಕ್ಕಳು ಬಾಳಾ ಬದಲಾಗಿದ್ದಾರೆ ಅಂತ .
ಮಧ್ಯಸ್ಥ  : ಅಯ್ಯಯ್ಯೋ ಮಕ್ಳೇನೂ ? ನಮ್ಮ ಹಸುಗಳು ಎರಡು ವರ್ಷದಿಂದ ಕರೆಯುತ್ತಲೇ  ಇವೆ. ಕರುಗಳ ಮೇಲೆ ಏನು ಪ್ರೀತಿ. ಆ ಕರುಗಳೇನು  ಚೆಂದ. ಅಬ್ಬಬ್ಬಬ್ಬಾ ! ನಾನಂತೂ ಇಂತಹ ಚೆಂದ ನೋಡಿಯೇ ಇರಲಿಲ್ಲ. ಎಲ್ಲಾ ಆ ಕೃಷ್ಣನ ಕೈಚಳಕ.
ಹಿರಿಯಣ್ಣ : ಎಲ್ಲಾ ನಮ್ಮ ನಂದ ಗೋಪನ ಹುಡುಗರ ಪ್ರಭಾವ ಅಂತೀರಾ ? ಹೌದಿರಬಹುದು. ಅವನು ಇದ್ದಾನಲ್ಲ. ಚಿಕ್ಕವನು ಕನ್ನ. ಬಾರೀ ಜಾಣ. ಏನು ಬೇಕಾದ್ರೂ ಮಾಡಿ ಬಿಡ್ತಾನೆ ಬಲೇ  ಹುಷಾರು ಅವ.
ಜಟ್ಟಿ  : ಏನು ಸಮಾಚಾರ ಮಾತಾಡ್ತಿದ್ದೀರಿ ಅಂತ ಗೊತ್ತಾಯ್ತು. ನಮ್ಮ ಹುಡುಗರ ಬಗ್ಗೆ ನಂಗೆ ತುಂಬಾ ಅಭಿಮಾನ ಬರ್ತಿದೆ. ಹಾಗಿದ್ದಾರೆ ಅವರು. ನಾನಂತೂ ಹುಡುಗ ಸಣ್ಣವನಾದರೂ ಆ ಕೃಷ್ಣನಿಗೆ ಸೋಲೊಪ್ಪಿಕೊಂಡಿದೀನಪ್ಪಾ .
ಹಿರಿಯಣ್ಣ  : ನೀನು ನಮ್ಮುಉರಿನ ಗಟ್ಟಿ ಜಟ್ಟಿ. ನೀನೇ ಒಪ್ಪಿಕೊಂಡ ಮೇಲೆ  ಇನ್ನೇನು ? ನಾನೋ ಸಾಯೋ ಮುದುಕ, ನಾನೇನು ಸ್ಪರ್ಧೆ ಮಾಡ್ಲಿ. ನಾನೂ ಒಪ್ಕೊಂಡು ಇವರ ವೈಭವ ನೋಡ್ತೀನಿ.
                                                                                        ---೦೦೦---
ಬಲರಾಮ : ಕೃಷ್ಣ ಕೃಷ್ಣಾ !
ಕೃಷ್ಣ  : ಏನಣ್ಣಾ ? ಏನೋ ಹೇಳಲು ಕಾತರಿಸಿದಂತಿದೆ ?
ಬಲರಾಮ  : ಹೌದು ಕೃಷ್ಣ ಸರಿಯಾಗಿ ಒಂದು ವರ್ಷದ ಹಿಂದೆ ನಮ್ಮ ಕರುಗಳನ್ನೂ ಗೋಪಾಲಕರನ್ನೂ ನನ್ನ ಕಣ್ಣು ಮುಚ್ಚಿಸಿ ತೋರಿದೆಯಲ್ಲಾ , ಆಮೇಲಿನ ಅವುಗಳ ನಡೆಯೇಕೋ ಅನುಮಾನವೆನಿಸುತ್ತಿದೆ. ಏನಿದು ನಿನ್ನ ಮಾಯೆ ?
ಕೃಷ್ಣ  :  ಯಾಕಣ್ಣಾ ಹಾಗೆ ಹೇಳುತ್ತೀ ?  ಅಂತದ್ದೇನನ್ನು ನೀನು ಕಂಡೆ.
ಬಲರಾಮ  : ಈ ಒಂದು ವರ್ಷದಲ್ಲಿ  ಮನೆಮನೆಗಳಲ್ಲಿ ಪ್ರತಿಯೊಂದು ಕೊಟ್ಟಿಗೆಗಳಲ್ಲಿ   ನೀನಿದ್ದುದು   ಕಂಡೆ. ಪ್ರತಿಯೊಂದು  ಕರುವಿನಲ್ಲಿ  , ಗೋಪಾಲಕರಲ್ಲಿ ನಿನ್ನ ಮೇಲಿನ ಪ್ರೀತಿಯೇ ಅಂಕುರಿಸುತ್ತದೆ. ಇದೇಕೆ  ? ನಿಜ ಹೇಳು ಕೃಷ್ಣ .
ಕೃಷ್ಣ  : ಅಣ್ಣಾ ! ಅಂದು ನಾವು ಭೋಜನದಲ್ಲಿ ಮಗ್ನರಾಗಿದ್ದಾಗ ಬ್ರಹ್ಮದೇವ ನಮ್ಮ ಕರುಗಳನ್ನು ಅಡಗಿಸಿದ . ಹುಡುಕಲು ನಾನು ಹೋದದ್ದನ್ನು ಕಂಡು ನೀನು ನಿದ್ರಿಸುವಂತೆ ಮಾಡಿ ನಮ್ಮ ಗೋಪಾಲ ಬಾಲರನ್ನೂ ಅಡಗಿಸಿಬಿಟ್ಟ . ಇದನ್ನರಿತ ನಾನು ಬ್ರಹ್ಮದೇವರಲ್ಲಿ ಮರಳಿ ಕೊಡುವಂತೆ ಬೇಡಲೇಯಿಲ್ಲ. ಬದಲಾಗಿ ಸೃಷ್ಟಿಸಿಬಿಟ್ಟೆ.
ಬಲರಾಮ  : ಹ್ಞಾಂ  ಬದಲಾಗಿ ಸೃಷ್ಟಿಸಿದೆಯಾ  ? ಇದೆಲ್ಲಾ  ಶ್ರೀಕೃಷ್ಣ ಕೌತುಕವೇ  ? ಎಲಾ ಮಾಯಾವೀ . ಈಗ ನಮ್ಮ ನಿಜವಾದ  ಗೊಲ್ಲರ, ಕರುಗಳ ಕಥೆ  ? ಬ್ರಹ್ಮನ  ವಿಚಾರ  ?
ಕೃಷ್ಣ  : ಅ  ಬಗ್ಗೆ ನಮಗೇಕೆ  ಚಿಂತೆ . ಮರೆ ಮಾಡಿದವನು ಸೃಷ್ಟಿ ಕರ್ತನಾದ ಬ್ರಹ್ಮ. ಅವನು ನಾಷವನ್ನಂತು ಮಾಡಲಾರ. ಇಲ್ಲಿನವರಿಗೆ ಅಗಲಿಕೆಯು ಅನುಭವಕ್ಕೆ ಬರದಂತೆ ನಾನು ನೋಡಿಕೊಳ್ಳುತ್ತೇನೆ.
ಬ್ರಹ್ಮ  : ಜಯ ಜಯ ಕೃಷ್ಣ ಜಯ ಜಯಾ,  ನಿನಗೆ ನಾನು ಶರಣಾದೆ. ಹೇ ತಂದೆ, ನೀನು ಪುರುಷೋತ್ತಮ. ಎಲ್ಲ ಅಳತೆಗಳನ್ನೂ ಮೀರಿದವ. ನಿನ್ನ ಶಕ್ತಿಯನ್ನು ಆರಿಯದೇ ಹುಡುಗಾಟವಾಡಿದೆ.  ನನ್ನ ಈ ಅಪರಾಧವನ್ನು ಕ್ಷಮಿಸು. ಮುಂದೆ ದಾರಿಯನ್ನು ತೋರು.
ಕೃಷ್ಣ  : ಜಗತ್ತಿನ ತಂದೆಯಾದ ಬ್ರಹ್ಮದೇವನೇ ನಿನಗೆ ನಮಸ್ಕಾರಗಳು. ನೀನು ಮಾಡಿದುದು ಹುಡುಗಾಟವೆಂದು ನೀನೇ ಅರಿತಮೇಲೆ ಹುಡುಗನೇ ಆದ ನಾನು ಹೇಳುವುದೇನಿದೆ ? ನಾನೂ ಸಹಜವಾಗಿಯೇ ಹುಡುಗಾಟವಾದಿದೆ. ಕ್ಷಮಿಸುವ ಮಾತಂತಿರಲಿ, ಈಗ ನಮ್ಮವರೆಲ್ಲಾ ನಿಮ್ಮಲ್ಲಿ ಹೇಗಿದ್ದಾರೆ ?
ಬ್ರಹ್ಮ  : ಹೇ ಭಗವನ್ ನಾನು ನಿಮ್ಮವರನ್ನೆಲ್ಲಾ ನನ್ನ ಮಾಯಾ ಹಾಸಿಗೆಯಲ್ಲಿ ಮಲಗಿಸಿಟ್ಟಿದ್ದೇನೆ. ಅವರನ್ನು ಎಬ್ಬಿಸಿ ಮರಳಿಸಬಲ್ಲೆ. ಆದರೆ ನಿನ್ನ ಈ ಶ್ರೀಕೃಷ್ಣ ಕೌತುಕವನ್ನು ನೀನು ಮಾತ್ರವೇ  ಸರಿಪಡಿಸಲು ಸಮರ್ಥ. ನಾನು ಪ್ರಾರ್ಥಿಸುವುದೊಂದಲ್ಲದೆ ಇನ್ನೇನನ್ನೂ ಮಾಡಲು ಶಕ್ತನಲ್ಲ.
ಕೃಷ್ಣ  : ಇದೋ ಇಲ್ಲಿರುವ ನನ್ನ ಎಲ್ಲಾ ಪ್ರತಿಸ್ರುಷ್ಟಿಯನ್ನೂ ನನ್ನ ಮಾಯೆಯಿಂದ ಹಿಂದೆ ಪಡೆದಿದ್ದೇನೆ. ಈಗ ಆ ಜಾಗದಲ್ಲಿ ನಿದ್ರಿಸುತ್ತಿರುವ ಅಸಲೀ ಗೊಲ್ಲ ಬಾಲಕರನ್ನೂ ಕರುಗಳನ್ನೂ ಬಿಡು. ಅವುಗಳಿಗೆ ನೀನು ಕೊಟ್ಟ ನಿದ್ರಾವಸ್ಥೆಯಲ್ಲಿದ್ದಾಗ ನಾನು ಅವರವರ ವೇಷದಲ್ಲಿ ಮಾಡಿದ ಅನುಭವಗಳೂ ದೊರೆಯುವಂತಾಗಲೆಂದು ಅನುಗ್ರಹಿಸುವೆ.
ಬಲರಾಮ  : ಕೃಷ್ಣಾ ನಿನ್ನ ಕೌತುಕಕ್ಕೆ ನಾನು ಬೇರೆಗಾದುದೊಂದೇ ಅಲ್ಲ. ಶರಣಾದೆ ಕೂಡಾ. ಜಯ ಜಯ ಕೃಷ್ಣಾ ಜಯ ಜಯ
ಬ್ರಹ್ಮ : ಅಬ್ಬಾ ! ಈ ಕೌತುಕವನ್ನು ಕಂಡು ದೇವತೆಗಳ ಸಮೂಹವೇ ನಿನ್ನನ್ನು ಕೊಂಡಾಡಿ ಹೂಮಳೆಗರೆಯುತ್ತಿದೆ. ಜಯ ಜಯ ಕೃಷ್ಣಾ ಜಯ ಜಯ
ಸೂತ್ರಧಾರ  : ಹೀಗೆ ನಮ್ಮ ಮುದ್ದು ನಂದ ಕಿಶೋರ ಕೃಷ್ಣ ಪುಟ್ಟ ಹುಡುಗನಾಗಿದ್ದಾಗಲೇ ಏನೆಲ್ಲಾ ಸಾಹಸ ಕೌತುಕ ಮಾಡಿ ನಂದ ಗೋಕುಲವನ್ನು ಆನಂದ ಗೊಕುಲವಾಗಿ ಮಾಡಿದ ಅಂತ ನೋಡಿದರಲ್ಲ. ನಮ್ಮ ನಾಟಕ ಮುಗಿಸುವ ಮುನ್ನ ನಿಮಗೆಲ್ಲಾ ನಮ್ಮ ವಂದನೆ ಸಲ್ಲಿಸ್ತಾ  ಇದ್ದೀನಿ.

ಬೋಲೋ ಶ್ರೀಕೃಷ್ಣ ಪರಮಾತ್ಮಕೀ ಜೈ.

ಕೋಲಾಟ ವಾಡೋಣ ಗೆಳೆಯರೇ | ನಾವೆಲ್ಲಾ |  ಕೋಲಾಟ ವಾಡೋಣ ಬನ್ನಿರೆ  ||ಪ||
___ ೦೦೦ ____

( ಇದು ಶ್ರೀಕೃಷ್ಣ  ಜನ್ಮಾಷ್ಟಮಿಯ ಕಾರ್ಯಕ್ರಮವಾಗಿ ಶಾಲೆಯಲ್ಲಿನ ಮಕ್ಕಳಿಗೆ ಕಲಿಸಲು ರಚಿಸಿದ್ದು, ಮೂಲ  ಭಾಗವತದ ಕಥೆಯ ಆಧಾರದಲ್ಲಿ ಬರೆದದ್ದು ದಯಮಾಡಿ ಅಭಿಪ್ರಾಯ ತಿಳಿಸಿ. ಸಾಧ್ಯವಿರುವ ಶಾಲೆಗಳವರು ಬೇಕೆನ್ನಿಸಿದರೆ ಬಳಸಿಕೊಳ್ಳಿ. ದಯಮಾಡಿ ತಿಳಿಸಿ.).

                                                                                                                                                                                         --   ಸದಾನಂದ 

 

Comments